ಪೆಟ್ಟು ತಿಂದ ವಾರ್ಡರ್‌ಗೆ ಅಮಾನತು ಶಿಕ್ಷೆ!
ಜಿತೇಂದ್ರ ಕುಂದೇಶ್ವರ
ಮಂಗಳೂರು: ಜೈಲ್‌ನಲ್ಲಿ ಸಿಬ್ಬಂದಿ ತಪ್ಪು ಮಾಡದಿದ್ದರೂ ಅಮಾನತು! ಕೆಎಟಿ ತೀರ್ಪಲ್ಲಿ ನ್ಯಾಯ ಸಿಕ್ಕಿದರೂ ಒಒಡಿ ವರ್ಗಾವಣೆ ಶಿಕ್ಷೆ!
ತಾಳಕ್ಕೆ ತಕ್ಕಂತೆ ಕುಣಿದರೆ ಗಾಂಜಾ ಪೂರೈಸಿದ ಸಿಬ್ಬಂದಿಗೂ ಅದೇ ಜೈಲ್‌ನಲ್ಲಿ ಕರ್ತವ್ಯಕ್ಕೆ ಅವಕಾಶ!!
ಇದು ದಕ್ಷಿಣ ಕನ್ನಡ ಜಿಲ್ಲಾ ಕಾರಾಗೃಹದ ಕರಾಳ ಮುಖ. ಪಾತಕಿ ರಶೀದ್ ಮಲಬಾರಿ 2012ರ ಅ.10ರಂದು ರಂಝಾನ್ ಸಂಭ್ರಮದಲ್ಲಿ 340 ಕೈದಿಗಳಿಗೂ ಬಿರಿಯಾನಿ ತರಿಸಿದ್ದ. ಹಿಂದೂ ಸಂಘಟನೆ ಕೈದಿಗಳು ನಿರಾಕರಿಸಿ ಬೇರೆಡೆಯಿಂದ ಬಿರಿಯಾನಿ ತರಿಸಿದ್ದರು.
ಹಿಂದೂ ಸಂಘಟನೆ ಕೈದಿಗಳು ಊಟ ಮಾಡುತ್ತಿರುವಾಗ ಮಲಬಾರಿ ಗ್ಯಾಂಗ್ ಹಂಗಿಸಿದ ಪರಿಣಾಮ ಗಲಾಟೆ ಸ್ಫೋಟವಾಗಿತ್ತು. ಕೈದಿಗಳ ಜತೆ ಗಲಾಟೆ ತಡೆಯುವ ವೇಳೆ ವಾರ್ಡರ್ ಪುಟ್ಟಣ್ಣಾಚಾರಿಗೆ ಏಟು ಬಿದ್ದಿತ್ತು.
ಬಿರಿಯಾನಿಗೆ ಅನುಮತಿ ನೀಡಿದ್ದು ಜೈಲು ಅಧೀಕ್ಷಕ ಮತ್ತು ಜೈಲರ್, ಬಂಧಿಗಳ ಉಸ್ತುವಾರಿ ಚೀಫ್ ವಾರ್ಡರ್, ಬಿರಿಯಾನಿ ಒಳಗೆ ಬಿಟ್ಟದ್ದು ದ್ವಾರ ಪಾಲಕರು. ಆದರೆ, ಊಟ ಹಂಚಿದ ವಾರ್ಡರ್‌ಗೆ ಅಮಾನತು ಶಿಕ್ಷೆ ನೀಡಲಾಯಿತು. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ!
ಇದನ್ನು ಪ್ರಶ್ನಿಸಿ ಕೆಎಟಿಗೆ ಹೋದ ಪುಟ್ಟಣ್ಣಾಚಾರಿಗೆ ನ್ಯಾಯ ಸಿಕ್ಕಿ ತಕ್ಷಣ ಅಮಾನತು ರದ್ದುಗೊಳಿಸಿ ಆದೇಶ ಹೊರಡಿಸಿತು. ಆದರೆ ಮಡಿಕೇರಿ ಜೈಲ್‌ಗೆ ಒಒಡಿ ಮಾಡಿದ ಎಡಿಜಿಪಿ, ವಾರ್ಡರ್ ಇಲ್ಲಿದ್ದರೆ ಸಾಕ್ಷಿ ನಾಶ ಮಾಡುವ ಸಾಧ್ಯತೆ ಎಂಬ ಕಾರಣ ನೀಡಿದರು!
