ದಕ್ಷಿಣ ಕನ್ನಡ

ಮಂಗಳೂರಲ್ಲಿ ಶತಕ ದಾಟಿದ ಜೂಜು ಅಡ್ಡೆಗಳು

Published On :

ಮಂಗಳೂರು: ಅಪರಾಧ ಲೋಕ ವೈಭವಕ್ಕೆ ಬೇಕಾಗುವ ಒಂದೊಂದೇ ಕಾನೂನು ಬಾಹಿರ
ಚಟುವಟಿಕೆಗಳು ಮಂಗಳೂರು ಮಹಾನಗರದಲ್ಲಿ ಮೈ ಕೊಡವಿ ಮೇಲೇಳುತ್ತಿವೆ.
 ಇಸ್ಪೀಟ್ ಜೂಜಾಟದ ಕ್ಲಬ್‌ಗಳು ಎರಡೇ ತಿಂಗಳಲ್ಲಿ ಶತಕ ದಾಟಿ 113ಕ್ಕೆ ತಲುಪಿವೆ! ಸಾಲದು ಎಂಬಂತೆ ಪ್ರತಿಷ್ಠಿತ ಹೊಟೇಲ್‌ಗಳಲ್ಲಿ ಡ್ಯಾನ್ಸ್ ಬಾರ್‌ಗಳೂ ಆರಂಭವಾಗಿದೆ. ಒಂದೆಡೆ ರೌಡಿಗಳ ಹಾಡಹಗಲೇ ಕೊಲೆಗಳು, ಧಾರ್ಮಿಕ ಮೂಲಭೂತವಾದಿಗಳ ಹೇಶಾರವ, ತಾಲಿಬಾನಿ ಕೃತ್ಯಗಳು, ಕೋಮು ಘರ್ಷಣೆಗಳು. ಇವೆಲ್ಲದಕ್ಕೆ ಸ್ಕೆಚ್ ಹಾಕುವ ಉತ್ತಮ ತಾಣವಾದ ಇಸ್ಪೀಟ್ ಮತ್ತು ಸ್ಪಿರಿಟ್ ಒದಗಿಸುವ ಡ್ಯಾನ್ಸ್ ಬಾರ್‌ಗಳು ಕೇವಲ ಎರಡು ತಿಂಗಳಲ್ಲಿ ಶತಕ ದಾಟಿದೆ.
 ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಇಸ್ಪಿಟ್ ಕ್ಲಬ್‌ಗಳ ಮೇಲೆ ವಿಧಿಸಲಾಗಿದ್ದ ನಿರ್ಬಂಧ ತೆರವುಗೊಳಿಸಲಾಗಿದೆ. ಜಿಲ್ಲೆಯ ಕೆಲ ಕಾಂಗ್ರೆಸ್  ಮುಖಂಡರೇ ಕ್ಲಬ್ ಮತ್ತು ಪಬ್‌ಗಳ ಮಾಲೀಕರಾಗಿರುವುದರಿಂದ ಇದು ಸಾಧ್ಯವಾಗಿದೆ. ಸುರತ್ಕಲ್, ಮಂಗಳೂರು, ಮೂಡುಬಿದಿರೆ, ಉಳ್ಳಾಲ, ಬಂಟ್ವಾಳ ಸೇರಿ 113 ಇಸ್ಪೀಟ್ ಕ್ಲಬ್‌ಗಳು ಕಾರ್ಯಾಚರಿಸುತ್ತಿವೆ. ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಮೊದಲ ಕಮಿಷನರ್ ಆಗಿ ಆಗವಿದ್ದ ವೇಳೆ ಮಂಗಳೂರಿನ ಎಲ್ಲ ಜೂಜು ಅಡ್ಡೆಗಳನ್ನು ಸಂಪೂರ್ಣ ನಿಯಂತ್ರಿಸಿದ್ದರು. ಇರುವ ಎಲ್ಲ ಕಾನೂನುಗಳನ್ನು ಹೇರಿ ಕ್ಲಬ್‌ಗಳನ್ನು ಮುಚ್ಚಿಯೇ ಬಿಟ್ಟಿದ್ದರು. ಇದಕ್ಕೆ ಪೂರಕವಾಗಿ ಆಂದಿನ ಬಿಜೆಪಿ ಸರ್ಕಾರವೂ ಬೆಂಬಲ ನೀಡಿತ್ತು.
 ಆಗ ಮಂಗಳೂರಲ್ಲಿ ಬದುಕಿ ಉಳಿದದ್ದು ಒಂದೇ ಒಂದು ಕೆನರಾ ಇಸ್ಪೀಟ್ ಕ್ಲಬ್. ಅವರು ಹೈಕೋರ್ಟ್ ಮೊರೆ ಹೋಗಿ, 'ಅದೃಷ್ಟದ ಇಸ್ಪೀಟ್ ಆಟ ಆಡುತ್ತಿಲ್ಲ, ಸದಸ್ಯರು ಮಾತ್ರ ಕೌಶಲದ ರಮ್ಮಿ ಆಡುತ್ತೇವೆ' ಎಂದಾಗ ಕೋರ್ಟ್ ಒಪ್ಪಿಗೆ ನೀಡಿತ್ತು. ರಮ್ಮಿ ಕೌಶಲ ಆಟ ವಾದರೆ, ಅಂದರ್ ಬಾಹರ್ ಅದೃಷ್ಟದ ಆಟ. ಅಂದರ್‌ಬಾಹರ್ ಕಾನೂನು ಬಾಹಿರ.   
