ದಕ್ಷಿಣ ಕನ್ನಡ

ಕನ್ನಡಕ್ಕಾಗಿ ಸೈಕಲ್ ಏರಿದ ಹಾವೇರಿ ಯುವಕ

Published On :

ಬಂಟ್ವಾಳ: ಊರಿನಲ್ಲಿ ಕನ್ನಡದ ಕಾರ್ಯಕ್ರಮಗಳು ನಡೆದರೂ ದೂರ ಉಳಿಯುವ ಮಂದಿ ಅದೆಷ್ಟೋ ಇದ್ದಾರೆ. ಇಂತಹ ಸನ್ನಿವೇಶಗಳ ನಡುವೆ ಕನ್ನಡಕ್ಕಾಗಿ ಇಡೀ ಕನ್ನಡ ನಾಡನ್ನು ಸುತ್ತುವ ಸಂಕಲ್ಪ ತೊಟ್ಟಿದ್ದಾನೆ ಹಾವೇರಿಯ ಈ ಯುವಕ.
ಕನ್ನಡ ಧ್ವಜ ಬಣ್ಣದ ಸೈಕಲ್, ಅದರ ಹಿಂದೆ ಸೈಕಲ್ ರಿಮ್ ಮೇಲೆ 30 ಜಿಲ್ಲೆಗಳನ್ನು ಪ್ರತಿನಿಧಿಸುವ 30 ಕನ್ನಡ ಬಾವುಟ. ಸಣ್ಣದಾದ ನಗು ಮುಖದಲ್ಲಿ, ಉದ್ದನೆಯ ಕೂದಲು, ಕನ್ನಡ ಧ್ವಜ ಬಣ್ಣದ ಮಂಕಿ ಕ್ಯಾಪ್, ಹೆಗಲಲ್ಲಿ ಧ್ವಜ ಬಣ್ಣದ ರುಮಾಲು. ಕನ್ನಡ ಧ್ವಜದ ಕೆಂಪು ಹಾಗೂ ಹಳದಿ ಬಣ್ಣಗಳನ್ನೊಳಗೊಂಡ ಅಂಗಿ-ಪ್ಯಾಂಟ್ ಒಟ್ಟಿನಲ್ಲಿ ಎಲ್ಲವೂ ಕನ್ನಡಮಯ.
 ಸೈಕಲ್ ಏರಿ ರಾಜ್ಯ ಸುತ್ತುತ್ತಿರುವ ಈ ಯುವಕನ ಹೆಸರು ಗೋಪಾಲ. ವಯಸ್ಸು 24.
ಯಾಕಾಗಿ ಈ ತಿರುಗಾಟ..: ಕಳೆದ ಜ. 12 ರಂದು ಹಾವೇರಿಯಿಂದ ಆರಂಭಗೊಂಡ ಸೈಕಲ್ ಯಾತ್ರೆ 39 ದಿನಗಳಲ್ಲಿ 14 ಜಿಲ್ಲೆಗಳಲ್ಲಿ ಸಂಚರಿಸಿದೆ.
 ಬುಧವಾರ ಮೂಡುಬಿದಿರೆಗೆ ಬಂದಿದ್ದ ಗುರುವಾರ ಬೆಳಗ್ಗೆ ಬಿ.ಸಿ. ರೋಡು ಮೂಲಕ ಧರ್ಮಸ್ಥಳಕ್ಕೆ ತೆರಳುವ ದಾರಿ ಮಧ್ಯೆ ತಮ್ಮ ಪಯಣದ ಅನುಭವಗಳನ್ನು ಹಂಚಿಕೊಂಡಿದ್ದು ಹೀಗೆ...
ಕನ್ನಡ ಪ್ರೀತಿ: ಕನ್ನಡದ ಮೇಲಿನ ಪ್ರೀತಿ- ಜಾಗೃತಿಗಾಗಿ ಸೈಕಲ್‌ನಲ್ಲಿ ಪಯಣಿಸುತ್ತಿದ್ದೇನೆ ಎನ್ನುವ ಈತ, ಇದರ ಜೊತೆಜೊತೆಗೆ ಮುಂದಿನ ವರ್ಷ ಹಾವೇರಿಯಲ್ಲಿ ನಡೆಯಲಿರುವ 80ನೇ ಅಖಿಲ ಭಾರತ ಕನ್ನಡ ಸಮ್ಮೇಳನದ ಪ್ರಚಾರ ಕಾರ್ಯವನ್ನೂ ನಡೆಸುತ್ತಿದ್ದಾನೆ.
