ದಕ್ಷಿಣ ಕನ್ನಡ

ಅರಣ್ಯ ಸಚಿವರ ಜಿಲ್ಲೆಯಲ್ಲೇ 'ಅ'ರಕ್ಷಿತಾರಣ್ಯ!

Published On :

ವಿಶೇಷ ವರದಿ
ಉಪ್ಪಿನಂಗಡಿ: ಜಿಲ್ಲಾ ಉಸ್ತುವಾರಿ ಮಂತ್ರಿ, ರಾಜ್ಯ ಅರಣ್ಯ ಸಚಿವರ ತವರು ಜಿಲ್ಲೆ ದಕ್ಷಿಣ ಕನ್ನಡ ಸಿರಿಬಾಗಿಲು- ಕೊಂಬಾರು ಮೀಸಲು ರಕ್ಷಿತಾರಣ್ಯದಲ್ಲಿ ಕಾಡುಗಳ್ಳರ ದಾಂದಲೆ ಎಲ್ಲೆ ಮೀರಿ ನಡೆಯುತ್ತಿದೆ.
ಅತ್ಯಮೂಲ್ಯ ಬೀಟಿ ಮರಗಳ ನೆಲೆಯಾದ ಈ ಕಾಡಿನಲ್ಲಿ ಬೀಟಿ ಮರಗಳನ್ನು ಕತ್ತರಿಸಿ ಲಾರಿ ಮೂಲಕವೇ ಸಾಗಾಟ ಮಾಡಿದ್ದರೂ, ಅರಣ್ಯ ಇಲಾಖೆಗೆ ಪತ್ತೆ ಹಚ್ಚಲಾಗದ ಪ್ರಕರಣವಾಗಿರುವುದು ವಿಸ್ಮಯ ಮೂಡಿಸಿದೆ.
ಎಲ್ಲೆಲ್ಲಿ ಅಕ್ರಮ?: ಸುಬ್ರಹ್ಮಣ್ಯ ವಲಯ ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ಸಿರಿಬಾಗಿಲು ಗ್ರಾಮದ ಗ್ರಾಮದ ಪೆರ್ಜೆ, ಪಿಲಿಕಜೆ ಎಂಬಲ್ಲಿ ಪ್ರತ್ಯೇಕ ಜಾಗದಲ್ಲಿ 3 ಮರ ಮತ್ತು ದೇರಣೆ ಬೂತಲೆಕಟ್ಟು ಎಂಬಲ್ಲಿ ಕೊಕ್ಕೋ ಪ್ಲಾಂಟೇಷನ್ ಒಳಗಡೆ ಇದ್ದ 1 ಬೀಟಿ ಮರ ಸೇರಿದಂತೆ ಒಟ್ಟು 4 ಬೀಟಿ ಮರವನ್ನು ಕಡಿದು ಸಾಗಿಸಲಾಗಿದೆ. ಮರಗಳ್ಳರು ಅತ್ಯಾಧುನಿಕ ಮರ ಕತ್ತರಿಸುವ ಯಂತ್ರ ಬಳಸಿಯೇ ಮರ ಕತ್ತರಿಸಿದ ಕುರುಹುಗಳು ಕಂಡು ಬಂದಿವೆ. ಕಾಡಿನೊಳಗೆಯೇ ಕತ್ತರಿಸಲ್ಪಟ್ಟ ಮರಗಳನ್ನು ಸೈಜುಗಳನ್ನಾಗಿಸಿ ಲಾರಿಯಂತಹ ವಾಹನಗಳಲ್ಲಿ ಸಾಗಾಟ ಮಾಡಿರುವುದೂ ಕಂಡು ಬಂದಿದೆ.
ಕತ್ತರಿಸಲ್ಪಟ್ಟ ಮರಗಳ ಗೆಲ್ಲುಗಳು, ಅಡ್ಡಾದಿಡ್ಡಿ ತುಂಡುಗಳು, ಸಣ್ಣಪುಟ್ಟ ಟೊಂಗೆಯನ್ನು ಅಲ್ಲೇ ತುಂಡು ಮಾಡಿ ಎಸೆಯಲಾಗಿದೆ. ಕಾಡಿನೊಳಕ್ಕೆ ಲಾರಿಯ ಸಂಚಾರಕ್ಕಾಗಿ ರಸ್ತೆ ಮಾಡಲಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿ, ಅಧಿಕಾರಿಗಳಿಗೆ ತಿಳಿಯದೇ ರಕ್ಷಿತಾರಣ್ಯದಿಂದ ಮರ ಕಳವು ಸಾಧ್ಯವಾಗಿರುವುದು ಸಂಶಯ ಹುಟ್ಟಿಸಿದೆ.
ಕಾಡಿನಿಂದ 4 ಬೀಟೆ ಮರ ಕಳ್ಳತನವಾಗಿರುವ ಬಗ್ಗೆ  ಸ್ಥಳೀಯರಿಂದ ಜಿಲ್ಲಾ ಅರಣ್ಯಾಧಿಕಾರಿಗೆ ದೂರು ಅರ್ಜಿ ಹೋದ ಬಳಿಕ ಅವರ ಸೂಚನೆ ಮೇರೆಗೆ 'ಕಾಡಿನಿಂದ ಬೀಟಿ ಮರ ಕಳವು ಆಗಿದೆ' ಎಂದು ಪ್ರಕರಣ ದಾಖಲಿಸಿ ಯಾವುದೇ ತನಿಖೆ ಕೈಗೆತ್ತಿಕೊಳ್ಳದೆ ಸುಮ್ಮನಾಗಿದ್ದಾರೆ. ಅಲ್ಲದೆ ಈ ಭಾಗದ ಅರಣ್ಯ ರಕ್ಷಕನನ್ನು ಆತನ ಆಪೇಕ್ಷೆ ಮೇರೆಗೆ ಧಾರವಾಡಕ್ಕೆ ವರ್ಗಾವಣೆಗೊಳಿಸಲಾಗಿದ್ದು, ಈ ಪ್ರಕರಣದ ನಿಗೂಢತೆ ಹೆಚ್ಚಿಸಿದೆ.
ಕ್ರಿಯಾಶೀಲ ಅರಣ್ಯ ಸಚಿವರೇ ಯಾಕೆ ಹೀಗೆ: ಅರಣ್ಯ ಸಚಿವ ರಮಾನಾಥ ರೈ ತವರು ಜಿಲ್ಲೆಯಲ್ಲೇ ಇಂತಹ ಪ್ರಕರಣಗಳು ಹೆಚ್ಚಾಗಿರುವುದು ಗಮನಾರ್ಹ. ಹೀಗಾಗಿ ಇಲಾಖೆ ಅಧೀನದ ಅರಣ್ಯದೊಳಗಿನಿಂದ ಸಾರಾಸಗಟಾಗಿ ಮರಗಳ್ಳತನವಾಗುತ್ತಿರುವ ಬಗ್ಗೆ ತುರ್ತು ಕ್ರಮಕೈಗೊಳ್ಳಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.