ಸ್ಟುಡೆಂಟ್ ಪೊಲೀಸಿಂಗ್ ಆರಂಭಿಕ ಯಶಸ್ಸು
ಸುಭಾಶ್ಚಂದ್ರ ಎಸ್. ವಾಗ್ಳೆ
ಉಡುಪಿ: ಸರ್, ನಮ್ಮ ಕಾಲೇಜಿನಲ್ಲಿ ಕೆಲವು ಹುಡುಗರು ಹೊರಗಿನಿಂದ ಬೀಯರ್ ತಂದು ಕುಡಿತಾರೆ, ಅವರ ಮೇಲೆ ಕ್ರಮ ಕೈಗೊಳ್ಳಿ...
-ಸರ್, ಬಸ್ಸಿನಲ್ಲಿ ಸಿಬ್ಬಂದಿ, ಪಡ್ಡೆ ಹುಡುಗರು ಕೀಟಲೆ -ಕಮೆಂಟ್ ಮಾಡುತ್ತಾರೆ, ನಮ್ಮಂತಹ ವಿದ್ಯಾರ್ಥಿನಿಯರಿಗೆ ತೊಂದರೆ ಆಗುತ್ತಿದೆ, ಏನಾದ್ರು ಮಾಡಿ...
-ಸರ್, ನಮ್ಮ ಮನೆ ಪಕ್ಕದಲ್ಲಿ ಟೆಲಿಫೋನ್ ಟವರ್ ಇದೆ, ಅದು ಮಳೆಗಾಳಿಗೆ ಮನೆ ಮೇಲೆ ಬೀಳುತ್ತೇನೋ ಅಂತ ಹೆದರಿಕೆ ಆಗುತ್ತೆ, ಅದನ್ನು ತೆರವುಗೊಳಿಸಲು ಹೇಳಿ...
ಇವು, ಉಡುಪಿ ಜಿಲ್ಲೆಯ ಕಾರ್ಕಳ ಮತ್ತು ಉಡುಪಿ ತಾಲೂಕಿನ ಕೆಲವು ಕಾಲೇಜುಗಳ ವಿದ್ಯಾರ್ಥಿಗಳು ಪೊಲೀಸ್ ಇಲಾಖೆಗೆ ನೀಡಿರುವ ದೂರುಗಳು. ಕಳೆದ 2 ತಿಂಗಳಲ್ಲಿ ಇಂತಹ ಸುಮಾರು 20 ಲಿಖಿತ ದೂರುಗಳು ಬಂದಿವೆ. ಕೆಲವು ನೇರವಾಗಿ ಪೊಲೀಸ್ ಇಲಾಖೆ ವ್ಯಾಪ್ತಿಗೆ ಬರುವಂತಹ ದೂರುಗಳಾದರೆ ಇನ್ನು ಕೆಲವು ಬೇರೆ ಇಲಾಖೆಗಳ ವ್ಯಾಪ್ತಿಗೆ ಒಳಪಟ್ಟ ದೂರುಗಳು.
ಇಲಾಖೆ ಮುತುವರ್ಜಿ ಕಾರಣ: ಯಾಕೆ ಇದ್ದಕ್ಕಿದ್ದಂತೆ ಪೊಲೀಸ್ ಇಲಾಖೆಗೆ, ಅದರಲ್ಲೂ ಕಾಲೇಜು ವಿದ್ಯಾರ್ಥಿಗಳೇ ಇಂತಹ ತರಹೇವಾರಿ ದೂರುಗಳನ್ನು ನೀಡುತ್ತಿದ್ದಾರೆ ಎಂದರೆ, ಇದಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ಮುತುವರ್ಜಿಯೇ ಕಾರಣ.
ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಪ್ರಾಯೋಗಿಕವಾಗಿ ಜಿಲ್ಲೆಯ 2 ಎಂಜಿನಿಯರಿಂಗ್ ಕಾಲೇಜ್ ಸೇರಿದಂತೆ 9 ಕಾಲೇಜುಗಳಲ್ಲಿ-ವಿದ್ಯಾರ್ಥಿಗಳ ಸಲಹೆ-ಪೊಲೀಸರಿಗೆ ದೂರು ಪೆಟ್ಟಿಗೆಗಳನ್ನು ಅಳವಡಿಸಲಾಗಿದೆ. ರಾಜ್ಯದಲ್ಲಿಯೇ ಪ್ರಥಮವಾಗಿ ಈ ಪ್ರಯೋಗ ಉಡುಪಿಯಲ್ಲಿ ನಡೆಸಲಾಗುತ್ತಿದೆ.
ಸರ್ಕಾರಿ ಯೋಜನೆಯಲ್ಲ: ಇದು ಸರ್ಕಾರದ ಯೋಜನೆಯಲ್ಲ, ಜಿಲ್ಲಾ ಪೊಲೀಸ್ ಇಲಾಖೆಯೇ ಮುತುವರ್ಜಿಯಿಂದ ಈ ಯೋಜನೆ ಹಾಕಿಕೊಂಡಿದೆ. ಆರಂಭದಲ್ಲಿಯೇ ಉತ್ತಮ ಪ್ರತಿಕ್ರಿಯೆ ವಿದ್ಯಾರ್ಥಿಗಳಿಂದ ವ್ಯಕ್ತವಾಗಿದೆ. ನೇರವಾಗಿ ಪೊಲೀಸ್ ಇಲಾಖೆಗೆ ಹೋಗಿ ದೂರು - ಸಲಹೆ ನೀಡುವುದಕ್ಕೆ ಇವತ್ತಿಗೂ ವಿದ್ಯಾರ್ಥಿಗಳು ಹಿಂಜರಿಯುವ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಕಾರ್ಕಳದ ಯುವ ಡಿ.ವೈ.ಎಸ್ಪಿ. ಅಣ್ಣಾಮಲೈ ಆಸಕ್ತಿಯಿಂದ ಈ ಯೋಜನೆ ಆರಂಭಿಸಲಾಗಿದೆ.