 ಕಳೆದ ವರ್ಷವಷ್ಟೇ ಪಿಯುಸಿ ವ್ಯಾಸಂಗ ಮುಗಿಸಿದ ಗೋಪಾಲ ಬಳಿಕ ಬೆಂಗಳೂರಿನಲ್ಲಿ ಸಿನಿಮಾ ಸಹನಿರ್ದೇಶನ ತರಬೇತಿಯಲ್ಲಿ ತೊಡಗಿಸಿಕೊಂಡನು. ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಂಡನು. ಈತನಿಗೆ ಹೇಗಾದರೂ ಕನ್ನಡದ ಪ್ರಮುಖ ಐತಿಹಾಸಿಕ ಸ್ಥಳ, ಪ್ರತಿಯೊಂದು ಜಿಲ್ಲೆಯಲ್ಲಿನ ಪ್ರಮುಖ ನಗರ, ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವ ಹಂಬಲದಿಂದ ಕನ್ನಡ ಪರ ಜಾಗೃತಿಗಾಗಿ ಸೈಕಲ್ ಏರಿದ್ದಾನೆ.
 ಹಾವೇರಿ, ಬೀದರ್, ಗುಲ್ಬರ್ಗ, ಬಳ್ಳಾರಿ, ಬೀದರ್, ಬಿಜಾಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಕಾರವಾರ, ಉಡುಪಿ ದಾಟಿ ಬಂದಿರುವ ಗೋಪಾಲ ಇನ್ನೂ 16 ಜಿಲ್ಲೆ ಸುತ್ತುವ ತವಕದಲ್ಲಿದ್ದಾನೆ.
ಗೌರವಾರ್ಪಣೆ:  ರಾಜ್ಯ ಸುತ್ತುವುದಕ್ಕೆ ಮಾತ್ರ ಗೋಪಾಲ ಸವಾರಿ ಸೀಮಿತಗೊಳಿಸಿಲ್ಲ. ಎಲ್ಲಾ ಜಿಲ್ಲೆಗಳಲ್ಲಿಯೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ದಿವಂಗತರಾಗಿರುವ ಕವಿ- ಸಾಹಿತಿಗಳ ಮೂರ್ತಿಗಳಿಗೂ ಗೌರವ ಕೊಡುವ ಕಾರ್ಯ ನಡೆಸುತ್ತಿದ್ದಾರೆ.
ಪುಣ್ಯ ಕ್ಷೇತ್ರಗಳಲ್ಲೇ ವಾಸ್ತವ್ಯ: ತನ್ನ ಮುಂದಿನ ಪಯಣ ಪುಣ್ಯಕ್ಷೇತ್ರಗಳಾದ ಧರ್ಮಸ್ಥಳ, ಸುಬ್ರಹ್ಮಣ್ಯ ಎನ್ನುವ ಗೋಪಾಲ, ತಾನು ಹೋದ ದೇವಸ್ಥಾನ, ಮಠಗಳಲ್ಲೇ ಊಟ ಹಾಗೂ ವಸತಿಗಾಗಿ ಆಶ್ರಯಿಸಿದ್ದಾನೆ.
 ಯುವಜನತೆ ಕನ್ನಡ, ಕನ್ನಡ ಸಾಹಿತ್ಯವೆಂದರೆ ದೂರವುಳಿಯುತ್ತಾರೆ ಎನ್ನುವ ಆರೋಪಗಳಿಗೆ ಗೋಪಾಲ್ ಅಪವಾದ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.