ಬಿಜೆಪಿ ಬಹುಮತ ಪಡೆದರೂ ಎನ್ಡಿಎ ಸರ್ಕಾರ: ನಾಯ್ಡು
ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಬಿಜೆಪಿ ಸ್ಪಷ್ಟ ಬಹುಮತ ಪಡೆದರೂ ಎನ್ಡಿಎ ಜತೆಗೂಡಿಯೇ ಸರ್ಕಾರ ರಚಿಸಲಿದೆ ಎಂದು ಬಿಜೆಪಿ ಹಿರಿಯ ನಾಯಕ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಅವರು ಶುಕ್ರವಾರ ನಗರದ ಸರ್ಕ್ಯೂಟ್ ಹೌಸ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮುಂದಿನ ಚುನಾವಣೆಯಲ್ಲಿ ದೇಶದಲ್ಲಿ ಕಾಂಗ್ರೆಸ್ ದುರಾಡಳಿತಕ್ಕೆ ಜನರೇ ಇತಿಶ್ರೀ ಹಾಕಲಿದ್ದು, ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿದೆ. ಇದಕ್ಕಾಗಿ ಐದು ಅಂಶಗಳ ಪ್ರಚಾರ ಅಭಿಯಾನ ನಡೆಸುವುದಾಗಿ ಹೇಳಿದರು.
ಅಭ್ಯರ್ಥಿ ಪಟ್ಟಿ 2ನೇ ವಾರ: ಫೆಬ್ರವರಿ ಎರಡನೇ ವಾರ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. 'ಉತ್ತಮ ಆಡಳಿತ ಮತ್ತು ದೇಶದ ವಿಕಾಸ' ಬಿಜೆಪಿ ಅಜೆಂಡಾ ಆಗಿದ್ದು, ಇದನ್ನು ಮುಂದಿಟ್ಟುಕೊಂಡು ಜನರ ಬಳಿಗೆ ತೆರಳಲಿದೆ ಎಂದರು.
ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ಕಾಂಗ್ರೆಸ್ ಅನುಷ್ಠಾನ ಮಾಡುತ್ತಿಲ್ಲ ಎಂದು ಕುಟುಕಿದ ವೆಂಕಯ್ಯ ನಾಯ್ಡು, ಮಹಿಳಾ ಮೀಸಲು ಬಿಲ್, ವಿದೇಶದ ಕಪ್ಪುಹಣ ವಾಪಸಾತಿ ಇತ್ಯಾದಿ ವಿಚಾರವನ್ನೇ ಈಗ ಮರೆತುಬಿಟ್ಟಿದ್ದಾರೆ ಎಂದು ಲೇವಡಿ ಮಾಡಿದರು.
ತುಘಲಕ್ ದರ್ಬಾರ್: ಅಡುಗೆ ಅನಿಲ ಸಿಲಿಂಡರ್ ನೀಡಿಕೆ ವಿಚಾರದಲ್ಲಿ ಕಾಂಗ್ರೆಸ್ ತುಘಲಕ್ ಧೋರಣೆ ತಳೆಯುತ್ತಿದೆ ಎಂದು ಆರೋಪಿಸಿದ ನಾಯ್ಡು, ಮೊದಲು 6, ನಂತರ 9, ಈಗ 12ಕ್ಕೆ ಸಿಲಿಂಡರ್ ಸಂಖ್ಯೆ ಹೆಚ್ಚಿಸಿರುವುದನ್ನು ಗಮನಿಸಿದರೆ ಇದರ ಹಿಂದಿರುವ ಆಡಳಿತ ಸಚಿವ ವೀರಪ್ಪ ಮೊಯ್ಲಿಯೇ ಅಥವಾ ಬೇರಾರಿದ್ದಾರೆಯೇ ಎಂದು ಪ್ರಶ್ನಿಸಿದರು. ಆಧಾರ್, ಆಹಾರಭದ್ರತೆ ಯೋಜನೆಗಳನ್ನು ಜಾರಿಗೊಳಿಸಿ ದೇಶವನ್ನು ಅಧೋಗತಿಗೆ ತಳ್ಳುತ್ತಿದೆ ಎಂದು ಕಾಂಗ್ರೆಸ್ ನೀತಿಯನ್ನು ಟೀಕಿಸಿದರು.
ರಾಹುಲ್ ಹುದ್ದೆ ಏನು?: ಈಗ ರಸ್ತೆ ಬದಿಗಳಲ್ಲಿ ರಾಹುಲ್ ಗಾಂಧಿಯ ಹೋರ್ಡಿಂಗ್ ಹಾಕುತ್ತಿದ್ದಾರೆ. ಅದರಲ್ಲಿ ರಾಹುಲ್ ಹುದ್ದೆ ಏನು ಎಂಬುದಿಲ್ಲ, ಅವರು ಕಾಂಗ್ರೆಸ್ ಅಧ್ಯಕ್ಷರೇ? ಅಥವಾ ಪ್ರಧಾನಿ ಅಭ್ಯರ್ಥಿಯೇ? ಅಧಿಕಾರಕ್ಕೆ ಬರಬೇಕೆಂದು ಕಾಂಗ್ರೆಸ್ ಈ ಕುಟಿಲ ತಂತ್ರ ಅನುಸರಿಸುತ್ತಿದೆ ಎಂದು ನುಡಿದರು.
ಬಿಎಸ್ವೈ ಶಕ್ತಿ: ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರ್ಪಡೆಯಿಂದ ಬಿಜೆಪಿಗೆ ದೊಡ್ಡ ಶಕ್ತಿ ಬಂದಿದೆ ಎಂದ ವೆಂಕಯ್ಯ ನಾಯ್ಡು, ಇಲ್ಲಿ ಗರಿಷ್ಠ ಲೋಕಸಭಾ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ.
ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ತು ಸದಸ್ಯ ಮೋನಪ್ಪ ಭಂಡಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ್ಸಿಂಹ ನಾಯಕ್, ಮಾಜಿ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ, ಮಾಜಿ ಸಚಿವ ನಾಗರಾಜ ಶೆಟ್ಟಿ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

