ಕರ್ವಾಲು ದೇವಾಲಯಕ್ಕೆ ರವಿಶಾಸ್ತ್ರಿ ಭೇಟಿ
ಕಾರ್ಕಳ: ಬೈಲೂರು ಸಮೀಪದ ಕರ್ವಾಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಶನಿವಾರ ಭೇಟಿ ನೀಡಿದರು. ಕ್ಷೇತ್ರಕ್ಕೆ 6ನೇ ಬಾರಿ ಭೇಟಿ ನೀಡಿದ ಶಾಸ್ತ್ರಿ, ನಾಗಬನದಲ್ಲಿ ಪಂಚಾಮೃತ ಅಭಿಷೇಕ ಮತ್ತು ದೇವರಿಗೆ ಹೂವಿನ ಪೂಜೆ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಅಕ್ಟೋಬರ್ನಲ್ಲಿ ಮತ್ತೆ ಈ ಕ್ಷೇತ್ರಕ್ಕೆ ಆಗಮಿಸಲಿದ್ದೇನೆ ಎಂದರು. ಇದು ನಮ್ಮ ಕುಟುಂಬದ ಮೂಲ ಕ್ಷೇತ್ರವಾಗಿದ್ದು, ಇಲ್ಲಿಗೆ ಬಂದು, ಸೇವೆ ಸಲ್ಲಿಸಿದ ನಂತರ ತಮಗೆ ಮಗುವಾಗಿದೆ. ಹೀಗಾಗಿ ಪ್ರತಿವರ್ಷ ಬಂದು ಇಲ್ಲಿ ಪೂಜೆ ಸಲ್ಲಿಸುತ್ತಿದ್ದೇನೆ. ಇದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ಶಾಂತಿಯಿದೆ' ಎಂದು ತಿಳಿಸಿದರು. ಅವರೊಂದಿಗೆ ಡಾ. ಸಂತೋಷ್ ಕುಮಾರ್ ಶಾಸ್ತ್ರಿ, ಕವಿತಾ ಶಾಸ್ತ್ರಿ ಇದ್ದರು.
ಗಲಭೆ ಹತ್ತಿಕ್ಕಲು ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ: ಸಚಿವ ರೈ
ಮಂಗಳೂರು: ಉಳ್ಳಾಲದಲ್ಲಿ ಕಟ್ಟು ನಿಟ್ಟಿನ ಕ್ರಮದಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಯಾವುದೇ ಒತ್ತಡ ಹೇರದೆ ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು. ಪೊಲೀಸರು ಉತ್ತಮವಾಗಿ ನಿಯಂತ್ರಿಸಿದ್ದಾರೆ. ಶಾಂತಿ ಕಾಪಾಡುವುದು ನಮ್ಮ ಉದ್ದೇಶ. ಗಲಭೆಯ ಸರಿಯಾದ ತನಿಖೆ ನಡೆಸುತ್ತೇವೆ. ಜಿಲ್ಲಾಡಳಿತ ವತಿಯಿಂದ, ಸಂತ್ರಸ್ತರಿಗೆ ಸರಿಯಾದ ಪರಿಹಾರ ನೀಡುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ನಿಷೇಧಾಜ್ಞೆ ಭಾನುವಾರವೂ ಇರಲಿದೆ. ಕ್ರಮೇಣ ನಿಷೇಧಾಜ್ಞೆ ಸಡಿಲಿಸಲಾಗುವುದು. ಭದ್ರತೆಗೆ ರ್ಯಾಪಿಡ್ ಆಕ್ಷನ್ ಪೋರ್ಸ್, ಇತರ ಪೊಲೀಸ್ ತುಕಡಿಗಳನ್ನು ಇರಿಸಲಾಗುವುದು. ಪರಿಸ್ಥಿತಿ ನಿಯಂತ್ರಣಕ್ಕೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಕಮಿಷನರ್ ಆರ್.ಹಿತೇಂದ್ರ, ಆರೋಗ್ಯ ಸಚಿವ ಯು.ಟಿ.ಖಾದರ್, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿ, ಎಸ್ಪಿ ಶಂತನು ಸಿನ್ಹ, ಶಾಸಕ ಜೆ.ಆರ್.ಲೋಬೊ ಇದ್ದರು.
