ದಕ್ಷಿಣ ಕನ್ನಡ

ವಿವೇಕಾನಂದರ ಚಿಂತನೆ ಇಂದಿನ ಅಗತ್ಯ: ಡೀವಿ

Published On :

ಪುತ್ತೂರು: ಪಾಶ್ಚಿಮಾತ್ಯ ರಾಷ್ಟ್ರಗಳು ಆದರ್ಶವಾಗುತ್ತಿರುವ ಹೊತ್ತಿನಲ್ಲಿ, ಪರಕೀಯ ಸಂಸ್ಕಾರಗಳು ಮಾದರಿಯಾಗುತ್ತಿರುವ ಈ ಸಂದರ್ಭದಲ್ಲಿ ಜನರ ಅಂತಃಕರಣವನ್ನು ತಲುಪಿ ದೇಶೀಯ ಚಿಂತನೆಯೆಡೆಗೆ ಸೆಳೆದೊಯ್ಯಬಲ್ಲ, ನಮ್ಮ ಪರಂಪರೆಯ ಶ್ರೇಷ್ಟತೆಯನ್ನು ಸಾರಿ ಹೇಳಬಲ್ಲ ಸ್ವಾಮಿ ವಿವೇಕಾನಂದರ ಚಿಂತನೆಗಳು ಇಂದಿನ ಸಮಾಜದ ಅಗತ್ಯ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ವಿವೇಕಾನಂದ ಮಹೋತ್ಸವ ಸಮಿತಿ ಆಶ್ರಯದಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣದ ಶ್ರೀ ರಾಮಕೃಷ್ಣ ಪರಮಹಂಸ ಬಯಲು ರಂಗಮಂದಿರದಲ್ಲಿ ನಡೆದ ಸ್ವಾಮಿ ವಿವೇಕಾನಂದರ 150ನೇ ಜನ್ಮವರ್ಷಾಚರಣೆಯ ಸಮಾರೋಪ ಹಾಗೂ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದು ಭಾರತ ದೇಶವನ್ನು ಕಾಡುತ್ತಿರುವ ವಿವಿಧ ಆಂತರಿಕ ಮತ್ತು ಬಾಹ್ಯ ಸಮಸ್ಯೆ ಸವಾಲುಗಳಿಗೆ ಸ್ವಾಮಿ ವಿವೇಕಾನಂದರ ವಿಚಾರಧಾರೆಗಳು ಪರಿಹಾರಗಳಾಗಿ ಕಾಣಿಸಿಕೊಳ್ಳುತ್ತವೆ. ದೇಶವನ್ನು ನಾಯಕತ್ವದ ಕೊರತೆ ಕಾಡುತ್ತಿರುವ ಹೊತ್ತಿನಲ್ಲಿ, ಪುರುಷಸಿಂಹರನ್ನು ಸೃಷ್ಟಿಸುವು ವಿವೇಕಾನಂದರ ಉದ್ದೇಶಗಳನ್ನು ಅರ್ಥಮಾಡಿಕೊಳ್ಳಬೇಕು. ಪ್ರತಿಯೊಬ್ಬ ವ್ಯಕ್ತಿಗೂ ಯೌವನ ಅತ್ಯಂತ ಉತ್ತಮ ಕಾಲಘಟ್ಟ. ಈ ಸಮಯದಲ್ಲಿ ಪ್ರತಿಯೊಬ್ಬರೂ ಸಾಧನೆಯ ಉತ್ತುಂಗದೆಡೆಗೆ ಹೆಜ್ಜೆಯಿಡಬೇಕು ಎಂದು ನುಡಿದರು.
ಆಶೀರ್ವಚನ ನೀಡಿದ ಹೊಸನಗರ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ, ಸ್ವಾಮಿ ವಿವೇಕಾನಂದರು ಈ ದೇಶದ ಐತಿಹಾಸಿಕ ಆಸ್ತಿ. ನಾಡಿನ ನಾಡಿ ನಾಡಿಗಳಲ್ಲಿ ಹೇಡಿತನ ತುಂಬಿರುವ ಈ ಸಂದರ್ಭದಲ್ಲಿ ವಿವೇಕಾನಂದರ ನಡೆ ನುಡಿಗಳು ಅಗತ್ಯವೆನಿಸಿವೆ. ಇಂದಿನ ಮಕ್ಕಳಲ್ಲಿ ವಿವೇಕಾನಂದರು ಪುನರಾವರ್ತನೆಯಾಗಬೇಕು ಎಂದರು.
