ದಕ್ಷಿಣ ಕನ್ನಡ

ರಸ್ತೆ ಅಪಘಾತ: ಕಾಲೇಜಿಗೆ ಹೊರಟ ವಿದ್ಯಾರ್ಥಿ ಸಾವು

Published On :

ಸುಬ್ರಹ್ಮಣ್ಯ: ಪಿಯು ಪರೀಕ್ಷೆಯ ಪ್ರವೇಶಪತ್ರ ಪಡೆಯಲು ಕಾಲೇಜಿಗೆ ಹೊರಟ ವಿದ್ಯಾರ್ಥಿಯೋರ್ವ ಅಪಘಾತದಲ್ಲಿ ಮೃತಪಟ್ಟು, ಮತ್ತೋರ್ವ ವಿದ್ಯಾರ್ಥಿ ಗಂಭೀರ ಗಾಯಗೊಂಡ ಘಟನೆ ಸುಬ್ರಹ್ಮಣ್ಯ- ಸುಳ್ಯ ರಸ್ತೆಯ ಎಡೋಳಿ ಎಂಬಲ್ಲಿ ಬುಧವಾರ ನಡೆದಿದೆ.
 ನಾಲ್ಕೂರು ಗ್ರಾಮದ ಗೌರಿಗುಂಡಿ ಮನೆಯ ಜಾನು ನಾಯ್ಕ ಅವರ ಪುತ್ರ ವಿಶ್ವಾಸ್ ಜಿ. (17) ಮೃತರು. ಮತ್ತೋರ್ವ ವಿದ್ಯಾರ್ಥಿ ಕೌಶಿಕ್ ಎಂ. ಗಂಭೀರ ಗಾಯಗೊಂಡಿದ್ದು, ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಿಬ್ಬರು ಸುಬ್ರಹ್ಮಣ್ಯ ಪದವಿ ಪೂರ್ವ ಕಾಲೇಜಿನ ದ್ವಿತೀಯ ಕಲಾ ವಿಭಾಗದ ವಿದ್ಯಾರ್ಥಿಗಳು. ಪಿಯುಸಿ ಪರೀಕ್ಷೆಯ ಪ್ರವೇಶಪತ್ರ ಪಡೆಯಲು ವಳಲಂಬೆಯ ತನ್ನ ಮನೆಯಿಂದ ಬೈಕ್‌ನಲ್ಲಿ ಹೊರಟ ಕೌಶಿಕ್, ವಿಶ್ವಾಸ್‌ನನ್ನು ಕುಳ್ಳಿರಿಸಿ ಸುಬ್ರಹ್ಮಣ್ಯದತ್ತ ಬರುತ್ತಿದ್ದರು. ಸುಬ್ರಹ್ಮಣ್ಯ- ಸುಳ್ಯ ರಸ್ತೆಯ ಎಡೋಳಿ ತಿರುವಿನ ಬಳಿ ಪಿಕಪ್ ಜೀಪ್ ಪರಸ್ಪರ ಡಿಕ್ಕಿಯಾಯಿತು. ಪರಿಣಾಮ ಬೈಕ್ ಚಲಾಯಿಸುತ್ತಿದ್ದ ಕೌಶಿಕ್‌ನ ಎದೆ ಮತ್ತು ಕೈಗೆ ಗಾಯಗಳಾದರೆ, ಸಹಸವಾರ ವಿಶ್ವಾಸ್ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು. ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಿದ್ಯಾರ್ಥಿಯ ಅಕಾಲಿಕ ಸಾವಿನ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ಮಧ್ಯಾಹ್ನ ಮೌನಪ್ರಾರ್ಥನೆ ಮಾಡಿ ರಜೆ ಸಾರಲಾಯಿತು.
ಕಾಲೇಜಿಗೆ ಹೋಗಲು ಹಣವಿಲ್ಲ ಎಂದು ಗೇರುಬೀಜ ಸಂಗ್ರಹಿಸಿದ್ದ
ಬುಧವಾರ ಮುಂಜಾನೆ ಆರು ಗಂಟೆಗೆ ಎದ್ದ ವಿಶ್ವಾಸ್ ಮನೆಗೆ ದೂರದ ಬಾವಿಯಿಂದ ನೀರು ತಂದಿದ್ದ. ಸುಬ್ರಹ್ಮಣ್ಯದ ಕಾಲೇಜಿಗೆ ಹೋಗಲು ಹಣವಿಲ್ಲ ಎಂದಾಗ ಮನೆಯ ತೋಟಕ್ಕೆ ಹೋಗಿ ಗೇರುಬೀಜ ಕೊಯ್ದು ಎರಡು ಕೆ.ಜಿ.ಯಷ್ಟು ಸಂಗ್ರಹಿಸಿದ್ದ. ಇದೇ ವೇಳೆಗೆ ಕೌಶಿಕ್ ಬೈಕ್‌ನಲ್ಲಿ ಆಗಮಿಸಿದ್ದು, ಆತನೊಂದಿಗೆ ಸುಬ್ರಹ್ಮಣ್ಯಕ್ಕೆ ಬರುವ ವೇಳೆ ಈ ದುರ್ಘಟನೆ ಸಂಭವಿಸಿತು.
ಮಾನವೀಯತೆ ಮೆರೆದ ಚಾಲಕರು