ಇಂದು ವಿಟ್ಲದಲ್ಲಿ ಚೈತನ್ಯ ಸಮಾವೇಶ
ವಿಟ್ಲ: ವಿಟ್ಲ ನಮೋ ಭಾರತ್ ವತಿಯಿಂದ ಇಲ್ಲಿನ ಪಂಚಲಿಂಗೇಶ್ವರ ದೇವಸ್ಥಾನದ ರಥದ ಗದ್ದೆಯಲ್ಲಿ ಫೆ.9 ರಂದು ಚೈತನ್ಯ ಸಮಾವೇಶ ಕಾರ್ಯಕ್ರಮ ನಡೆಯಲಿದೆ ಎಂದು ವಿಟ್ಲ ನಮೋ ಭಾರತ್ ಅಧ್ಯಕ್ಷ ಹರೀಶ್ ನಾಯಕ್ ತಿಳಿಸಿದರು. ವಿಟ್ಲದಲ್ಲಿ ಬುಧವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮದ ಬಗ್ಗೆ ವಿವರಣೆ ನೀಡಿ ಖ್ಯಾತ ಅಂಕಣಕಾರ ಚಕ್ರವತಿ ಸೂಲಿಬೆಲೆ ದಿಕ್ಸೂಚಿ ಭಾಷಣ ಮಾಡಲಿದ್ದು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯೆ ಪ್ರಾಂತ್ಯ ಪ್ರಮುಖ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಉಪಸ್ಥಿತರಿರಲಿದ್ದಾರೆ. ಉದ್ಯಮಿ ಎಲ್.ಎನ್. ಕೂಡೂರು ಅಧ್ಯಕ್ಷತೆ ವಹಿಸಲಿದ್ದು, ಶ್ರೀ ಕ್ಷೇತ್ರ ಕರಿಂಜ ಮಠದ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಅತಿಥಿಗಳಾಗಿ ಪುತ್ತೂರು ನಮೋ ಭಾರತ್ ಗೌರವಾಧ್ಯಕ್ಷ ಡಾ.ಎಂ.ಕೆ. ಪ್ರಸಾದ್, ಪುತ್ತೂರು ನಮೋ ಭಾರತ್ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ವಿಟ್ಲ ನಮೋ ಭಾರತ್ ಪದಾಧಿಕಾರಿಗಳಾದ ರವಿಕುಮಾರ್, ಕರುಣಾಕರ ನಾಯ್ತೊಟ್ಟು, ಜಯಂತ ಸಿ.ಎಚ್, ವೇಣುಗೋಪಾಲ, ನಾಗೇಶ್ ಬಸವನಗುಡಿ, ಗಣೇಶ್, ಪ್ರದೀಪ್, ರೋಹಿತ್ ಇದ್ದರು.
ಭಕ್ತಿಗೀತೆ, ದಾಸ ಸಾಹಿತ್ಯ ಸಿಡಿ ಬಿಡುಗಡೆ
ಉಡುಪಿ: ದೊಂಡೇರಂಗಡಿಯ ಶ್ರೀ ರಾಮ ಮಂದಿರದ 25ನೇ ವರ್ಷದ ಪುನರ್ ಪ್ರತಿಷ್ಠಾ ವರ್ಧಂತಿ ಪ್ರಯುಕ್ತ ಶ್ರೀ ರಾಮ ದೇವರ ಕುರಿತು ವಿಶಿಷ್ಟವಾಗಿ ರಚನೆ ಮಾಡಿರುವ 'ರಾಮ ರಾಮ ಎನ್ನಿರೋ' ಎಂಬ ಭಕ್ತಿಗೀತೆ ಹಾಗೂ ದಾಸ ಸಾಹಿತ್ಯ ಒಳಗೊಂಡ ಧ್ವನಿಸುರುಳಿ ಸಿ.ಡಿ. ಯನ್ನು ರಾಮ ಮಂದಿರದ ಸಭಾಂಗಣದಲ್ಲಿ ಬಿಡುಗಡೆಗೊಳಿಸಲಾಯಿತು. ಸಮಾರಂಭದಲ್ಲಿ ಶ್ರೀ ಪುದುಕೋಟೆ ಆರ್. ರಾಮನಾಥನ್, ತಿರುಪತಿ, ತಬಲ ವಾದಕ ವಿಜಯ ಭಟ್, ಟಿ.ಎಂ.ಎ. ಪೈ ಪಾಲಿಟೆಕ್ನಿಕಲ್ ಕಾಲೇಜಿನ ಪ್ರಾಂಶುಪಾಲ ಟಿ.ಎಂ.ಎ. ರಂಗಪೈ, ಗಾಯಕ ಶಾಂತರಾಮ ಬಾಳಿಗಾ ಮತ್ತು ವೆಂಕಟೇಶ ಆಲ್ಕೋಡ್, ಶ್ರೀ ರಾಮ ಮಂದಿರದ ಅಧ್ಯಕ್ಷ ಬಿ. ಜಯರಾಮ ನಾಯಕ್, ಸಮಾಜಸೇವಕ ವಿಶ್ವನಾಥ ಶೆಣೈ, ವೇ.ಮೂ. ಕಾಶೀನಾಥ್ ಭಟ್ ಮತ್ತು ಶಿವಾನಂದ ಭಟ್ ಮಣಿಪಾಲ ಇದ್ದರು. ಖ್ಯಾತ ವಯೋಲಿನ್ ವಾದಕ ಪುದುಕೋಟೆ ಆರ್. ರಾಮನಾಥನ್, ತಿರುಪತಿ ಇವರಿಂದ ವಯೋಲಿನ್ ವಾದನ ನಡೆಯಿತು. ಸಾಮೂಹಿಕ ರಾಮರಕ್ಷಾ ಸ್ತೋತ್ರ ಮತ್ತು ಹನುಮಾನ್ ಚಾಲೀಸಾ ಪಠಣ ನಡೆಯಿತು.
