ತಮ್ಮ ಬೆನ್ನು ತಾವೇ ತಟ್ಟಿಕೊಂಡ ಮೊಯ್ಲಿ
ಮಂಗಳೂರು: ಬಾಳ ಎಚ್ಪಿಸಿಎಲ್ ಕೈಗಾರಿಕೆ ಪ್ರದೇಶದಲ್ಲಿ ಟ್ರಾನ್ಸ್ಪೋರ್ಟ್ ಹಬ್ ಉದ್ಘಾಟನೆ ವೇಳೆ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಪತ್ರಕರ್ತರು, ಟೀಕಾಕಾರರು, ಕೊನೆಗೆ ಕೈಗಾರಿಕೆಗೆ ಜಾಗ ನೀಡದ ಸ್ಥಳೀಯರ ವಿರುದ್ಧವೂ ಹರಿ ಹಾಯ್ದರು.
'ನಾನು ಕೊಟ್ಟ ಅಶ್ವಾಸನೆ ಈಡೇರಿಸುವುದಿಲ್ಲ ಎಂದು ಪತ್ರಿಕೆಯವರು ಬರೆದರು. ಎಲೆಕ್ಟ್ರಾನಿಕ್ ಸಿಟಿ ಮಾಡಿದ್ದು ಯಾರು? ಸಿಇಟಿ ಮಾಡಿದ್ದು ಯಾರು? ನಾನು ಕೊಟ್ಟ ಆಶ್ವಾಸನೆ ಈಡೇರಿಸುತ್ತೇನೆ' ಎಂದರು.
ರಾಜ್ಯದಲ್ಲಿ ಸಿಲಿಕಾನ್ ವ್ಯಾಲಿ ಮಾಡುತ್ತೇನೆ ಎಂದು ಹೇಳಿದಾಗ ಎಲ್ಲ ತಮಾಷೆ ಮಾಡಿದರು. ಆದರೆ ಬೆಂಗಳೂರಿಗೆ ಜಗತ್ತಿನಲ್ಲಿ ಪ್ರಥಮ ಸಿಲಿಕಾನ್ ಸಿಟಿ ಎಂಬ ಹೆಸರು ಈಗ ಬಂದಿದೆ. ವೈಟ್ ಫೀಲ್ಡ್ನಲ್ಲಿ ಅಂತಾರಾಷ್ಟ್ರೀಯ ಐಟಿ ಸಿಟಿ ಮಾಡುತ್ತೇವೆ ಎಂದೆವು. ಈಗ ಅದು ವಿಶ್ವಮಟ್ಟದ ಐಟಿ ಸಿಟಿ ಆಗಿದೆ. ಪೇಪರ್ನವರು ಮಂಗಳೂರು ವಿವಿ ಕಾಲೇಜ್ನಲ್ಲಿ ಹಾಕಿದ ಕಲ್ಲು ಹಾಗೆಯೇ ಇದೆ ಎಂದು ಬರೆದರು. 3 ಕೋಟಿ ಖರ್ಚು ಮಾಡಿ ಕಟ್ಟಡ ಬಂದಿದೆ. ಸ್ವಲ್ಪ ಕಾಮಗಾರಿ ಬಾಕಿ ಇದೆ. ಅದನ್ನು ವಿಶ್ವವಿದ್ಯಾಲಯದವರು ಮಾಡಬೇಕು ಎಂದು ಗರಂ ಆಗಿ ಹೇಳಿದರು. ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಪುನರುತ್ಥಾನಕ್ಕೆ 35 ಲಕ್ಷ ಬಿಡುಗಡೆ ಮಾಡಿದ್ದೇವೆ. ಕಾಂಪೌಂಡ್ ಕಾಮಗಾರಿಯೂ ನಡೆಯುತ್ತಿದೆ. ಆದರೆ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಾರೆ, ಕಿವಿ ಇದ್ದು ಕಿವುಡರಂತೆ ಮಾಡುತ್ತಾರೆ. ಕಾಣಲು ಸಿದ್ಧರಿಲ್ಲದವರಿಗೆ ದೇವರೇ ಗತಿ. ಅವರ ಕಿವಿ ಆಪರೇಶನ್ ಮಾಡಬೇಕು. ವಾಸನೆ ನೋಡಬೇಕಾದರೆ ಮೂಗು ಆಪರೇಶನ್, ಕಾಣಬೇಕಾದರೆ ಕಣ್ಣು ಆಪರೇಶನ್ ಮಾಡಬೇಕು. ನಮಗೆ ಅದೆಲ್ಲ ಮಾಡಲು ಬರುವುದಿಲ್ಲ ಎಂದು ಕಟಕಿಯಾಡಿದರು.