ಅಪಘಾತವಾದ ತಕ್ಷಣ ಪಿಕಪ್ ಚಾಲಕ ಗುತ್ತಿಗಾರಿನ ರಿಜಿ ಅವರು ರಸ್ತೆಗೆ ಬಿದ್ದ ವಿದ್ಯಾರ್ಥಿಗಳನ್ನು ಬದಿಗೆ ಸರಿಸಿ, ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದರು. ಇದೇ ವೇಳೆ ಸುಬ್ರಹ್ಮಣ್ಯದಿಂದ ಕಲ್ಲಾಜೆಯತ್ತ ಹೋಗುತ್ತಿದ್ದ ರಿಕ್ಷಾ ಚಾಲಕ ಕುಲ್ಕುಂದದ ದೇವಿಪ್ರಸಾದ್ ತನ್ನ ರಿಕ್ಷಾದಲ್ಲಿ ಪಿಕಪ್ ಚಾಲಕನೊಂದಿಗೆ ಗಾಯಾಳು ಕೌಶಿಕ್‌ನನ್ನು ಸುಬ್ರಹ್ಮಣ್ಯಕ್ಕೆ ಕರೆತಂದರು. ಘಟನೆ ನಡೆದ ಸ್ಥಳದಲ್ಲಿ ವಿಶ್ವಾಸ್ ಮೃತದೇಹವನ್ನು ಪೈಲಾಜೆ ಸುಂದರ ತನ್ನ ಜೀಪ್‌ನಲ್ಲಿ ಉಳಿದ ವಾಹನ ಚಾಲಕರು ಹಾಗೂ ನಾಗರಿಕರ ಸಹಾಯದಿಂದ ಸರ್ಕಾರಿ ಆಸ್ಪತ್ರೆಗೆ ಕರೆತಂದರು.
ಪ್ರಾಣಕಂಟಕ ರಸ್ತೆ
ಯಾತ್ರಾ ಕೇಂದ್ರವಾದ ಸುಬ್ರಹ್ಮಣ್ಯ ಸಂಪರ್ಕಿಸುವ ರಸ್ತೆಗಳು ಮರುಡಾಂಬರಿಕರಣಗೊಂಡು ವಾಹನಗಳು ಶರವೇಗದಲ್ಲಿ ಸಂಚರಿಸಿ ಅಪಘಾತ ವಲಯಗಳಾಗಿ ಪರಿವರ್ತಿತವಾಗುತ್ತಿದೆ. ಸುಬ್ರಹ್ಮಣ್ಯ ಪದವಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು, ಬಳ್ಪದ ಯುವಕ ಹೀಗೆ ಕಾಲೇಜು ವಿದ್ಯಾರ್ಥಿಗಳು, ಯುವಕರೇ ಹೆಚ್ಚಾಗಿ ರಸ್ತೆ ಅಪಘಾತದಲ್ಲಿ ಬಲಿಯಾಗುತ್ತಿದ್ದಾರೆ. ಪೊಲೀಸ್ ಇಲಾಖೆಯವರು ಇನ್ನಾದರೂ ವಾಹನಗಳ ತಪಾಸಣೆ ನಡೆಸಿ, ಪರವಾನಗಿ, ಲೈಸನ್ಸ್ ಇಲ್ಲದೆ ಸಂಚರಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಅಲ್ಲಲ್ಲಿ ವೇಗತಡೆಗಳನ್ನು ನಿರ್ಮಿಸಬೇಕಿದೆ ಎಂದು  ಗ್ರಾ.ಪಂ. ಸದಸ್ಯ ಹರೀಶ್ ಇಂಜಾಡಿ ವಿನಂತಿಸಿದ್ದಾರೆ.
ಕಾಶಿಕಟ್ಟೆ ಏಕಮುಖ ರಸ್ತೆಯಾಗಲಿ: ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿಯ ನೂಚಿಲಕ್ಕೆ ತೆರಳುವ ಎಲ್ಲ ವಾಹನಗಳು ಕಾಶಿಕಟ್ಟೆ ಸರ್ಕಲ್ ಮೂಲಕ ಬಾರದೆ ಮುನ್ನುಗ್ಗುವುದರಿಂದ ವಾಹನಗಳು ಪರಸ್ಪರ ಎದುರಾಗಿ ಕಾಶಿಕಟ್ಟೆಯ ಬಳಿ ಸರಣಿ ಅಪಘಾತಗಳಾಗುತ್ತಿವೆ. ಆದ್ದರಿಂದ ಕಾಶಿಕಟ್ಟೆಯ ರಸ್ತೆಯನ್ನು ಏಕಮುಖ ರಸ್ತೆಯನ್ನಾಗಿ ಮಾಡಿ, ಕಟ್ಟುನಿಟ್ಟಿನ ಕಾನೂನು ಕ್ರಮ ತೆಗೆದುಕೊಳ್ಳುವಂತೆ ರಾಜೇಶ್ ಎನ್.ಎಸ್. ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.