ಗುತ್ತಿಗೆ ನೌಕರರ ಮಾಸಿಕ ಆದಾಯ ಶೂನ್ಯ!
ಮಂಗಳೂರು: ಹಳ್ಳಿ ಪ್ರದೇಶದಲ್ಲಿ ಪ್ರತಿ ಮನೆಗೆ ಭೇಟಿ ನೀಡಬೇಕಾದರೆ ದಿನಕ್ಕೆ ಪೆಟ್ರೋಲ್ಗೆ ರು. 100, ಊಟ, ತಿಂಡಿಗೆ ಬೇರೆ ಖರ್ಚು ಸೇರಿ ಒಟ್ಟು ದಿನಕ್ಕೆ ರು. 200 ಬೇಕು. ಆದರೆ ಮೆಸ್ಕಾಂ (ಮಂಗಳೂರು ವಿದ್ಯುತ್ ಸರಬರಾಜು ಕಂಪನಿ) ಮಾಸಿಕ ನೀಡುವ ಗೌರವಧನ ಕೇವಲ ರು. 5,250. ಖರ್ಚು ಲೆಕ್ಕಹಾಕಿದರೆ ಗುತ್ತಿಗೆ ನೌಕರನಿಗೆ ತಿಂಗಳ ಕೊನೆಗೆ ಕೈ ಖಾಲಿ!
ಇದು ಮಾಸಿಕ ಗೌರವಧನವಿದ್ದರೂ ಶೂನ್ಯ ಸಂಪಾದಿಸುವ ಮೆಸ್ಕಾಂ ಗುತ್ತಿಗೆ ನೌಕರರ ಬವಣೆ.
ಗುತ್ತಿಗೆದಾರರ ತಾಳಕ್ಕೆ, ಮೆಸ್ಕಾಂ ಅಧಿಕಾರಿಗಳ ಮೇಳಕ್ಕೆ ಕುಣಿಯದಿದ್ದರೆ ಇವರಿಗೆ ಸರಿಯಾಗಿ ಕಾಸು ಸಿಗದು. ಸಿಕ್ಕಿದರೂ ಅದು ಸರಿಯಾಗಿ ದಕ್ಕದಂತೆ ಮಾಡುವ ಗುತ್ತಿಗೆದಾರರೂ ಇದ್ದಾರೆ. ಒಟ್ಟಿನಲ್ಲಿ ಶೋಷಣೆಯ ಬದುಕು ಇವರದು.
ಮೆಸ್ಕಾಂ ವ್ಯಾಪ್ತಿಗೆ ದ.ಕ, ಉಡುಪಿ, ಚಿಕ್ಕಮಗಳೂರು ಹಾಗೂ ಭಾಗಶಃ ಶಿವಮೊಗ್ಗ ಜಿಲ್ಲೆ ಒಳಗೊಳ್ಳುತ್ತದೆ. ಈ ನಾಲ್ಕು ಜಿಲ್ಲೆಗಳಲ್ಲಿ 4,500ಕ್ಕೂ ಅಧಿಕ ಮಂದಿ ಗುತ್ತಿಗೆ ನೌಕರರಿದ್ದಾರೆ. ಇದರಲ್ಲಿ ಮೀಟರ್ ರೀಡರ್, ಕಂಪ್ಯೂಟರ್ ಆಪರೇಟರ್, ಟ್ರೀ ಕಟ್ಟರ್/ಲೈನ್ಮ್ಯಾನ್, ಬಿಲ್ ಕಲೆಕ್ಟರ್, ಅಟೆಂಡರ್ ಸೇರಿದ್ದಾರೆ. ಇವರೆಲ್ಲರಿಗೆ ಒಬ್ಬರೇ ಗುತ್ತಿಗೆದಾರರಲ್ಲ, ಬೇರೆ ಬೇರೆ ಗುತ್ತಿಗೆದಾರರಿದ್ದಾರೆ, ಗುತ್ತಿಗೆ ಅವಧಿ ಎರಡು ವರ್ಷ.
