ಎತ್ತಿನಹೊಳೆಯಲ್ಲಿ ಕೊಚ್ಚಿ ಹೋಗಲಿದೆ ಬದುಕು
ಮಂಗಳೂರು: ಕೊಳವೆ ಬಾವಿಗಳು ಬತ್ತಿ ಹೋಗಿವೆ, ಕಿಂಡಿ ಅಣೆಕಟ್ಟುಗಳು ಕೊಚ್ಚಿ ಹೋಗಿವೆ. 8 ವರ್ಷ ಕಳೆದರೂ ಕುಡಿಯುವ ನೀರು ಪೂರೈಕೆಗೆ ತುಂಬೆ ಅಣೆಕಟ್ಟು ಪೂರ್ತಿಗೊಳಿಸಲು ಸಾಧ್ಯವಾಗಿಲ್ಲ. ಆದರೆ, ಎತ್ತಿನಹೊಳೆ ಹೆಸರಲ್ಲಿ ನೇತ್ರಾವತಿ ನದಿ ತಿರುಗಿಸಿ ದಕ್ಷಿಣ ಕನ್ನಡಿಗರ ಪಾಲಿಗೆ ಕುಡಿಯುವ ನೀರಿನ ಅಮೃತವನ್ನು ರಾಜಕಾರಣ ಎಂದ ದೈತ್ಯ ಕಸಿದುಕೊಳ್ಳುತ್ತಿದ್ದಾನೆ. ಸಣ್ಣ ಮಟ್ಟಿನ ಹೋರಾಟ ಶುರುವಾಗಿದ್ದರೂ ಇನ್ನೂ ಬಿಸಿ ತಟ್ಟಿಲ್ಲ.
ಧರ್ಮಸ್ಥಳದ ಪವಿತ್ರ ಸಂಗಮದಿಂದ ತೊಡಗಿ ಮಂಗಳೂರು ಮಹಾನಗರ ಜನರ ಪಾಲಿನ ಅಮೃತ ಸಂಜೀವನಿ ನೇತ್ರಾವತಿ ನದಿ. 96 ಕಿ.ಮೀ. ಉದ್ದದ ನೇತ್ರಾವತಿ ಮಳೆಗಾಲದಲ್ಲಿ ಸೊಕ್ಕಿ ಮೈದುಂಬಿ ಹರಿಯುತ್ತಾಳೆ, ಆಷಾಢದಲ್ಲಿ ಅಹಂಕಾರದಿಂದ ಘರ್ಜಿಸಿ ಮುನ್ನಡೆಯುತ್ತಾಳೆ, ಶಿಶಿರದಲ್ಲಿ ನಾಚಿ ನೀರಾಗುತ್ತಾಳೆ, ಬೇಸಗೆಯಲ್ಲಿ ಕೃಶ ದೇಹಿ, ಮಂದಗಮನೆಯಾಗಿ ಹರಿಯುತ್ತಾಳೆ. ಆದರೆ ಎತ್ತಿನಹೊಳೆ ಯೋಜನೆ ಜಾರಿಯಾದ ಬಳಿಕ ಉಪ್ಪಿನಂಗಡಿ ಕುಮಾರಧಾರ, ನೇತ್ರಾವತಿ ಸಂಗಮ ತಾಣ ನೋಡಲು ಸಿಗುವುದು ಕಷ್ಟ. ಎಲ್ಲಕ್ಕಿಂತಲೂ ಹೆಚ್ಚಾಗಿ ಮಂಗಳೂರು ಮಹಾಜನರಿಗೆ ಕುಡಿಯಲು ನೀರು ಸಿಗುವುದೇ ಕಷ್ಟ!
