ಕುಕ್ಕೆಯತ್ತ ಆರೋಗ್ಯ ಇಲಾಖೆ ನಿರ್ಲಕ್ಷ್ಯ
ಬಾಲಕೃಷ್ಣ ಭೀಮಗುಳಿ
ಸುಬ್ರಹ್ಮಣ್ಯ: ರಾಜ್ಯದಲ್ಲೇ ಶ್ರೀಮಂತ ಕ್ಷೇತ್ರವೆನಿಸಿದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಾರ್ಯಾಚರಿಸುತಿದ್ದ ಆರೋಗ್ಯ ಇಲಾಖೆಯ ಆರೋಗ್ಯ ಕವಚ 108 ಆಂಬುಲೆನ್ಸ್ ಒಂದು ತಿಂಗಳಿನಿಂದ ಕಣ್ಮರೆಯಾಗಿದೆ. ಇಲ್ಲಿ ಕಾರ್ಯಾಚರಿಸುತಿದ್ದ 108 ಆಂಬುಲೆನ್ಸ್ ವಾಹನ ಗ್ಯಾರೇಜು ಸೇರಿದ್ದು, ಕ್ಷೇತ್ರ ಹಾಗೂ ಸುತ್ತಲ ಜನತೆಗೆ ತುರ್ತು ಸೇವೆಗೆ ಲಭ್ಯವಿಲ್ಲದೆ ಆರೋಗ್ಯ ಇಲಾಖೆ ನಿರ್ಲಕ್ಷ್ಯ ತಾಳಿರುವುದು ಕಂಡುಬಂದಿದೆ.
ಸುಬ್ರಹ್ಮಣ್ಯ ಕೇಂದ್ರವಾಗಿದ್ದು, ಸುಬ್ರಹ್ಮಣ್ಯದ ಜನತೆ ಮತ್ತು ಸುತ್ತಮುತ್ತಲಿನ ಜನತೆಗೆ ಸೇವೆ ಒದಗಿಸುತಿದ್ದ 108 ಆಂಬುಲೆನ್ಸ್ ವಾಹನ ಕೆಲವು ದಿನಗಳ ಹಿಂದೆ ಪುತ್ತೂರು ಸಮೀಪ ಅಪಘಾತಕ್ಕೆ ಒಳಗಾಗಿತ್ತು. ನಂತರ ಸೇವೆ ಸ್ಥಗಿತಗೊಳಿಸಿದ ಆಂಬುಲೆನ್ಸ್ ತಿಂಗಳು ಕಳೆದರೂ ಪ್ರತ್ಯಕ್ಷವಾಗಿಲ್ಲ.
ಎರಡು ದಿನದ ಹಿಂದೆ ಕುಲ್ಕುಂದ ಸಮೀಪ ನಡೆದ ಭೀಕರ ಅಪಘಾತ ಸಂದರ್ಭ ವಿದ್ಯಾರ್ಥಿಗಳಿಬ್ಬರು ಸೂಕ್ತ ಆಂಬುಲೆನ್ಸ್ ಲಭಿಸದೆ ಅರ್ಧ ತಾಸು ಕಾಲ ರಸ್ತೆಯಲ್ಲೇ ಜೀವನ್ಮರಣ ಸ್ಥಿತಿಯಲ್ಲಿದ್ದು, ಆಸ್ಪತ್ರೆಗೆ ಸಾಗಿಸುವಲ್ಲಿ ವಿಳಂಬವಾಗಿ ದಾರಿ ಮಧ್ಯೆ ಅಸುನೀಗಿದ್ದರು.
ಇಲಾಖೆ ನಿರ್ಲಕ್ಷ್ಯ: ನಾಗರಾಧನೆಗೆ ಹೆಸರುವಾಸಿಯಾಗಿರುವ ಕುಕ್ಕೆ ಸುಬ್ರಹ್ಮಣ್ಯ ನಾಗಾಲೋಟದ ಬೆಳವಣಿಗೆ ಕಾಣುತ್ತಿದೆ. ನಿತ್ಯ ಸಾವಿರಾರು ಮಂದಿ ಭೇಟಿ ನೀಡುತಿದ್ದಾರೆ. ಲಕ್ಷ ಲಕ್ಷ ಯಾತ್ರಿಕರು ಖಾಸಗಿ, ಸರ್ಕಾರಿ ವಾಹನಗಳಲ್ಲಿ ಕ್ಷೇತ್ರಕ್ಕೆ ಭೇಟಿ ನೀಡುತಿದ್ದಾರೆ.
ವಿವಿಧ ಕಡೆಯ ದೂರದ ಊರುಗಳಿಂದ ಗುಂಡ್ಯದಿಂದ-ಸುಬ್ರಹ್ಮಣ್ಯ, ಕಡಬ-ಸುಬ್ರಹ್ಮಣ್ಯ ಮತ್ತು ಸುಳ್ಯ-ಸುಬ್ರಹ್ಮಣ್ಯ ಮಾರ್ಗವಾಗಿ ಹಾದು ಬರುವ ವಾಹನಗಳು ದಾರಿ ಮಧ್ಯೆ ಅಪಘಾತಕ್ಕೆ ಒಳಗಾಗುತ್ತಿವೆ. ತೀವ್ರ ತಿರುವುಗಳಿಂದ ಕೂಡಿದ ಈ ರಸ್ತೆಗಳಲ್ಲಿ ನಿಯಂತ್ರಣ ತಪ್ಪಿ ಅವಘಡಗಳು ಸಂಭವಿಸಿದ ವೇಳೆ ಪ್ರಾಣ ಉಳಿಸಿಕೊಳ್ಳಲೆಂದು ತುರ್ತು ಸೇವೆಗೆಂದು 108ಕ್ಕೆ ಕರೆ ಮಾಡಿದರೆ, ಸೇವೆ ದೊರಕುತ್ತಿಲ್ಲ.