ಗೋಳು ತಪ್ಪಿದ್ದಲ್ಲ: 'ನಮಗೆ ತಿಂಗಳ ವೇತನ ಎಂದು ರು. 5,250 ಕೊಡುತ್ತಾರೆ. ಪ್ರಯಾಣ ಭತ್ಯೆ ಎಂದು ಪ್ರತ್ಯೇಕ ಕೊಡುವುದಿಲ್ಲ. ವೇತನ ಮೊತ್ತವನ್ನೇ ತಲಾ ರು. 2,500 ಎಂದು ಪ್ರತ್ಯೇಕಿಸಿ, ವೇತನ ಮತ್ತು ಭವಿಷ್ಯ ನಿಧಿ ಎಂದು ಲೆಕ್ಕ ಕೊಡುತ್ತಾರೆ. ಮೆಸ್ಕಾಂ ವ್ಯಾಪ್ತಿಯ ಸುಳ್ಯ ಮತ್ತು ಕುಂದಾಪುರ ಹೊರತುಪಡಿಸಿ ಬೇರೆ ಎಲ್ಲ ವಿಭಾಗಗಳಲ್ಲಿ ಮೀಟರ್ ರೀಡರ್ ನೌಕರರ ಗುತ್ತಿಗೆದಾರರ ಅವಧಿ ಅಕ್ಟೋಬರ್ಗೆ ಮುಗಿದಿದೆ. ಅದನ್ನು ನವೀಕರಿಸಿಲ್ಲ, ಅಥವಾ ಬೇರೆಯವರಿಗೆ ಗುತ್ತಿಗೆ ನೀಡಿಲ್ಲ. ಯಾವುದೋ ಏಜೆನ್ಸಿಗೆ ತಾತ್ಕಾಲಿಕ ಗುತ್ತಿಗೆ ನೀಡಿದ್ದಾರೆ. ಹಳೆ ಗುತ್ತಿಗೆದಾರರಲ್ಲಿ ಭವಿಷ್ಯನಿಧಿ ಮೊತ್ತದ ಬಗ್ಗೆ ಕೇಳಿದರೆ, ನಮ್ಗೆ ಗೊತ್ತಿಲ್ಲ' ಎನ್ನುತ್ತಿದ್ದಾರೆ ಎಂಬ ಗೋಳು ತೋಡಿಕೊಳ್ಳುತ್ತಿದ್ದಾರೆ ಮೀಟರ್ ರೀಡರ್ ಲೋಕೇಶ್ ಹೆಬ್ಬಾರ್.
ಸುಳ್ಯದಲ್ಲಿ ಜನವರಿಗೆ ಗುತ್ತಿಗೆ ಅವಧಿ ಮುಗಿಯಲಿದೆ, ಕುಂದಾಪುರದಲ್ಲಿ ಏಪ್ರಿಲ್ವರೆಗೆ ಗುತ್ತಿಗೆ ಅವಧಿ ಇದೆ. ಉಳಿದ ಕಡೆಗಳಲ್ಲಿ ಮರು ಗುತ್ತಿಗೆಗೆ ಮೆಸ್ಕಾಂ ಮುಂದಾಗಿಲ್ಲ. ಸದ್ಯಕ್ಕೆ ಸಾಯಿ ಏಜೆನ್ಸಿ ಜತೆ ತಾತ್ಕಾಲಿಕ ಗುತ್ತಿಗೆಯಲ್ಲಿ ಹಾಲಿ ಮೊತ್ತಕ್ಕಿಂತ ರು. 5 ಜಾಸ್ತಿ ಕೊಡುತ್ತಿದೆ.