ರವೀಂದ್ರನಾಥ್, ಅಕ್ಕು- ಲೀಲಾಗೆ ಪನ್ನಾಭ ಪ್ರಶಸ್ತಿ
ಮಂಗಳೂರು: ರಂಗಭಾರತಿ ಕೇಂದ್ರದ ವತಿಯಿಂದ ನೀಡಲಾಗುವ 9ನೇ ವರ್ಷದ 'ಪನ್ನಾಭ ಪುರಸ್ಕಾರ'ಕ್ಕೆ ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಡಾ. ರವೀಂದ್ರನಾಥ್ ಶಾನುಭಾಗ್ ಮತ್ತು ಅವರ ಪ್ರತಿನಿಧಿಗಳಾಗಿ ಅಕ್ಕು ಮತ್ತು ಲೀಲಾ ಆಯ್ಕೆಯಾಗಿದ್ದಾರೆ. ಕಳೆದ ಮೂರುವರೆ ದಶಕಗಳಿಂದ ಬಳಕೆದಾರರ ಹೋರಾಟ ಮತ್ತು ಮಾನವ ಹಕ್ಕುಗಳ ರಕ್ಷಣಾ ಕಾರ್ಯಗಳ ಮೂಲಕ 25 ಸಾವಿರಕ್ಕೂ ಅಧಿಕ ಮಂದಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬದುಕು ಕಟ್ಟಿಕೊಡುವಲ್ಲಿ ಶ್ರಮಿಸುತ್ತಿರುವ ಕಾರಣಕ್ಕಾಗಿ ಡಾ. ರವೀಂದ್ರನಾಥ್ ಶಾನುಭಾಗ್ ಅವರನ್ನು ಆಯ್ಕೆಗೊಳಿಸಲಾಗಿದೆ. ಪುರಸ್ಕಾರವು ರು. 5 ಸಾವಿರ ನಗದು, ಪ್ರಮಾಣಪತ್ರ ಒಳಗೊಂಡಿದೆ. ಫೆ. 12 ರಂದು ಮಣಿಪಾಲ ಅನಂತನಗರದ ರೋಟರಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನೀಡಲಾಗುತ್ತದೆ ಎಂದು ಕೆ.ವಿ. ರಮಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
15ರಂದು ರಾಜ್ಯ ಮಟ್ಟದ
ಶೈಕ್ಷಣಿಕ ಸಮ್ಮೇಳನ
ಮಂಗಳೂರು: ಬೆಂಗಳೂರು ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಫೆ. 15 ಹುಬ್ಬಳ್ಳಿ ನೆಹರೂ ಮೈದಾನದಲ್ಲಿ ರಾಜ್ಯಮಟ್ಟದ 'ಶೈಕ್ಷಣಿಕ ಸಮ್ಮೇಳನ' ನಡೆಯಲಿದೆ. ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸುವರು. ಗ್ರಾಮೀಣ ಅಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಅವರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಅಧ್ಯಕ್ಷತೆ ವಹಿಸುವರು. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡುರಾವ್, ಲೋಕಸಭೆ ಸದಸ್ಯ ಪ್ರಹ್ಲಾದ್ ಜೋಶಿ ಪಾಲ್ಗೊಳ್ಳುವರು. ಸಮ್ಮೇಳನದಲ್ಲಿ ನಾಲ್ಕು ವಿಚಾರಗೋಷ್ಠಿ ನಡೆಯಲಿದೆ. ಡಾ.ವಿ.ಪಿ. ನಿರಂಜನಾರಾಧ್ಯ, ಡಾ.ಬಿ.ಕೆ.ಎಸ್. ವರ್ಧನ್, ಮಲ್ಲಿಕಾ ಘಂಟಿ ಇವರು ವಿಷಯ ಮಂಡನೆ ಮಾಡುವರು. ವಿವಿಧ ಬೇಡಿಕೆಗಳ ಮನವಿಯನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಸಲಾಗುವುದು ಎಂದು ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ದ.ಕ. ಜಿಲ್ಲಾಧ್ಯಕ್ಷ ಕೆ. ಶಿವಶಂಕರ ಭಟ್ ತಿಳಿಸಿದ್ದಾರೆ.
