ದಕ್ಷಿಣ ಕನ್ನಡ

ಚುನಾವಣೆ: ನಿಲ್ಲದ ಟಿಕೆಟ್ ಗುದ್ದಾಟ

Published On :

-ವಸಂತಕುಮಾರ್ ಕತಗಾಲ
ಕನ್ನಡಪ್ರಭ ವಾರ್ತೆ, ಕಾರವಾರ, ಫೆ. 8
ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ಟಿಕೆಟ್‌ಗಾಗಿ ಗುದ್ದಾಟ ಇನ್ನೂ ನಿಂತಿಲ್ಲ. ಈ ನಡುವೆ ವಿಚಿತ್ರ ಲೆಕ್ಕಾಚಾರಗಳೂ ಶುರುವಾಗಿವೆ. ಅಧಿಕೃತ, ಅನಧಿಕೃತ ಲೆಕ್ಕಾಚಾರಗಳು ತೀವ್ರ ಕುತೂಹಲ ಕೆರಳಿಸಿವೆ. ಕಾಂಗ್ರೆಸ್ ಪಕ್ಷದಲ್ಲಿ ಯಾರಿಗೆ ಟಿಕೆಟ್ ಕೊಟ್ಟಲ್ಲಿ ಮತ್ತೆ ಯಾರಿಗೆ ಲಾಭ, ಬಿಜೆಪಿ ಟಿಕೆಟ್ ನೀಡಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಆಗುವ ಲಾಭವೇನು? ಜೆಡಿಎಸ್ ಪಾತ್ರವೇನು? ಎಂಬಿತ್ಯಾದಿ ಲೆಕ್ಕಾಚಾರಗಳು ಭರದಿಂದ ನಡೆಯುತ್ತಿವೆ. ಬಿಜೆಪಿಯಿಂದ ಹಾಲಿ ಸಂಸದ ಅನಂತಕುಮಾರ ಹೆಗಡೆ ಅವರಿಗೆ ಟಿಕೆಟ್ ನೀಡಿಕೆ ಹೆಚ್ಚು ಕಡಿಮೆ ಅಂತಿಮವಾಗಿದೆ. ಈಗ ಅನಂತಕುಮಾರ ಹೆಗಡೆ ಅವರಿಗೆ ಟಿಕೆಟ್ ನೀಡಿರುವುದರಿಂದ ಕಾಂಗ್ರೆಸ್‌ಗೆ ಯಾವ ಲಾಭವಾದೀತು ಎಂದು ಕಾಂಗ್ರೆಸ್‌ನ ಸಂಭವನೀಯ ಅಭ್ಯರ್ಥಿಗಳು ಲೆಕ್ಕ ಹಾಕುತ್ತಿದ್ದಾರೆ. ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಅನಂತಕುಮಾರ ಹೆಗಡೆ ನಡುವೆ ಕೂಡಿ ಬರದು. ಹೀಗಾಗಿ ಕಾಗೇರಿ ತಮ್ಮ ಬೆಂಬಲಿಗರು ಹಾಗೂ ಅಭಿಮಾನಿಗಳ ಮತಗಳನ್ನು ತಮಗೆ ತಂದುಕೊಡಲಿದ್ದಾರೆ ಎನ್ನುವುದು ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿಗಳ ಲೆಕ್ಕಾಚಾರ.
ಕಾಂಗ್ರೆಸ್‌ದಲ್ಲಿ ದೊಡ್ಡ ಲೆಕ್ಕ: ಹಿಂದೆ ಮಾಜಿ ಸಚಿವ ಶಿವಾನಂದ ನಾಯ್ಕ ಬಿಜೆಪಿಯಲ್ಲಿದ್ದಾಗ ಪ್ರತಿ ಚುನಾವಣೆಯಲ್ಲೂ ಅನಂತಕುಮಾರ ಹೆಗಡೆ ವಿರುದ್ಧ ಶಿವಾನಂದ ನಾಯ್ಕ ಹಾಗೂ ಶಿವಾನಂದ ನಾಯ್ಕ ವಿರುದ್ಧ ಅನಂತಕುಮಾರ ಹೆಗಡೆ ಕೆಲಸ ಮಾಡುತ್ತಿದ್ದಾರೆಂಬ ಆರೋಪ, ಪ್ರತ್ಯಾರೋಪ ಕೇಳಿಬರುತ್ತಲೇ ಇತ್ತು. ಕೆಜೆಪಿಯಲ್ಲಿ ಗುರುತಿಸಿಕೊಂಡಿದ್ದ ಶಿವಾನಂದ ನಾಯ್ಕ ಇಡಿ ಕೆಜೆಪಿಯೇ ಬಿಜೆಪಿಯಲ್ಲಿ ವಿಲೀನವಾದರೂ ತಾವು ಮಾತ್ರ ಜೆಡಿಎಸ್ ದಾರಿ ತುಳಿದರು. ಕಾಂಗ್ರೆಸ್‌ದಲ್ಲಿ ಇದಕ್ಕಿಂತ ದೊಡ್ಡ ಲೆಕ್ಕ ನಡೆಯುತ್ತಿದೆ. ಅಲ್ಲೀಗ ಮಾರ್ಗರೆಟ್ ಆಳ್ವಾ ಪುತ್ರ ನಿವೇದಿತ್ ಆಳ್ವ ಹಾಗೂ ಆರ್.