ಗ್ರಾಮೀಣರಿಗೆ ಕೀಳರಿಮೆ ಸಲ್ಲ: ಜಾವಗಲ್ ಶ್ರೀನಾಥ್
ಬೆಳ್ತಂಗಡಿ: ಹಳ್ಳಿಯಲ್ಲಿರುವವರಿಗೂ ದಿಲ್ಲಿಗೆ ಹೋಗುವ ಅವಕಾಶಗಳು ಇಂದು ಸಾಕಷ್ಟಿವೆ. ಹೀಗಾಗಿ ತಾನು ಗ್ರಾಮೀಣ ಪ್ರದೇಶದಿಂದ ಬಂದವನು ಎಂಬ ಕೀಳರಿಮೆ ಬೇಡ ಎಂದು ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಹೇಳಿದ್ದಾರೆ.
ಶನಿವಾರ ಉಜಿರೆ ಎಸ್ಡಿಎಂ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾರತದಲ್ಲೇ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೇರಲು ಅದ್ಭುತ ಅವಕಾಶಗಳಿವೆ. ನಾವು ಏನು ಸಾಧಿಸಬೇಕು ಎಂದು ಚಿಂತಿಸುತ್ತೇವೆಯೋ ಅದನ್ನೇ ಸಾಧಿಸಲು ಸಾಕಷ್ಟು ಅನುಕೂಲತೆಗಳಿವೆ. ನಮ್ಮ ಗುರಿ ನಾವೇ ನಿಶ್ಚಯಿಸಿಕೊಂಡು ಅದಕ್ಕೆ ತಕ್ಕಂತೆ ಅಧ್ಯಾಪಕರ ಮಾರ್ಗದರ್ಶನ ಪಡೆದುಕೊಳ್ಳುವ ಕಾಲ ಇದು ಎಂದರು.
ಪ್ರತಿಭಾನ್ವಿತ ಕ್ರೀಡಾ ವಿದ್ಯಾರ್ಥಿಗಳನ್ನು ಪುರಸ್ಕರಿಸಿದರಲ್ಲದೆ, ಪತ್ರಿಕೋದ್ಯಮ ವಿದ್ಯಾರ್ಥಿಗಳು ಹೊರತಂದ 'ಚಿಗುರು' ಪತ್ರಿಕೆ ಬಿಡುಗಡೆಗೊಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಜೀವನಾನುಭವಕ್ಕೆ ಅಧ್ಯಾತ್ಮ ಬೇಕಾಗಿಲ್ಲ. ಜೀವನೋತ್ಸಾಹ ಎಲ್ಲಾ ಸಾಧನೆಗಳಿಗೆ ಕಾರಣ ಎಂದರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಪ್ರಭಾಕರ್, ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್, ಮಾಧವಿ ಶ್ರೀನಾಥ್, ಪ್ರೊ. ದಿನೇಶ್ ಚೌಟ, ವಿದ್ಯಾರ್ಥಿ ಸಂಘದ ಮುಖ್ಯ ಸಂಯೋಜಕ ಪ್ರದೀಪ್ ರಾಜ್, ಉಪಮುಖ್ಯ ಸಂಯೋಜಕಿಯರಾದ ಸುಶಿತ್ ಮತ್ತು ಸುಶ್ಮಾ ಇದ್ದರು.
ಪ್ರಾಚಾರ್ಯ ಡಾ.ಬಿ. ಯಶೋವರ್ಮ ಸ್ವಾಗತಿಸಿದರು. ಪ್ರೊ.ಟಿ. ಕೃಷ್ಣಮೂರ್ತಿ ವಾರ್ಷಿಕ ವರದಿ ವಾಚಿಸಿದರು. ಪ್ರೊ. ಬಿ. ಗಣಪಯ್ಯ ವಂದಿಸಿದರು. ಡಾ.ಬಿ.ಎ. ಕುಮಾರ್ ಹೆಗ್ಡೆ ನಿರ್ವಹಿಸಿದರು.
ಗ್ರಾಮೀಣ ಪ್ರದೇಶದವ ಎಂದು ಛೇಡಿಸಿದರು,ಅದೇ ಸಾಧನೆಗೆ ಪ್ರೇರಣೆಯಾಯಿತು...
ಎಂಚ ಉಲ್ಲಾರ್- ಒಣಸ್ ಆಂಡಾ (ಹೇಗಿದ್ದೀರಾ? ಊಟ ಆಯ್ತಾ?) ಎಂದು ಅತ್ಯುತ್ಸಾಹದಿಂದ ತುಳುವಿನಲ್ಲಿ ಮಾತಿಗಾರಂಭಿಸಿದ ಟೀಂ ಇಂಡಿಯಾ ಮಾಜಿ ವೇಗಿ ಶ್ರೀನಾಥ್ ತಮ್ಮ ಕ್ರಿಕೆಟ್ ಪ್ರಯಾಣದಲ್ಲಿನ ಜೀವನಾನುಭವಗಳನ್ನು ಸಭೆಯ ಮುಂದಿಟ್ಟರು. ತಾನು ವಿದ್ಯಾರ್ಥಿಯಾಗಿದ್ದಾಗ ತನ್ನನ್ನು ಗ್ರಾಮೀಣ ಪ್ರದೇಶದವನು ಎಂದು ಛೇಡಿಸುತ್ತಿದ್ದರು. ಇದರಿಂದ ವಿಚಲಿತನಾಗದೆ ಅದು ತನ್ನನ್ನು ಇನ್ನಷ್ಟು ಸಾಧನೆಗೆ ಪ್ರೇರಣೆ ನೀಡಿತು ಎಂದರು.
