ಮಾ. 3ರಂದು ಕರಾಳ ದಿನಕ್ಕೆ ಕರೆ
ಮಂಗಳೂರು: ಎತ್ತಿನಹೊಳೆ ಯೋಜನೆಗೆ ಕಾರಣರಾದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹಾಗೂ ಕೇಂದ್ರ ಸಚಿವ ವೀರಪ್ಪ ಮೈಲಿಯವರ ಸ್ವಾರ್ಥ ರಾಜಕಾರಣ ವಿರೋಧಿಸಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಮಾ. 3 ರಂದು ದ.ಕ. ಬಂದ್ಗೊಳಿಸಿ ಕರಾಳ ದಿನ ಆಚರಿಸಲಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ದಿನಕರ ಶೆಟ್ಟಿ, ದ.ಕ. ಜಿಲ್ಲೆಯ ಜನರ ಭಾವನೆಗಳಿಗೆ ಬೆಲೆ ಕೊಡದೆ ಪಶ್ಚಿಮಘಟ್ಟದ ಸರ್ವ ನಾಶಕ್ಕೆ ಕಾರಣವಾಗುವ ಎತ್ತಿನಹೊಳೆ ಯೋಜನೆಗೆ ಕೇಂದ್ರ ಸಚಿವ ವೀರಪ್ಪ ಮೈಲಿ ಶಂಕುಸ್ಥಾಪನೆ ನೆರವೇರಿಸುತ್ತಿರುವುದು ಖಂಡನೀಯ. ಇದಕ್ಕೆ ಜಿಲ್ಲೆಯ ಎಲ್ಲ ಸಚಿವರು, ಲೋಕಸಭೆ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಬೆಂಬಲಿಸುತ್ತಿರುವುದರ ವಿರುದ್ಧ ಜನತೆ ಜಾತಿ ಬೇಧ ಮರೆತು ಪ್ರತಿಭಟಿಸಬೇಕಾಗಿದೆ ಎಂದರು.
ಯಾವುದೇ ಪಕ್ಷ ಯೋಜನೆಯ ನಿಲುವು ಸ್ಪಷ್ಟಪಡಿಸುತ್ತಿಲ್ಲ. ಹರ್ಷ ಮೈಲಿಯವರು ಕೂಡ ಇದನ್ನು ಬೆಂಬಲಿಸುತ್ತಿದ್ದು, ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ವೀರಪ್ಪ ಮೈಲಿ, ಹರ್ಷ ಮೈಲಿ ಹಾಗೂ ಸದಾನಂದ ಗೌಡರನ್ನು ಜಿಲ್ಲೆಯ ಯಾವುದೇ ಸಮಾರಂಭಕ್ಕೂ ಆಹ್ವಾನಿಸಬಾರದು ಎಂದರು.
ಈಗಾಗಲೇ ವಿದ್ಯಾರ್ಥಿ ಸಂಘಟನೆ ಎತ್ತಿನಹೊಳೆ ಯೋಜನೆ ವಿರೋಧಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ, ಜಿಲ್ಲಾಧಿಕಾರಿಯವರು ಇದನ್ನು ಸ್ವೀಕರಿಸಿಲ್ಲ. ಮಾ. 3 ರಂದು ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿಯೆದುರು ವೀರಪ್ಪ ಮೈಲಿ ಹಾಗೂ ಸದಾನಂದ ಗೌಡರಪ್ರತಿಕೃತಿ ದಹನ ಮಾಡಲಾಗುವುದು ಎಂದರು.
ಸಂಘದ ನಾಯಕರಾದ ಅಶ್ವಿತ್ ಕೊಟ್ಟಾರಿ, ರಕ್ಷಿತ್ ಆರ್ ಪೂಜಾರಿ, ಮನೀಶ್ ಗಟ್ಟಿ, ಧರ್ಮರಾಜ್, ಚಂದ್ರವರ್ಮ, ಧನರಾಜ್, ಅಶ್ವಿನಿ ಇದ್ದರು.
ಶಿಲಾನ್ಯಾಸ ರದ್ದುಪಡಿಸಿ, ಇಲ್ಲವೇ ಹೋರಾಟ ಎದುರಿಸಿ: ತುರವೇ
ಮಂಗಳೂರು: ಎತ್ತಿನಹೊಳೆ ಯೋಜನೆ ವಿರುದ್ಧ ಮಾ.3ರಂದು ದ.ಕ.ಜಿಲ್ಲಾ ಬಂದ್ಗೆ ತುಳುನಾಡ ರಕ್ಷಣಾ ವೇದಿಕೆ(ತುರವೇ) ಬೆಂಬಲ ವ್ಯಕ್ತಪಡಿಸಿದೆ.
ಯೋಜನೆಯ ಶಿಲಾನ್ಯಾಸ ರದ್ದುಪಡಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ತಿಳಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜೀವನದಿ ನೇತ್ರಾವತಿ ತಿರುವಿಗೆ ವಿರೋಧ ವ್ಯಕ್ತಪಡಿಸುವುದಾಗಿ ಹೇಳಿದ ಅವರು, ಜಿಲ್ಲೆಯ ಜನಪ್ರತಿನಿಧಿಗಳು ಇದರ ವಿರುದ್ಧ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಆಗ್ರಹಿಸಿದರು.
ತುರವೇ ಮಹಿಳಾ ಘಟಕ ಅಧ್ಯಕ್ಷೆ ಜ್ಯೋತಿ, ಕಾರ್ಮಿಕ ಮುಖಂಡರಾದ ಇಬ್ರಾಹಿಂ, ಕೃಷ್ಣ ಕೋಟ್ಯಾನ್, ರಿಯಾಜ್, ತಾರನಾಥ ಶ್ರೀಕಾಂತ್, ವಸಂತಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

