'ಎತ್ತಿನಹೊಳೆ' ವಿರುದ್ಧ ಮಾನವ ಸರಪಳಿ
ಮಂಗಳೂರು: ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನಿಗದಿಯಾಗಿದ್ದ ಶುಕ್ರವಾರ ಸಹ್ಯಾದ್ರಿ ಸಂರಕ್ಷಣಾ ಸಂಚಯ ಆಶ್ರಯದಲ್ಲಿ ಮಂಗಳೂರಿನಲ್ಲಿ ಕರಾಳದಿನ ಆಚರಿಸಿ, ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.
ಸುಮಾರು 17ಕ್ಕೂ ಅಧಿಕ ಸಂಘಟನೆಗಳು ಎತ್ತಿನಹೊಳೆ ಯೋಜನೆ ಜಾರಿ ವಿರುದ್ಧ ಪುರಭವನ ಎದುರು ಮಾನವ ಸರಪಳಿ ನಿರ್ಮಿಸಿದರು. ತೋಳಿಗೆ ಕಪ್ಪು ಪಟ್ಟಿ ಧರಿಸಿ ಒಂದು ಗಂಟೆ ಕಾಲ ಮಾನವ ಸರಪಳಿ ನಿರ್ಮಿಸಿದರು. ಯಾವುದೇ ಕಾರಣಕ್ಕೂ ಯೋಜನೆ ಕಾರ್ಯಗತಗೊಳಿಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆ ಮುಂದಿನ ಭಾಗವಾಗಿ ಫೆ.24ರಂದು ಉಳ್ಳಾಲದಲ್ಲಿ ನದಿ ನೀರಿಗಿಳಿದು ಪ್ರತಿಭಟನೆ ನಡೆಸುವುದಾಗಿ ಸಂಚಯ ಸಂಚಾಲಕ ದಿನೇಶ್ ಹೊಳ್ಳ ತಿಳಿಸಿದ್ದಾರೆ.
ನೀರಿಗಾಗಿ ಚಳುವಳಿ: ಈ ಸಂದರ್ಭ ಮಾತನಾಡಿದ ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಬರಪೀಡಿತ ಜಿಲ್ಲೆಗಳಿಗೆ ನೀರು ಹರಿಸಲು ಯೋಜನೆಯ ಹೆಸರನ್ನು ಬದಲಾಯಿಸಿ ಜನರು ದಿಕ್ಕು ತಪ್ಪಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಮೊದಲು ನೇತ್ರಾವತಿ ತಿರುವು, ನಂತರ ಎತ್ತಿನಹೊಳೆ, ಈಗ ಪ್ರವಾಹ ನೀರನ್ನು ತಿರುಗಿಸುವುದು ಎನ್ನುತ್ತಿದ್ದಾರೆ. ನೀರಿನ ಸ್ವಾತಂತ್ರ್ಯಕ್ಕಾಗಿ ಉಗ್ರ ಹೋರಾಟ ನಡೆಸುವುದಾಗಿ ಹೇಳಿದ ಅವರು, ಈ ವಿಚಾರವನ್ನು ಕೋರ್ಟ್ನಲ್ಲಿ ಪ್ರಶ್ನಿಸಲಿದ್ದೇವೆ. ರಾಜಕೀಯ ಲಾಭಕ್ಕೆ ಮುಂದಾಗಿರುವ ರಾಜಕಾರಣಿಗಳಿಗೆ ಚುನಾವಣೆಯಲ್ಲಿ ಜನರೇ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಚುನಾವಣಾ ಗಿಮಿಕ್: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಉದ್ದೇಶಗಳು ಎಗ್ಗಿಲ್ಲದ ನಡೆಯುತ್ತಿದೆ. ಇದರ ಭಾಗವಾಗಿ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ಮಾಡಲು ಹೊರಟಿದ್ದಾರೆ. ಈ ಬಗ್ಗೆ ಜಿಲ್ಲಾದ್ಯಂತ ಪ್ರತಿಭಟನೆ ನಡೆಯುತ್ತಿದ್ದರೂ ಸಚಿವ ವೀರಪ್ಪ ಮೊಯ್ಲಿ ಏಕಪಕ್ಷೀಯವಾಗಿ ತೀರ್ಮಾನ ಕೈಗೊಳ್ಳಲು ಮುಂದಾಗಿರುವುದು ಖಂಡನೀಯ. ರಾಜಕೀಯ ನೆಲೆ ಕೊಟ್ಟ ಜಿಲ್ಲೆಯ ಜನತೆಗೆ ಅವರು ದ್ರೋಹ ಬಗೆಯುತ್ತಿದ್ದಾರೆ ಎಂದು ದಿನೇಶ್ ಹೊಳ್ಳ ಹೇಳಿದರು.
ರಾಜ್ಯ ಹಾಗೂ ಕೇಂದ್ರದ ಪರಿಸರ ಸಚಿವರು ಜಿಲ್ಲೆಯವರೇ ಆಗಿದ್ದರೂ ಜೀವನದಿ ನೇತ್ರಾವತಿ ಉಳಿಸಲು ಅಸಮರ್ಥರಾಗಿರುವುದು ದುರಂತ. ಈ ಹೋರಾಟ ಇನ್ನಷ್ಟು ತೀವ್ರಗೊಳಿಸುವುದಾಗಿ ತಿಳಿಸಿದರು.
ಕರಾವಳಿ ಚಿತ್ರಕಲಾ ಚಾವಡಿ, ಕುದುರೆಮುಖ ವನ್ಯಜೀವಿ ಸಂಘಟನೆ, ರೋಶನಿ ನಿಲಯ ವಿದ್ಯಾರ್ಥಿಗಳು, ಆಮ್ಆದ್ಮಿ, ಜಮಾತೆ ಇಸ್ಲಾಮಿ ಹಿಂದ್, ತುಳುನಾಡ ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ಯೂತ್ ಹಾಸ್ಟೆಲ್ ಎಸೋಸಿಯೇಶನ್, ಮಲೆನಾಡು ಯೂತ್ ಎಸೋಸಿಯೇಶನ್, ಟೀಂ ಮಂಗಳೂರು, ವನ್ಯ ಚಾರಣ ಬಳಗ, ಕರಾವಳಿ ಯುವ ಸಿಂಚನಾ, ಚುಟುಕು ಸಾಹಿತ್ಯ ಪರಿಷತ್ತು, ನೇತ್ರಾವತಿ ಉಳಿಸಿ ಹೋರಾಟ ಸಮಿತಿ ಬಂಟ್ವಾಳ, ನೇತ್ರಾವತಿ ಸಂರಕ್ಷಣಾ ಸಮಿತಿ, ಕನ್ನಡ ಕಟ್ಟೆ ಮಂಗಳೂರು ಮಾನವ ಸರಪಳಿಗೆ ಕೈಜೋಡಿಸಿದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

