ದಕ್ಷಿಣ ಕನ್ನಡ

ಸ್ವಾತಂತ್ರ್ಯ ಹೋರಾಟಗಾರ ಸಂಜೀವನಾಥ ಐಕಳ ನಿಧನ

Published On :

ಮೂಲ್ಕಿ: ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಶಾಸಕ ಡಾ.ಕೆ. ಸಂಜೀವನಾಥ ಐಕಳ (93) ಕಾರ್ನಾಡಿನ ತಮ್ಮ ಮನೆಯಲ್ಲಿ ಗುರುವಾರ ಬೆಳಗ್ಗೆ ನಿಧನರಾದರು.
ಮೂಡುಬಿದಿರೆಯನ್ನೊಳಗೊಂಡ ಅಂದಿನ ಸುರತ್ಕಲ್ ಕ್ಷೇತ್ರದಿಂದ 1962ರಿಂದ 67ರವರೆಗೆ ಪ್ರಜಾ ಸೋಷಲಿಸ್ಟ್ ಪಕ್ಷದಿಂದ ಶಾಸಕರಾಗಿ ಅವರು ಕಾರ್ಯ ನಿರ್ವಹಿಸಿದ್ದರು.
ಹೈಸ್ಕೂಲಲ್ಲೇ ಸ್ವಾತಂತ್ರ್ಯಪ್ರೇಮ: 1921ರಲ್ಲಿ ಐಕಳ ಬಾವಾ ಮನೆತನದಲ್ಲಿ ಜನಿಸಿದ ಸಂಜೀವನಾಥ ಐಕಳರು ನಿಡ್ಡೋಡಿಯ ಸತ್ಯನಾರಾಯಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದು, ಕಾರ್ನಾಡಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾಗಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದರು. 1936ರಲ್ಲಿ ಕಾರ್ನಾಡಿನ ಗಾಂಧಿ ಮೈದಾನದಲ್ಲಿ ಜರುಗಿದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು.
18 ತಿಂಗಳು ಜೈಲುವಾಸ: ನಂತರ 1940ರಲ್ಲಿ ಬಳ್ಳಾರಿಯಲ್ಲಿ ಪಂಡಿತ ತಾರಾನಾಥರಲ್ಲಿ ಆಯುರ್ವೇದ ಅಧ್ಯಯನ ನಡೆಸಿ ಬಳಿಕ ವೈದ್ಯ ವೃತ್ತಿ ಆರಂಭಿಸಿದರು.  1942ರಲ್ಲಿ ಕ್ವಿಟ್ ಇಂಡಿಯಾ ಚಳುವಳಿ ಆರಂಭಗೊಂಡಾಗ ತನ್ನ ವೈದ್ಯಕೀಯ ಸಹಪಾಠಿಗಳೊಂದಿಗೆ ಸೇರಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡು ಬಂಧಕ್ಕೊಳಗಾಗಿದ್ದರು.
ಜಾರ್ಜ್ ಫೆರ್ನಾಂಡಿಸ್ ಆತ್ಮೀಯ: 18 ತಿಂಗಳ ಕಾಲ ಸೆರೆವಾಸ ಅನುಭವಿಸಿ 1944ರಲ್ಲಿ ಬಿಡುಗಡೆಗೊಂಡ ಬಳಿಕ ಮುಂಬೈಗೆ ಹೋಗಿ ಅಲ್ಲಿ ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ ಜಾರ್ಜ್ ಫೆರ್ನಾಂಡಿಸ್‌ರೊಂದಿಗೆ ಸ್ನೇಹ ಬೆಳೆಸಿಕೊಂಡು ಅವರ ಆತ್ಮೀಯರಾಗಿದ್ದರು. 1953ರಿಂದ 1956ರವರೆಗೆ ಜಾರ್ಜ್ ಫೆರ್ನಾಂಡಿಸ್‌ರೊಂದಿಗೆ ಮಂಗಳೂರಿನಲ್ಲಿ ವಿವಿಧ ಕಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು. 1957ರಲ್ಲಿ ಅಂದಿನ ಸುರತ್ಕಲ್ ಕ್ಷೇತ್ರದಲ್ಲಿ ಪ್ರಜಾ ಸೋಷಲಿಸ್ಟ್ ಪಕ್ಷದಲ್ಲಿ ಸ್ಪರ್ಧಿಸಿ ಸೋತು ಬಳಿಕ 1962ರ ಚುನಾವಣೆಯಲ್ಲಿ ಸಂಸ್ಥಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದರು.
