ದಕ್ಷಿಣ ಕನ್ನಡ

ಪುತ್ತೂರು ರೈಲು ನಿಲ್ದಾಣ ಸಂಪರ್ಕ ಕಠಿಣ

Published On :

ಪುತ್ತೂರು:  ನೂರಾರು ಪ್ರಯಾಣಿಕರು ಪ್ರತಿದಿನ ಪುತ್ತೂರು ರೈಲು ನಿಲ್ದಾಣ ಮೂಲಕ ಪ್ರಯಾಣಿಸುತ್ತಿದ್ದಾರೆ. ಆದರೆ ರೈಲು ನಿಲ್ದಾಣ ಸಂಪರ್ಕ ರಸ್ತೆ ಮಾತ್ರ ಹೊಂಡಗಳಿಂದ ತುಂಬಿದ್ದು ರಸ್ತೆ ಸಂಪೂರ್ಣ ಹದಗೆಟ್ಟಿದೆ.
ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರು ಹಾಗೂ ವಾಹನಗಳು ರಸ್ತೆಯ ಗುಂಡಿಗಳಿಂದಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ರಸ್ತೆ ಹಾಳಾಗಿದ್ದು ಸಮಸ್ಯೆ ಕೇಳುವವರೇ ಇಲ್ಲ ಎನ್ನುವಂತಾಗಿದೆ.
ಪೂರ್ಣ ಹದಗೆಟ್ಟಿದೆ: ಈ ರಸ್ತೆ ಪುತ್ತೂರಿನ ಖಾಸಗಿ ಬಸ್ ನಿಲ್ದಾಣಬಳಿಯಿಂದ ಆರಂಭಗೊಂಡು ಪುತ್ತೂರು-ಉಪ್ಪಿನಂಗಡಿ ರಸ್ತೆಯಲ್ಲಿನ ಹಾರಾಡಿ ಎಂಬಲ್ಲಿಗೆ ಕೊನೆಯಾಗುತ್ತದೆ. ಈ ರಸ್ತೆ ಮಡ್ಯಲಕಟ್ಟೆ ರುದ್ರಭೂಮಿ ಬಳಿಯಿಂದ ಸುಮಾರು 200 ಮೀಟರ್ನಷ್ಟು ಹಾಗೂ ರೈಲು ನಿಲ್ದಾಣದ ಬಳಿಯಿಂದ ಹಾರಾಡಿ ಮುಖ್ಯರಸ್ತೆ ಸಂಪರ್ಕದ ಸುಮಾರು 300 ಮೀಟರ್ನಷ್ಟು ರಸ್ತೆ ಸಂಪೂರ್ಣ ಹದೆಗೆಟ್ಟು ಹೋಗಿದೆ.
ರಸ್ತೆ ಡಾಂಬರು ಕಾಣದೆ ಹಲವಾರು ವರ್ಷ ಕಳೆದಿದೆ. ರಸ್ತೆಯಲ್ಲಿರುವ ಡಾಂಬರು ಸಂಪೂರ್ಣ ಕಿತ್ತು ಹೋಗಿದ್ದು ಕೆಲವೆಡೆ ರಸ್ತೆಯ ಕುರುಹುಗಳು ಮಾತ್ರವಿದೆ. ಪುತ್ತೂರು ರೈಲು ನಿಲ್ದಾಣದಿಂದ ಪುತ್ತೂರು ನಗರ ಸಂಪರ್ಕಿಸುವ ಈ ರಸ್ತೆ ರೇಲ್ವೆ ಇಲಾಖೆ ವ್ಯಾಪ್ತಿಗೊಳಪಡುತ್ತದೆ. ಇದರಿಂದಾಗಿ ಪುರಸಭೆ ಈ ರಸ್ತೆ ದುರಸ್ತಿಯತ್ತ ಗಮನ ಹರಿಸುತ್ತಿಲ್ಲ.
ರಸ್ತೆ ರೈಲ್ವೇ ಇಲಾಖೆ ವ್ಯಾಪ್ತಿಗೆ: ಪುರಸಭೆ ವ್ಯಾಪ್ತಿಯಲ್ಲಿದ್ದರೂ ಪುರಸಭೆ ರಸ್ತೆ ದುರಸ್ತಿಗೆ ಯಾವುದೇ ಅನುದಾನ ಇರಿಸಿಲ್ಲ. ರೇಲ್ವೆ ಇಲಾಖೆಗೊಳಪಡುವ ಈ ರಸ್ತೆಯನ್ನು ಇಲಾಖೆಯೇ ದುರಸ್ತಿ ಮಾಡಲಿ ಎಂಬುದು ಪುರಸಭೆಯ ವಾದ. ಇತ್ತೀಚೆಗೆ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಈ ರಸ್ತೆ ದುರಸ್ತಿ ಬಗ್ಗೆ ಪ್ರಸ್ತಾಪವಾಗಿತ್ತು. ಈ ಸಂರ್ದರ್ಭ ಸದಸ್ಯರು ಅದನ್ನು ವಿರೋಧಿಸಿದ್ದರು.
ಈ ರಸ್ತೆ ರೇಲ್ವೆ ಇಲಾಖೆಗೆ ಸೇರುವುದರಿಂದ ರಸ್ತೆ ದುರಸ್ತಿಗೆ ಅನುದಾನವನ್ನು ಪುರಸಭೆಯಿಂದ ಬಳಸಬಾರದು ಎಂದು ಸದಸ್ಯರು ಆಗ್ರಹಿಸಿದ್ದರು. ಹಾಗಾಗಿ ಇಂದಿಗೂ ಈ ರಸ್ತೆ ದುರಸ್ತಿ ಕಾಣದೆ ಹದಗೆಟ್ಟಿದೆ.
ಸಂಸದರ ಅನುದಾನ ಬಳಸಿ:  ರಸ್ತೆಯನ್ನು ಸಂಸದ ನಿಧಿಯಿಂದ ದುರಸ್ತಿಪಡಿಸಲು ಅವಕಾಶವಿದ್ದರೂ ರಸ್ತೆ ಇನ್ನೂ ನಾದುರಸ್ತಿ ಸ್ಥಿತಿಯಲ್ಲಿದೆ. ಸಂಸದರು, ಸಚಿವರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ರಸ್ತೆಯಲ್ಲಿ ನೂರಾರು ಮಂದಿ ಪ್ರಯಾಣಿಕರು ಸಾಗುತ್ತಿದ್ದಾರೆ. ಕಳೆದ ಸುಮಾರು 5 ವರ್ಷಗಳ ಹಿಂದೆ ಡಾಂಬರೀಕರಣವಾಗಿತ್ತು. ಆದರೆ ಕಳಪೆ ಡಾಂಬರೀಕರಣದಿಂದಾಗಿ ವರ್ಷದೊಳಗೇ ಡಾಂಬರು ಕಿತ್ತು ಬಂದಿತ್ತು.
-ಸಂಶುದ್ದೀನ್ ಸಂಪ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.