ಸುಳ್ಯ: ಮುಗಿಯದ ಟಿಪ್ಪು ವೃತ್ತ ವಿವಾದ
ಸುಳ್ಯ: ನಾವೂರಿನಲ್ಲಿ ನಿರ್ಮಿಸಲಾದ ಅನಧಿಕೃತ ಟಿಪ್ಪು ವೃತ್ತ ತೆರವುಗೊಳಿಸಿದ ಬಳಿಕ ಅಧಿಕಾರಿಗಳು ಮಾತು ಕೊಟ್ಟಂತೆ ಉಳಿದ ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸದೆ ಏಕಪಕ್ಷೀಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ, ಸ್ಥಳದಲ್ಲಿ ವೃತ್ತ ಪುನರ್ ಸ್ಥಾಪಿಸಬೇಕು ಎಂದು ಆಗ್ರಹಿಸಿ ನಾಗರಿಕ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ಬೆಳಗ್ಗೆ ಮೆರವಣಿಗೆ ಮೂಲಕ ಸ್ಥಳಕ್ಕೆ ಬಂದ ಕಾರ್ಯಕರ್ತರು ವೃತ್ತ ತೆರವುಗೊಳಿಸಿದ ಜಾಗದಲ್ಲಿ ಧರಣಿ ನಿರತರಾದರು.
ಈ ಸಂದರ್ಭ ಮಾತನಾಡಿದ ಅಬ್ದುಲ್ ಕಲಾಂ, ಉಮ್ಮರ್ ಕೆ.ಎಸ್. ಹಾಗೂ ಸತ್ತಾರ್ ಸಂಗಂ, ನಾವು ಇದುವರೆಗೂ ಪೊಲೀಸರಿಗೆ ನೀಡಿದ ಭರವಸೆಯಂತೆ ಶಾಂತಿಯುತವಾಗಿಯೇ ನಡೆದುಕೊಂಡಿದ್ದೇವೆ. ಆದರೆ ಕೋಮುಗಲಭೆ ಎಬ್ಬಿಸಲು ಸಂಚು ರೂಪಿಸುತ್ತಿರುವ ಕೆಲವರು ಈ ಕುರಿತಂತೆ ಕಾರ್ಯಪ್ರವೃತ್ತರಾಗುತ್ತಿದ್ದಾರೆ. ಟಿಪ್ಪು ವೃತ್ತ ನಿರ್ಮಿಸಲು ನಮಗೆ ಯಾರ ಅನುಮತಿಯ ಅಗತ್ಯವೂ ಇಲ್ಲ. ಎಲ್ಲಿಯೂ ಟಿಪ್ಪು ವೃತ್ತ ನಿರ್ಮಿಸಲು ಬಿಡುವುದಿಲ್ಲ ಎಂದು ಕೆಲವರು ಹೇಳಿದ್ದಾರೆ. ಆದರೆ ನಾವು ಸವಾಲು ಹಾಕುತ್ತೇವೆ, ಮುಂದೆ ಪ್ರತಿ ವಾರ್ಡ್ನಲ್ಲಿ ಟಿಪ್ಪು ವೃತ್ತ ನಿರ್ಮಿಸುತ್ತೇವೆ. ಈ ರಸ್ತೆಗೆ ಟಿಪ್ಪು ರಸ್ತೆ ಎಂದೇ ಹೆಸರಿಡುತ್ತೇವೆ ಎಂದು ಸವಾಲು ಹಾಕಿದರು.
ಪ್ರತಿಭಟನೆ ವಿಚಾರ ತಿಳಿದಿದ್ದ ತಹಸೀಲ್ದಾರ್ ಡಾ. ಔದ್ರಾಮ, ಪ್ರೊಬೆಶನರಿ ಎ.ಸಿ. ರೂಪಾ, ನ.ಪಂ. ಮುಖ್ಯಾಧಿಕಾರಿ ರೋಹಿತಾಶ್ವ ಸ್ಥಳಕ್ಕೆ ಬಂದಿದ್ದರು. ಡಿವೈಎಸ್ಪಿ ಎಚ್.ಡಿ.ಮೆಂಡೋನ್ಸಾ, ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಸ್.ಸತೀಶ್, ಎಸ್.ಐ.ಗಳಾದ ರವಿ ಬಿ.ಎಸ್., ರಕ್ಷಿತ್ ಗೌಡ, ಎಂ.ಎನ್.ರಾವ್ ನೇತೃತ್ವದಲ್ಲಿ ನೂರಾರು ಪೊಲೀಸರು ಬಂದೋಬಸ್ತ್ ನಿರತರಾಗಿದ್ದರು. ಸ್ಥಳದಲ್ಲಿ ಉದ್ವಿಗ್ನತೆ ನೆಲೆಸಿತು.
ವೃತ್ತ ನಿರ್ಮಾಣ ಘೋಷಣೆ: ಸುಮಾರು ಒಂದು ಗಂಟೆ ಘೋಷಣೆಗಳನ್ನು ಕೂಗಿದ ಬಳಿಕ ಮುಖಂಡರು, ಅಧಿಕಾರಿಗಳು ಮಾತುಕತೆಗೆ ಬಾರದಿರುವುದರಿಂದ ಇನ್ನು 10 ನಿಮಿಷದೊಳಗೆ ಟಿಪ್ಪು ವೃತ್ತ ನಿರ್ಮಿಸುವುದಾಗಿ ಘೋಷಿಸಿದರು.
ಅಷ್ಟರಲ್ಲಿ ಬಳಿ ಬಂದ ತಹಸೀಲ್ದಾರ್ ಡಾ. ಔದ್ರಾಮ ಶಾಂತಿ ಕಾಪಾಡಲು ವಿನಂತಿಸಿ ಪ್ರತಿಭಟನೆ ಮುಗಿಸುವಂತೆ ಕೋರಿದರು.
ಇತರ ಅನಧಿಕೃತ ವೃತ್ತಗಳನ್ನು ತೆಗೆಯಲು 15 ದಿನಗಳ ಕಾಲಾವಕಾಶ ನೀಡುತ್ತೇವೆ. ಇತರ ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಬೇಕು. ಅದಾಗದಿದ್ದರೆ ಇದೇ ಸ್ಥಳದಲ್ಲಿ ಮತ್ತೆ ಟಿಪ್ಪು ವೃತ್ತ ಸ್ಥಾಪಿಸಲು ಅನುಮತಿ ನೀಡಬೇಕು. ಇಲ್ಲದಿದ್ದರೆ 15 ದಿನಗಳ ಬಳಿಕ ಇದೇ ಸ್ಥಳದಲ್ಲಿ ಟಪ್ಪು ವೃತ್ತ ನಿರ್ಮಿಸುವುದಾಗಿ ಎಚ್ಚರಿಸಿ ಮುಖಂಡರು ಪ್ರತಿಭಟನೆ ಕೊನೆಗೊಳಿಸಿದರು.
ವೇದಿಕೆ ಮುಖಂಡರಾದ ಅಬ್ದುಲ್ ಮಜೀದ್, ರಫೀಕ್ ಪಡು, ಮಹಮ್ಮದ್ ಸವಾದ್, ಮುಸ್ತಫ ದರ್ಜೆ ನೇತೃತ್ವ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

