ಅಂಗವಿಕಲರ ಸಲಕರಣೆಗೆ ಅರ್ಹರು 350 ಮಂದಿ
ಮಂಗಳೂರು: ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಶುಕ್ರವಾರ ಅಂಗವಿಕಲರಿಗೆ ಸಲಕರಣೆ ವಿತರಣೆ ತಪಾಸಣಾ ಶಿಬಿರಕ್ಕೆ ಸಂಜೆವರೆಗೆ 774 ಮಂದಿ ಹಾಜರಾಗಿದ್ದು, 350 ಮಂದಿ ಸಲಕರಣೆಗೆ ಅರ್ಹತೆ ಪಡೆದಿದ್ದಾರೆ ಎಂದು ಪಂಡಿತ್ ದೀನದಯಾಳ್ ದೈಹಿಕ ವಿಕಲಚೇತನರ ರಾಷ್ಟ್ರೀಯ ಸಂಘಟನೆ ಸಿಕಂದರಾಬಾದ್‌ನ ಸಂಯೋಜನಾಧಿಕಾರಿ ಡಾ.ಜಿ.ಪಾಂಡ್ಯನ್ ಹೇಳಿದ್ದಾರೆ.
ವೆನ್ಲಾಕ್ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಪಾಸಣೆ ಶಿಬಿರ ರಾತ್ರಿವರೆಗೆ ನಡೆಯಲಿದ್ದು, 62 ಮಂದಿ ವಾಕ್‌ಶ್ರವಣ ತೊಂದರೆ ಇರುವವರನ್ನು ಗುರುತಿಸಲಾಗಿದೆ. ಉಳಿದಂತೆ ಫಲಾನುಭವಿಗಳ ಅಂತಿಮ ಪಟ್ಟಿ ಸಿದ್ಧವಾಗುತ್ತಿದೆ. ಇಷ್ಟು ಮಂದಿಗೆ ಸಲಕರಣೆ ವಿತರಿಸಲು ರು. 20ರಿಂದ ರು. 25 ಲಕ್ಷ ಬೇಕಾಗುತ್ತದೆ. ಉಡುಪಿಯಲ್ಲಿ ಗುರುವಾರ ಶಿಬಿರ ನಡೆದಿದ್ದು, ಎರಡೂ ಜಿಲ್ಲೆಗೆ ಇನ್ನೆರಡು ತಿಂಗಳಲ್ಲಿ ಸಲಕರಣೆ ವಿತರಿಸಲಾಗುವುದು ಎಂದು ಹೇಳಿದರು.
ಕಳೆದ 15 ವರ್ಷದಿಂದ ಈ ಸಂಸ್ಥೆ ಕೇಂದ್ರ ಸರ್ಕಾರ ನೆರವಿನಲ್ಲಿ ದೇಶಾದ್ಯಂತ ಶಿಬಿರ ನಡೆಸುತ್ತಿದೆ. ರಾಜ್ಯದಲ್ಲಿ ಬೆಂಗಳೂರು, ಮೈಸೂರು, ಮಂಡ್ಯ, ತುಮಕೂರು, ಬೆಂಗಳೂರು ಗ್ರಾಮಾಂತರ, ಹಾಸನ, ಚಿತ್ರದುರ್ಗ, ಶಿರಾ, ಉಡುಪಿ, ಮಂಗಳೂರುಗಳಲ್ಲಿ ಶಿಬಿರ ನಡೆಸಲಾಗಿದೆ. ಇನ್ನು ಶಿವಮೊಗ್ಗ, ಬೀದರ್‌ಗಳಲ್ಲಿ ಶಿಬಿರ ಏರ್ಪಡಿಸಲಾಗುವುದು ಎಂದರು.
ತಪಾಸಣೆಯಲ್ಲಿ ಸಲಕರಣೆಗೆ ಆಯ್ಕೆಯಾದ ಅಂಗವಿಕಲ ಫಲಾನುಭವಿಗಳ ಪಟ್ಟಿಯನ್ನು ಕೂಡಲೇ ಸಿದ್ಧಪಡಿಸಿ ಕಂಪ್ಯೂಟರ್‌ನಲ್ಲಿ ದಾಖಲಿಸಲಾಗುವುದು. ಒಂದೇ ದಿನ 500ಕ್ಕೂ ಅಧಿಕ ಮಂದಿಗೆ ಆದಾಯ ದೃಢಪತ್ರ ಸ್ಥಳದಲ್ಲೇ ನೀಡಲಾಗಿದೆ. 150 ಮಂದಿಗೆ ಸ್ಥಳದಲ್ಲೇ ಭಾವಚಿತ್ರ ತೆಗೆಸುವ ವ್ಯವಸ್ಥೆ ಮಾಡಲಾಗಿದೆ. ಫಲಾನುಭವಿಗಳಿಗೆ ವೈದ್ಯಕೀಯ ನೆರವನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ನೀಡಲಿದೆ ಎಂದರು.
ಫಲಾನುಭವಿಗಳಿಗೆ ಸಲಕರಣೆಗಳನ್ನು ಜಿಲ್ಲಾ ಕೇಂದ್ರದಲ್ಲೇ ನೀಡಲಾಗುವುದು. ಉಪಕರಣ ನೀಡುವಾಗ ತಾಂತ್ರಿಕ ಸಿಬ್ಬಂದಿಗಳು ಬೇಕಾಗುತ್ತದೆ. ಅವರು ಪ್ರತಿ ಗ್ರಾಮಕ್ಕೆ ಬರಲು ಸಾಧ್ಯವಿಲ್ಲ. ಹಾಗಾಗಿ ಜಿಲ್ಲಾ ಕೇಂದ್ರದಲ್ಲೇ ಸಲಕರಣೆ ವಿತರಣೆ ಕಾರ್ಯಕ್ರಮ ಹಾಕಿಕೊಳ್ಳಬೇಕಾಗುತ್ತದೆ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಿವ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಗಟ್ರೂಡ ವೇಗಸ್, ವೆನ್ಲಾಕ್ ಆಸ್ಪತ್ರೆ ವೈದ್ಯಾಧಿಕಾರಿ ಡಾ.ರಾಜೇಶ್ವರಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

