ಕೊಡಚಾದ್ರಿ ಅತಿಕ್ರಮಣ ತಡೆಯದಿದ್ದಲ್ಲಿ ಪ್ರತಿಭಟನೆ
ಉಡುಪಿ: ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಬರುವ ಜೀವವೈವಿಧ್ಯ ಮತ್ತು ಅಪೂರ್ವ ಗಿಡಮೂಲಿಕೆಗಳಿಗೆ ಹೆಸರಾಗಿರುವ ಕೊಡಚಾದ್ರಿ ಬೆಟ್ಟದ ತಪ್ಪಲಲ್ಲಿ ನಡೆಯುತ್ತಿರುವ ಸರ್ಕಾರಿ ಭೂಮಿ ಅತಿಕ್ರಮಣ ತಡೆಯದಿದ್ದಲ್ಲಿ ವಾರದೊಳಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಕೊಡಚಾದ್ರಿ ಪರಿಸರ ಸಂರಕ್ಷಣಾ ಟ್ರಸ್ಟ್ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಬುಧವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್ನ ಅಧ್ಯಕ್ಷ ಕೆ.ಕೆ. ಸಾಬು, ಕೇರಳದ ಕೆಲವು ಮಂದಿ ಗಣಿಗಾರಿಕೆಗೆ ಸಾವಿರಾರು ಎಕ್ರೆ ಸರ್ಕಾರಿ ಭೂಮಿ ಅತಿಕ್ರಮಣ ಮಾಡಿಕೊಂಡಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಅಲ್ಲದೇ ಈ ಪ್ರತಿಭಟನೆ ನಂತರ ಕಾನೂನು ಹೋರಾಟಕ್ಕೆ ಇಳಿಯಲು ನಿರ್ಧರಿಸಲಾಗಿದ್ದು, ಈ ಸಂದರ್ಭದಲ್ಲಿ ಅಕ್ರಮ ಭೂಸ್ವಾಧೀನವನ್ನು ನೋಡಿಯೂ ಕಣ್ಣುಮುಚ್ಚಿ ಕೂತಿರುವ ಜಿಲ್ಲಾಧಿಕಾರಿ, ಅರಣ್ಯ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿ ಮತ್ತು ಈ ಅಕ್ರಮ ಭೂಮಾಫಿಯಕ್ಕೆ ರಕ್ಷಣೆ ನೀಡುತ್ತಿರುವ ಜನಪ್ರತಿನಿಧಿಗಳನ್ನು ನ್ಯಾಯಾಲಯಕ್ಕೆ ಎಳೆಯಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇಲ್ಲಿನ ಮಧೂರು ಗ್ರಾಮದಲ್ಲಿ ಭೂಮಾಲಕರಿಂದ 1949ರಲ್ಲಿ ಸಾವಿರಾರು ಎಕ್ರೆ ಭೂಮಿಯನ್ನು ಕಂಪನಿಯೊಂದರ ಹೆಸರಲ್ಲಿ ಖರೀದಿ ಮಾಡಲಾಗಿತ್ತು. 1972ರ ಭೂ ಸುಧಾರಣಾ ಮಸೂದೆಯಿಂದ ತಪ್ಪಿಸಿಕೊಳ್ಳಲು ಈ ಭೂಮಿಯನ್ನು ಎಲಕ್ಕಿ ತೋಟ ಎಂದು ಕಂಪೆನಿ ಹೇಳಿತ್ತು, ಆದರೆ ಇಲ್ಲಿ ಏಲಕ್ಕಿ ಬೆಳೆಯಲಿಲ್ಲ.
ಈ ಕಂಪನಿಯಿಂದ ಇದೀಗ ಸುಮಾರಿ 23 ಮಂದಿ ಕೇರಳದ ಶ್ರೀಮಂತರು 6641 ಎಕ್ರೆ ಭೂಮಿಯನ್ನು ಖರೀದಿಸಿದ್ದಾರೆ. ಜೊತೆಗೆ 1400 ಎಕ್ರೆ ಸರ್ಕಾರಿ ರಕ್ಷಿತಾರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಸಾಬು ಆರೋಪಿಸಿದ್ದಾರೆ.
ಈಗಾಗಲೇ ಈ ಒತ್ತುವರಿಯ ವಿಷಯವನ್ನು ಜಿಲ್ಲಾಡಳಿತ, ಅರಣ್ಯ ಇಲಾಖೆ, ಶಾಸಕರು, ಮಂತ್ರಿಗಳು, ಸರ್ಕಾರದ ಗಮನಕ್ಕೆ ತರಲಾಗಿದೆ. ಆದರೂ ಇಷ್ಟೊಂದು ದೊಡ್ಡ ಭೂಹಗರಣ ನಡೆದಿದ್ದರೂ ಅವರೆಲ್ಲರೂ ಸುಮ್ಮನಿದ್ದಾರೆ ಎಂದರೆ ಇದರಲ್ಲಿ ಕೇರಳ ಮತ್ತು ಕರ್ನಾಟಕ ರಾಜ್ಯದ ರಾಜಕಾರಣಿಗಳು ನೇರವಾಗಿ ಶಾಮೀಲಾಗಿದ್ದಾರೆ ಎಂದು ಸಾಬು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ದಸಂಸ ಜಿಲ್ಲಾ ಸಂಘಟಕ ವಾಸುದೇವ ಮದೂರು ಮತ್ತು ಟ್ರಸ್ಟಿನ ಇತರ ಕಾರ್ಯಕರ್ತರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