ಪೆಟ್ಟು ತಿಂದದ್ದು ವಾರ್ಡರ್, ಎಫ್‌ಐಆರ್ ದಾಖಲಿಸಿದ್ದು ವಾರ್ಡರ್, ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇದ್ದರೆ ಅದು ಸೂಪರಿಂಟೆಂಡೆಂಟ್, ಜೈಲರ್ ಅಥವಾ ಕೈದಿಗಳಿಗೆ ! ಆದರೆ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ವರ್ಗ ಮಾಡಿದ್ದು ವಾರ್ಡರ್‌ಗೆ !
ಮಲಬಾರಿ ವರ್ಗ ಪ್ರಭಾವ!: ಈ ಜೈಲ್‌ನಲ್ಲಿ ಹತ್ತು ಹಲವು ಗಲಾಟೆ, ದೊಂಬಿ ನಡೆದಾಗ ಕೈದಿಗಳನ್ನೇ ವರ್ಗಾಯಿಸಲಾಗಿದೆ. ಆದರೆ ಪುಟ್ಟಣ್ಣಾಚಾರಿ ಬಲಿಪಶು ಆಗಲು ಮಲಬಾರಿ ಬೆದರಿಕೆಯೂ ಕಾರಣ!
ಪುಟ್ಟಣ್ಣಾಚಾರಿಗೆ ಸಸ್ಪೆಂಡ್ ಮಾಡಿಸುತ್ತೇನೆ ಎಂದು ಮಲಬಾರಿ ಬೆದರಿಕೆ ಹಾಕಿದ್ದ. ಮಲಬಾರಿ ಬೆದರಿಕೆಗೆ ಇನ್ನಿಬ್ಬರು ಕೆಲಸ ಬಿಟ್ಟೇ ಹೋಗಿದ್ದಾರೆ. ಪಾಳಿ ಕರ್ತವ್ಯದಲ್ಲಿ ಇಲ್ಲದೇ ಇದ್ದರೂ ಜೈಲ್‌ನಲ್ಲಿ ಮೊಬೈಲ್ ಸಿಕ್ಕಿದೆ ಎಂಬ ಕಾರಣಕ್ಕೆ ಸಂಜೀವ ಶೆಟ್ಟಿ, ಬಿ. ಶಿವಕುಮಾರ್ ಅಮಾನತು ಆಗಿತ್ತು. ಇದೀಗ ಕಿರುಕುಳದಿಂದ ನೊಂದು ತಿಂಗಳ ಹಿಂದೆ ಸ್ವಯಂ ನಿವೃತ್ತಿ ಪಡೆದಿದ್ದಾರೆ.
ಕೋರ್ಟ್ ಆವರಣದಲ್ಲಿ ತನ್ನನ್ನು ಬಂಧಿಸಿದ ಡಿಸಿಐಬಿ ಇನ್‌ಸ್ಪೆಕ್ಟರ್ ವೆಂಕಟೇಶ್ ಪ್ರಸನ್ನಗೆ 'ನೋಡಿಕೊಳ್ಳುತ್ತೇನೆ' ಎಂದು ಶಿಕ್ಷೆಗೊಳಗಾದ ಮಲಬಾರಿ ಬೆದರಿಕೆ ಹಾಕಿದ್ದ, ಇನ್‌ಸ್ಪೆಕ್ಟರ್‌ಗೆ ಎತ್ತಂಗಡಿಯಾಗಿ ನಾನ್ ಎಕ್ಸಿಕ್ಯೂಟಿವ್ ಹುದ್ದೆ ನೀಡಲಾಯಿತು. ಈಗ ಮಲಬಾರಿಗೆ ಶಿಕ್ಷೆ ಘೋಷಣೆಯಾದ ಹಿನ್ನೆಲೆಯಲ್ಲಿ ಬೇರೆಡೆ ವರ್ಗ ಮಾಡಲಾಗಿದೆ.