14ರಂದು ಲೋಕಾಯುಕ್ತ ಡಾ.ಭಾಸ್ಕರ್ರೊಂದಿಗೆ ಸಂವಾದ
ಪುತ್ತೂರು: ಪುತ್ತೂರು ತಾಲೂಕಿನ ಈಶ್ವರಮಂಗಲದ ಶ್ರೀ ಕ್ಷೇತ್ರ ಹನುಮಗಿರಿಯಲ್ಲಿನ ಧರ್ಮಶ್ರೀ ಪ್ರತಿಷ್ಠಾನದ ವತಿಯಿಂದ ಫೆ.14ರಂದು ಸಂಜೆ ಲೋಕಾಯುಕ್ತ ನ್ಯಾಯಮೂರ್ತಿ ಡಾ.ವೈ. ಭಾಸ್ಕರ ರಾವ್ ಇವರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡತ್ತಾಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಹನುಮಗಿರಿಯ ವೈದೇಹಿ ಸಭಾಮಂಟಪದಲ್ಲಿ ಲೋಕಾಯುಕ್ತರೊಂದಿಗೆ ಒಂದು ಸಂಜೆ ಎಂಬ ಶೀರ್ಷಿಕೆಯಲ್ಲಿ ಸಂದೇಶ- ಸಂವಾದ ಶ್ರೀಸಾಮಾನ್ಯರಿಗಾಗಿ ಎಂಬ ವಿಷಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಬಿ. ಯಶೋವರ್ಮ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಪ್ರೊ.ವಿ.ಬಿ. ಅರ್ತಿಕಜೆಯವರ 'ಬಾಳಿಗೆ ಬೆಳಕು' ಕೃತಿಯನ್ನು ಧರ್ಮಶ್ರೀ ಪ್ರತಿಷ್ಠಾನದ ಪ್ರಕಾಶನದ ಮೂಲಕ ಬಿಡುಗಡೆಗೊಳಿಸಲಾಗುವುದು ಮತ್ತು ಪ್ರತಿಷ್ಠಾನದ ಲಾಂಛನ ಅನಾವರಣಗೊಳಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಬಿ.ವಿ. ಸೂರ್ಯನಾರಾಯಣ ಮತ್ತು ನ್ಯಾಯವಾದಿ ಮಹೇಶ್ ಕಜೆ ಇದ್ದರು.
ವಾರಾಹಿ ಯೋಜನೆ ಪೂರ್ಣಗೊಳಿಸಲು ಯತ್ನ: ಸೊರಕೆ
ಬ್ರಹ್ಮಾವರ: ಸುಮಾರು 35 ವರ್ಷಗಳ ಹಿಂದೆ ಆರಂಭಗೊಂಡ ವಾರಾಹಿ ನದಿ ನೀರಾವರಿ ಯೋಜನೆ ಶೀಘ್ರ ಪೂರ್ಣಗೊಳಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಮತ್ತು ರಾಜ್ಯ ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ ಘೋಷಿಸಿದ್ದಾರೆ. ಶನಿವಾರ ಬ್ರಹ್ಮಾವರದ ಎಸ್.ಎಂ.ಎಸ್. ಸಮುದಾಯ ಭವನದಲ್ಲಿ ಹಮ್ಮಿಕೊಂಡ ಭಾರತ ನಿರ್ಮಾಣ ಮಾಹಿತಿ ಆಂದೋಲನ ಹಾಗೂ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಕಾರ್ಮಿಕರಿಗೆ ನೀಡಬೇಕಾದ ಬಾಕಿ ಹಣದ ಚೆಕ್ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.ವಾರಾಹಿ ಯೋಜನೆಯ ಕಾಲುವೆಗಳು ಸಾಗುವಲ್ಲಿ ಡೀಮ್ಡ್ ಅರಣ್ಯ ಪ್ರದೇಶ ಇರುವುದರಿಂದ, ತಾಂತ್ರಿಕ ಸಮಸ್ಯೆಯಿಂದಾಗಿ ಈ ಕಾಮಗಾರಿ ನಿಲ್ಲಿಸಲಾಗಿತ್ತು. ಕಾಂಗ್ರೆಸ್ ಸರ್ಕಾರ ಇದರ ಪರಿಹಾರಕ್ಕೆ ಪ್ರಯತ್ನ ಮಾಡುತ್ತಿದೆ ಎಂದರು. ಕಾರ್ಯಕ್ರಮವನ್ನು ಸಂಸದ ಜಯಪ್ರಕಾಶ್ ಹೆಗ್ಡೆ ಉದ್ಘಾಟಿಸಿದರು.