ಸಿಇಟಿ ಪ್ರವೇಶ ಪರೀಕ್ಷೆ ಮಾಡಿ ಬಡ ಮಕ್ಕಳು, ಡಾಕ್ಟರ್, ಎಂಜಿನಿಯರ್ ಆಗುವ ಅವಕಾಶ ಮಾಡಿಕೊಟ್ಟೆ. ಇದಕ್ಕೂ ಅನೇಕರು ವಿರೋಧಿಸಿದರು, ಶಾಪ ಕೊಟ್ಟರು, ಹೈಕೋರ್ಟ್, ಸುಪ್ರೀಂ ಕೋರ್ಟ್ ಮೊರೆ ಹೋದರು. ಕೊನೆಗೆ ಸತ್ಯಮೇವ ಜಯತೆ ಆಯಿತು. ಇದರಿಂದಾಗಿ ಹಳ್ಳಿಯ ಹುಡುಗನಾದ ನಾನು ಮುಖ್ಯಮಂತ್ರಿ, ಕೇಂದ್ರದಲ್ಲಿ ಅನೇಕ ಮಂತ್ರಿ ಪಟ್ಟ ಪಡೆಯಲು ಸಾಧ್ಯವಾಯತು. ಧೈರ್ಯ ಇರಬೇಕು ಅಥವಾ ಹುಚ್ಚು ಧೈರ್ಯ ಇರಬೇಕು. ಅಸಾಧ್ಯವನ್ನು ಸಾಧ್ಯ ಮಾಡಬೇಕಾದ ಇಚ್ಛಾಶಕ್ತಿ ಇದ್ದರೆ ಇದು ಸಾಧ್ಯ ಎಂದರು.
ಅತಿಯಾಸೆ ತರವಲ್ಲ: ಭೂಮಿ ಕಳೆದುಕೊಳ್ಳುವವರಿಗೆ ನಾವು ಹತ್ತು ಪಟ್ಟು ಹೆಚ್ಚು ಪರಿಹಾರ ನೀಡಿದರೆ ಅವರು 80 ಪಟ್ಟು ಹೆಚ್ಚು ಪರಿಹಾರ ಕೇಳುತ್ತಾರೆ. ಜನ ನೀವು ಅರ್ಥ ಮಾಡಿಕೊಳ್ಳಬೇಕು. ಕೆಲವು ರಾಜ್ಯಗಳಲ್ಲಿ ಪೈಪ್ಲೈನ್ನಲ್ಲಿ ಬಾಂಬ್ ಸಾಗಿಸಲಾಗುತ್ತದೆ ಎಂದು ಪುಕಾರು ಹಬ್ಬಿಸಿದರು. ಮುಂಬಯಿಯಲ್ಲಿ ಗ್ಯಾಸ್ ಮನೆಗಳ ಅಡಿಯಲ್ಲಿಯೇ ಸಾಗಿ ಹೋಗುತ್ತದೆ. ಏನೂ ಆಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ನೀವ್ಯಾಕೆ, ನಾನ್ಯಾಕೆ?
ಪತ್ರಕರ್ತರೊಬ್ಬರು ಎರಡನೇ ಪ್ರಶ್ನೆ ಕೇಳುತ್ತಿದ್ದಂತೆಯೇ 'ಒಬ್ಬರೇ ಪ್ರಶ್ನೆ ಕೇಳಬೇಡಿ. ಬಾಕಿಯವರು ಪ್ರಶ್ನೆ ಕೇಳಲಿ' ಎಂದು ಮೊಯ್ಲಿ ಸೂಚಿಸಿದರು. ಆದರೆ ಉಳಿದ ಪತ್ರಕರ್ತರು ಯಾರೂ ಪ್ರಶ್ನೆ ಕೇಳಲು ಮನಸ್ಸು ಮಾಡಲಿಲ್ಲ. ಅನಿವಾರ್ಯವಾಗಿ ಮೊಯ್ಲಿ ಅವರು ಮತ್ತೆ ಅದೇ ಪತ್ರಕರ್ತರಿಗೆ 'ಆಯ್ತು ನೀವೇ ಪ್ರಶ್ನೆ ಕೇಳಿ' ಎಂದು ಸುಮ್ಮನಾದರು. ಆ ಪತ್ರಕರ್ತರ ಪ್ರಶ್ನೆ ಎತ್ತಿನಹೊಳೆ ಶಂಕುಸ್ಥಾಪನೆ ಯಾವಾಗ ಎಂಬುದಾಗಿತ್ತು. ಈ ಪ್ರಶ್ನೆಗೂ ಸರಿಯಾಗಿ ಉತ್ತರಿಸದ ಮೊಯ್ಲಿ, 'ಇದನ್ನು ಕರ್ನಾಟಕ ಸರ್ಕಾರದ ಪ್ರತಿನಿಧಿಗಳಾದ ಸಚಿವರಲ್ಲಿ ಕೇಳಿ ಎಂದರು. ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್, ಯುವಜನ ಸೇವೆ, ಕ್ರೀಡೆ ಮತ್ತು ಮೀನುಗಾರಿಕೆ ಸಚಿವ ಅಭಯಚಂದ್ರಜೈನ್ ಇದ್ದರು.
