ದಕ್ಷಿಣ ಕನ್ನಡ

ಜಾನುವಾರುಗಳ ಅಮಾನುಷ ಸಾಗಾಟ: ನಾಲ್ವರ ಸೆರೆ

Published On :

ಉಪ್ಪಿನಂಗಡಿ: ಬೀದಿ ಬದಿ ಮೇಯುತ್ತಿದ್ದ ಜಾನುವಾರುಗಳನ್ನು ಕದ್ದು ಕಸಾಯಿಖಾನೆಗೆ ಕಂಟೈನರ್‌ನಲ್ಲಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಉಪ್ಪಿನಂಗಡಿ ಪೊಲೀಸರು ಪತ್ತೆ ಹಚ್ಚಿ, ನಾಲ್ವರು ಆರೋಪಿಗಳ ಸಹಿತ 18 ಜಾನುವಾರುಗಳನ್ನು ವಶಪಡಿಸಿಕೊಂಡ ಘಟನೆ ಭಾನುವಾರ ಮುಂಜಾನೆ ಕೋಲ್ಪೆಯಲ್ಲಿ ನಡೆದಿದೆ.
ಗಸ್ತುನಿರತ ನೆಲ್ಯಾಡಿ ಹೊರ ಠಾಣೆ ಪೊಲೀಸರು ಕೋಲ್ಪೆ ಎಂಬಲ್ಲಿ ಜಾನುವಾರು ಸಾಗಾಟದ ಕಂಟೈನರ್ ಲಾರಿಯನ್ನು ನಿಲ್ಲಿಸಲು ಸೂಚಿಸಿದಾಗ ಚಾಲಕ ನಿಲ್ಲಿಸದೆ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾನೆ. ಕೂಡಲೇ ಪೊಲೀಸರು ಬೆನ್ನಟ್ಟಿ ಹೋಗಿದ್ದು 34ನೇ ನೆಕ್ಕಿಲಾಡಿಯ ಗಸ್ತು ಕೇಂದ್ರದಲ್ಲಿ ವಾಹನ ತಡೆದು ನಿಲ್ಲಿಸಿದರು. ಲಾರಿಯನ್ನು ಪರಿಶೀಲಿಸಿದಾಗ 18 ಹೋರಿ ಮತ್ತು ದನಗಳನ್ನು ಅಮಾನುಷವಾಗಿ ತುಂಬಿ ಸಾಗಿಸಲಾಗುತ್ತಿದ್ದದ್ದು ಕಂಡು ಬಂತು. ಚಾಲಕ ಮಹಮ್ಮದ್ ಸಲ್ಮಾನ್ ಶರೀಫ್ ಮತ್ತು ಅಸ್ಲಾಂ ಎಂ.ಎ. ಸಹಿತ 18 ಜಾನುವಾರುಗಳನ್ನು ವಶಕ್ಕೆ ತೆಗೆದುಕೊಂಡು ಪೊಲೀಸ್ ಠಾಣೆಗೆ ಕರೆತಂದರು.
ಮತ್ತಿಬ್ಬರು ಪತ್ತೆ: ಉಪ್ಪಿನಂಗಡಿ ಠಾಣೆಗೆ ಲಾರಿ ತಂದು ಜಾನುವಾರುಗಳನ್ನು ಕೆಳಗಿಳಿಸುತ್ತಿದ್ದಾಗ ಜಾನುವಾರುಗಳ ಮಧ್ಯೆ ಮತ್ತಿಬ್ಬರು ಆರೋಪಿಗಳು ಅಡಗಿಕೊಂಡಿದ್ದು ಪತ್ತೆಯಾಯಿತು. ಅಮಾನುಷವಾಗಿ ತುಂಬಿಸಿದ್ದ ಜಾನುವಾರುಗಳ ಮೇಲೆ ಮಲಗಿಕೊಂಡಿದ್ದ ನಫೀಸಾ ಅಹಮ್ಮದ್ ಮತ್ತು ಸಯ್ಯದ್ ಖಲೀಂ ಎಂಬಿಬ್ಬರನ್ನು ಪೊಲೀಸರು ಬಂಧಿಸಿದರು.
ಹಾಸನ, ಮೈಸೂರು ಮೂಲದವರು: ಹಾಸನದಿಂದ ಕದ್ದ ದನಗಳನ್ನು ಮಂಗಳೂರಿನ ಕಸಾಯಿಖಾನೆಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗಲಾಗುತ್ತಿತ್ತು. ರಸ್ತೆ ಬದಿಯಲ್ಲಿ ಮೇಯುವ ದನಗಳನ್ನು ಕೈಕಾಲು ಕಟ್ಟಿ ಕಂಟೈನರ್‌ನಲ್ಲಿ ತುಂಬಿಸಿಕೊಂಡು ಬರುತ್ತಿದ್ದುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಬಂಧಿತರ ಪೈಕಿ ಅಸ್ಲಾಂ ಎಂ.ಎ. ಹಾಸನ ನಿವಾಸಿಯಾಗಿದ್ದು, ಉಳಿದ ಮೂವರು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ನಿವಾಸಿಗರು. ಈ ರೀತಿಯ ಅಕ್ರಮ ದಂಧೆಯಲ್ಲಿ ಹಾಸನ ಬಾಬು ಆಲಿಯಾಸ್ ಮಹಮ್ಮದ್ ಫೀರ್, ಸಾಗಾಟಕ್ಕೆ ಬಳಸಿದ ವಾಹನದ ಮಾಲೀಕ ಮೈಸೂರಿನ ರಾಜಿಕ್ ಹಾಗೂ ದಂಧೆಯ ಪ್ರಧಾನ ಸೂತ್ರಧಾರ ಉಪ್ಪಿನಂಗಡಿಯ ಅಬ್ದುಲ್ ಖಾದರ್ ತಲೆಮರೆಸಿಕೊಂಡಿದ್ದು ಬಂಧನಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ಕಾರ್ಯಾಚರಣೆಯಲ್ಲಿ ಉಪ್ಪಿನಂಗಡಿ ಎಸ್‌ಐ ಶಿವಕುಮಾರ್ ಮತ್ತು ಸಿಬ್ಬಂದಿ ಮನೋಹರ್, ಸಚಿನ್, ಶ್ರೀಧರ್ ರೈ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.