23ರಂದು ಶಂಕರ ಬಿದರಿ ನೇತೃತ್ವದಲ್ಲಿ 'ಜನಶಕ್ತಿ' ಉದಯ
ಪುತ್ತೂರು: ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ನೇತೃತ್ವದಲ್ಲಿ 23ರಂದು ಜನಶಕ್ತಿ ಪಕ್ಷ ಉದಯವಾಗಲಿದ್ದು, ಸಾಮಾನ್ಯ ಜನರ ಸಾತ್ವಿಕ ಶಕ್ತಿಯಾಗಿ ಈ ನೂನತ ಪಕ್ಷ ಆರಂಭಿಸಲಾಗಿದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಯರಾಮ್ ಭಟ್ ಮಾಡಾವು ಹೇಳಿದರು.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಪಕ್ಷ ಸಂಘಟಿಸುವ ಮತ್ತು ಕಾರ್ಯಕರ್ತರನ್ನು ಸೇರಿಸುವ ಸದಸ್ಯತ್ವ ಅಭಿಯಾನ ಆರಂಭಿಸಲಾಗುವುದು ಎಂದರು. ಯಡಿಯೂರಪ್ಪ ಬಿಜೆಪಿ ಸೇರಿದರೆ ಬಿಜೆಪಿಗೆ ಏನೂ ಲಾಭವಿಲ್ಲ. ಕರ್ನಾಟಕ ಜನತೆಗೆ ಯಡಿಯೂರಪ್ಪ ಕುರಿತುಳಿವಳಿಕೆ ಇದೆ ಎಂದು ಹೇಳಿದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಂಗಳೂರಿನಿಂದ ತಾನು ಲೋಕಸಭೆಗೆ ಸ್ಪರ್ಧಿಸುವುದಾಗಿ ಅವರು ತಿಳಿಸಿದರು.
ಇಂದು ಪಿಲಾತಬೆಟ್ಟು ಸಹಕಾರಿ ಸಂಘಕ್ಕೆ ಚುನಾವಣೆ
ಬಂಟ್ವಾಳ: ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಒಟ್ಟು 11 ಸ್ಥಾನಗಳಿಗೆ ಫೆ.9ರಂದು ಬೆಳಿಗ್ಗೆ 9.00ರಿಂದ ಸಂಜೆ 4.00 ಗಂಟೆವರೆಗೆ ಚುನಾವಣೆ ನಡೆಯಲಿದೆ.
ಸಾಮಾನ್ಯ ಸ್ಥಾನಗಳು: 6 ಸಾಮಾನ್ಯ, ಮಹಿಳಾ ಮೀಸಲು ಸ್ಥಾನ 2, ಪರಿಶಿಷ್ಟ ಜಾತಿ, ಪಂಗಡ ಮೀಸಲು ಸ್ಥಾನ 1, ಹಿಂದುಳಿದ ವರ್ಗ 1 ಸಾಲಗಾರರಲ್ಲದ ಸದಸ್ಯರ ಕ್ಷೇತ್ರ 1 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ನಾಮಪತ್ರ ಪಡೆಯಲು ಕೊನೆಯ ದಿನಾಂಕ ಫೆ 1, ನಾಮಪತ್ರಗಳ ಪರಿಶೀಲನೆ ಫೆ.2, ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ ಫೆ.2 ಹಾಗೂ ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಫೆ.3 ಆಗಿದ್ದು ಈ ಬಗ್ಗೆ ಸಂಘದ ನೋಟೀಸು ಬೋರ್ಡ್ನಲ್ಲಿ ವಿವರ ಪ್ರಕಟಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಮರ್ಯಮ್ ಇಸ್ಮಾಯಿಲ್ಗೆ
ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ
ಮಂಗಳೂರು: ಕತೆಗಾರ್ತಿ ಮರ್ಯಮ್ ಇಸ್ಮಾಯಿಲ್ ರಚಿಸಿದ ಮದುವೆ ಮಾರ್ಕೆಟ್ ಎಂಬ ನಾಟಕ ಕೃತಿಗೆ 2012ನೇ ಸಾಲಿನ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿ ರು. 5 ಸಾವಿರ ನಗದು ಮತ್ತು ಫಲಕ ಒಳಗೊಂಡಿದೆ. ಫೆ.28ರಂದು ಪುರಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಉಳ್ಳಾಲಬೈಲ್ ನಿವಾಸಿ ಮರ್ಯಮ್ 8 ವರ್ಷಗಳಿಂದ ಸಾಹಿತ್ಯ ಕೃಷಿ ನಡೆಸುತ್ತಿದ್ದಾರೆ. ನೋವು ನಲಿವು, ಶೂನ್ಯ ಎರಡು ಕಥಾ ಸಂಕಲನ ಹೊರತಂದಿದ್ದಾರೆ. ಮದುವೆ ಮಾರ್ಕೆಟ್ ಅವರ ಚೊಚ್ಚಲ ನಾಟಕ ಕೃತಿ. ಮೋಳೆ ಮಂಙಲ ಎಂಬ ಬ್ಯಾರಿ ಕಿರು ನಾಟಕಕ್ಕೆ ಬ್ಯಾರಿ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು.
