ದಕ್ಷಿಣ ಕನ್ನಡ

ಅವೈಜ್ಞಾನಿಕ ಯೋಜನೆಗಳಿಂದ ಬೊಕ್ಕಸ ಖಾಲಿ

Published On :

ಸೋಮವಾರಪೇಟೆ: ರಾಜ್ಯದಲ್ಲಿ ಒಂದು ವರ್ಗವನ್ನು ಓಟ್‌ಬ್ಯಾಂಕ್‌ಗಾಗಿ ಓಲೈಸಲು ಕೆಲವು ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೊಳಿಸುವ ಮೂಲಕ, ಆ ವರ್ಗದವರೂ ಇತರರಿಂದ ಮುಖಭಂಗ ಅನುಭವಿಸುವ ಮೂಲಕ ರಾಜ್ಯದ ಮತದಾರರ ಆಕ್ರೋಶಕ್ಕೆ ತುತ್ತಾಗಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದರು.
 ಮನೆಮನೆಗೆ ಬಿಜೆಪಿ ಅಭಿಯಾನದಲ್ಲಿ ಪಾಲ್ಗೊಂಡು, ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
 ರಾಜ್ಯ ಸರ್ಕಾರ ಕೆಲವು ಯೋಜನೆಗಳನ್ನು ಒಂದು ವರ್ಗಕ್ಕೆ ತಲುಪುವ ರೀತಿಯಲ್ಲಿ ನಾಜೂಕಾಗಿ ಕಾರ್ಯರೂಪಕ್ಕೆ ತರಲು ಯತ್ನಿಸಿದರೂ ಮತದಾರರ, ಪ್ರಗತಿ ಪರ ಚಿಂತಕರ ಛೀಮಾರಿಗೆ ಒಳಗಾಗಿತ್ತು. ಇಂತಹ ಎಡವಟ್ಟುಗಳಲ್ಲೇ ರಾಜ್ಯ ಸರ್ಕಾರ ಮುಳುಗಿದ್ದು, ಅಭಿವೃದ್ಧಿ ಕಾರ್ಯ ಮಾತ್ರ ಶೂನ್ಯವಾಗಿದೆ ಎಂದರು. ಅವೈಜ್ಞಾನಿಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯದ ಬೊಕ್ಕಸವನ್ನು ಬರಿದು ಮಾಡಿದೆ ಎಂದು ಟೀಕಿಸಿದರು.
 ಕಳೆದ ಬಾರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ 300 ಕೋಟಿಗೂ ಅಧಿಕ ಆಸ್ತಿಪಾಸ್ತಿ, ಬೆಳೆಹಾನಿ ನಷ್ಟವಾಗಿದ್ದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೇವಲ 3 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಇದರಲ್ಲಿ 1 ಕೋಟಿಯನ್ನು ಕಳೆದ ಸಾಲಿನ ಬಿಜೆಪಿ ಸರ್ಕಾರವೇ ಮೀಸಲಿರಿಸಿತ್ತು. ಬಜೆಟ್‌ನಲ್ಲಿ 50 ಕೋಟಿ ಮೀಸಲಿರಿಸಿದ್ದರೂ, ಇದುವರೆಗೆ ಎಷ್ಟು ಅನುದಾನ ಬಿಡುಗಡೆಯಾಗಿದೆ ಎಂದು ಪ್ರಶ್ನಿಸಿದ ರಂಜನ್, ಈ ಅನುದಾನವನ್ನು ಲೋಕೋಪಯೋಗಿ ಇಲಾಖೆಗೆ ಮೀಸಲಿರಿಸಲಾಗಿದೆ ಎಂದರು.
 ಸಂಸದ ವಿಶ್ವನಾಥ್ ಅವರು ಕೊಡಗಿನ ಪ್ರಯಾಣಿಕರನ್ನು ಹಳಿಯಿಲ್ಲದ ರೈಲಿಗೆ ಹತ್ತಿಸುವಲ್ಲಿ ಯಶಸ್ಸು ಕಂಡಿದ್ದಾರೆ. ರೈಲ್ವೇ ಸಂಪರ್ಕ ಕಲ್ಪಿಸಿಯೇ ತೀರುತ್ತೇವೆ ಎಂದು ಜನತೆಗೆ ವಾಗ್ದಾನವಿತ್ತು ಇದೀಗ ರೈಲ್ವೇ ಟಿಕೆಟ್ ಕೌಂಟರ್ ಅನ್ನು ಕೇಂದ್ರ ಸಚಿವರ ಉಪಸ್ಥಿತಿಯಲ್ಲಿ ಕುಶಾಲನಗರದಲ್ಲಿ ತೆರೆಯಲಾಗಿದೆ ಎಂದು ವ್ಯಂಗ್ಯವಾಡಿದ ರಂಜನ್, ಅಡಕೆ ಹಾಗೂ ತಂಬಾಕನ್ನು ನಿಷೇಧಿಸಲು ಚಿಂತನೆ ಹರಿಸುವ ಮೂಲಕ ಲಕ್ಷಾಂತರ ರೈತರ ಹಿತವನ್ನು ಕೇಂದ್ರ ಸರ್ಕಾರ ಮರೆಯುತ್ತಿದೆ ಎಂದು ಆರೋಪಿಸಿದರು.
ಕೊಡಗಿನಲ್ಲಿ ರಸ್ತೆಗಳು ಕಾಂಕ್ರೀಟ್ ಕಂಡಿದ್ದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ. ಇದೀಗ ಸೋಮವಾರಪೇಟೆ, ಮಡಿಕೇರಿ, ಕುಶಾಲನಗರ, ವೀರಾಜಪೇಟೆಯಲ್ಲಿ ನಡೆಯುತ್ತಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಗಳು ಈ ಹಿಂದಿನ ಬಿಜೆಪಿ ಸರ್ಕಾರದ ಕೊಡುಗೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ವಕ್ತಾರ ಮನುಮುತ್ತಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಪ್ರಮುಖರಾದ ಅಭಿಮನ್ಯುಕುಮಾರ್, ವಿ.ಕೆ. ಲೋಕೇಶ್, ಪಟ್ಟೆಮನೆ ಶೇಷಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.