ದಕ್ಷಿಣ ಕನ್ನಡ

ಕಾಣಿಯೂರು, ಬೆಳಂದೂರು ಎರಡೂ ಕಡೆ ತರಗತಿ

Published On :

ಪುತ್ತೂರು: ಕಾಣಿಯೂರು ಕಾಲೇಜು ಸ್ಥಳಾಂತರ ವಿವಾದ 3ನೇ ದಿನವಾದ ಮಂಗಳವಾರವೂ ಮುಂದುವರಿದಿದೆ. ಮಂಗಳವಾರ ಕಾಣಿಯೂರು ಮತ್ತು ಬೆಳಂದೂರು ಈ ಎರಡೂ ಕಡೆಗಳಲಿಯೂ ತರಗತಿ ನಡೆದಿದ್ದು, 8 ವಿದ್ಯಾರ್ಥಿಗಳು ಬೆಳಂದೂರು ತರಗತಿಗೆ ಹಾಜರಾಗಿದ್ದರೆ, ಕಾಣಿಯೂರಿನಲ್ಲಿ 150 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಈ ನಡುವೆ ಕಾಣಿಯೂರಿನಲ್ಲಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕಾಲೇಜು ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿದರು.
ಸಮಸ್ಯೆಯನ್ನು ಸೌಹಾರ್ಧಯುತವಾಗಿ ಪರಿಹರಿಸಿ ಕಾಣಿಯೂರಿನಲ್ಲಿಯೇ ಕಾಲೇಜು ಮುಂದುವರಿಸಲು ಅವಕಾಶ ನೀಡದಿದ್ದಲ್ಲಿ ಜಿಲ್ಲಾ ಮಟ್ಟದಲ್ಲಿ ಕಾಲೇಜು ಬಂದ್ ಮೂಲಕ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಬಿವಿಪಿ ಎಚ್ಚರಿಸಿದೆ.
ಕಾಣಿಯೂರಿನಲ್ಲಿ ಒಟ್ಟು 3 ಉಪನ್ಯಾಸಕರು, ಒಬ್ಬ ಗ್ರಂಥಪಾಲಕ, ಒಬ್ಬ ಸಹಾಯಕ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಿಎ ಹಾಗೂ ಬಿ.ಕಾಂನ ಒಟ್ಟು 6 ತರಗತಿಗಳು ಎಂದಿನಂತೆ ನಡೆದವು.
ಬೆಳಂದೂರಿನಲ್ಲಿಯೂ ಮಾಜಿ ಜಂಟಿ ನಿರ್ದೇಶಕ ಯೋಗಾನಂದ, ಜಂಟಿ ನಿರ್ದೇಶಕ ಸಿದ್ದರಾಮು ಅವರೇ ತರಗತಿಯನ್ನು ನಡೆಸಿದರು. ಶಾಲೆಗೆ ಹೊಂದಿಕೊಂಡಿರುವ ಶೀಟ್ ಹಾಕಿರುವ ಕೊಠಡಿಯಲ್ಲಿ ತರಗತಿ ನಡೆಯಿತು.
ಕಾಣಿಯೂರು ಕಾಲೇಜು ಪ್ರಾಂಶುಪಾಲ ರಾಘವ ಎನ್.  ಮಾತಾನಾಡಿ, ಮೇಲಧಿಕಾರಿಗಳ ಒತ್ತಡ ಇರುವುದರಿಂದ 24 ಗಂಟೆಯೊಳಗೆ ಕಾಲೇಜನ್ನು ಬೆಳಂದೂರಿಗೆ ಸ್ಥಳಾಂತರಿಸುವಂತೆ ಜೂನ್ 11ಕ್ಕೆ ತನಗೆ ಆದೇಶಿಸಲಾಗಿತ್ತು. ಆದರೆ ಮೂಲಪ್ರತಿಯಲ್ಲಿ ಮೇ 28 ಎಂದು ನಮೂದಾಗಿತ್ತು. ಈ ಪತ್ರ ತುಂಬಾ ತಡವಾಗಿ ನನಗೆ ತಲುಪಿದೆ. ಜಿಲ್ಲಾಧಿಕಾರಿಗಳು ಶಾಸಕರ ಗಮನಕ್ಕೆ ತಂದು ಮುಂದಿನ ಕೆಲಸ ನಿರ್ವಹಿಸುವಂತೆ ತನಗೆ ಸೂಚಿಸಿದ್ದರು. ಅದರಂತೆ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕರ ಅನುಮತಿ ಇಲ್ಲದೆ ಸ್ಥಳಾಂತರ ಪ್ರಕ್ರಿಯೆ ನಡೆಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.
ತಾನು ನಾಪತ್ತೆಯಾಗಿದ್ದೇನೆಂದು ಜಂಟಿ ನಿರ್ದೇಶಕರು ದೂರು ನೀಡಿರುವ ಬಗ್ಗೆ ಸ್ಪಷ್ಟನೆ ನೀಡಿದ ಪ್ರಾಂಶುಪಾಲರು ಭಾನುವಾರ ರಜಾದಿನವಾದ್ದರಿಂದ ತಾನು ಊರಲ್ಲಿರಲಿಲ್ಲ. ಶನಿವಾರ ಮಧ್ಯಾಹ್ನ ಜಂಟಿ ನಿರ್ದೇಶಕರು ಕಾಲೇಜಿಗೆ ಭೇಟಿ ನೀಡಿದಾಗ ಈ ಬಗ್ಗೆ ಏನೂ ಹೇಳಿರಲಿಲ್ಲ. ಬಳಿಕವೂ ವಿಷಯವನ್ನು ತನ್ನ ಗಮನಕ್ಕೆ ತರುವ ಪ್ರಯತ್ನ ಮಾಡಿಲ್ಲ. ತಾನು ಕಾನೂನು ಉಲ್ಲಂಘಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಾನೂನು ಹೋರಾಟ: ಕಾಲೇಜು ಸಮಸ್ಯೆ ಶೀಘ್ರ ಬಗೆಹರಿಯದಿದ್ದಲ್ಲಿ ಮುಂದಿನ ದಿನದಲ್ಲಿ ಕಾನೂನು ರೀತಿಯಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು  ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ತಾಲೂಕು ಸಮಿತಿ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.