ದಕ್ಷಿಣ ಕನ್ನಡ

ಮಂಗಳೂರು ಜಿಲ್ಲೆ ಸಲಹೆ ಅಸಂಬದ್ಧ: ಕಲ್ಕೂರ

Published On :

ಬಂಟ್ವಾಳ: ದ.ಕ. ಜಿಲ್ಲೆಯ ಹೆಸರನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಸಲಹೆ ಅಸಂಬದ್ಧ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದ್ದಾರೆ.
ಅವರು ಭಾನುವಾರ ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ ನಡೆದ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ಪ್ರಸ್ತಾವನೆ ನೀಡಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಕೃಷಿ ಮತ್ತು ಋಷಿ ಸಂಸ್ಕೃತಿ ಉಳಿದಿದೆ. ವಿಶ್ವದ ಇಂದಿನ ಅನೇಕ ಗೊಂದಲಗಳಿಗೆ ಸಾಹಿತ್ಯದ ಸಾತ್ವಿಕತೆ ಇಲ್ಲದಿರುವುದೇ ಕಾರಣ ಎಂದು ನುಡಿದರು.
ಆ. 2, 3ರಂದು ಸಮ್ಮೇಳನ: ಆ. 2 ಮತ್ತು 3ರಂದು ದಕ್ಷಿಣ ಕನ್ನಡ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕರಿಯಂಗಳ ಗ್ರಾಮದ ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ನಡೆಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಮ್ಮೇಳನದಲ್ಲಿ ಸ್ಥಳೀಯ ಸಾಹಿತ್ಯ, ಕಲಾ ಪ್ರತಿಭೆಗಳಿಗೆ ಅವಕಾಶ ನೀಡಲು ಉದ್ದೇಶಿಸಿದ್ದು, ಸಮ್ಮೇಳನಾಧ್ಯಕ್ಷರ, ಉದ್ಘಾಟಕರ, ಅತಿಥಿಗಳ ಹೆಸರುಗಳನ್ನು ಸಂಘಟಕರಲ್ಲಿ ಸೂಚಿಸಲು ಅವಕಾಶವಿದೆ ಎಂದರು. ಸ್ವಾಗತ ಸಮಿತಿಯಲ್ಲಿ ಸ್ಥಳೀಯ ಸಾಹಿತ್ಯಾಸಕ್ತರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು. ಸಮ್ಮೇಳನದ ಯಶಸ್ವಿಗೆ ಪ್ರತಿಯೊಬ್ಬರು ಶ್ರಮಿಸಬೇಕು. ಈ ನಿಟ್ಟಿನಲ್ಲಿ ಮೊಬೈಲ್ ಎಸ್‌ಎಂಎಸ್ ಅಭಿಯಾನ ಆಯೋಜಿಸುವುದಾಗಿ ವಿವರಿಸಿದರು.
ಯುವ ಸಮ್ಮೇಳನ: ಈ ಬಾರಿ ಸಮ್ಮೇಳನವನ್ನು ಮುಖ್ಯವಾಗಿ ಯುವಜನ, ವಿದ್ಯಾರ್ಥಿಗಳನ್ನು ಕೇಂದ್ರಿಕರಿಸಲು ಉದ್ದೇಶಿಸಿದೆ ಎಂದು ತಿಳಿಸಿದರು.
ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ ನೇತೃತ್ವದಲ್ಲಿ ಸಭೆ ನಡೆಯಿತು.
ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರ ಡಾ.ಎ. ಮಂಜಯ್ಯ ಶೆಟ್ಟಿ ಅವರನ್ನು ಜಿಲ್ಲಾ ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾಗಿ ಸರ್ವಾಮತದಿಂದ ಆಯ್ಕೆ ಮಾಡಲಾಯಿತು. ಜಿ.ಪಂ. ಮಾಜಿ ಸದಸ್ಯ ಎ.ಸಿ. ಭಂಡಾರಿ, ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಕೈಯೂರು ನಾರಾಯಣ ಭಟ್, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಐತಪ್ಪ ನಾಯ್ಕ, ನಿವೃತ್ತ ಪ್ರಾಂಶುಪಾಲ ಜಿ. ಶಂಕರ ಶೆಟ್ಟಿ, ಮಂಗಳೂರು ಕಸಾಪ ಅಧ್ಯಕ್ಷೆ ವಿಜಯ ಲಕ್ಷ್ಮೀ ಬಿ. ಶೆಟ್ಟಿ, ಸಾಹಿತಿಗಳಾದ ಜಿ.ಕೆ. ಭಟ್ ಸೇರಾಜೆ, ಪುಂಡಿಕಾಯಿ ಗಣಪಯ್ಯ ಭಟ್, ಬಂಟ್ವಾಳ ತಾಲೂಕು ದೈಹಿಕ ಪರಿವೀಕ್ಷಕ ಗುರುನಾಥ ಭೀ ಬಾಗೇವಾಡಿ ಇದ್ದರು.
ಬಂಟ್ವಾಳ ಕಸಾಪ ಅಧ್ಯಕ್ಷ ಜಯಾನಂದ ಪೆರಾಜೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಡಾ. ಅಜಕ್ಕಳ ಗಿರೀಶ್ ಭಟ್ ವಂದಿಸಿದರು. ಹಿರಿಯ ಕಲಾವಿದ ಮಂಜುವಿಟ್ಲ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.