'ಮಳೆಗಾಲದಲ್ಲಿ 600 ಟಿಎಂಸಿ ನದಿ ಸಮುದ್ರಕ್ಕೆ ಹರಿದುಹೋಗುತ್ತದೆ. ಇದರಲ್ಲಿ 52 ಟಿಎಂಸಿ ಮಾತ್ರ ತೆಗೆದುಕೊಳ್ಳುತ್ತೇವೆ, ಸಮುದ್ರ ಸೇರಿ ಪೋಲಾಗುವ ನೀರನ್ನು ಕುಡಿಯಲು ಬಳಸುತ್ತೇವೆ, ಮಳೆಗಾಲದಲ್ಲಿ ಮಾತ್ರ ನೀರು ತಿರುಗಿಸುತ್ತೇವೆ. ಚಿಕ್ಕಬಳ್ಳಾಪುರದಲ್ಲಿ ಜನರು ನೀರಿಲ್ಲದೆ ಒದ್ದಾಡುತ್ತಿದ್ದಾರೆ' ಎಂದು ಇಲ್ಲಿಯವರೇ ಆದ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಹೇಳುತ್ತಾರೆ. ಆದರೆ ಇಲ್ಲಿನವರು ನೀರಿಗಾಗಿ ಒದ್ದಾಡಬೇಕೇ, ಅಲ್ಲಿ ಪರ್ಯಾಯ ಯೋಜನೆಗಳಿದ್ದರೂ ಅಳವಡಿಸುತ್ತಿಲ್ಲ ಏಕೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ.
ದಕ್ಷಿಣ ಕನ್ನಡ ಜಿಲ್ಲೆ ಶೇ.50 ಪ್ರದೇಶದ ಜನರು ನೇತ್ರಾವತಿಯ ಜಲಾನಯನ ಪ್ರದೇಶದವರು. ಮಂಗಳೂರು ಮಹಾನಗರದವರು ಕುಡಿಯುವ ನೀರಿಗೆ ನೇತ್ರಾವತಿಯನ್ನು ಅವಲಂಬಿಸಿದ್ದಾರೆ. ವಿಶೇಷ ವಿತ್ತವಲಯ ಮೂಲಕ ನೂರಾರು ಕೈಗಾರಿಕೆಗಳು ನುಗ್ಗುತ್ತಿವೆ. ಕೈಗಾರಿಕೆಗಳು ಗ್ಯಾಲನ್‌ಗಟ್ಟಲೆ ನೀರು ಬೇಕಾಗುತ್ತದೆ.
ಮಂಗಳೂರಿಗೆ ಬೇಕಾಗುವ ನೀರು ಶೇ.70 ಭಾಗ (ಪ್ರತಿ ದಿನ 200 ಎಂಜಿಡಿ) ನದಿಯಿಂದಲೇ ಪೂರೈಕೆಯಾಗುತ್ತದೆ. ಎಸ್‌ಇಝಡ್ ಪೂರ್ಣಗೊಂಡರೆ ಪ್ರತಿ ದಿನ 500 ಎಂಜಿಡಿ ನೀರು ಬೇಕಾಗುತ್ತದೆ! ಎಂ.ಆರ್.ಪಿ.ಎಲ್. ಪ್ರತ್ಯೇಕ ಆಣೆಕಟ್ಟು ನಿರ್ಮಿಸಿ ನೀರು ಒಯ್ಯುತ್ತಿದೆ. ಹೀಗಾಗಿ ಜನರು ಕುಡಿಯುವ ನೀರಿಗೆ ಹಾಹಾಕಾರ ನಡೆಸುವ ದಿನ ದೂರ ಇಲ್ಲ.
ಪ್ರತಿ ಬಾರಿಯೂ ಸಾಧ್ಯವಿಲ್ಲ: ಎರಡು ವರ್ಷದ ಹಿಂದೆ ಬೇಸಗೆಯಲ್ಲಿ ಎಂಆರ್‌ಪಿಎಲ್‌ಗೆ ಸೇರಿದ ಅಣೆಕಟ್ಟಿನಿಂದ ನೀರನ್ನು ಬಲವಂತವಾಗಿ ದಕ್ಷ ಅಧಿಕಾರಿಗಳು ಪಡೆದು ಮಂಗಳೂರಿನ ಜನರಿಗೆ ಕುಡಿಯುವ ನೀರು ಒದಗಿಸಿದರು. ಆದರೆ ಇದು ಪ್ರತಿ ಬಾರಿಯೂ ಅಸಾಧ್ಯ.