ನಾಳೆಯಿಂದ ದ.ಕ. ಜಿಲ್ಲಾ ಮಟ್ಟದ ಯುವಜನ ಮೇಳ
ಪುತ್ತೂರು: ಜಿಲ್ಲಾ ಪಂಚಾಯಿತಿ, ಪುತ್ತೂರು ತಾಲೂಕು ಪಂಚಾಯಿತಿ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕು ಯುವಜನ ಒಕ್ಕೂಟ ಮತ್ತು ಸವಣೂರು ಯುವಕ ಮಂಡಲ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳ ಫೆ.10 ಮತ್ತು 11ರಂದು ಸವಣೂರು ಹಿ.ಪ್ರಾ. ಶಾಲೆ ವಠಾರದಲ್ಲಿ ನಡೆಯಲಿದೆ ಎಂದು ಯುವಜನ ಮೇಳ ಸಮಿತಿ ಸಂಚಾಲಕ ಸುರೇಶ್ ರೈ ಸೂಡಿಮುಳ್ಳು ತಿಳಿಸಿದ್ದಾರೆ. ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೇಳವನ್ನು 10ರಂದು ಸಚಿವ ಬಿ. ರಮಾನಾಥ ರೈ ಉದ್ಘಾಟಿಸಲಿದ್ದಾರೆ. ಸಚಿವ ಅಭಯಚಂದ್ರ ಜೈನ್ ಅಂಬೇಡ್ಕರ್ ಯುವಜನ ಅಭಿವೃದ್ಧಿ ಕೇಂದ್ರ ಉದ್ಘಾಟಿಸಲಿದ್ದಾರೆ. ಶಾಸಕ ಅಂಗಾರ ಅಧ್ಯಕ್ಷತೆ ವಹಿಸಲಿದ್ದಾರೆ.11ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಶಾಸಕಿ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಸಂಸದ ನಳಿನ್ ಕುಮಾರ್ ಕಟೀಲು ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ.
ಜಿಲ್ಲಾ ಕಾರಾಗೃಹದಲ್ಲಿ ಸಿಸಿಟಿವಿ: ದ.ಕ. ಡಿಸಿ
ಮಂಗಳೂರು: ನಗರದ ಜಿಲ್ಲಾ ಕಾರಾಗೃಹದಲ್ಲಿ ಸಿ.ಸಿ.ಟಿ.ವಿ ಅಳವಡಿಕೆಗೆ ಮಂಜೂರಾತಿ ದೊರಕಿದ್ದು ಶೀಘ್ರವೇ ಈ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಹೇಳಿದ್ದಾರೆ. ಗುರುವಾರ ಕಾರಾಗೃಹದಲ್ಲಿ ನಡೆದ ಸಂದರ್ಶಕರ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜೈಲಿನ ಭದ್ರತೆ ಇನ್ನಷ್ಟು ಹೆಚ್ಚಿಸಲು ಕಾರಾಗೃಹದ ಮುಖ್ಯ ಗೋಡೆಯ ಸುತ್ತಲೂ ಆಧುನಿಕ ವಿಧಾನದ ಬೇಲಿ ಹಾಕಲು ಮಂಜೂರಾತಿ ಸಿಕ್ಕಿದೆ. ಕಾರಾಗೃಹದ ಮುಖ್ಯ ರಸ್ತೆಯ ಬಳಿ ಹೊರ ಆವರಣದಲ್ಲಿ ಕಾಂಪೌಂಡ್ ನಿರ್ಮಾಣಕ್ಕೆ ಈಗಾಗಲೇ ರು. 20 ಲಕ್ಷ ಬಿಡುಗಡೆಯಾಗಿದೆ. ಇಲ್ಲಿನ ರಸ್ತೆ ಡಾಂಬರೀಕರಣ ಹಾಗೂ ಕಾರಾಗೃಹ ಕೊಠಡಿಯ ಎಲ್ಲಾ ಕಿಟಿಕಿಗಳಿಗೆ ಗಟ್ಟಿ ಮೇಸ್ ಅಳವಡಿಕೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ, ಎಂಜಿನಿಯರ್ ಗೋಪಾಲ ನಾಯ್ಕ್, ತಹಶೀಲ್ದಾರ್ ಮೋಹನ್ ರಾವ್, ಕಾರಾಗೃಹ ಅಧೀಕ್ಷಕ ರಮೇಶ್ ಇದ್ದರು.