1992ರಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್ನಲ್ಲಿ ಕ್ರಿಕೆಟ್ ಪಂದ್ಯದ ಸಮಯ ಬೌಲಿಂಗ್ ಮಾಡಲು ಕಪಿಲ್ ದೇವ್ ಕ್ರೀಡಾಂಗಣಕ್ಕೆ ಆಗಮಿಸಬೇಕಾಗಿತ್ತು. ಆದರೆ ಅವರು ಎಷ್ಟು ಹೊತ್ತಾದರೂ ಬರಲೇ ಇಲ್ಲ. ಕಾರಣವೇನೆಂದು ನಾನು ಡ್ರೆಸ್ಸಿಂಗ್ ರೂಂಗೆ ನೋಡಲು ಹೋದಾಗ ಅವರ ಪ್ಯಾಂಟು ಎಲ್ಲಿಯೋ ಕಳೆದುಹೋಗಿತ್ತು. ಅದನ್ನು ಹುಡುಕುತ್ತಲೇ ಇದ್ದರು. ಕೊನೆಗೆ ಸರಿಯಾಗಿ ನೋಡಿದಾಗ ಅವರ ಪ್ಯಾಂಟನ್ನು ನಾನು ಹಾಕಿಕೊಂಡಿದ್ದೆ. ಕಪಿಲ್ದೇವ್ ಉಡುಗೆಯಲ್ಲಿ ತನ್ನದೇ ಆದ ಕಲ್ಪನೆಯನ್ನಿಟ್ಟುಕೊಂಡಿದ್ದರು ಎಂದಾಗ ಸಭೆಯಲ್ಲಿ ನಗೆಗಡಲು. ಸಚಿನ್ ತೆಂಡೂಲ್ಕರ್ ಸುಮ್ಮನೆ ಕಾಲ ಕಳೆಯುವ ಜಾಯಮಾನದವರೇ ಅಲ್ಲ. ನೆಟ್ ಅಭ್ಯಾಸಕ್ಕೆ 2 ಗಂಟೆಗೆ ಬಂದರೆ 5 ಗಂಟೆಯವರೆಗೆ ಸತತ ಬೌಲಿಂಗೋ, ಬ್ಯಾಟಿಂಗೋ ಮಾಡುತ್ತಲೇ ಇರುತ್ತಾರೆ. ತುಂಬಾ ಸಾತ್ವಿಕ ಮನುಷ್ಯ. ರಾಹುಲ್ ದ್ರಾವಿಡ್ ಬದ್ಧತೆ ಆಟಗಾರ, ಅನಿಲ್ ಕುಂಬ್ಳೆ ಗಂಭೀರ ಆಟಗಾರ, ವೆಂಕಟೇಶ್ ಪ್ರಸಾದ್, ವೆಂಕಟಪತಿ ರಾಜು ಉತ್ತಮ ಸಾಧಕರಾಗಿದ್ದರು. ಅವರ ಹವ್ಯಾಸಕ್ಕೆ ನಾವು, ನಮ್ಮ ಹವ್ಯಾಸಕ್ಕೆ ಅವರು ಹೊಂದಿಕೊಂಡು ಇರಬೇಕಾಗುತ್ತದೆ.
ಭಾರತ- ಪಾಕಿಸ್ತಾನ ಮುಖಾಮುಖಿ ಸಂದರ್ಭ ನಮ್ಮಲ್ಲೂ ಜೋಶ್ ಇರುತ್ತೇ ಎಂದು ನೀವು ಭಾವಿಸಿದ್ದರೆ ಅದು ತಪ್ಪು. ನಾವು ಎಂದಿನಂತೆಯೇ ಇರುತ್ತೇವೆ. ಆದರೆ ಪ್ರೇಕ್ಷಕರಾದ ನೀವು ಬಿಡಬೇಕಲ್ಲ. ನೀವೇ ವಿಶೇಷ ವಾತಾವರಣ ಸೃಷ್ಟಿಸುತ್ತೀರಿ. ಆಟ ಆಡಿ ಸೋತು ಹೊರಗೆ ಬಂದಾಗ ಟ್ಯಾಕ್ಸಿಯವರು, ಹೋಟೆಲ್ನವರು ಬೆರಳು ತೋರಿಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