ಮಳೆ ನೀರ ಕೊಯ್ಲು, ಕೆರೆ ದುರಸ್ತಿಯಿಂದ ಅಂತರ್ಜಲ ಹೆಚ್ಚಿಸಬಹುದು. ಆದರೆ ನೇತ್ರಾವತಿ ನದಿ ನೀರು ತಿರುಗಿಸಿದರೆ ಈ ಭಾಗದ ಅಂತರ್ಜಲ ಬತ್ತಿ ಬಾವಿಗಳು ಬೇಗನೆ ಬರಿದಾಗುವ ಸಾಧ್ಯತೆ ಇದೆ. ಕೃಷಿ ಮಾಡುವುದು ಬಿಡಿ ಕುಡಿಯುವ ನೀರಿಗೆ ತತ್ವಾರ ಎದುರಾಗಲಿದೆ.
'ಪ್ರಮುಖ ರಾಜಕಾರಣಿಗಳು ಕರಾವಳಿ ಭಾಗದಲ್ಲಿ ಬಂದು ನಾವು ಮಾಡಿದ್ದಲ್ಲ, ವಿರೋಧಿ ಪಕ್ಷದವರು ಹೇಳುತ್ತಾರೆ. ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಹೋಗಿ ಯೋಜನೆ ನಾವೇ ಮಾಡಿದ್ದು ಎಂದು ಪ್ರಚಾರ ಮಾಡುತ್ತಾರೆ. ರಾಜಕಾರಣಿಗಳ ಕಪಟನಾಟಕದಲ್ಲಿ ನಮ್ಮ ಬದುಕು ಕಿತ್ತುಕೊಳ್ಳುತ್ತಿದ್ದಾರೆ' ಎಂದು ಪಡೀಲ್ ನಿವಾಸಿ ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಪಕ್ಷಭೇದ ಮರೆತು ನೇತ್ರಾವತಿ ನದಿ ಉಳಿಸಲು ಹೋರಾಟ ಸಮಿತಿ ರಚಿಸಲಾಗಿದೆ. ಜಿಲ್ಲೆ ಸಚಿವರ ವಿರುದ್ಧವೇ ಹೋರಾಟ ಮಾಡುವುದಾಗಿ ಕಾಂಗ್ರೆಸ್‌ನ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಎಂ.ಜಿ. ಹೆಗಡೆ ಹೇಳುತ್ತಾರೆ.
'ರೈಲು ಹೋಗಿಯಾಗಿದೆ ಟಿಕೆಟ್ ತೆಗೆದು ಏನು ಪ್ರಯೋಜನ, ಎತ್ತಿನಹೊಳೆಗೆ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಡಿ.ವಿ.ಸದಾನಂದ ಗೌಡ ಅನುಮತಿ ನೀಡಿದ್ದಾರೆ. ಅಲ್ಲಿ ಕರಾವಳಿಯವರು 13 ಶಾಸಕರು ಮಾತ್ರ ನಾವು ಮಾತನಾಡಿದರೆ ಉಳಿದ ಎಲ್ಲರೂ ವಿರೋಧಿಸುತ್ತಾರೆ' ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳುತ್ತಾರೆ. ಜನಾರ್ದನ ಪೂಜಾರಿಯವರಾರೂ ಕುಡಿಯುವ ನೀರಿಗಾಗಿ ಹೋರಾಟ ನಡೆಸಬಹುದು ಎಂಬ ಆಸೆ ಇತ್ತು, ಆದರೆ ಅವರು ಟಿಕೆಟ್ ಪಡೆಯುವ ಹೋರಾಟದಲ್ಲಿಯೇ ಮಗ್ನರಾಗಿದ್ದಾರೆ.
ಇಲ್ಲಿಗೆ ಘೋಷಣೆ ಮಾತ್ರ: ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ನೀರು ಉಣಿಸುವ ಸೌಭಾಗ್ಯ ಸಂಜೀವಿನಿ ಯೋಜನೆ ಹಿಂದಿನ ಬಜೆಟ್‌ನಲ್ಲಿ ಘೋಷಿಸಿದ್ದರು. ಆರೆ ಅದು ಕೇವಲ ಗಾಳ ಮಾತ್ರ. ಆ ಯೋಜನೆಯೂ ಜಾರಿ ಮಾಡದೆ ಈಗ ಎತ್ತಿನಹೊಳೆಗೆ ಯೋಜನೆಗೆ ಸರ್ಕಾರ ಪಾಸ್ ಮಾಡಿದೆ.
ಜಿತೇಂದ್ರ ಕುಂದೇಶ್ವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