ಪತ್ರಕರ್ತಕರಿಗೆ ಖಾರ ಉತ್ತರ
ಸಮಾರಂಭದಲ್ಲಿ 'ಬೇಕಾದ ಹಾಗೆ ಬರೀತಾರೆ' ಎಂದು ಪತ್ರಿಕೆಯವರನ್ನು ತರಾಟೆಗೆ ತೆಗೆದುಕೊಂಡಿದ್ದ ವೀರಪ್ಪ ಮೊಯ್ಲಿ ಅವರು, ಸುದ್ದಿಗೋಷ್ಠಿಯಲ್ಲಿಯೂ ಪತ್ರಕರ್ತರಿಗೆ ಖಾರವಾಗಿ ಉತ್ತರ ನೀಡಿದರು. ಪೈಪ್ಲೈನ್.. ಎಂದು ಪತ್ರಕರ್ತರು ಪ್ರಶ್ನೆ ಕೇಳಲು ಶುರು ಮಾಡುತ್ತಿದ್ದಂತೆಯೇ ಮೊಯ್ಲಿ, ಪೈಪ್ಲೈನ್ ಕಾಮಗಾರಿ ಇತಿಹಾಸ ಹೇಳಲು ಶುರು ಮಾಡಿದರು. ಆಗ ಪತ್ರಕರ್ತರು ಪ್ರಶ್ನೆ ಅದಲ್ಲ, ಎಂದಾಗ ಮೊಯ್ಲಿ ಖಾರವಾಗಿ 'ನೀವು ಪ್ರಶ್ನೆ ಕೇಳಿದ ಮೇಲೆ ನಾನು ಉತ್ತರ ನೀಡಬೇಕಲ್ವ' ಎಂದು ಕೋಪ ತೋರಿದರು. ಆದರೆ ಜಗ್ಗದ ಪತ್ರಕರ್ತರು ನೀವು ಪ್ರಶ್ನೆ ಕೇಳಲೇ ಬಿಟ್ಟಿಲ್ಲವಲ್ಲ ಎಂದರು. ಪೈಪ್ಲೈನ್ಗೆ ಜನ ವಿರೋಧ ಇಲ್ಲ. ಹಳೆ ಕಾಯ್ದೆ ಪ್ರಕಾರ ಪರಿಹಾರ ನೀಡುವ ಬಗ್ಗೆ ಮಾತ್ರ ಸಂತ್ರಸ್ತರ ವಿರೋಧ ಎಂಬ ಪತ್ರಕರ್ತರ ಮಾತಿಗೆ, ಪೂರ್ತಿ ಪರಿಹಾರ ನೀಡಲು ಸಾಧ್ಯವಿಲ್ಲ. ಜಾಗದ ಮೌಲ್ಯದ ಶೇ.60 ಪರಿಹಾರ ಹೆಚ್ಚಳ ಮಾಡಲಾಗಿದೆ ಎಂದರು. 'ಪೈಪ್ಲೈನ್ ಭೂಮಿ ಅಡಿಯಲ್ಲಿ ಹೋಗುವುದು. ಅದರ ಮೇಲೆ 25 ಮಹಡಿ ಕಟ್ಟಬಹುದು, ಒಕ್ಲಾಮ ಸಿಟಿಯಲ್ಲಿ 25 ಮಹಡಿ ಕಟ್ಟಡ ಇದೆ ಏನೂ ಆಗಿಲ್ಲ' ಎಂದು ಉದಾಹರಣೆ ನೀಡಲು ಮುಂದಾದರು. ಪತ್ರಕರ್ತರು ಒಕ್ಕೊರಲಿಂದ 'ಇಲ್ಲಿ ಅಧಿಕಾರಿಗಳು ಜಾಗದಲ್ಲಿ ಪೈಪ್ಲೈನ್ ಹೋದರೆ ಆರ್ಟಿಸಿಯಲ್ಲಿ ಬರೀತಾರೆ. ಕಾಂಪೌಂಡ್ ಗೋಡೆ ಕಟ್ಟಲು ಬಿಡುವುದಿಲ್ಲ. ಗಿಡ ನೆಡಲು ಬಿಡುವುದಿಲ್ಲ. ವಾಹನ ಸಾಗಲು ಬಿಡುವುದಿಲ್ಲ ಎಂದು ಸಂತ್ರಸ್ತರು ಹೇಳುತ್ತಾರೆ, ಸಂತ್ರಸ್ತರು ಏನು ಮಾಡಬೇಕು?' ಎಂದರು. ಆ ರೀತಿ ಆಕ್ಷೇಪಣೆ ಮಾಡಿದರೆ ತಪ್ಪು ಎಂದ ಮೊಯ್ಲಿ ಸುಮ್ಮನಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

