ದಕ್ಷಿಣ ಕನ್ನಡ

ಕಾಲು ಜಾರಿ ಹೊಂಡಕ್ಕೆ ಬಿದ್ದು ವ್ಯಕ್ತಿ ಸಾವು

Published On :

ಕೋಟ: ಆಕಸ್ಮಿಕವಾಗಿ ಕಾಲು ಜಾರಿ ವ್ಯಕ್ತಿಯೊಬ್ಬರು ಕೊಜೆ ಹೊಂಡಕ್ಕೆ ಬಿದ್ದು ಮೃತಪಟ್ಟ ಘಟನೆ ಬೇಳೂರು ಗ್ರಾಮದ ಚಾಮಡಿ ಎಂಬಲ್ಲಿ ಭಾನುವಾರ ನಡೆದಿದೆ. ಮೃತರು ಆನಂದ ಶೆಟ್ಟಿ (56). ಇವರು ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮನೆಯ ಹತ್ತಿರದ ಕೊಜೆ ಹೊಂಡಕ್ಕೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಉಸಿರುಕಟ್ಟಿ ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತರ ಮಗ ರಾಜೇಶ್ ನೀಡಿದ ದೂರಿನಂತೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ್ ಆಡುತ್ತಿದ್ದ 8 ಮಂದಿ ಸರೆ
ಕೋಟ: ಮಣೂರು ಗ್ರಾಮದ ಮಣೂರು ಪಡುಕರೆ ಎಂಬಲ್ಲಿ ಗದ್ದೆ ಜಾಗದಲ್ಲಿ ಹಣವನ್ನು ಪಣವನ್ನಾಗಿಟ್ಟು ಇಸ್ಪೀಟ್ ಆಟ ನಡೆಸುತ್ತಿದ್ದ 8 ಜನರನ್ನು ಬಂಧಿಸಿದ ಘಟನೆ ಶನಿವಾರ ನಡೆದಿದೆ. ಆರೋಪಿಗಳಾದ ಅಶೋಕ, ಸುರೇಂದ್ರ, ಉಮೇಶ, ಬಾಬು, ರಾಘವೇಂದ್ರ, ಸುಧೀರ, ರಮೇಶ, ಸಂತೋಷ ಇವರನ್ನು ದಸ್ತಗಿರಿ ಮಾಡಿ, ಆಟಕ್ಕೆ ಬಳಸಿದ 1475 ನಗದು ಹಾಗೂ ಇನ್ನಿತ್ತರ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಸ್ಕಿಡ್;  ಮಹಿಳೆ ಸಾವು
ಉಡುಪಿ: ರಸ್ತೆ ಉಬ್ಬಿನಲ್ಲಿ ಬೈಕ್ ಸ್ಕಿಡ್ ಆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಶನಿವಾರ ಉಡುಪಿ ಹಳೆ ಬಲಾಯಿಪಾದೆ ರಸ್ತೆಯಲ್ಲಿ ನಡೆದಿದೆ. ಮೃತರು ಚಂದ್ರಕಲಾ. ಅವರು ತಮ್ಮ ಪುತ್ರ ಶಂತನು ಅವರೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಹೊಸದಾಗಿ ಅಳವಡಿಸಲಾದ ರಸ್ತೆ ಉಬ್ಬನ್ನು ಗಮನಿಸದೆ ಬೈಕ್ ಸ್ಕಿಡ್ ಆಗಿ ಇಬ್ಬರು ರಸ್ತೆಗೆ ಬಿದ್ದಿದ್ದಾರೆ. ಗಂಭೀರ ಗಾಯಗೊಂಡಿದ್ದ ಚಂದ್ರಕಲಾ ಮೃತಪಟ್ಟಿದ್ದಾರೆ. ಉಡುಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಮನ ಬೇರೆಡೆ ಸೆಳೆದು ಬೈಕ್ ಬ್ಯಾಟರಿ ಕಳವು
