ದಕ್ಷಿಣ ಕನ್ನಡ

ಎಸ್‌ಡಿಎಂನಲ್ಲಿ ಸಮುದಾಯ ಕಾಲೇಜ್ ಆರಂಭಕ್ಕೆ ಅನುಮತಿ

Published On :

ಬೆಳ್ತಂಗಡಿ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಸಮುದಾಯ ಕಾಲೇಜು ಆರಂಭಿಸಲು ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯ ಅನುಮತಿ ನೀಡಿದೆ. ಈ ವರ್ಷದಲ್ಲೇ ತರಗತಿಯನ್ನು ಆರಂಭಿಸಲು ಅವಕಾಶ ನೀಡಲಾಗಿದೆ. ಇದಕ್ಕಾಗಿ ಅಗತ್ಯ ಸೌಲಭ್ಯಗಳು ದೊರಕಿದೆ.
ವಿದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಸಮುದಾಯ ಕಾಲೇಜು ಪರಿಕಲ್ಪನೆ ಈಗ ಭಾರತದಲ್ಲೂ ಜಾರಿಗೊಳ್ಳುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಕೇಂದ್ರಿಕೃತವಾದರೂ ಉಜಿರೆಗೆ ಈ ಸೌಲಭ್ಯ ದೊರಕಿರುವುದು ಗಮನಾರ್ಹವಾಗಿದೆ.
ಉನ್ನತ ಶಿಕ್ಷಣ ವಂಚಿತರು ಹಾಗೂ ಅನಿವಾರ್ಯ ಕಾರಣದಿಂದ ಶಿಕ್ಷಣ ಕುಂಠಿತಗೊಂಡವರಿಗೆ ನೆರವು ನೀಡಲು ಸರ್ಕಾರ ಈ ಯೋಜನೆ ರೂಪಿಸಿದೆ. ಸಾಧನೆ, ಸಾಮರ್ಥ್ಯ ಹಾಗೂ ಸೌಲಭ್ಯಗಳುಳ್ಳ ದೇಶದ ಕೆಲವು ಕಾಲೇಜುಗಳನ್ನು ಇದರ ಅನುಷ್ಠಾನಕ್ಕಾಗಿ ಆಯ್ಕೆ ಮಾಡಲಾಗಿದ್ದು, ಈ ಪೈಕಿ ಉಜಿರೆ ಕಾಲೇಜು ಕೂಡಾ ಒಂದಾಗಿದೆ.
ದ್ವಿತೀಯ ಪಿಯುಸಿಯಲ್ಲಿ ಕಲೆ, ವಾಣಿಜ್ಯ, ವಿಜ್ಞಾನ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವವರು ಈ ಕಾಲೇಜು ಸೇರ್ಪಡೆಗೆ ಅರ್ಹರಾಗಿದ್ದು, ವೆಲ್ಡಿಂಗ್ ಫ್ಯಾಬ್ರಿಕೇಶನ್ ಹಾಗೂ ಗಾರ್ಮೆಂಟ್ ಡಿಸೈನಿಂಗ್‌ನಲ್ಲಿ ಈ ವರ್ಷ ತರಗತಿಗಳನ್ನು ನಡೆಸಲಾಗುತ್ತದೆ. ಮೊದಲ ಹಂತದಲ್ಲಿ 6 ತಿಂಗಳ ಸರ್ಟಿಫಿಕೇಟ್ ಕೋರ್ಸ್‌ಗಾಗಿ ತರಗತಿಗಳನ್ನು ಶುಲ್ಕ ರಹಿತವಾಗಿ ಉಚಿತವಾಗಿ ಆರಂಭಿಸಲಾಗುತ್ತಿದೆ.
ಸ್ವ- ಉದ್ಯೋಗಕ್ಕೆ ಪ್ರೇರಣೆ ನೀಡುವ ಉದ್ದೇಶದ, ಈ ಯೋಜನೆಯಡಿ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಮುಂದೆ ಇದೇ ಕೇಂದ್ರದ ಮೂಲಕ ಒಂದು ವರ್ಷದ ಡಿಪ್ಲೋಮಾ ಹಾಗೂ 2 ವರ್ಷದ ಅಸೋಸಿಯೇಟ್ ಡಿಗ್ರಿ ಕಲಿಕೆಗೂ ಅವಕಾಶವಿದೆ. ಪದವಿ ಹಾಗೂ ಬೇರೆ ಶಿಕ್ಷಣ ಪಡೆಯುತ್ತಿರುವವರೂ ಹಾಗೂ ಉದ್ಯೋಗಿಗಳೂ ಕೂಡಾ ಇದರ ಪ್ರಯೋಜನ ಪಡೆಯಬಹುದು. ವಿದ್ಯಾರ್ಥಿಗಳ ಅನುಕೂಲಗಳನ್ನಾಧರಿಸಿ ತರಗತಿಯ ಸಮಯ ನಿಗದಿಪಡಿಸಲಾಗುವುದು. ದೂರದಿಂದ ಬರುವ ಅಭ್ಯರ್ಥಿಗಳಿಗೆ ವಸತಿ ಸೌಕರ್ಯವನ್ನು ಕಲ್ಪಿಸಲಾಗುವುದು. ಆಸಕ್ತರು ಯಾವುದೇ ಮಾಹಿತಿ ಬೇಕಿದ್ದಲ್ಲಿ ಕಾಲೇಜು ಕಚೇರಿಯನ್ನು ಅಥವಾ ದೂ. 08256- 236101, ಮೊ. 9448501424 ಅನ್ನು ಸಂಪರ್ಕಿಸಬಹುದು  ಎಂದು ಕಾಲೇಜಿನ ಪ್ರಾಚಾರ್ಯ ಡಾ.ಬಿ. ಯಶೋವರ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.