ಬಳ್ಳಾರಿಯಲ್ಲಿ 2013 ಅ.30ರಲ್ಲಿ ಕೈದಿ ಪರಾರಿಯಾದಾಗ 5 ಜೈಲ್ ಸಿಬ್ಬಂದಿ ಅಮಾನತು ಪಡಿಸಿದ ಬಳಿಕ ಅಲ್ಲಿಯೇ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಬೆಳಗಾವಿ ಜೈಲ್‌ನಲ್ಲಿ ಯೂಸುಫ್ ಬಚ್ಚಾಖಾನ್ ಮೊಬೈಲ್ ಬಳಸಿ ಭೂಗತ ಚಟುವಟಿಕೆ ನಡೆಸಿದ್ದು ಬಯಲಾಗಿ 2013ರ ಜೂ.6ರಂದು 9 ಸಿಬ್ಬಂದಿ ಅಮಾನತಾಗಿದ್ದರು. ಮೂರು ತಿಂಗಳ ಬಳಿಕ ಅದೇ ಜೈಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಗಾಂಜಾ ಆರೋಪಿ ಕರ್ತವ್ಯ: ಯಾವುದೇ ಕೈದಿಯನ್ನು ಜೈಲ್ ಬ್ಯಾರಕ್‌ನಿಂದ ಹೊರಗೊಯ್ಯಬೇಕಾದರೆ 'ಗ್ಯಾಂಗ್ ಬುಕ್'ನಲ್ಲಿ ನಮೂದಿಸಿದ ಬಳಿಕವೇ ಹೊರಗಡೆ ಒಯ್ಯಬೇಕು. ನಿಯಮ ಉಲ್ಲಂಘಿಸಿ ಕೈದಿ ಸೀತಾರಾಮ ಶೆಟ್ಟಿಯನ್ನು ಜೈಲ್ ಹೊರಗೆ ಕಸ ಹಾಕುವ ಕೆಲಸಕ್ಕೆ ನಿಯೋಜಿಸುವ ಮೂಲಕ ಗಾಂಜಾ ನಿತ್ಯ ಜೈಲು ಒಳಗೆ ಬರುತ್ತಿತ್ತು.
ಪ್ರತಿ ಬಾರಿ ಜೈಲ್ ಹೊರಗೆ ಕಸ ಹಾಕುವ ಜಾಗದಲ್ಲಿ ಗಾಂಜಾ ಕಟ್ಟು ಬಂದು ಬಿದ್ದಿರುತ್ತದೆ. ಕಸ ಹಾಕುವ ಕೈದಿ ಅದೇ ಬುಟ್ಟಿಯಲ್ಲಿ ವಾರ್ಡರ್ ಬೆಂಗಾವಲಲ್ಲಿ ಗಾಂಜಾ ಒಳಗೆ ಒಯ್ಯುತ್ತಿದ್ದ.
ಈ ಜಾಲ ಬಯಲಾಗಿ ವಾರ್ಡರ್ ರಾಜೇಂದ್ರಪ್ಪ ವಿರುದ್ಧ ಬರ್ಕೆ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಯಿತು. ಆದರೆ ವಾರ್ಡರ್ ರಾಜೇಂದ್ರಪ್ಪ ಕರ್ತವ್ಯ ನಿಷ್ಠೆಗೆ ಮೆಚ್ಚಿ ಮಂಗಳೂರು ಜೈಲ್‌ನಲ್ಲಿ ಕರ್ತವ್ಯ ಮುಂದುವರಿಸಿದ್ದಾರೆ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