ಸಾಂದರ್ಭಿಕವೂ ಹೌದು: ಆದರೆ, ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳು ಹೆಚ್ಚು ಬೆಳಕಿಗೆ ಬರುತ್ತಿರುವ ಈ ಸಂದರ್ಭದಲ್ಲಿ ಕಾಲೇಜುಗಳಲ್ಲಿ ಇಂತಹ ಪೆಟ್ಟಿಗೆಗಳು ಹೆಚ್ಚು ಅವಶ್ಯಕವೂ, ಅನಿವಾರ್ಯವೂ ಆಗಿರುವುದು ಕಾಕತಾಳೀಯವಾಗಿದೆ.
ರಾಜ್ಯದ ಬೇರೆ ಯಾವ ಜಿಲ್ಲೆಯಲ್ಲಿಯೂ ಇಂತಹ ಯೋಜನೆ ಇಲ್ಲ. ಸರ್ಕಾರವೇ ಯೋಚಿಸಿ
ಯೋಜಿಸಬೇಕಾಗಿದ್ದ ಈ ವ್ಯವಸ್ಥೆಯನ್ನು ಇನ್ನಾದರೂ ಜಾರಿಗೊಳಿಸಬೇಕಾದ ಅವಶ್ಯಕತೆ ಇದೆ.
ಕಾಲೇಜುಗಳಲ್ಲಿ ನಡೆಯುವ ಅಪರಾಧಿ ಕೃತ್ಯಗಳಿಗೆ ಬ್ರೇಕ್ ಹಾಕುವ, ಗೌಪ್ಯವೂ, ವಿಶ್ವಾಸಾರ್ಹವೂ, ಶ್ಲಾಘನಾರ್ಹವೂ ಆಗಿರುವ ಈ ಯೋಜನೆ ಆರಂಭಿಸಿರುವ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೊಂದು ಸೆಲ್ಯೂಟ್.
ಇತ್ತೀಚೆಗೆ ಬೆಳಕಿಗೆ ಬರುತ್ತಿರುವ ಮಹಿಳಾ ದೌರ್ಜನ್ಯದ ಪ್ರಕರಣಗಳಿಗೂ 2 ತಿಂಗಳ ಮೊದಲೇ ಈ ಯೋಜನೆ ಆರಂಭಿಸಲಾಗಿದೆ. ಆಗಲೂ ಮುಖ್ಯ ಉದ್ದೇಶ ಇದ್ದುದು ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಪೊಲೀಸರಿಗೆ ಅಥವಾ ಬೇರೆಯವರಿಗೆ ನೇರವಾಗಿ ಹೇಳಿಕೊಳ್ಳಲಾಗದ ಸಮಸ್ಯೆಗಳಿದ್ದಲ್ಲಿ ಅವರ ಸಹಾಯಕ್ಕಾಗಿಯೇ ಈ ಪೆಟ್ಟಿಗೆಗಳನ್ನು ಕಾಲೇಜುಗಳಲ್ಲಿ ಅಳವಡಿಸಲಾಗಿದೆ. ಪ್ರಾಯೋಗಿಕವಾಗಿ ಈ ವ್ಯವಸ್ಥೆ ಯಶಸ್ಸು ಕಾಣುತ್ತಿದೆ. ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ ಈ ವ್ಯವಸ್ಥೆ ಜಾರಿಗೊಳಿಸಿ ಅದಕ್ಕೆ ಹೆಸರು ನೀಡುವ ಯೋಚನೆ ಕೂಡ ಇದೆ.
ಟಿ ಡಾ. ಬೋರಲಿಂಗಯ್ಯ, ಉಡುಪಿ ಎಸ್ಪಿ
ಆಯಾ ಕಾಲೇಜ್ ವ್ಯಾಪ್ತಿಯಲ್ಲಿರುವ ಪೊಲೀಸ್ ಠಾಣೆಯಲ್ಲಿ ಮಾತ್ರ ಈ ಪೆಟ್ಟಿಗೆಗಳ ಕೀಲಿಕೈ ಇರುತ್ತದೆ. ಆದ್ದರಿಂದ ದೂರು, ಮಾಹಿತಿ ಗೌಪ್ಯವಾಗಿರುತ್ತದೆ. ಪೊಲೀಸರು ಆಗಾಗ್ಗೆ ಕಾಲೇಜಿಗೆ ಹೋಗಿ ಈ ದೂರಗಳನ್ನು ಸಂಗ್ರಹಿಸುತ್ತಾರೆ ಮತ್ತು ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಪೊಲೀಸ್ ಇಲಾಖೆಗೆ ನೇರವಾಗಿ ಸಂಬಂಧಿಸದ ದೂರುಗಳಲ್ಲದ ದೂರುಗಳಾದರೆ ಸಂಬಂಧಿಸಿದ ಇಲಾಖೆಗೆ ಅವುಗಳನ್ನು ಹಸ್ತಾಂತರಿಸಲಾಗುತ್ತದೆ.
ಟಿ ಅಣ್ಣಾಮಲೈ, ಕಾರ್ಕಳ ವಿಭಾಗದ ಡಿವೈಎಸ್ಪಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

