ದಕ್ಷಿಣ ಕನ್ನಡ

ನಕಲಿ ಪದವಿ ಪ್ರಮಾಣಪತ್ರ; ಬೆಂಗಳೂರಲ್ಲಿ ವಂಚಕ ಸೆರೆ

Published On :

ಬೆಂಗಳೂರು: ದೂರ ಶಿಕ್ಷಣದ ವ್ಯಾಸಂಗ ಮಾಡಿಸುತ್ತೇವೆ ಎಂದು ಬೋಗಸ್ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ನಕಲಿ ಪದವಿ ಪ್ರಮಾಣಪತ್ರ ನೀಡುತ್ತಿದ್ದ ವಂಚಕನನ್ನು ಆರ್.ಟಿ. ನಗರ ಪೊಲೀಸರು ಬಂಧಿಸಿದ್ದಾರೆ.
ಯಲಹಂಕ ಉಪನಗರದ ಜೈಸನ್ ಡಿಸೋಜಾ ಬಂಧಿತ ವ್ಯಕ್ತಿ. ಈತನ ವಿದ್ಯಾಕೇಂದ್ರದಲ್ಲಿ ವ್ಯಾಸಂಗ ಪಡೆದ ವಿದ್ಯಾರ್ಥಿನಿಯೊಬ್ಬಳು ಕಾಲೇಜಿಗೆ ಸೇರುವ ವೇಳೆ ನೀಡಿದ್ದ ದಾಖಲೆಯನ್ನು ಕಾಲೇಜಿನವರು ನಕಲಿ ಎಂದು  ದೃಢಪಡಿಸಿದ್ದರಿಂದ ಆಕೆ ಪೊಲೀಸರಿಗೆ ದೂರು ನೀಡಿದ್ದಳು. ಆ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, ಆತನ ಬಳಿಯಿದ್ದ ವಿವಿಧ ಹೆಸರಿನಲ್ಲಿರುವ ಬೋಗಸ್ ವಿಶ್ವವಿದ್ಯಾಲಯಗಳ ನಕಲಿ ಪ್ರಮಾಣಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ಮೂಲದವನಾಗಿರುವ ಆರೋಪಿ ಜೈಸನ್ ಡಿಸೋಜಾ ನಗರದ ಎಚ್‌ಎಂಟಿ ಬಡಾವಣೆಯಲ್ಲಿ ಆಶೀರ್ವಾದ್ ವಿದ್ಯಾಕೇಂದ್ರ ಎಂಬ ಸಂಸ್ಥೆ ನಡೆಸುತ್ತಿದ್ದು, ಆ ಸಂಸ್ಥೆಗೆ ಯಾವುದೇ ಪರವಾನಗಿ ಹಾಗೂ ಮಾನ್ಯತೆ ಇರುವುದಿಲ್ಲ. ಆದಾಗ್ಯೂ ಆತ ಯುವಕ- ಯುವತಿಯರಿಗೆ ದೂರ ಶಿಕ್ಷಣದ ಮೂಲಕ ಹಲವಾರು ಕೋರ್ಸುಗಳಿಗೆ ಪ್ರವೇಶ ಕೊಡಿಸುವುದಾಗಿ ಜಾಹೀರಾತು ನೀಡಿ ಸೆಳೆಯುತ್ತಿದ್ದ. ಹಾಗೆ ತನ್ನಲ್ಲಿಗೆ ಬಂದ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಂದ ಸಾವಿರಾರು ರುಪಾಯಿ ಪಡೆದು ವಿಶ್ವವಿದ್ಯಾಲಯಗಳ ನಿಯಮಕ್ಕೆ ವಿರುದ್ಧವಾಗಿ ವಿವಿಧ ಕೋರ್ಸುಗಳ ನಕಲಿ ಅಂಕಪಟ್ಟಿ ನೀಡುತ್ತಿದ್ದನು.
2010-11 ಮತ್ತು 2011-12ನೇ ಶೈಕ್ಷಣಿಕ ವರ್ಷದಲ್ಲಿ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್, ಮಧ್ಯ ಭಾರತ್ ಗ್ವಾಲಿಯರ್ ಎಂಬ ವಿಶ್ವವಿದ್ಯಾಲಯದಲ್ಲಿ ಆತ ಹಲವು ಮಂದಿಗೆ ಪ್ರಥಮ ಹಾಗೂ ದ್ವಿತೀಯ ಪಿಯುಸಿಗೆ ಪ್ರವೇಶ ಕೊಡಿಸಿದ್ದ. ಆ ಮೂಲಕ ಪ್ರವೇಶ ಪಡೆದು ವ್ಯಾಸಂಗ ನಡೆಸಿದ ವಿದ್ಯಾರ್ಥಿನಿಯೊಬ್ಬಳು ಪದವಿ ವ್ಯಾಸಂಗಕ್ಕಾಗಿ ನಗರದ ಪ್ರತಿಷ್ಠಿತ ಖಾಸಗಿ ಶಾಲೆಗೆ ಅರ್ಜಿ ಸಲ್ಲಿಸಿದ್ದಳು.
ಕಾಲೇಜಿನವರು ಅರ್ಜಿ ಪರಿಶೀಲಿಸುವ ವೇಳೆ ಆಕೆ ಸಲ್ಲಿಸಿದ್ದ ಪಿಯುಸಿ ಪ್ರಮಾಣಪತ್ರ ನಕಲಿ ಎಂದು ತಿಳಿದು ಬಂದಿದೆ. ವಿಷಯ ತಿಳಿದ ವಿದ್ಯಾರ್ಥಿನಿ ಪೊಲೀಸರ ಮೊರೆ ಹೋದಾಗ ಕಾರ್ಯಪ್ರವೃತ್ತರಾದ ಅವರು ಆತನನ್ನು ಬಂಧಿಸಿದ್ದಾರೆ. ಬಂಧಿತನಿಂದ ತನ್ನ ಕೇಂದ್ರದ ಮೂಲಕ ಹಲವಾರು ವಿಶ್ವವಿದ್ಯಾಲಯಗಳಿಗೆ ಪ್ರವೇಶ ಕೊಡಿಸಿರುವ ದಾಖಲಾತಿಗಳು, ಹಲವು ಕಾಲೇಜುಗಳ ಛಾಪಾಮುದ್ರೆ ಹಾಗೂ ಅಂಕಪಟ್ಟಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸುಮಾರು 30 ಜನಕ್ಕೆ ಆತ ಇದೇ ರೀತಿ ವಂಚಿಸಿರುವ ಶಂಕೆ ಇದೆ ಎಂದು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಅವರು ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.    

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.