ವಿಟ್ಲ: ವಿಟ್ಲ ಹೈಟೆಕ್ ಬ್ಯಾಟರಿ ಪಾಯಿಂಟ್‌ನಿಂದ ಅಲ್ಲಿನ ಸಿಬ್ಬಂದಿ ಗಮನವನ್ನು ಬೇರೆಡೆಗೆ ಸೆಳೆದು ಬೈಕ್‌ನ ಎರಡು ಬ್ಯಾಟರಿಗಳನ್ನು ಕಳವುಗೈದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಂಗಡಿಗೆ ಆಗಮಿಸಿದ ಅಪರಿಚಿತ ಯುವಕ ತನ್ನ ಬೈಕ್‌ಗೆ ಬ್ಯಾಟರಿ ಬೇಕೆಂದು ಸಿಬ್ಬಂದಿಯನ್ನು ಕೇಳಿದ್ದಾನೆ. ಅವರು ಬೇರೊಂದು ಬ್ಯಾಟರಿಯನ್ನು ಚಾರ್ಚ್‌ಗೆ ಇಡುವಾಗ ಈತ ಪರಾರಿಯಾಗಿದ್ದ. ಭಗವತೀ ದೇವಸ್ಥಾನದ ಬಳಿ ಹೋಗಿ ತಾನು ಪುತ್ತೂರಿನ ಬಶೀರ್ ಅವರ ಸಹೋದರ ಸಲೀಂ ಎಂದು ಪರಿಚಯಿಸಿಕೊಂಡು ಹಳೆಯ ಬ್ಯಾಟರಿ ಬದಲಾಗಿ ತಾನು ಪುತ್ತೂರಿನಿಂದ ತಂದ ಹೊಸತನ್ನು ಅಳವಡಿಸಬೇಕು ಎಂದು ಫಿಟ್ಟರ್‌ನಲ್ಲಿ ಹೇಳಿದ. ಫಿಟ್ಟರ್ ಆತನಲ್ಲಿ ಈ ಬ್ಯಾಟರಿ ಡ್ರೈ ಇದೆ. ಇದನ್ನು ಹೈಟೆಕ್ ಬ್ಯಾಟರಿ ಪಾಯಿಂಟ್‌ನಲ್ಲಿ ಸಂಜೆ ವರೆಗೆ ಚಾರ್ಜ್ ಮಾಡಬೇಕೆಂದರು. ಆತ ಮತ್ತೆ ಅದೇ ಅಂಗಡಿಗೆ ಬಂದ. ಅಲ್ಲಿ ಹೊಸ ಬ್ಯಾಟರಿಯನ್ನು ಖರೀದಿಸುವ ನೆಪದಲ್ಲಿ ಮಾತುಕತೆ ಮಾಡಿದ. ಮತ್ತೆ ಸಿಬ್ಬಂದಿ ಗಮನವನ್ನು ಬೇರೆಡೆಗೆ ಸೆಳೆದು ಹೊಸ ಬ್ಯಾಟರಿಯನ್ನು ಅಪಹರಿಸಿ ಪರಾರಿಯಾದ. ಆತ ಫಿಟ್ಟರ್‌ನ ಸ್ಕೂಟರ್‌ನಲ್ಲಿ ಈ ಅಂಗಡಿಗೆ ಬಂದಿದ್ದ. ಅದರಲ್ಲಿ ಬ್ಯಾಟರಿಯನ್ನು ಇಟ್ಟು ಸಾಗಿದ್ದ. ತಕ್ಷಣ ಸಿಬ್ಬಂದಿ ಬೆನ್ನಟ್ಟಿ ಭಗವತಿ ದೇಗುಲದ ಬಳಿಯಿದ್ದ ಫಿಟ್ಟರ್‌ನ ಬಳಿ ತಲುಪುವಾಗ ಆತ ಸ್ಕೂಟರ್ ಇಟ್ಟು ತನ್ನ ಬೈಕ್ನಲ್ಲಿ ಪರಾರಿಯಾಗಿದ್ದ. ಸಿಬ್ಬಂದಿ ವಾಪಸ್ ಬಂದು ಗಮನಿಸಿದಾಗ ಆರಂಭದಲ್ಲೇ ಆತ ಒಂದು ಬ್ಯಾಟರಿ ಕದ್ದಿರುವುದು ಬೆಳಕಿಗೆ ಬಂದಿತ್ತು. ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.