ಕೊಳೆ ರೋಗ ಪರಿಹಾರ ವಿತರಣೆ ಅವ್ಯವಹಾರ: ಆರೋಪ
ಪುತ್ತೂರು: ಜಿಲ್ಲೆಯ ರೈತರಿಗೆ ಅಡಕೆ ಕೊಳೆ ರೋಗ ಪರಿಹಾರ ವಿತರಣೆಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿದ್ದು, ಅಸಮರ್ಪಕ ಸಮೀಕ್ಷೆ ಮತ್ತು ಸಂಬಂಧಿಸಿದ ಅಧಿಕಾರಿಗಳ ಕುತಂತ್ರದಿಂದ ನೈಜ ಸಂತ್ರಸ್ತ ರೈತರಿಗೆ ಅನ್ಯಾಯವಾಗಿದೆ ಎಂದು ರಾಜ್ಯ ರೈತಸಂಘ ಹಸಿರು ಸೇನೆಯ ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಧರ್ ಶೆಟ್ಟಿ ಬೈಲುಗುತ್ತು ಆರೋಪಿಸಿದ್ದಾರೆ. ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಡಕೆ ಕೊಳೆರೋಗ ಪೀಡಿತರ ತೋಟಗಳನ್ನು ಸರಿಯಾಗಿ ಸಮೀಕ್ಷೆ ನಡೆಸಲಾಗಿಲ್ಲ. ಸುಳ್ಯದಲ್ಲಿ ರಬ್ಬರ್ ಬೆಳೆಗಾರರಿಗೆ ಅಡಕೆ ಕೊಳೆರೋಗ ಪರಿಹಾರ ವಿತರಿಸಲಾಗಿದೆ. ಪುತ್ತೂರು ತಾಲೂಕಿನಲ್ಲಿ ಬಹುತೇಕ ಕೊಳೆರೋಗದಿಂದ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ವಿತರಣೆಯಲ್ಲಿ ವಂಚನೆ ಮಾಡಲಾಗಿದೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಕಾರ್ಯದರ್ಶಿ ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮನೋಹರ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಈಶ್ವರ ಭಟ್ ಬಡಿಲ ಮತ್ತು ರೈತ ಮುಖಂಡ ಮುರುವ ಮಹಾಬಲ ಭಟ್ ಇದ್ದರು.
ಮದ್ಯದಂಗಡಿಗೆ ಗ್ರಾಪಂ
ಅನುಮತಿ; ಗ್ರಾಮಸ್ಥರ ಆಕ್ರೋಶ
ಬಂಟ್ವಾಳ: ಇಲ್ಲಿನ ಕರಿಯಗಳ ಗ್ರಾಮದ ಬೆಂಜನಪದವು ಎಂಬಲ್ಲಿ ಸರ್ಕಾರಿ ಸ್ವಾಮ್ಯದ ಮದ್ಯ ಮಾರಾಟದ ಅಂಗಡಿ ತೆರೆಯಲು ವ್ಯಕ್ತಿಯೊಬ್ಬರಿಗೆ ಅನುಮತಿ ನೀಡಲು ಗ್ರಾಪಂ ಮುಂದಾಗಿರುವುದು ಇದೀಗ ಗ್ರಾಮಸ್ಥರ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಶಾಲೆ, ಕಾಲೇಜು, ಪ್ರಾಥಮಿಕ ಆರೋಗ್ಯ ಕೇಂದ್ರ ಇರುವ ಸ್ಥಳದಲ್ಲೇ ಮದ್ಯ ಮಾರಾಟದಂಗಡಿ ತೆರೆಯಲು ನಿರ್ಧರಿಸಲಾಗಿದ್ದು ಯಾವುದೇ ಕಾರಣಕ್ಕೂ ಇಲ್ಲಿ ಅಂಗಡಿ ತೆರಯಲು ಅವಕಾಶ ನೀಡಬಾರದು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಶಾಲೆ, ಕಾಲೇಜುಗಳ ವ್ಯಾಪ್ತಿಯಲ್ಲಿ ಮದ್ಯ, ಮಾದಕ ವಸ್ತುಗಳ ಮಾರಾಟ ನಿಷೇಧವಿದ್ದರೂ ಸರ್ಕಾರಿ ಸ್ವಾಮ್ಯದ ಎಂಎಸ್ಐಎಲ್ ಮದ್ಯ ಮಾರಾಟದ ಅಂಗಡಿ ತೆರಯಲು ಖಾಸಗಿ ವ್ಯಕ್ತಿಗೆ ಅನುಮತಿ ನೀಡಲು ಮುಂದಾಗಿರುವ ಕ್ರಮ ಬೇಲಿಯೇ ಎದ್ದು ಹೊಲ ಮೇಯುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಉಳ್ಳಾಲ ಘಟನೆ: ಸೂಕ್ತ
