ಎಂಡೋ ಸಂತ್ರಸ್ತರ ಯೋಜನೆಗಳ ಶೀಘ್ರ ಅನುಷ್ಠಾನ
ಉಪ್ಪಿನಂಗಡಿ: ಈ ವರ್ಷದ ಜನವರಿಯಿಂದಲೇ ಅನ್ವಯವಾಗುವಂತೆ ಎಂಡೋ ಸಂತ್ರಸ್ತರಿಗಾಗಿ ಸರ್ಕಾರ ಹಾಕಿಕೊಂಡಿರುವ ಯೋಜನೆ, ಸೌಲಭ್ಯ ವಿತರಣೆ ಕಾರ್ಯಕ್ರಮಗಳನ್ನು ಶೀಘ್ರ ಅನುಷ್ಠಾನಿಸಲು ಕ್ರಮ ಜರಗಿಸಲಾಗುವುದೆಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಹೇಳಿದ್ದಾರೆ.
ಶುಕ್ರವಾರ ಕೊಕ್ಕಡ ಹಾಗೂ ಕೊಯ್ಲದಲ್ಲಿ ಕಾರ್ಯಾಚರಿಸುತ್ತಿರುವ ಎಂಡೋ ಪಾಲನಾ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಎಂಡೋ ಪೀಡಿತರಿಗಾಗಿ ಕಲ್ಪಿಸಲಾದ ಸೌಲಭ್ಯಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಕೊಯ್ಲದ ಎಂಡೋ ಪಾಲನಾ ಕೇಂದ್ರದ ಪೀಡಿತರ ಆರೋಗ್ಯ ಮತ್ತು ಅವರ ಆಹಾರ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದ ಅವರು, ಬಳಿಕ ಎಂಡೋ ಹೋರಾಟ ಸಮಿತಿ ಪದಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ, ಸಭೆಯಲ್ಲಿ ವ್ಯಕ್ತವಾದ ಸಲಹೆಯಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಭೇಟಿ ಸಂದರ್ಭ ಎಂಡೋ ಹೋರಾಟ ಸಮಿತಿ ಪದಾಧಿಕಾರಿಗಳಾದ ಜಯಕರ ಪೂಜಾರಿ, ರಾಮಮೋಹನ್ ರೈ, ಕಮಲಾಕ್ಷ ರೈ, ಶ್ರೀಧರ ಪೂಜಾರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಗಣೇಶ್ ಭಟ್, ಪುತ್ತೂರು ಸಹಾಯಕ ಕಮಿಷನರ್ ಕೃಷ್ಣಮೂರ್ತಿ, ಕಡಬ ವಿಶೇಷ ತಹಸೀಲ್ದಾರ್ ಶಿವಪ್ಪ, ದ.ಕ. ಜಿಲ್ಲಾ ಮಲೇರಿಯಾ ಸರ್ವೇಚನಾಧಿಕಾರಿ ಅರುಣ್ ಕುಮಾರ್, ಪುತ್ತೂರು ತಾಲೂಕು ವೈದ್ಯಾಧಿಕಾರಿ ಡಾ. ಬದ್ರುದ್ದೀನ್, ಕೊಯ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಜನಿ, ಕಂದಾಯ ನಿರೀಕ್ಷಕ ನಾರಾಯಣ ಪೂಜಾರಿ, ಗ್ರಾಮಕರಣಿಕರಾದ ರವೀಂದ್ರ ದೇವಕಿ, ಎಂಡೋ ಪಾಲನಾ ಕೇಂದ್ರದ ಸಂಯೋಜಕಿ ನಮಿತಾ ಇದ್ದರು.
ಬಿಟ್ಟವರ ಸಮೀಕ್ಷೆ ನಡೆಸಿ: ಹಿಂದೆ ನಡೆದ ಸಮೀಕ್ಷೆಯಲ್ಲಿ ಬಹಳಷ್ಟು ಸಂತ್ರಸ್ತರ ಹೆಸರು ಪಟ್ಟಿಯಲ್ಲಿ ಸೇರ್ಪಡೆಗೊಂಡಿಲ್ಲ. ಅದು ಅಪೂರ್ಣವಾಗಿದೆ ಎಂದು ಕೊಯ್ಲ ಹಾಗೂ ಕೊಕ್ಕಡದ ಹೋರಾಟ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಗಮನ ಸೆಳೆದರು.
ಸ್ಪಂದಿಸಿದ ಜಿಲ್ಲಾಧಿಕಾರಿ, ಬಿಟ್ಟು ಹೋಗಿರುವ ಸಂತ್ರಸ್ತರನ್ನು ಇದಕ್ಕೆ ಸೇರಿಸಿಕೊಳ್ಳುವ ಸಲುವಾಗಿ ಅಂತಹವರಿಗಾಗಿ ಶೀಘ್ರವಾಗಿ 15 ದಿನಗಳೊಳಗೆ ಪುನರ್ ಸಮೀಕ್ಷೆ ನಡೆಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