ಸೀಮಂತ್ ಕುಮಾರ್ ವರ್ಗವಾದ ಬಳಿಕ ಬಂದವರೇ ಕಮಿಷನರ್ ಮನೀಶ್ ಕರ್ಬೀಕರ್. ಇವರೂ ಕೂಡಾ ಕಟ್ಟು ನಿಟ್ಟಿನವರು. ಇವರ ಒಂದುವರೆ ವರ್ಷದ ಅವಧಿಯಲ್ಲಿ ಇನ್ನೂ ಮೂರು ಇಸ್ಪೀಟ್ ಕ್ಲಬ್‌ಗಳು  ಕೋರ್ಟ್ ಸಹಕಾರದಿಂದ ಆಟಕ್ಕೆ ಅನುಮತಿ ಪಡೆದುಕೊಂಡವು.  
 ಆದರೆ ಈಗ ಎಲ್ಲೆಲ್ಲೂ ಕ್ರೈಮ್, ಗಲ್ಲಿ ಗಲ್ಲಿಗಳಲ್ಲಿ ಇಸ್ಪೀಟ್, ಡ್ಯಾನ್ಸ್ ಬಾರ್ ತೆರೆದು ಅಪರಾಧಿ ಶಕ್ತಿಗಳಿಗೆ ಪ್ರಶಸ್ತಿ ತಾಣವಾಗುತ್ತಿದೆ. ಪಾಂಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅತಿ ಹೆಚ್ಚಿನ ಇಸ್ಪಿಟ್ ಅಡ್ಡೆಗಳಿವೆ.
ಆಯಕಟ್ಟಿನ ಪ್ರದೇಶದಲ್ಲಿರುವ ಅಪರಾಧ ನಿಗ್ರಹ ದಳದವರಿಗೆ ಆರೋಪಿಗಳನ್ನು ಹಿಡಿಯುವುದಕ್ಕಿಂತ ಇಸ್ಪೀಟ್ ಅಡ್ಡೆಗಳಿಗೆ ಹೋಗುವುದೇ 'ಮಾಮೂಲಿ' ಕೆಲಸ ಆಗಿದೆ.
ಪಬ್‌ಗಳಲ್ಲಿ ಮತ್ತೇರಿಸುವ ಡ್ಯಾನ್ಸ್: ಪಂಪ್‌ವೆಲ್‌ನಲ್ಲಿ ವಿದೇಶಿ ಹೆಸರಿನ ಪಬ್‌ನಲ್ಲಿ, ರಾಷ್ಟ್ರೀಯ ಹೆದ್ದಾರಿಯ ಪೆಗ್ಗ್ ಏರಿಸುವ ಪಬ್‌ನಲ್ಲಿ, ಎಸ್‌ಡಿಎಂ ಕಾಲೇಜ್ ಮುಂಭಾಗದ ಮಾಲ್ ಒಳಗಿರುವ ಪಬ್‌ನಲ್ಲಿ ಬೆಳಗ್ಗೆ 4 ಗಂಟೆವರೆಗೂ ಮದ್ಯ, ಮದಿರೆಯ ನೃತ್ಯ ನಡೆಯುತ್ತಿದೆ. ಇದೇ ಸಂದರ್ಭ ಮಾದಕ ವಸ್ತುಗಳ ಸೇವನೆ ಮಾರಾಟವೂ ಜೋರಾಗಿ ನಡೆಯುತ್ತಿದೆ. ಇದೆಲ್ಲ ಮಾಹಿತಿ ಪೊಲೀಸ್ ಗುಪ್ತಚರ ಇಲಾಖೆಗೆ ಇದೆ.
ತಕ್ಷಣ ಮುಚ್ಚಲು ಸೂಚನೆ: ಎಲ್ಲೆಲ್ಲಿ ಕಾನೂನು ಬಾಹಿರ ಅಡ್ಡೆಗಳು, ಇಸ್ಪೀಟ್ ಕ್ಲಬ್‌ಗಳು, ಡ್ಯಾನ್ಸ್ ಬಾರ್ ಗಳಿವೆಯೋ ಅವುಗಳನ್ನು ತಕ್ಷಣ ಬಂದ್ ಮಾಡುವಂತೆ ಡಿಸಿಪಿಗೆ ಸೂಚಿಸುತ್ತೇನೆ ಎಂದು ಪೊಲೀಸ್‌ಕಮಿಷನರ್ ಆರ್.ಹಿತೇಂದ್ರ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ್ದಾರೆ.


-ಜಿತೇಂದ್ರ ಕುಂದೇಶ್ವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.