ಕ್ರಮಕ್ಕೆ ಬಿಜೆಪಿ ಒತ್ತಾಯ
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಪೊಲೀಸ್ ಇಲಾಖೆಯಲ್ಲಿ ರಾಜಕೀಯ ಹಸ್ತಕ್ಷೇಪದಿಂದ ಪೊಲೀಸರು ಅಸಹಾಯಕರಾಗಿ ಕೈಚೆಲ್ಲುತ್ತಿದ್ದಾರೆ. ಮತಾಂಧರು ಮನೆಗಳಿಗೆ ನುಗ್ಗಿ ದೌರ್ಜನ್ಯ, ಹತ್ಯೆ ನಡೆಸಿದರೂ ಪಾತಕಿಗಳನ್ನು ಬಂಧಿಸುತ್ತಿಲ್ಲ. ಇದರಿಂದ ಜಿಲ್ಲೆಯ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸತೀಶ್ ಪ್ರಭು ಕಳವಳ ವ್ಯಕ್ತಪಡಿಸಿದ್ದಾರೆ. ಬುಧವಾರ ಉಳ್ಳಾಲದಲ್ಲಿ ಮನೆಗಳಿಗೆ ನುಗ್ಗಿ ಅಮಾಯಕರ ಮೇಲೆ ಹಲ್ಲೆ ನಡೆಸಿ ಮಹಿಳೆಯರನ್ನು ನಿಂದಿಸಲಾಗಿದೆ. ಹಗಲಲ್ಲೇ ತಳವಾರು ಝಳಪಿಸಿದರೂ ಆರೋಪಿಗಳ ವಿರುದ್ಧ ಕ್ರಮ ಜರುಗಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಹಸ್ತಕ್ಷೇಪದಿಂದ ಆರೋಪಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಇದು ಜಿಲ್ಲೆಯಲ್ಲಿ ಮತಾಂಧ ದುಷ್ಕರ್ಮಿಗಳನ್ನು ಬೆಂಬಲಿಸಲು ಪರೋಕ್ಷ ಬೆಂಬಲ ನೀಡಿದಂತಾಗಿದೆ. ಆದ್ದರಿಂದ ಪಾತಕಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ವಿದ್ಯಾರ್ಥಿಗಳೇ ಸೇವಾ ಮನೋಭಾವ ರೂಢಿಸಿ: ಖಾದರ್
ಮಂಗಳೂರು: ವಿದ್ಯಾರ್ಥಿಗಳು ಸೇವಾ ಮನೋಭಾವ ರೂಢಿಸಿಕೊಳ್ಳಬೇಕು. ನಿಸ್ವಾರ್ಥ ಸೇವೆಯಿಂದ ಜೀವನ ಸಾರ್ಥ್ಯಕ್ಯ ಪಡೆಯುತ್ತದೆ. ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣಕ್ಕೆ ಸೇವೆ ಪೂರಕ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ. ಯೋಗ ಮತ್ತು ಸೇವಾ ಯೋಜನೆ(ದಿವ್ಯಾಸ್) ವತಿಯಿಂದ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಸಭಾಂಗಣದಲ್ಲಿ 'ಭಾರತದಲ್ಲಿ ಭ್ರಷ್ಟಾಚಾರ ಹೋಗಲಾಡಿಸುವಲ್ಲಿ ಮೌಲ್ಯ ಮತ್ತು ಸೇವಾ ಮನೋಭಾವದ ಪಾತ್ರ' ಎಂಬ ವಿಷಯದ ಕುರಿತು ನಡೆದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಡಬ್ಲ್ಯೂಎಚ್ಒ ನಿವೃತ್ತ ಪ್ರಾದೇಶಿಕ ಸಲಹೆಗಾರ ಡಾ. ಡೆರಿಕ್ ಲೋಬೊ ಮಾತಾನಾಡಿದರು. ಕಾಲೇಜಿನ ಉಪನ್ಯಾಸಕಿ ಡಾ. ರಮೀಳಾ ಶೇಖರ್ ಅಧ್ಯಕ್ಷತೆ ವಹಿಸಿದ್ದರು. ಐವೈಎಸ್ ಮ್ಯಾನೇಜಿಂಗ್ ಟ್ರಸ್ಟಿ ಯೋಗಾಚಾರ್ಯ ವಿ ಎಲ್ ರೇಗೋ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

