ದಕ್ಷಿಣ ಕನ್ನಡ

ಟೆಂಡರ್‌ದಾರ ಶಾಕ್: ಮೆಸ್ಕಾಂ ಮೀಟರ್ ರೀಡಿಂಗ್ ಅಡಚಣೆ

Published On :

ಉಪ್ಪಿನಂಗಡಿ:  ಸಂಭಾವನೆ ಹೆಚ್ಚಿಸಬೇಕೆಂಬ ಬೇಡಿಕೆಯಿಟ್ಟದ್ದಕ್ಕೆ ಕಳೆದ ಹತ್ತು, ಹನ್ನೆರಡು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಮೆಸ್ಕಾಂ ಮೀಟರ್ ರೀಡರ್‌ಗಳನ್ನು ತೆಗೆದು ಬದಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿರುವ ಬಗ್ಗೆ ಪುತ್ತೂರು ತಾಲೂಕಿನ ಮೀಟರ್ ರೀಡರ್‌ಗಳಲ್ಲಿ ಆಕ್ರೋಶ ಭುಗಿಲೆದ್ದಿದೆ. ಪರಿಣಾಮವಾಗಿ ಜುಲೈಯಿಂದ ಮೀಟರ್ ರೀಡಿಂಗ್ ಪ್ರಕ್ರಿಯೆ ಸ್ಥಗಿತಗೊಂಡಿದೆ.
ಸಮಸ್ಯೆ ಏನು?: ಮೆಸ್ಕಾಂ ಇಲಾಖೆ ಮೀಟರ್ ರೀಡಿಂಗ್‌ಗೆ ತಲಾ 2 ವರ್ಷಗಳಿಗೊಮ್ಮೆ ಟೆಂಡರ್ ಕರೆಯಲಾಗುತ್ತಿದ್ದು, ಪ್ರತಿ ಮೀಟರ್ ರೀಡಿಂಗ್ ನೆಲೆಯಲ್ಲಿ ಒಂದು ಮೊತ್ತ ನಿಗದಿ ಪಡಿಸಿ ಟೆಂಡರ್ ವಹಿಸಿಕೊಂಡಾತ ಮೀಟರ್ ರೀಡರ್‌ಗಳನ್ನು ನೇಮಕಗೊಳಿಸಿ ಅವರವರ ವ್ಯಾಪ್ತಿಗೆ ಒಂದಷ್ಟು ಪ್ರದೇಶಗಳನ್ನು ಗೊತ್ತು ಪಡಿಸುತ್ತಾರೆ. ಈವರೆಗೆ ಅವರಿಗೆ ಆರು ಸಾವಿರದಿಂದ ಏಳು ಸಾವಿರ ರು. ವರೆಗೆ ಸಂಭಾವನೆ ದೊರೆಯುತ್ತಿತ್ತು.
ಬದಲಾದ ಕಾಲಘಟ್ಟದಲ್ಲಿ ಕನಿಷ್ಠ ಮಾಸಿಕ ರು. 10 ಸಾವಿರ ಕೈಗೆ ದೊರೆಯುವಂತೆ ಸಂಭಾವನೆ ನೀಡುವಂತೆ ವ್ಯವಸ್ಥೆ ಮಾಡಿರೆಂದು ಮೆಸ್ಕಾಂ ಅಧಿಕಾರಿಗಳಿಗೆ ಮೀಟರ್ ರೀಡರ್‌ಗಳು ಅಗ್ರಹಿಸಿದ್ದರು.
ಮೆಸ್ಕಾಂ ಅಧಿಕಾರಿಗಳು ಈ ಬಾರಿಯ ಟೆಂಡರ್ ಸಮಯದಲ್ಲಿ ಪ್ರತಿ ಮೀಟರ್ ರೀಡಿಂಗ್ ದರವನ್ನು ರು. 3.25 ರಿಂದ  ರು. 6.25ಕ್ಕೆ ಏರಿಸಿತ್ತು.
ಈ ಹಿಂದೆ ಟೆಂಡರ್‌ದಾರ ತನಗೆ ಮೆಸ್ಕಾಂ ಇಲಾಖೆ ನೀಡುತ್ತಿದ್ದ ರು. 3.25 ಪೈಸೆಯಲ್ಲಿ ಮೀಟರ್ ರೀಡರ್‌ನಿಗೆ ರು. 2.75 ಪೈಸೆ ನೀಡುತ್ತಿದ್ದ. ಇದರಿಂದಾಗಿ ಮೀಟರ್ ರೀಡರ್ ಮಾಸಿಕ ಆರು ಸಾವಿರದಿಂದ ರು. 7 ಸಾವಿರವದರೆಗೆ ಆದಾಯ ಪಡೆಯುತ್ತಿದ್ದ. ಆದರೆ ಈಗಲೂ ಹತ್ತು ಸಾವಿರ ಸಂಭಾವನೆ ದೊರೆಯುವುದಿಲ್ಲ ಎನ್ನುವುದೇ ಸಮಸ್ಯೆಗೆ ಕಾರಣವಾಗಿದೆ.
