ಬೋವಿನಹಾಡಿ: ಬಾವಿಗೆ ಬಿದ್ದ ಚಿರತೆ
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕಾಡು ಕಡಿದು ಬರಿದು ಮಾಡಲಾಗುತ್ತಿರುವ ಪರಿಣಾಮವಾಗಿ ಕಾಡಿನ ಪ್ರಾಣಿಗಳು ನಾಡಿಗಿಳಿದು ತೊಂದರೆಗೆ ಸಿಕ್ಕಿ ಹಾಕಿಕೊಳ್ಳುತ್ತಿರುವ ಅನೇಕ ಘಟನೆಗಳು ಇತ್ತೀಚೆಗೆ ನಡೆಯುತ್ತಿದೆ. ಶನಿವಾರ ಇಲ್ಲಿನ ಮರ್ಣೆ ಗ್ರಾಮದ ಬೋವಿನಹಾಡಿ ಎಂಬಲ್ಲಿಯೂ ಇಂತಹ ಇನ್ನೊಂದು ಘಟನೆ ನಡೆಯಿತು.
ಆಹಾರಕ್ಕಾಗಿ ನಾಡಿಗಿಳಿದ ಚಿರತೆಯೊಂದು ಇಲ್ಲಿನ ಸಂತೋಷ್ ನಾಯಕ್ ಎಂಬವರ ಮನೆ ಪಕ್ಕದ ಆವರಣ ಇಲ್ಲದ ತೋಟದ ಬಾವಿಗೆ ಬಿದ್ದು ಪಡಬಾರದ ಕಷ್ಟವನ್ನು ಅನುಭವಿಸಿತು.
ಇಲ್ಲಿ ಸುತ್ತಮುತ್ತ ಒಂದು ಕಾಲದಲ್ಲಿ ದಟ್ಟವಾಗಿದ್ದ ಕಾಡು ಇಂದು ಬೋಳಾಗಿದೆ. ಆದ್ದರಿಂದ ಚಿರತೆಗೆ ಕಾಡಿನಲ್ಲಿದ್ದ ತನ್ನ ಸಹಜ ಆಹಾರ ಇಲ್ಲವಾಗಿ, ನಾಡಿನಲ್ಲಿರುವ ಸಾಕು ನಾಯಿ ಬೆಕ್ಕುಗಳನ್ನು ಅದು ಬೇಟೆಯಾಡುತ್ತಿದೆ.
ಬಹುಶಃ ಈ ಚಿರತೆ ಶುಕ್ರವಾರ ರಾತ್ರಿಯೇ ಈ ಬಾವಿಗೆ ಬಿದ್ದಿರಬೇಕು. ಆದರೆ, ಮನೆಯವರು ನೋಡಿದ್ದು ಶನಿವಾರ ಮಧ್ಯಾಹ್ನ 2 ಗಂಟೆಗೆ. ಬಾವಿಯೊಳಗೆ ಮಣ್ಣು ಕುಸಿದು ಉಂಟಾಗಿದ್ದ ಪೊಟರೆಯಂತಹ ರಚನೆಯಲ್ಲಿ, ನೀರಿನಲ್ಲಿ ಒದ್ದೆಯಾಗಿ, ಹೆದರಿ ಪಿಳಿ ಪಿಳಿ ಕಣ್ಣು ಬಿಡುತ್ತಾ ಚಿರತೆ ಕುಳಿತಿತ್ತು. ಸಾಧಾರಣ ಗಾತ್ರದ ಯುವಚಿರತೆ ಆದಾಗಿತ್ತು.
ಇಂತಹ ಸಂದರ್ಭದಲ್ಲಿ ಮಾಮೂಲಿನಂತೆ ಮಿಂಚಿನಂತೆ ಸುದ್ದಿ ಹರಡಿ ಅಕ್ಕಪಕ್ಕದ ನೂರಾರು ಮಂದಿ ಬಾವಿಯ ಬಳಿ ಜಮಾಯಿಸಿ, ಬಾವಿಯಲ್ಲಿ ಸರ್ಕಸ್ಸು ನಡೆಯುತ್ತಿದೆಯೇನೋ ಎಂಬಂತೆ ತಮಾಷೆ ನೋಡಲಾರಂಭಿಸಿದರು, ತಲೆಗೊಂದು ಮಾತನಾಡಲಾರಂಭಿಸಿದರು.
ಕೊನೆಗೆ ಯಾರೂ ಅರಣ್ಯ ಇಲಾಖೆಗೆ ಸುದ್ದಿಯನ್ನೂ ತಲುಪಿಸಿದರು. ಇಲಾಖೆಯವರು ಬರುವಷ್ಟರಲ್ಲಿ ಸಂಜೆಯಾಗಿತ್ತು. ಎಂದಿನಂತೆ ಚಿರತೆಯನ್ನು ಸುರಕ್ಷಿತವಾಗಿ ಹಿಡಿಯುವಂತಹ ಯಾವುದೇ ಸಾಧನ ಸಲಕರಣೆಯಾಗಲಿ, ತರಬೇತಿಯಾಗಲಿ ಇಲ್ಲದ ಇಲಾಖೆಯವರು, ಕೊನೆಗೆ ಊರವರ ಸಹಾಯದಿಂದ ಏಣಿಯೊಂದನ್ನು ತರಿಸಿ ಬಾವಿಗಿಳಿಸಿದರು.
ಇದನ್ನೇ ಕಾಯುತ್ತಿತ್ತೋ ಏನೋ ಎಂಬಂತೆ ಚಿರತೆ ಸರಸರನೇ ಏಣಿ ಏರಿತು. ಇನ್ನೇನೂ ಬಾವಿಯಿಂದ ಹೊರಗೆ ಜಿಗಿಯಬೇಕು ಎಂಬಂತಾಗುವಾಗ ಸುತ್ತಲಿದ್ದ ಜನರನ್ನು ನೋಡಿ ಕಂಗಲಾಗಿ ಕಾಲಿನ ಹಿಡಿತ ತಪ್ಪಿ ಬಾವಿಯೊಳಗೆ ಬಿದ್ದು ಬಿಟ್ಟಿತು, ಈ ರೀತಿ 2 ಬಾರಿ ಆಯಿತು.
3ನೇ ಬಾರಿ ಮಾತ್ರ ಏಣಿ ಏರಿ ಬಾವಿಯಿಂದ ಹೊರಗೆ ಜಿಗಿದ್ದದ್ದೇ ಒಂದೇ ಓಟಕ್ಕೆ ಪಕ್ಕದ ತೋಟಕ್ಕೆ ನುಗ್ಗಿ ಕಾಡಿನತ್ತ ಸೇರಿ ಕಣ್ಮರೆಯಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