ಸುಬ್ರಹ್ಮಣ್ಯ ಕೇಂದ್ರ ಬಿಟ್ಟರೆ ಸುಳ್ಯ ಮತ್ತು ಕಡಬದಲ್ಲಿ 108 ಸೇವೆ ಇದ್ದು ಅಲ್ಲಿಂದ ಈ ಸೇವೆಗೆ ಕರೆ ಮಾಡಿ ಘಟನಾ ಸ್ಥಳಕ್ಕೆ ತಲುಪುವ ಹೊತ್ತಿಗೆ ಪರಿಸ್ಥಿತಿ ಕೈಮೀರಿರುತ್ತದೆ. ಖಾಸಗಿ ವಾಹನದವರು ತುರ್ತು ಸಂದರ್ಭ ಸೇವೆಗೆ ಬರಲು ಒಪ್ಪವುದಿಲ್ಲ.
ಸುತ್ತಲ ನಾಗರಿಕರಿಗೂ ಇದು ಅನಿವಾರ್ಯ: ಸುಬ್ರಹ್ಮಣ್ಯ ಕೇಂದ್ರದಲ್ಲಿನ ಈ 108 ಸೇವೆಯ ಪ್ರಯೋಜನವನ್ನು ದೂರದ ಕಲ್ಮಕಾರು, ಹರಿಹರ, ಬಾಳುಗೋಡು, ಐನಕಿದು,ಪಂಜ, ಏನೆಕಲ್ಲು ಗುತ್ತಿಗಾರು ಸುತ್ತಲಿನ ಜನ ಸುಬ್ರಹ್ಮಣ್ಯದ 108 ಆಂಬುಲೆನ್ಸ್ನ್ನೇ ಅವಲಂಬಿಸಿದ್ದರು. ಈ ಭಾಗದ ಹದಗೆಟ್ಟ ಸಂಪರ್ಕ ರಸ್ತೆಗಳಲ್ಲಿ ಖಾಸಗಿಯವರು ತುರ್ತು ಸಹಾಯಕ್ಕೆ ಬರಲು ಹಿಂದೇಟು ಹಾಕುತ್ತಾರೆ. ಈ ಹಿನ್ನೆಲೆಯಲ್ಲಿ ತಕ್ಷಣ ಆಂಬುಲೆನ್ಸ್ ದುರಸ್ತಿ ಮಾಡಿಸಿ ಸೇವೆಗೆ ಸಜ್ಜುಗೊಳಿಸಿದರೆ, ಯಾತ್ರಿಕರಿಗೆ, ಕ್ಷೇತ್ರದ, ಆಸುಪಾಸಿನ ಊರುಗಳ ಜನರ ತುರ್ತು ಸೇವೆಗೆ ಅನುಕೂಲವಾಗುತ್ತದೆ.
ಇತ್ತೀಚೆಗೆ ಸುಬ್ರಹ್ಮಣ್ಯ ಸಮೀಪ ಸಹಪಾಠಿಗಳಿಬ್ಬರು ಬೈಕ್ ಅವಘಡಕ್ಕೆ ಈಡಾಗಿದ್ದ ಸಂದರ್ಭ ತುರ್ತು ಸೇವೆಗೆಂದು 108 ಸೇವೆಗೆ ಕರೆಮಾಡಿದ್ದೆ. ಹತ್ತಿರದ ಸುಬ್ರಹ್ಮಣ್ಯದಲ್ಲಿ ಆಂಬುಲೆನ್ಸ್ ಸೇವೆ ಇಲ್ಲದೆ ದೂರದ ಕಡಬದಿಂದ ಬರುವ ಹೊತ್ತಿಗೆ ವಿಳಂಬವಾಗಿತ್ತು. 20 ನಿಮಿಷಗಳ ಕಾಲ ಗಾಯಾಳುಗಳು ಜೀವನ್ಮರಣ ಸ್ಥಿತಿಯಲ್ಲಿ ಅವಘಡ ಜಾಗದಲ್ಲಿ ಉಳಿದರು. ಖಾಸಗಿಯವರನ್ನು ಕಾಡಿ ಬೇಡಿ ಇಬ್ಬರನ್ನು ಆಸ್ಪತ್ರೆಗೆ ಸಾಗಿಸಿದ್ದರೂ ದಾರಿ ಮಧ್ಯೆ ಸಾವನ್ನಪ್ಪಿದರು.
-ಧೀರಜ್, ಅಂತಿಮ ಬಿ.ಕಾಂ., ಕೆ.ಎಸ್.ಎಸ್.ಕಾಲೇಜು ಸುಬ್ರಹ್ಮಣ್ಯ.
ಕುಕ್ಕೆ ಜನನಿಬಿಡ ಸ್ಥಳ. ಇಲ್ಲಿ ಆಗಾಗ್ಗೆ ಯಾತ್ರಿಗಳು, ಭಕ್ತರು, ಜನಸಾಮಾನ್ಯರು ಅನಾರೋಗ್ಯ, ಅವಘಡಗಳಿಗೆ ಒಳಗಾಗುತ್ತಿರುತ್ತಾರೆ. ಹಾಗಾಗಿ ಇಲ್ಲಿಗೆ ತಕ್ಷಣವೇ 108 ಅಂಬುಲೆನ್ಸ್ ಸೇವೆ ಒದಗಿಸಬೇಕು.
-ಕೆ.ಸುಬ್ರಹ್ಮಣ್ಯ, ವ್ಯಾಪರಸ್ಥರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