ಪಿಂಚಣಿ ಹಣದಲ್ಲೇ ಶಾಲೆ ನಡೆಸಿದರು: ಸಂಜೀವನಾಥ ಐಕಳರು 1953ರಲ್ಲಿ ಪುನರೂರಿನಲ್ಲಿ ಎಫ್.ಎಸ್. ಲೋಬೊ ನಡೆಸುತ್ತಿದ್ದ ಜೈ ಭಾರತಾ ಮಾತಾ ಶಾಲೆಯನ್ನು ಪಡೆದುಕೊಂಡು ಮುಳಿಹುಲ್ಲಿನ ಶಾಲೆಯನ್ನು ಅಭಿವೃದ್ಧಿಗೊಳಿಸಿ ಪ್ರೌಢಶಾಲೆಯಾಗುವ ತನಕ ಕೊಂಡೊಯ್ದಿದ್ದಾರೆ.
  ಶಾಸಕರ ಪಿಂಚಣಿ ರು. 4000 ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ರು. 5000 ಸೇರಿದಂತೆ ದಾನಿಗಳು ನೀಡಿದ ಹಣವನ್ನು ಶಾಲೆಯ ಶಿಕ್ಷಕರಿಗೆ ವೇತನವನ್ನಾಗಿ ನೀಡುತ್ತಿದ್ದರು. ಶಾಲೆಯ ಕಟ್ಟಡ ನಿರ್ಮಾಣಕ್ಕೆ ತನಗೆ ಸರ್ಕಾರದಿಂದ ಸಿಕ್ಕಿದ ಕಿಲ್ಪಾಡಿ ಹಾಗೂ ಚೇಳಾಯರುನಲ್ಲಿದ್ದ ಜಾಗವನ್ನು ಮಾರಾಟ ಮಾಡಿ ಆಂಗ್ಲ ಮಾಧ್ಯಮದ ಪ್ರಭಾವವಿರುವ ಸಂದರ್ಭ ಗ್ರಾಮೀಣ ಪ್ರದೇಶವಾಗಿದ್ದ ಪುನರೂರಿನಲ್ಲಿ ಶಾಲೆ ಉಳಿಸಲು ಬಹಳಷ್ಟು ಪ್ರಯತ್ನಪಟ್ಟಿದ್ದರು. ಆಗ ಶಾಲೆಗೆ ಸರ್ಕಾರದಿಂದ ಅನುದಾನ ಸಿಗುವಂತೆ ಪ್ರಯತ್ನಿಸಿದರೂ ಸರ್ಕಾರ ಸ್ಪಂದಿಸಿರಲಿಲ್ಲ. ಇದೀಗ ಸರ್ಕಾರ ಅನುದಾನ ನೀಡುತ್ತಿದೆ.
ಇಂದು ಅಂತಿಮಯಾತ್ರೆ: ಮೃತ ಸಂಜೀವನಾಥ ಐಕಳರು ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಅವರ ಅಂತಿಮಯಾತ್ರೆ ಫೆ.7ರಂದು ಬೆಳಗ್ಗೆ ಕಾರ್ನಾಡಿನ ಮರ್ಕುಂಜದ 'ಸಜನಿ' ಮನೆಯಿಂದ ಹೊರಟು ಮೂಲ್ಕಿಯ ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ಅಂತಿಮ ಕ್ರಿಯೆ ನಡೆಯಲಿದೆ.
ಗಣ್ಯರ ಸಂತಾಪ: ಸಂಜೀವನಾಥ ಐಕಳರ ನಿಧನಕ್ಕೆ ಸಚಿವರಾದ ಕೆ. ಅಭಯಚಂದ್ರ ಜೈನ್, ವಿನಯ ಕುಮಾರ್ ಸೊರಕೆ, ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಕೆ. ಭುವನಾಭಿರಾಮ ಉಡುಪ ಸೇರಿದಂತೆ ಹಲವಾರು ಗಣ್ಯರು ಹಾಗೂ ವಿವಿಧ ಸಂಸ್ಥೆಗಳ ಪದಾಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.