ಗೋಮಾತೆ ಸರ್ವಶ್ರೇಷ್ಠ: ರಾಘವೇಶ್ವರ ಸ್ವಾಮೀಜಿ
ಪುತ್ತೂರು: ಹೆತ್ತ ಮಾತೆ, ಹೊತ್ತ ಮಾತೆ ಹಾಗೂ ಗೋಮಾತೆಯ ನಡುವೆ ಅವಿಚ್ಛಿನ್ನತೆ ಇದ್ದಾಗ ಮಾತ್ರ ದೇಶ ಸುಭಿಕ್ಷವಾಗಿರಲು ಸಾಧ್ಯ. ಗೋ ಮಾತೆ ಹೆತ್ತವಳಿಗೂ ಉಣಿಸಿದವಳು, ಹೊತ್ತವಳಿಗೂ ಬಡಿಸಿದವಳು.ಆದ್ದರಿಂದಲೇ ಗೋವು ಸರ್ವಶ್ರೇಷ್ಠ ಎನಿಸಿಕೊಂಡಿರುವುದು ಎಂದು ಹೊಸನಗರ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ.
ಶನಿವಾರ ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ವಿವೇಕಾನಂದ ಮಹೋತ್ಸವ ಸಮಿತಿ ಆಶ್ರಯದಲ್ಲಿ ಜರುಗಿದ ಸ್ವಾಮಿ ವಿವೇಕಾನಂದರ 150ನೇ ವರ್ಷಾಚರಣೆಯ ಸಮಾರೋಪ ಸಮಾರಂಭ ಹಾಗೂ ವಿವೇಕಾನಂದ ಜಯಂತಿ ಸಂದರ್ಭ ಆಯೋಜಿಸಲಾಗಿದ್ದ ಗೋ ಕಥಾ ಕಿರಣ ಕಾರ್ಯಕ್ರಮ ನಡೆಸಿಕೊಟ್ಟರು. ನಾನು ಬದುಕಬಹುದು, ನೀನು ಬದುಕಬಹುದು, ಆದರೆ ಗೋವಿಗೆ ಬದುಕುವ ಹಕ್ಕು ಇಲ್ಲವೇ? ಈ ಪ್ರಶ್ನೆ ಕಸಾಯಿಖಾನೆಗಳಿಗೂ ಅನ್ವಯವಾಗುವಂಥದ್ದು. ಮಾತ್ರವಲ್ಲ ಪ್ರತಿಯೊಬ್ಬರೂ ಕೇಳಿಕೊಳ್ಳಬೇಕಾದದ್ದು. ಹಸುವನ್ನು ಕೊಲ್ಲುವವನೂ ಹಸುವಿನ ಹಾಲು ಕುಡಿದೇ ಬೆಳೆದವನು. ಹಾಗಾಗಿ ಗೋವು ಎಲ್ಲರಿಗೂ ತಾಯಿ. ಸಮಾಜದಲ್ಲಿ ಎಲ್ಲ ಜೀವಿಗಳಿಗೂ ಜೀವಿಸುವ ಹಕ್ಕಿದೆ ಎಂಬುದನ್ನು ಯಾರೂ ಮರೆಯಬಾರದು. ಅಲ್ಲದೆ ಹಸು ಹಾಗೂ ಕರುವಿನ ಬಾಂಧವ್ಯ ಪ್ರತಿಯೊಬ್ಬ ತಾಯಿ- ಮಗುವಿಗೂ ಮಾದರಿ. ಇಂದು ದೇಸಿಯ ಗೋವಿಗಿಂತ ವಿದೇಶಿ ಗೋವೇ ನಮಗೆ ಆಪ್ತವಾಗುತ್ತಿದೆ. ಆದ್ದರಿಂದಲೇ ನಮ್ಮ ಸಂಬಂಧಗಳೂ ವಿದೇಶಿ ಸಂಬಂಧಗಳಷ್ಟೇ ತೆಳುವಾಗುತ್ತಿದೆ ಎಂದರು.
ಗೋವಿನ ಸಾವು ನಮ್ಮೆಲ್ಲರ ಸಾವು. ಹಿಂದೆ ಮಾಲೋಜಿ ಎನ್ನುವ ಅರಸುಕುಮಾರ ಗೋವಿನ ಕರುವನ್ನು ಕೊಂದಾಗ ಆತನಿಗೆ ಶಿಕ್ಷೆ ನೀಡಲು ಸ್ವತಃ ತಾಯಿ ಅಹಲ್ಯಾಬಾಯಿ ಅಡಿಯಿಟ್ಟಳು. ಇಂದು ಅಸಂಖ್ಯಾತ ಮಾಲೋಜಿಗಳು ಹಸುವಿನ ಹತ್ಯೆಯಲ್ಲಿ ತೊಡಗಿದ್ದಾರೆ ಎಂದು ಸ್ವಾಮೀಜಿ ಹೇಳಿದರು.
ಹಿನ್ನಲೆ ಗಾಯನದಲ್ಲಿ ಚಂದ್ರಶೇಖರ ಕೆದಿಲಾಯ, ಶಂಕರಿಮೂರ್ತಿ, ದೀಪಿಕಾ, ಉಮಾ, ಸತ್ಯಜಿತ್, ಪೌಷಾ ಭಟ್, ಪ್ರಥಮ, ಚೈತ್ರಿಕಾ ಸಹಕರಿಸಿದರು. ಕೊಳಲಿನಲ್ಲಿ ಗಣೇಶ್ ಕೆ.ಎಸ್., ಹಾರ್ಮೋನಿಯಂನಲ್ಲಿ ಪ್ರಜ್ಞಾ ಲೀಲಾಶುಕ ಉಪಾಧ್ಯಾಯ, ತಬಲದಲ್ಲಿ ಗಣೇಶ್ ಗುಂಡಿಕಲ್ ಮತ್ತು ವಯಲಿನ್ನಲ್ಲಿ ಸುಮನಾ ರಾಜು ಸಹಕರಿಸಿದರು. ಕಥಾ ಭಾಗದ ಕೊನೆಯಲ್ಲಿ ಕಲಾವಿದರಾದ ಮನೋರಮಾ, ವಿಷ್ಣುಪ್ರಸಾದ್ ಹಾಗೂ ತಂಡದವರಿಂದ ರೂಪಕ ನಡೆಯಿತು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ಆರ್. ರಂಗಮೂರ್ತಿ ಸ್ವಾಗತಿಸಿದರು. ಡಾ.ಗಜಾನನ ಶರ್ಮ ಹಾಗೂ ನ್ಯಾಯವಾದಿ ಮಹೇಶ್ ಕಜೆ ಪ್ರಸ್ತಾವಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ರವೀಂದ್ರ ಪಿ. ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

