ಬಂಟ್ವಾಳ: 'ಗ್ರಾಮದೆಡೆಗೆ ಬಿಜೆಪಿ ನಡಿಗೆ' ಆರಂಭ
ಬಂಟ್ವಾಳ: ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಪಕ್ಷದ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಸಾರಥ್ಯದ 13 ದಿನಗಳ 'ಗ್ರಾಮದೆಡೆಗೆ ಬಿಜೆಪಿ ನಡಿಗೆ'ಗೆ ಪೊಳಲಿಯ ರಾಜರಾಜೇಶ್ವರಿ ದೇವಾಲಯ ಸನ್ನಿಧಿಯಲ್ಲಿ ಮಂಗಳವಾರ ಸಂಜೆ ಚಾಲನೆ ದೊರೆತಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ್ಸಿಂಹ ನಾಯಕ್ ಅವರು ರಾಜೇಶ್ ನಾಯ್ಕ್ಗೆ ಪಕ್ಷದ ಧ್ವಜ ನೀಡುವ ಮೂಲಕ 'ಗ್ರಾಮದೆಡೆಗೆ ಬಿಜೆಪಿ ನಡಿಗೆ'ಗೆ ಚಾಲನೆ ನೀಡಿದರು.
ಬಳಿಕ ನಡೆದ ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಸರ್ದಾರ್ ವಲ್ಲಭಭಾಯಿ ಪಟೇಲ್ರಂತಹ ಹಲವಾರು ಮಹಾನ್ ನಾಯಕರನ್ನು ಮರೆಯುತ್ತಿರುವ ಕಾಂಗ್ರೆಸ್ ನಾಯಕರು ಕೇವಲ ಗಾಂಧಿ ಕುಟುಂಬದವರನ್ನು ಮಾತ್ರ ಓಲೈಸುವ ಪ್ರಯತ್ನ ನಡೆಸುತ್ತಿದೆ ಎಂದು ಆಪಾದಿಸಿದರು.
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸಂಪೂರ್ಣ ವಿಫಲಗೊಂಡಿದ್ದು, ಈ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಡಿಕೆಶಿ ಹಾಗೂ ರೋಷನ್ ಬೇಗ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಭ್ರಷ್ಟಾಚಾರಕ್ಕೆ ನೇರ ಬೆಂಬಲ ನೀಡಿದ್ದಾರೆ ಎಂದು ಕಿಡಿಕಾರಿದರು.
ಗೂಂಡಾ ರಾಜ್ಯಭಾರ: ಕಾಂಗ್ರೆಸ್ ಗೂಂಡಾ ರಾಜ್ಯಭಾರದಲ್ಲಿ ತೊಡಗಿದ್ದು, ದ.ಕ. ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಆತಂಕಕಾರಿಯಾದ ಘಟನೆಗಳು ನಡೆಯುತ್ತಿದ್ದು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಟೀಕಿಸಿದರು.
ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪ್ಸಿಂಹ ನಾಯಕ್ ಮಾತನಾಡಿ, ಮನೆಮನೆಗೆ ತೆರಳಿ ಸರ್ಕಾರದ ವೈಫಲ್ಯವನ್ನು ಮನದಟ್ಟು ಮಾಡುವುದರೊಂದಿಗೆ ಈ ದೇಶದ ಪುನರ್ ನಿರ್ಮಾಣದ ಕಳಕಳಿಯನ್ನು ಜನರಿಗೆ ತಿಳಿಸುವ ಪ್ರಯತ್ನ ಪಾದಯಾತ್ರೆಯ ಮೂಲಕ ನಡೆಯಲಿದೆ ಎಂದರು. ಪಾದಯಾತ್ರೆಯ ರೂವಾರಿ ರಾಜೇಶ್ ನಾಯ್ಕ್ ಉಳೇಪಾಡಿಗುತ್ತು ಪ್ರಸ್ತಾವಿಕವಾಗಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯರಾದ ಗಣೇಶ್ ಕಾರ್ಣಿಕ್, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕರಾದ ಯೋಗೀಶ್ ಭಟ್, ಪದ್ಮನಾಭ ಕೊಟ್ಟಾರಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಭಟ್, ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ಜಿ.ಆನಂದ, ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ, ದೇವಪ್ಪ ಪೂಜಾರಿ, ಹಿಂ.ವ. ಆಯೋಗದ ಸದಸ್ಯ ತುಂಗಪ್ಪ ಬಂಗೇರಾ, ಯುವಮೋರ್ಚಾ ಕಾರ್ಯದರ್ಶಿ ವಿಕಾಸ್ ಪುತ್ತೂರು, ಎಪಿಎಂಸಿ ಅಧ್ಯಕ್ಷ ನೇಮಿರಾಜ ರೈ, ದಿನೇಶ್ ಭಂಡಾರಿ, ಜಗದೀಶ ಅಧಿಕಾರಿ, ಜಿ.ಪಂ. ಸದಸ್ಯೆ ನಳಿನಿ, ತಾ.ಪಂ. ಉಪಾಧ್ಯಕ್ಷ ಆನಂದ ಶಂಭೂರು ಇದ್ದರು.
ಶ್ರೀ ರಾಜರಾಜೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಇಲ್ಲಿಂದ ಆರಂಭಗೊಂಡ ಮೊದಲ ದಿನದ ಪಾದಯಾತ್ರೆ ಸುಮಾರು 9 ಕಿ.ಮೀ. ದೂರ ಕ್ರಮಿಸಿ ಬಡಗಬೆಳ್ಳೂರು ಗ್ರಾಮದ ಕೊಳ್ಳತ್ತಮಜಲು ಕಂಬಳ ಗದ್ದೆಯಲ್ಲಿ ಕಾರ್ಯಕರ್ತರ ಸಭೆಯೊಂದಿಗೆ ಸಮಾಪನಗೊಂಡಿತು. ಕಾರ್ಯಕ್ರಮ ಸಂಚಾಲಕ ದೇವದಾಸ ಶೆಟ್ಟಿ ಸ್ವಾಗತಿಸಿ, ವಂದಿಸಿದರು.
ಪಟೇಲ್ ವಿಗ್ರಹಕ್ಕೆ ಲೋಹ ಸಂಗ್ರಹ ಅಭಿಯಾನಕ್ಕೆ ಚಾಲನೆ
ಗುಜಾರಾತ್ನ ನರ್ಮದಾ ನದಿ ತೀರದಲ್ಲಿ ನಿರ್ಮಾಣಗೊಳ್ಳಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 182 ಅಡಿ ಎತ್ತರದ ಲೋಹದ ಬೃಹತ್ ವಿಗ್ರಹಕ್ಕೆ ದ.ಕ. ಜಿಲ್ಲೆಯಿಂದ ಲೋಹ ಸಂಗ್ರಹ ಅಭಿಯಾನಕ್ಕೆ ಇದೇ ವೇಳೆ ಚಾಲನೆ ನೀಡಲಾಯಿತು. ಪೊಳಲಿಯ ಪ್ರಗತಿಪರ ಕೃಷಿಕ ವಾಸುದೇವ ಭಟ್ ಅವರು ಕೃಷಿ ಕಾರ್ಯಕ್ಕೆ ಬಳಸಿದ ನೇಗಿಲನ್ನು ದ.ಕ. ಜಿಲ್ಲಾ ಲೋಹ ಸಂಗ್ರಹ ಅಭಿಯಾನದ ಸಂಚಾಲಕ ಡಾ.ಭರತ್ ಶೆಟ್ಟಿ ಮತ್ತು ಸಂಸದ ನಳಿನ್ ಕುಮಾರ್ ಅವರಿಗೆ ಹಸ್ತಾಂತರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