ದಿಕ್ಸೂಚಿ ಭಾಷಣ ಮಾಡಿದ ಉಪನ್ಯಾಸಕ ಆದರ್ಶ ಗೋಖಲೆ, ಅಖಂಡ ಭಾರತದ ಕಲ್ಪನೆಗೆ ಮಾದರಿ ಸ್ವಾಮಿ ವಿವೇಕಾನಂದರು. ಜಗತ್ತಿನ ಮುಖದಲ್ಲಿ ಭಾರತ ದಡ್ಡ ದೇಶವಲ್ಲ, ದೊಡ್ಡ ದೇಶ ಎಂದು ಸಾರಿದವರು. ಮಾತ್ರವಲ್ಲದೆ ಭಾರತ ಜಗತ್ತಿನ ಅತ್ಯಂತ ಪವಿತ್ರವಾದ ತೀರ್ಥ ಕ್ಷೇತ್ರವೆಂದು ಸಾರಿದವರು ಅವರು. ಅವರ ಚಿಂತನೆಗಳು ಸದಾ ಪ್ರಸ್ತುತ ಎಂದರು. ಅಧ್ಯಕ್ಷತೆ ವಹಿಸಿದ್ದ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಕೆ. ರಾಮ ಭಟ್, ಅಂದು ಒಬ್ಬ ಸೀತೆಯನ್ನು ಕದ್ದೊಯ್ದದ್ದಕ್ಕೆ ರಾಮಾಯಣವೇ ಸೃಷ್ಟಿಯಾಯಿತು. ಇಂದು ಜಿಲ್ಲೆಯಲ್ಲಿ 342 ಹುಡುಗಿಯರ ನಾಪತ್ತೆ ಪ್ರಕರಣವಾದರೂ ಎಲ್ಲರೂ ಏನೂ ಆಗಿಲ್ಲವೆಂಬಂತೆ ತೆಪ್ಪಗಿರುವುದು ದುರಂತ. ಇಂದು ಪ್ರಜಾಪ್ರಭುತ್ವದ ಎಲ್ಲ ಅಂಗಗಳೂ ನಂಬಿಕೆ ಕಳೆದುಕೊಳ್ಳುತ್ತಿವೆ. ಹೀಗಿರುವಾಗ ವಿವೇಕಾನಂದರ ಚಿಂತನೆ, ಆದರ್ಶಗಳಿಂದ ಮಾತ್ರ ಎಲ್ಲ ಸಮಸ್ಯೆಗಳಿಗೂ ಮುಕ್ತಿ ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವೇಕಾನಂದ ಸಂಶೋಧನಾ ಕೇಂದ್ರದ ವತಿಯಿಂದ ಈ ಹಿಂದೆ ನಡೆಸಲಾಗಿದ್ದ ಕೊಡಚಾದ್ರಿಯ ಜೀವವೈವಿಧ್ಯಗಳ ಬಗೆಗಿನ ಅಧ್ಯಯನದ ಆಧಾರದಲ್ಲಿ ಸಿದ್ಧಗೊಳಿಸಲಾದ ಕೃತಿಯನ್ನು ರಾಮ ಭಟ್ ಲೋಕಾರ್ಪಣೆಗೊಳಿಸಿದರು. ಅಲ್ಲದೆ ಡಿ.ವಿ. ಸದಾನಂದ ಗೌಡರನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ಸನ್ಮಾನಿಸಿದರು.
ವಿವೇಕಾನಂದ ಜಯಂತಿ ಪ್ರಯುಕ್ತ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಅಂತರ್ ಕಾಲೇಜು ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಉಪನ್ಯಾಸಕ ಚಂದ್ರಹಾಸ ಕೆ.ಸಿ. ಸಿದ್ಧಪಡಿಸಿದ ವಿವೇಕವಾಣಿ ಎಂಬ ವಿವೇಕಾನಂದರ ನುಡಿಗಳಿರುವ ಕಿರುಹೊತ್ತಗೆಯನ್ನು ಸದಾನಂದ ಗೌಡ ಬಿಡುಗಡೆಗೊಳಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ಆರ್. ರಂಗಮೂರ್ತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.