ನೂತನ ಟೆಂಡರ್‌ದಾರ ತಾನು ಮೀಟರ್ ರೀಡರ್‌ಗಳ ಬೇಡಿಕೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ನಿರ್ಧಾರ ತಳೆದು, ಮುರಿತಕ್ಕೊಳಗಾಗುವ ಕಾರ್ಮಿಕರ ಭವಿಷ್ಯ ನಿಧಿಯ ಮೊತ್ತವೂ ಸೇರಿದಂತೆ ರು. 10800 ಪಾವತಿಸಲು ಒಪ್ಪಿಗೆ ನೀಡಿರುವುದಾಗಿ ತಿಳಿದು ಬಂದಿದೆ.
ಆದರೆ ಮೀಟರ್ ರೀಡರ್‌ಗಳು ಮಾತ್ರ ಭವಿಷ್ಯ ನಿಧಿಯ ಸರಿ ಸುಮಾರು 1800 ರಷ್ಟು ಮೊತ್ತ ಕಳೆದು ಒಟ್ಟು ರು. 10,000 ಕೈಗೆ ಸಿಗುವಂತೆ ಅಂದರೆ ಒಟ್ಟು ರು. 11,800 ಸಂಭಾವನೆ ಪರಿಷ್ಕರಣೆ ಮಾಡಬೇಕೆಂದು ಅಗ್ರಹಿಸಿ, ನ್ಯಾಯ ದೊರೆಯುವವರೆಗೆ ಕಾರ್ಯ ಎಸಗುವುದಿಲ್ಲ ಎಂದು ಪ್ರತಿಭಟನೆಗೆ ಇಳಿದಿದ್ದಾರೆ.
ನೂತನ ನೇಮಕ ಪ್ರಾರಂಭ:  ಇತ್ತ ಟೆಂಡರ್‌ದಾರರು ಹೊಸ ಮೀಟರ್ ರೀಡರ್ ಗಳ ನೇಮಕ ಸಂಬಂಧಿಸಿ ಪತ್ರಿಕಾ ಪ್ರಕಟಣೆ ನೀಡಿ, ನೇಮಕ ಪ್ರಾರಂಭಿಸಿದ್ದಾರೆ.
 ಕಂಗಾಲಾಗಿರುವ ಈ ಹಿಂದಿನ ಮಿಟರ್ ರೀಡರ್‌ಗಳು 'ತಾವು 24 ಮಂದಿ ಹತ್ತು ಹನ್ನೆರಡು ವರ್ಷಗಳಿಂದ ಇದನ್ನೇ ನಂಬಿ ಕರ್ತವ್ಯ ನಿರ್ವಹಿಸುತ್ತಾ ಬಂದಿರುತ್ತೇವೆ.  ಇದೀಗ ಉದ್ಯೋಗವನ್ನೇ ನಿರಾಕರಿಸಿರುವುದು ಕಳವಳಕಾರಿ ವಿದ್ಯಮಾನ ಎಂದು ಅಳಲು ತೋಡಿಕೊಂಡಿದ್ದಾರೆ.
ತಾವು ರು. 13 ಲಕ್ಷ ಠೇವಣಿ ಇರಿಸಿ ಟೆಂಡರ್ ಪಡೆದುಕೊಂಡಿರುವಾಗ ಹೂಡಿದ ಬೃಹತ್ ಬಂಡವಾಳಕ್ಕೆ ಅನುಗುಣವಾಗಿ ಲಾಭ ಬಯಸುವುದು ಅನಿವಾರ್ಯ ಎನ್ನುವುದು ಟೆಂಡರ್‌ದಾರರ ವಾದ.
ಮೀಟರ್ ರೀಡರ್‌ಗಳ ಸಮಸ್ಯೆ ಕೆಟ್ಟ ಫಲಿತಾಂಶದತ್ತ ವಾಲುವ ಮುನ್ನ ಕಾರ್ಮಿಕ ಇಲಾಖೆ ಮಧ್ಯ ಪ್ರವೇಶಿಸಿ ಈ ಸಮಸ್ಯೆ ಬಗೆಹರಿಸಲಿ ಎಂಬುದು ಪ್ರತಿಭಟನಾಕಾರರ ಆಶಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.