ದಕ್ಷಿಣ ಕನ್ನಡ

ಹಿರಿಯ ಯಕ್ಷಗಾನ ಕಲಾವಿದ 'ಕೊಡಕ್ಕಲ್ಲು ಹಾಸ್ಯಗಾರ' ನಿಧನ

Published On :

ಮಂಗಳೂರು: ತೆಂಕುತಿಟ್ಟು ಯಕ್ಷಗಾನ ರಂಗದ ಹಿರಿಯ ಹಾಸ್ಯಗಾರ, ಕೊಡಕ್ಕಲ್ಲು ಗೋಪಾಲಕೃಷ್ಣ ಭಟ್ (86) ಹೃದಯಾಘಾತದಿಂದ ಕುರ್ನಾಡು ಗ್ರಾಮದ ಕೊಡಕ್ಕಲು ಸ್ವಗೃಹದಲ್ಲಿ ಬುಧವಾರ ಅಪರಾಹ್ನ ನಿಧನರಾದರು.
 ತೆಂಕುತಿಟ್ಟಿನ ವಿವಿಧ ಯಕ್ಷಗಾನ ಮೇಳಗಳಲ್ಲಿ ಸುಮಾರು ನಾಲ್ಕು ದಶಕಗಳ ತಿರುಗಾಟ ನಡೆಸಿ, ಹಲವು ದಿಗ್ಗಜರ ಸಮಕಾಲೀನ ಕಲಾವಿದರಾಗಿದ್ದು, ನಿವೃತ್ತ ಜೀವನ ನಡೆಸುತ್ತಿದ್ದ ಭಟ್ಟರು ಮೃದಂಗ, ಭಾಗವತಿಕೆ ಸಹಿತ ಯಕ್ಷಗಾನ ರಂಗದ ಸವ್ಯಸಾಚಿ ಎನಿಸಿದ್ದು, ಕಲಾಸೇವೆಗಾಗಿ 2010ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದರು.
 1928ರಲ್ಲಿ ಶಾಮ ಭಟ್ಟ-ಗೌರಮ್ಮ ದಂಪತಿ ಪುತ್ರರಾಗಿ ಕೊಡಕ್ಕಲ್ಲಿನಲ್ಲಿ ಜನಿಸಿದ ಅವರು, ಸಂಸ್ಕೃತ ವಿದ್ಯಾಭ್ಯಾಸದೊಂದಿಗೆ ಮೂರನೇ ತರಗತಿ ಪೂರೈಸಿದ ಬಳಿಕ ತಮ್ಮ ತಂದೆ ಹಾಗೂ ದಿ.ನೆಡ್ಲೆ ನರಸಿಂಹ ಭಟ್ಟರಿಂದ ಹಿಮ್ಮೇಳ ಅಭ್ಯಾಸ ಮಾಡಿ, ಇರಾ ಗೋಪಾಲಕೃಷ್ಣ ಭಾಗವತರಲ್ಲಿ ಭಾಗವತಿಕೆ ಕಲಿತು 1948ರಲ್ಲಿ ಕೂಡ್ಲು ಮೇಳದಲ್ಲಿ ಸಂಗೀತ ಭಾಗವತರಾಗಿ ಪಾದಾರ್ಪಣೆ ಮಾಡಿದರು. ದಿ.ಅಡ್ಕಸ್ಥಳ ನಾರಾಯಣ ಶೆಟ್ಟರ ನೃತ್ಯ ತರಬೇತಿ ಕೇಂದ್ರದಲ್ಲಿ ಮದ್ದಲೆವಾದಕರಾಗಿ ಅವರ ನೃತ್ಯ ತರಬೇತಿಯನ್ನು ನೋಡಿ ಕಲಿತು ಸ್ವತಃ ಏಕಲವ್ಯನಂತೆ ನೃತ್ಯಾಭ್ಯಾಸ ಮಾಡಿದರು.
 ದಿ.ಬಲಿಪ ನಾರಾಯಣ ಭಾಗವತರ ನಿರ್ದೇಶನದಂತೆ 1952ರಲ್ಲಿ ಶ್ರೀ ಕಟೀಲು ಮೇಳದಲ್ಲಿ ಹೊಗಳಿಕೆ ಹಾಸ್ಯಗಾರರಾಗಿ ಮೆಚ್ಚುಗೆ ಪಡೆದು ಬಳಿಕ ಪ್ರಧಾನ ಹಾಸ್ಯಗಾರರಾಗಿ ಜನಮನರಂಜಿಸಿದರು. 39 ವರ್ಷಗಳ ಕಾಲ ಧರ್ಮಸ್ಥಳ, ಕಟೀಲು, ಕುಂಡಾವು, ಕರ್ನಾಟಕ, ಪೊಳಲಿ, ಸುಂಕದಕಟ್ಟೆ, ನಂದಾವರ ಮೊದಲಾದ ಮೇಳಗಳಲ್ಲಿ ಕಲಾವಿದರಾಗಿದ್ದರು. ಇವರ ವಿಜಯ, ಮಕರಂದ, ದಾರುಕ, ಪುರೋಹಿತ, ಮಲೆಯಾಳಿ ಪಂಡಿತ ಮೊದಲಾದ ಪಾತ್ರಗಳು ಹೆಸರುವಾಸಿ. ರಷ್ಯಾ ಅಧ್ಯಕ್ಷರಾಗಿದ್ದ ದಿ.ಕ್ರುಶ್ಚೇವ್ ಬೆಂಗಳೂರಿಗೆ ಬಂದಿದ್ದಾಗ ಅವರ ಸಮ್ಮುಖದಲ್ಲಿ 'ಕುಮಾರ ವಿಜಯ' ಪ್ರಸಂಗದಲ್ಲಿ ನಾರದನ ಪಾತ್ರ ನಿರ್ವಹಿಸಿ ಅವರಿಂದ ಮನ್ನಣೆ ಪಡೆದಿದ್ದರು.
 ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯೊಂದಿಗೆ ಅ.ಭಾ.ಯಕ್ಷಗಾನ ಪ್ರಶಸ್ತಿ, ಶೇಣಿ ಪ್ರಶಸ್ತಿ, ಹಾಸ್ಯಬ್ರಹ್ಮ ಪ್ರಶಸ್ತಿ, ಪಾತಾಳ ಪ್ರಶಸ್ತಿ, ಕರ್ಗಲ್ಲು ಪ್ರಶಸ್ತಿ ಸಹಿತ ಹಲವು ಸನ್ಮಾನಗಳು ಸಂದಿವೆ.
 ಬಲಿಪರು, ಹಿರಿಯ ಸಾಮಗರು, ಕುರಿಯ ವಿಠಲ ಶಾಸ್ತ್ರಿ, ನೆಡ್ಲೆ ನರಸಿಂಹ ಭಟ್, ಶೇಣಿ ಗೋಪಾಲಕೃಷ್ಣ ಭಟ್ ಸೇರಿದಂತೆ ಯಕ್ಷರಂಗದ ಬಹುತೇಕ ದಿಗ್ಗಜ ಕಲಾವಿದರ ಸಮಕಾಲೀನ ಕಲಾವಿದರಾಗಿ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವರು, ದ.ಕ. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಟಿ.ಶೈಲಜಾ ಭಟ್ ಸಹಿತ ಐವರು ಪುತ್ರಿಯರು, ಇಬ್ಬರು ಪುತ್ರರು ಹಾಗೂ ಪತ್ನಿಯನ್ನು ಅಗಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.