ಎತ್ತಿನಹೊಳೆ ಜಾರಿ ವಿರುದ್ಧ 22ರಂದು ಕಾಲೇಜ್ ಬಂದ್
ಮಂಗಳೂರು: ಎತ್ತಿನಹೊಳೆ ಯೋಜನೆ ವಿರುದ್ಧ ಅವಿಭಜಿತ ಜಿಲ್ಲೆಯ ವಿದ್ಯಾರ್ಥಿ ಸಮೂಹ ಆಲ್ ಕಾಲೇಜು ಬಂದ್ ಮಾಡಿ ಫೆ.22ರಂದು ಮಂಗಳೂರಿನಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಲಿದ್ದಾರೆ ಎಂದು ನೇತ್ರಾವತಿ ನದಿ ರಕ್ಷಣಾ ಸಮಿತಿ ಸಂಚಾಲಕ ವಿಜಯ ಕುಮಾರ್ ಶೆಟ್ಟಿ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಗ್ಗೆ 10ಕ್ಕೆ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಲಿದ್ದಾರೆ. ಆ ಬಳಿಕ ಸರ್ಕಾರಕ್ಕೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಲಿದ್ದಾರೆ ಎಂದರು.
ನದಿ ತಿರುವಿನ ಬಗ್ಗೆ ವಿದ್ಯಾರ್ಥಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸಬೇಕಾಗಿದೆ. ಇದಕ್ಕೆ ತಜ್ಞರಿಂದ ಮಾಹಿತಿ ಪಡೆಯಬೇಕಾಗಿದೆ. ಸರ್ಕಾರವನ್ನು ಅಲುಗಾಡಿಸುವಷ್ಟರ ಮಟ್ಟಿಗೆ ಆಂದೋಲನ ಮಾಡದಿದ್ದರೆ ನದಿ ತಿರುವು ಯೋಜನೆ ಕಾರ್ಯಗತಗೊಳ್ಳುತ್ತದೆ. ಇದರ ಪರಿಣಾಮವನ್ನು ಮುಂದಿನ ತಲೆಮಾರು ಎದುರಿಸಬೇಕಾಗುತ್ತದೆ. ಈ ಯೋಜನೆಗೆ ಚಿಕ್ಕಬಳ್ಳಾಪುರದಲ್ಲೂ ವಿರೋಧವಿದೆ ಎಂದು ಹೋರಾಟಗಾರ ಎಂ.ಜಿ.ಹೆಗ್ಡೆ ಹೇಳಿದರು. ಸರ್ಕಾರ ಪ್ರತಿಭಟನೆಗೆ ಮಣಿಯದೆ ಉದ್ಧಟತನದಿಂದ ವರ್ತಿಸಿದರೆ ತಾವು ಕೂಡ ಹಠಮಾರಿ ನಿಲುವು ಪ್ರದರ್ಶಿಸಬೇಕಾಗುತ್ತದೆ. ಯೋಜನೆ ವಿರೋಧಿಸಿ ಅನಿರ್ದಿಷ್ಟ ಬಂದ್ ಕರೆಗೂ ಸಿದ್ಧವಿದ್ದು, ಸರ್ಕಾರಕ್ಕೆ ಇದಕ್ಕೆ ಆಸ್ಪದ ನೀಡದಂತೆ ಎಚ್ಚರಿಕೆ ನೀಡಿದರು.
ಮುಖಂಡರಾದ ಶಶಿರಾಜ್ ಶೆಟ್ಟಿ, ಡೆನ್ನಿಸ್ ಡಿಸಿಲ್ವ, ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಅಧ್ಯಕ್ಷ ರಕ್ಷಿತ್ ಆರ್.ಪೂಜಾರಿ, ಸಹಜ್ ರೈ, ನಿಫಲ್ರಾಜ್ ಇದ್ದರು.
ಸಚಿವರ ವಿರುದ್ಧ ಹೋರಾಟ: ಕರಾವಳಿಯಲ್ಲಿ ನಾಲ್ವರು ಸಚಿವರಿದ್ದರೂ ನದಿ ತಿರುವು ಯೋಜನೆ ಬಗ್ಗೆ ಮೌನ ವಹಿಸಿದ್ದಾರೆ. ಇಲ್ಲಿನ ಸಾಧಕ ಬಾಧಕವನ್ನು ಜನರ ಪ್ರತಿನಿಧಿಗಳಾಗಿ ಸರ್ಕಾರಕ್ಕೆ ಮನವರಿಕೆ ಮಾಡಬೇಕಾದ್ದು ಅವರ ಜವಾಬ್ದಾರಿ. ಈಗಾಗಲೇ ಸಂಪುಟ ಸಭೆಯಲ್ಲಿ ಯೋಜನೆಗೆ ಅನುಮತಿ ಸಿಕ್ಕಿದೆ. ಯೋಜನೆ ಜಾರಿಯಾದರೆ ಇಲ್ಲಿನ ಸಚಿವರ ವಿರುದ್ಧವೇ ಹೋರಾಟ ನಡೆಸಲಾಗುವುದು ಎಂದು ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

