ದಕ್ಷಿಣ ಕನ್ನಡ

ಪುತ್ತೂರು: 5ರ ಬಾಲೆ ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರ

Published On :

ಪುತ್ತೂರು: ಒಪ್ಪಂದದ ಮೂಲಕ ಮಗುವನ್ನು ಸಾಕುತ್ತಿದ್ದ ಪ್ರಕರಣವನ್ನು ಬೆಳಕಿಗೆ ತಂದ ಆರ್ಯಾಪು ಗ್ರಾಮ ಪಂಚಾಯಿತಿ ಮಟ್ಟದ ಮಕ್ಕಳ ಮಾರಾಟ ಮತ್ತು ಸಾಗಾಟ ತಡೆ ಕಾವಲು ಸಮಿತಿ, ಪತ್ತೆಯಾದ ಸುಮಾರು 5 ವರ್ಷ ಪ್ರಾಯದ ಹೆಣ್ಣು ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಿದೆ.
 ಆರ್ಯಾಪು ಗ್ರಾ.ಪಂ. ವ್ಯಾಪ್ತಿಯ ಕುರಿಯ ಗ್ರಾಮದ ಅಜಲಾಡಿ ಎಂಬಲ್ಲಿನ ನಿವಾಸಿ ಖತೀಜಮ್ಮ ಎಂಬಾಕೆ ಮಗುವನ್ನು ಪಡೆದುಕೊಂಡ ಮಹಿಳೆ. ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಕಳಕ್ಕಿ ಕಣಿಯಾರು ನಿವಾಸಿ ತಾಹಿರಾ ಮಗುವನ್ನು ನೀಡಿದಾಕೆ.
ಪ್ರಕರಣ ವಿವರ: ಮಕ್ಕಳಿಲ್ಲದ ಖತೀಜಮ್ಮ ತನ್ನ ತವರು ಮನೆಯ ಸಮೀಪದಲ್ಲಿರುವ ಬಂಧುಗಳಾದ ವಿಚ್ಛೇದಿತ ಮಹಿಳೆ ತಾಹಿರಾ ಅವರ 5 ವರ್ಷ ಪ್ರಾಯದ ಮಿಶ್ರಿಯಾಳನ್ನು ಸಾಕಲೆಂದು ತಂದಿದ್ದರು. ಸುಮಾರು 5 ತಿಂಗಳ ಹಿಂದೆ ಮಗುವನ್ನು ಕರೆತರಲಾಗಿದ್ದು 5 ವರ್ಷಗಳ ತನಕ ಸಾಕುವ ಬಗ್ಗೆ ಇವರಿಬ್ಬರು ನೋಟರಿ ಮೂಲಕ ಒಪ್ಪಂದವನ್ನೂ ಮಾಡಿಕೊಂಡಿದ್ದರು. ಮಿಶ್ರಿಯಾಳನ್ನು ಅಂಗನವಾಡಿಗೆ ಸೇರಿಸಲು ಖತೀಜಮ್ಮ ಅಜಲಾಡಿ ಅಂಗನವಾಡಿ ಕೇಂದ್ರಕ್ಕೆ ಕರೆ ತಂದಾಗ ಒಪ್ಪಂದದ ವಿಚಾರ ಬೆಳಕಿಗೆ ಬಂದಿತ್ತು. ಅಜಲಾಡಿ ಅಂಗನವಾಡಿ ಕಾರ್ಯಕರ್ತೆ ಶೋಭಾ ಈ ವಿಚಾರವನ್ನು ಕಾವಲು ಸಮಿತಿಗೆ ರವಾನಿಸಿದರು. ಗ್ರಾ.ಪಂ. ಅಧ್ಯಕ್ಷ ಹಾಗೂ ಕಾವಲು ಸಮಿತಿಯ ಅಧ್ಯಕ್ಷ ವಿಜಯ ಬಿ.ಎಸ್. ನೇತೃತ್ವದಲ್ಲಿ ಕಾವಲು ಸಮಿತಿಯ ಪದಾಧಿಕಾರಿಗಳು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮಗುವನ್ನು ವಶಕ್ಕೆ ಪಡೆದುಕೊಂಡು ಮಗುವಿನ ದತ್ತು ತಾಯಿ ಮತ್ತು ನೈಜ ತಾಯಿಯ ಸಹಿತ ಪುತ್ತೂರಿನ ಶಿಶುಪಾಲನಾ ಕೇಂದ್ರಕ್ಕೆ ಆಗಮಿಸಿ ಅಲ್ಲಿಗೆ ಹಸ್ತಾಂತರಿಸಿದರು. ಬಳಿಕ ಮಗುವನ್ನು ಮಂಗಳೂರಿನಲ್ಲಿರುವ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಕಳುಹಿಸಿಕೊಡಲಾಯಿತು. ಆರ್ಯಾಪು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಮಕ್ಕಳ ಮಾರಾಟ ಮತ್ತು ಸಾಗಾಟ ತಡೆ ಕಾವಲು ಸಮಿತಿ ಅಧ್ಯಕ್ಷ ವಿಜಯ ಬಿ.ಎಸ್, ಸಮಿತಿ ಸದಸ್ಯರಾಗಿರುವ ಅಂಗನವಾಡಿ ಕಾರ್ಯಕರ್ತೆಯರಾದ ಶೋಭಾ ಪಿ., ಸಂಧ್ಯಾ ರವಿಶ್ಚಂದ್ರ, ಅಂಗನವಾಡಿ ಮೇಲ್ವಿಚಾರಕಿ ದಮಯಂತಿ ಸಂಪ್ಯ ಪೊಲೀಸರ ಸುಪರ್ದಿಯಲ್ಲಿ ಮಗುವನ್ನು ಹೆತ್ತವರ ಸಹಿತ ಶಿಶುಪಾಲನಾ ಕೇಂದ್ರಕ್ಕೆ ತಂದು ಹಸ್ತಾಂತರ ಪ್ರಕ್ರಿಯೆ ನಡೆಸಿಕೊಟ್ಟರು ಎಂದು ತಿಳಿದುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.