ಗ್ಯಾಸ್ ಪೈಪ್ಲೈನ್ ಕುರಿತು ಆತಂಕ ಬೇಡ: ಮೊಯ್ಲಿ
ಮೂಡುಬಿದಿರೆ: ಮಂಗಳೂರು-ಬೆಂಗಳೂರು ಎಚ್ಪಿಸಿಎಲ್ ಪೈಪ್ಲೈನ್ ತಂತ್ರಜ್ಞಾನ ಉತ್ತಮವಾಗಿದ್ದು, ಜನರು ಈ ಬಗ್ಗೆ ಭಯಪಡಬೇಕಾಗಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಎಂ. ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಮೂಡುಬಿದಿರೆ ಸ್ವರಾಜ್ ಮೈದಾನದಲ್ಲಿ ಭಾನುವಾರ ನಡೆದ 400 ಮೀಟರ್ ಸಿಂಥೆಟಿಕ್ ಟ್ರ್ಯಾಕ್ ಮತ್ತು ರು. 6 ಕೋಟಿ ವೆಚ್ಚದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕನ್ನಡ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಈಗಾಗಲೇ ಗುಜರಾತ್, ದೆಹಲಿ, ಮುಂಬೈನಲ್ಲಿ ಶೇ.80 ಪೈಪ್ಲೈನ್ ಅಳವಡಿಸಲಾಗಿದ್ದು, ಈವರೆಗೆ ಯಾವುದೇ ಹಾನಿ ಸಂಭವಿಸಿಲ್ಲ. ಭವಿಷ್ಯದಲ್ಲಿ ಗ್ಯಾಸ್ಪೈಪ್ ಲೈನ್ ಅನಿವಾರ್ಯ. ನೈಸರ್ಗಿಕ ಗ್ಯಾಸ್ನಿಂದ ಪರಿಸರ ಹಾನಿ ತಪ್ಪುತ್ತದೆ. ಆದ್ದರಿಂದ ಈ ಕುರಿತು ಜನರಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಕೇಂದ್ರ ಪೆಟ್ರೋಲಿಯಂ ಮಂಡಳಿಯಿಂದ ಕ್ರೀಡಾ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಅವಕಾಶವಿದೆ. ಸೂಕ್ತ ಮಾಹಿತಿಯನ್ನು ಮಂಡಳಿಗೆ ಕಳುಹಿಸಿದರೆ ಈ ಬಗ್ಗೆ ಕ್ರಮ ಕೈಗೊಳ್ಳಾಗುವುದು ಎಂದು ಭರವಸೆ ನೀಡಿದರು.
ಮಂಗಳೂರು ವಿ.ವಿ.ಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ರತ್ನಾಕರವರ್ಣಿ ಸಂಶೋಧನಾ ಮತ್ತು ಅಧ್ಯಯನ ಕೇಂದ್ರ ಕಟ್ಟಡ ಕಾಮಗಾರಿಗಾಗಿ ಮೀಸಲಿಟ್ಟ ಹಣ ರು. 1 ಕೋಟಿ ಸಂಸ್ಕೃತಿ ಇಲಾಖೆಗೆ ಮಂಜೂರಾಗಿದೆ. ಈಗಾಗಲೇ ಜಾಗ ನಿಗದಿಯಾಗಿದ್ದು, ರಾಜ್ಯ ಸರ್ಕಾರ ಮಂಜೂರಾದ ಹಣವನ್ನು ಸರಿಯಾಗಿ ಬಳಸಿದಲ್ಲಿ ಮುಂದಿನ ತಿಂಗಳು ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಮೊಯ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ವಿದೇಶದಿಂದ ಸಿಂಥೆಟಿಕ್ ಪದರ ಆಮದು: ರಾಜ್ಯ ಕ್ರೀಡಾ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಮೂಡುಬಿದಿರೆ ಸಿಂಥೆಟಿಕ್ ಟ್ರ್ಯಾಕ್ ಕಾಮಗಾರಿಗೆ ರು. 4.50 ಕೋಟಿ ಮಂಜೂರಾಗಿದ್ದು, 13 ಮಿ.ಮೀ. ದಪ್ಪದ ಸಿಂಥೆಟಿಕ್ ಪದರ ಅಳವಡಿಸತ್ತಿದ್ದು, ವಿದೇಶದಿಂದ ನೇರವಾಗಿ ಕ್ರೀಡಾ ಇಲಾಖೆಗೆ ಆಮದು ಮಾಡಿಕೊಳ್ಳಲಾಗುತ್ತಿದೆ. ಇದು 1.22 ಮೀಟರ್ ಅಗಲವುಳ್ಳ 8 ಲೈನ್ಗಳನ್ನು ಒಳಗೊಂಡಿರುತ್ತದೆ , ಮುಂದಿನ ಮಳೆಗಾಲದೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
ಮೂಡುಬಿದಿರೆಯಲ್ಲಿ ಒಳಚರಂಡಿಗಾಗಿ 66 ಕೋಟಿಗಾಗಿ ಪ್ರಸ್ತಾವನೆ ಕಳುಹಿಸಿದ್ದು, ಕೇಂದ್ರದಿಂದ ಮೊಯ್ಲಿ ಅನುಮೋದನೆ ನೀಡಿದ್ದಾರೆ. ಶೀಘ್ರದಲ್ಲೇ ಆರಂಭಿಸಲಾಗುವುದು ಎಂದರು. ಸ್ವರಾಜ್ ಮೈದಾನದಲ್ಲಿ ಪೆವಿಲಿಯನ್ ನಿರ್ಮಾಣಕ್ಕಾಗಿ ಈಗಾಗಲೇ ರು. 1 ಕೋಟಿ ಮೀಸಲಿರಿಸಿದ್ದು, ಮುಂಬರುವ ಬಜೆಟ್ನಲ್ಲಿ ಮತ್ತೆ 1 ಕೋಟಿ ಮೀಸಲಿಡಲಾಗುವುದು ಎಂದರು.
600 ವಿದ್ಯಾರ್ಥಿಗಳ ದತ್ತು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮೋಹನ್ ಆಳ್ವ ಮಾತನಾಡಿ, ಕ್ರೀಡೆಯಲ್ಲಿ ಆಸಕ್ತಿಯಿರುವ ರಾಜ್ಯದ ಒಟ್ಟು 600 ಪ್ರತಿಭಾವಂತ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಲಾಗಿದೆ. ಇವರಿಗಾಗಿ 25 ಮಂದಿ ಅತ್ಯುತ್ತಮ ತರಬೇತುದಾರರು ತರಬೇತಿ ನೀಡುತ್ತಿದ್ದಾರೆ. ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ಮೂಡುಬಿದಿರೆ ವಿದ್ಯಾರ್ಥಿಗಳೇ ಹೆಚ್ಚು ಉತ್ತಮ ಸಾಧನೆ ತೋರುತ್ತಿದ್ದು, ಸಿಂಥೆಟಿಕ್ ಟ್ರ್ಯಾಕ್ ಅವರಿಗೆ ಅನುಕೂಲವಾಗಲಿದೆ ಎಂದು.
ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್ಗೆ ಸರ್ಕಾರದಿಂದ ಇದುವರೆಗೆ ಯಾವುದೇ ಅನುದಾನ ಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಅರಣ್ಯ ಸಚಿವ ರಮಾನಾಥ ರೈ, ನಗರಾಭಿವೃದ್ಧಿ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಅಮರನಾಥ ಶೆಟ್ಟಿ, ಮಂಗಳೂರು ಯುವ ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಪಾರ್ಶ್ವನಾಥ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