'ಮಾಸಿಕ ವೇತನವನ್ನು ಆರಂಭದಲ್ಲಿ ಪ್ರತಿ ತಿಂಗಳ 10 ತಾರೀಖಿನೊಳಗೆ ನೀಡುವುದಾಗಿ ಭರವಸೆ ನೀಡುವ ಗುತ್ತಿಗೆದಾರರು ನಂತರ ತಮಗಿಷ್ಟ ಬಂದಂತೆ ವರ್ತಿಸುತ್ತಿದ್ದಾರೆ. ತಿಂಗಳ ಅಂತ್ಯದವರೆಗೂ ವೇತನ ನೀಡದೆ ಸತಾಯಿಸುತ್ತಿದ್ದಾರೆ. ಈ ಬಗ್ಗೆ ಗುತ್ತಿಗೆದಾರರನ್ನು ಪ್ರಶ್ನಿಸಿದರೆ ಮೆಸ್ಕಾಂನತ್ತ, ಮೆಸ್ಕಾಂನವರು ಗುತ್ತಿಗೆದಾರರತ್ತ ಕೈ ತೋರಿಸುತ್ತಾರೆ. ನಮ್ಮನ್ನು ದುಡಿಸಿ ಸಕಾಲದಲ್ಲಿ ವೇತನ ನೀಡದಿದ್ದರೆ ಹೇಗೆ' ಎಂದು ಪ್ರಶ್ನಿಸುತ್ತಾರೆ ಇನ್ನೋರ್ವ ಮೀಟರ್ ರೀಡರ್ ಉದಯ ಕುಮಾರ್.
ಸುಳ್ಯದಲ್ಲಿ 15 ಮಂದಿ ಮೀಟರ್ ರೀಡರ್ಗಳಿಗೆ 2 ತಿಂಗಳಿಂದ ಗುತ್ತಿಗೆದಾರರು ವೇತನ ನೀಡಿಲ್ಲ. ಪ್ರಶ್ನಿಸಿದರೆ, 'ನಿಮ್ಮ ಬಿಲ್ ಪಾಸ್ ಆಗಿಲ್ಲ' ಎಂದು ಉತ್ತರಿಸುವ ಗುತ್ತಿಗೆದಾರರು, 'ಮೀಟರ್ ರೀಡಿಂಗ್ ನಿಲ್ಲಿಸುತ್ತೇವೆ' ಎಂದು ಪ್ರತಿಭಟಿಸಲು ಮುಂದಾದರೆ, 'ಪ್ರತಿಭಟನೆ ಬೇಡ, ಕೂಡಲೇ ಕೊಡುತ್ತೇವೆ' ಎಂದು ಗಾಳಿಪಟ ಹಾರಿಸುತ್ತಾರೆ ಎನ್ನುವುದು ನೊಂದ ಮೀಟರ್ ರೀಡರ್ರ ಅಳಲು.
ಕಂಬಕ್ಕೆ ಹತ್ತಿಸಿ ಜೀವ ತೆಗೆದರು: ವಿದ್ಯುತ್ ಸಬ್ಸ್ಟೇಷನ್ಗಳಲ್ಲಿ ಸ್ಟೇಷನ್ ಕೆಲಸಗಾರ ಎಂಬ ಹುದ್ದೆ ಇದೆ. ಇವರಿಗೆ ವಿದ್ಯುತ್ ಪರಿವರ್ತಕದ ಸ್ವಿಚ್ ಆಫ್, ಆನ್ ಮಾಡುವುದು ಕೆಲಸ. ಹಗಲು ರಾತ್ರಿ ಇದೇ ಕರ್ತವ್ಯದಲ್ಲಿರುತ್ತಾರೆ.
ಸುಳ್ಯದಲ್ಲಿ ಸ್ಟೇಷನ್ ಗುತ್ತಿಗೆ ಕೆಲಸಗಾರರನ್ನು ವಿದ್ಯುತ್ ಕಂಬಕ್ಕೆ ಹತ್ತಿಸುತ್ತಾರೆ. ಎರಡು ತಿಂಗಳ ಹಿಂದೆ ದೇವಿಪ್ರಸಾದ್ ಎಂಬ ಸ್ಟೇಷನ್ ಕೆಲಸಗಾರನನ್ನು ಕಂಬಕ್ಕೆ ಹತ್ತಿಸಿ ವಿದ್ಯುತ್ ಶಾಕ್ನಿಂದ ಸಾವಿಗೀಡಾಗಿದ್ದು, ಆತನ ಕುಟುಂಬಕ್ಕೆ ಪರಿಹಾರ ಇನ್ನೂ ಮರೀಚಿಕೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

