ದಕ್ಷಿಣ ಕನ್ನಡ

ಹೊಸಬರ ಬದಲು ಮತ್ತೆ ನಿವೃತ್ತ ನೌಕರರಿಗೆ ಮಣೆ

Published On :

ಮಂಗಳೂರು: 'ಹಳಬರನ್ನು ಮನೆಗೆ ಕಳುಹಿಸಿ, ಹೊಸಬರನ್ನು ನೇಮಿಸಿ' ಎಂಬ ಜಿಲ್ಲಾ ಪಂಚಾಯ್ತಿ ಪ್ರಗತಿ ಪರಿಶೀಲನಾ ಸಭೆಯ ಆದೇಶಕ್ಕೆ ಇಲಾಖೆಗಳೇ ಬೆಲೆ ನೀಡುತ್ತಿಲ್ಲ.
 2013 ನ.18ರಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊರಗಪ್ಪ ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿದ್ಯಾವಂತ ನಿರುದ್ಯೋಗಿ ಯುವಕರ ಪ್ರವೇಶಕ್ಕೆ ನಿರ್ಣಯ ಕೈಗೊಳ್ಳಲಾಗಿತ್ತು. ನಿರ್ಣಯ ಕೈಗೊಂಡು 2 ತಿಂಗಳು ಕಳೆದಿದ್ದು, ಜಿಲ್ಲಾ ಪಂಚಾಯ್ತಿ ಹಾಗೂ ಇತರೇ ಇಲಾಖೆಗಳು ಸ್ಪಂದಿಸಿಲ್ಲ.
ಹೊಸಬರಿಗೆ ಅವಕಾಶ: ಜಿಲ್ಲಾ ಪಂಚಾಯ್ತಿ ಅಧೀನದಲ್ಲಿ 32 ವಿವಿಧ ಇಲಾಖೆಗಳಿವೆ. ಸುಮಾರು 10ಕ್ಕೂ ಅಧಿಕ ಇಲಾಖೆಗಳಲ್ಲಿ ನಿವೃತ್ತ ಸರ್ಕಾರಿ ನೌಕರರೇ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದಾರೆ. ಅಂದರೆ ನಿವೃತ್ತಿಯ ಪಿಂಚಣಿ ಜತೆಗೆ ಗುತ್ತಿಗೆ ನೌಕರಿಯ ಮೊತ್ತ ಸೇರಿ ಎರಡು ಕಡೆ ವೇತನ ಪಡೆಯುತ್ತಿದ್ದಾರೆ. ಹೀಗೆ ಸುಮಾರು 20ಕ್ಕೂ ಅಧಿಕ ಮಂದಿ ನಿವೃತ್ತ ನೌಕರರು ಕ್ಲರ್ಕ್, 'ಡಿ' ಗ್ರೂಪ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಸರ್ಕಾರಿ ಕೆಲಸದಲ್ಲಿದ್ದು ನಿವೃತ್ತರಾದ ಬಳಿಕ ಮತ್ತೆ ಹೊಸಬರಿಗೆ ಅವಕಾಶ ನೀಡುವುದು ನ್ಯಾಯೋಚಿತ ಕ್ರಮ. ಸೌಜನ್ಯಕ್ಕಾದರೂ ಉದ್ಯೋಗ ನಿರಾಕರಿಸಿ ಯುವಕರಿಗೆ ಅವಕಾಶ ಮಾಡಿಕೊಡುವ ಸಂಪ್ರದಾಯ ಕಾಣುತ್ತಿಲ್ಲ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿರುವ ನಿರುದ್ಯೋಗಿ ಯುವಕರಿಗೆ ಉದ್ಯೋಗ ಗಗನ ಕುಸುಮ.
 ಈ ವಿಚಾರ ಕೆಡಿಪಿ ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಆರೋಗ್ಯ, ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಪ್ರಸ್ತಾಪಿಸಿದ್ದರು.
ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ 6 ಮಂದಿ ನಿವೃತ್ತ ನೌಕರರು ಗುತ್ತಿಗೆ ಕೆಲಸದಲ್ಲಿದ್ದಾರೆ. ಈ ಬಗ್ಗೆ ನಿರ್ಣಯ ಕೈಗೊಂಡ ತಕ್ಷಣ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಚೇರಿಯ 'ಡಿ' ಗ್ರೂಪ್ ನಿವೃತ್ತ ನೌಕರರನ್ನು ಬದಲಾಯಿಸಿ ಯುವಕರನ್ನು ನೇಮಿಸಿ ಮೇಲ್ಪಂಕ್ತಿ ಹಾಕಿಕೊಟ್ಟರು. ಆದರೆ ಇತರೆ ನಿವೃತ್ತ ನೌಕರರನ್ನು ಬದಲಾಯಿಸುವ ಗೋಜಿಗೆ ಯಾವುದೇ ಅಧಿಕಾರಿಗಳು ಮುಂದಾಗಿಲ್ಲ. ಜಿ.ಪಂ. ಉಪಾಧ್ಯಕ್ಷರ ಕಚೇರಿ, ಉಪಕಾರ್ಯದರ್ಶಿ ಕಚೇರಿ ಸೇರಿದಂತೆ ಜಿ.ಪಂ. ಕಚೇರಿಯಲ್ಲಿ ಇನ್ನೂ ನಿವೃತ್ತ ನೌಕರರು ಕೆಲಸ ಮಾಡುತ್ತಿದ್ದಾರೆ.
ನಿವೃತ್ತರನ್ನೇ ನೇಮಿಸಿದ್ರು: ಜಿ.ಪಂ ಅಧೀನದ ಹಿಂದುಳಿದ ವರ್ಗಗಗಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಮೀನುಗಾರಿಕಾ ಇಲಾಖೆ, ವಿವಿಧ ತಾಲೂಕು ಪಂಚಾಯ್ತಿ ಕಚೇರಿಗಳಲ್ಲಿ ಈಗಲೂ ನಿವೃತ್ತ ನೌಕರರು ಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಡಿಸಿಎಂ ಇಲಾಖೆಯಲ್ಲಿ ನಿವೃತ್ತ ನೌಕರರೊಬ್ಬರನ್ನು ಮತ್ತೆ ಮೆನೇಜರ್‌ರಾಗಿ ಕೆಲಸಕ್ಕೆ ಗುತ್ತಿಗೆ ಆಧಾರದಲ್ಲಿ ತೆಗೆದುಕೊಂಡಿದ್ದಾರೆ. ಹಾಲಿ ಗುತ್ತಿಗೆಯಲ್ಲಿರುವ ನಿವೃತ್ತ ನೌಕರರಲ್ಲಿ ಹೆಚ್ಚಿನವರು 5-6 ವರ್ಷದಿಂದ ನಿವೃತ್ತರಾದರೂ ಪ್ರತಿ ವರ್ಷ ಗುತ್ತಿಗೆ ನವೀಕರಿಸಿ ಕೆಲಸ ಮಾಡುತ್ತಿದ್ದಾರೆ.
 ಸ್ಥಾಯೀ ಸಮಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಪ್ರಕಾರ, 'ನಿರುದ್ಯೋಗಿ ವಿದ್ಯಾವಂತರಿಗೆ ಕೆಲಸ ಸಿಗುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯ್ತಿ ಮಹತ್ವದ ನಿರ್ಣಯ ಕೈಗೊಂಡಿದೆ. ಗ್ರಾಮಾಂತರದಲ್ಲಿ ಯುವಕರು ಕೆಲಸ ಕೊಡಿ ಎನ್ನುತ್ತಿದ್ದಾರೆ. ಕೆಡಿಪಿ ಸಭೆಯ ನಿರ್ಣಯವನ್ನು ಅನುಷ್ಠಾನಿಸಿದರೆ ಒಂದಷ್ಟು ಮಂದಿಗೆ ಕೆಲಸ ಕೊಟ್ಟಂತೆ ಆಗುತ್ತದೆ' ಎನ್ನುತ್ತಾರೆ.
'ಜಿಲ್ಲಾ ಪಂಚಾಯ್ತಿಯಲ್ಲಿ 'ಡಿ' ಗ್ರೂಪ್‌ಗೆ ನಿವೃತ್ತ ನೌಕರರನ್ನು ಮತ್ತೆ ಪರಿಗಣಿಸುವುದಿಲ್ಲ. ಇನ್ನು ನೇಮಕ ಮಾಡುವಾಗ 10 ಮಂದಿ ಹೊಸಬರಿಗೆ ಅವಕಾಶ ನೀಡುತ್ತೇವೆ.
ನೇಮಕ ಪ್ರಕ್ರಿಯೆ ಆದೇಶ ನೀಡಲು ಬಾಕಿ ಇದೆ. ಜಿಲ್ಲಾ ಪಂಚಾಯ್ತಿಯ ಕಚೇರಿಗಳಲ್ಲಿ ಹೊಸಬರಿಗೆ ಅವಕಾಶ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ' ಎನ್ನುತ್ತಾರೆ ಉಪ ಕಾರ್ಯದರ್ಶಿ ಉಮೇಶ್.
-ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.