ವಿ. ದೇಶಪಾಂಡೆ ಪುತ್ರ ಪ್ರಶಾಂತ ದೇಶಪಾಂಡೆ ನಡುವೆ ಟಿಕೆಟ್‌ಗಾಗಿ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಇಲ್ಲಿನ ಬೆಳವಣಿಗೆಯನ್ನು ಬಿಜೆಪಿ ಅನಂತಕುಮಾರ ಹೆಗಡೆ ತೀವ್ರ ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಆಳ್ವ ಹಾಗೂ ದೇಶಪಾಂಡೆ ಬಣ ಕಾಂಗ್ರೆಸ್‌ನಲ್ಲೇ ಸಾಂಪ್ರದಾಯಿಕ ಎದುರಾಳಿ ಬಣಗಳು ಎನ್ನುವುದು ಈ ವರೆಗಿನ ಪ್ರತಿಯೊಂದು ಚುನಾವಣೆಯಲ್ಲೂ ಸ್ಪಷ್ಟವಾಗಿದೆ. ಹೀಗಾಗಿ ಪ್ರಶಾಂತ ದೇಶಪಾಂಡೆ ಹಾಗೂ ನಿವೇದಿತ್ ಆಳ್ವ ಇವರಿಬ್ಬರಲ್ಲಿ ಯಾರಿಗೇ ಟಿಕೆಟ್ ನೀಡಿದರೂ ಇನ್ನೊಂದು ಬಣದ ಬೆಂಬಲ ತಮಗೆ ಎನ್ನುವುದು ಬಿಜೆಪಿ ಹಾಕಿರುವ ಲೆಕ್ಕಾಚಾರ.
ಸರ್ವಸಮ್ಮತ ಅಭ್ಯರ್ಥಿಗೆ ಮತ ನೀಡಿಈ ಲೆಕ್ಕಾಚಾರ ಕಾಂಗ್ರೆಸ್‌ನವರಿಗೂ ಗೊತ್ತಿಲ್ಲ ಎಂದೇನೂ ಇಲ್ಲ. ಹೀಗಾಗಿ ಕಾಂಗ್ರೆಸ್‌ನ ತಟಸ್ಥ ಮುಖಂಡರು ಇವರಿಬ್ಬರನ್ನು ಬಿಟ್ಟು ಸರ್ವಸಮ್ಮತ ಅಭ್ಯರ್ಥಿಗೆ ಟಿಕೆಟ್ ನೀಡಿ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ನಿವೇದಿತ್ ಆಳ್ವ ಅವರಿಗೆ ಟಿಕೆಟ್ ದೊರೆತಲ್ಲಿ ದೈಹಿಕವಾಗಿ ಬಿಜೆಪಿಯಲ್ಲೇ ಇರುವ ಆನಂದ ಅಸ್ನೋಟಿಕರ್ ನಿವೇದಿತ್ ಆಳ್ವ ಅವರನ್ನು ಬೆಂಬಲಿಸುವ ಸಾಧ್ಯತೆ ಹೆಚ್ಚಿದೆ. ಹೀಗಾದಲ್ಲಿ ಸತೀಶ ಸೈಲ್ ಬಲ ತಮಗೆ ಸಿಗಲಿದೆ ಎನ್ನುವುದು ಬಿಜೆಪಿಯ ಕೆಲವರ ತರ್ಕವಾಗಿದೆ. ಹೆಚ್ಚು ಕಡಿಮೆ ಪ್ರತಿಯೊಂದು ವಿಧಾನಸಭೆ ಕ್ಷೇತ್ರದಲ್ಲೂ ಇಂಥ ಗಣಿತವನ್ನು ಮಾಡುತ್ತಲೇ ಇದ್ದಾರೆ. ಈ ಗಣಿತ ಕೆಲಸ ಮಾಡಿದಲ್ಲಿ ಗೆಲ್ಲುವ ಅಭ್ಯರ್ಥಿ ಸೋಲುತ್ತಾನೆ. ಸೋಲುವ ಅಭ್ಯರ್ಥಿ ಗೆಲ್ಲುತ್ತಾನೆ. ಇಂಥ ಉದಾಹರಣೆಗಳು ನಮ್ಮ ಮುಂದೆಯೇ ಇವೆ. ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಇಂಥ ರಾಜಕೀಯ ಲೆಕ್ಕಾಚಾರ ನಡೆಯುತ್ತಿರುವುದು ಹೊಸದೇನಲ್ಲ. ಆದರೆ ಈ ಬಾರಿ ಈ ಲೆಕ್ಕಾಚಾರ ಇನ್ನಷ್ಟು ಚುರುಕಿನಿಂದ ನಡೆಯುತ್ತಿದೆ. ಇದು ಪ್ರತಿಯೊಂದು ರಾಜಕೀಯ ಪಕ್ಷಗಳಿಗೂ ಗಂಡಾಂತರಕಾರಿಯಾಗಿದೆ. ತಮ್ಮ ಪಕ್ಷದವರ ಕಾಲನ್ನು ತಾವೇ ಎಳೆಯುವುದು ಸರಿಯಲ್ಲ ಎಂದು ಆಯಾ ಪಕ್ಷದವರೇ ಹೇಳುತ್ತಿದ್ದರೂ ರಾಜಕೀಯ ಮುಖಂಡರ ಈ ರೀತಿಯ ಚಟುವಟಿಕೆ ಮಾತ್ರ ನಿಲ್ಲುತ್ತಿಲ್ಲ. ಒಂದು ವೇಳೆ ಟಿಕೆಟ್ ಗಿಟ್ಟಿಸಿದ ಅಭ್ಯರ್ಥಿ ಗೆದ್ದಲ್ಲಿ ಮುಂದೆ ತಮ್ಮ ಅಸ್ತಿತ್ವವೇ ಉಳಿಯದು ಎನ್ನುವುದು ಇಂಥ ಚಟುವಟಿಕೆಗೆ ಪ್ರಮುಖ ಕಾರಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.