ದಕ್ಷ ಅಧಿಕಾರಿಗಳಿಗೆ ದಕ್ಕಿದ್ದು ವರ್ಗಾವಣೆಯೊಂದೆ!
-ಜಿತೇಂದ್ರ ಕುಂದೇಶ್ವರ
ಮಂಗಳೂರು: ಬಂಟ್ವಾಳದಲ್ಲಿ ಅಕ್ರಮ ಮರಳುಗಾರಿಕೆಗೆ ಸಿಂಹಸ್ವಪ್ನವಾಗಿದ್ದ ಸಬ್ ಇನ್ಸ್ಪೆಕ್ಟರ್ ಕಬ್ಬಾಲ್ ರಾಜ ಎರಡೇ ತಿಂಗಳಲ್ಲಿ ವರ್ಗ. ಅಕ್ರಮ ಮರಳುಗಾರಿಕೆ ವಿರುದ್ಧ ಖುದ್ದು ದಾಳಿ ಮಾಡುತ್ತಿದ್ದ ದಿಟ್ಟ ಎಸ್ಪಿ ಶಂತನು ಸಿನ್ಹ 6 ತಿಂಗಳಲ್ಲಿ ವರ್ಗ. ಕಾನೂನೇ ಪರದೈವ ಎನ್ನುತ್ತಾ ರಾಜಕಾರಣಿಗಳನ್ನು ದೂರ ಇಡುತ್ತಿದ್ದ ಪೊಲೀಸ್ ಕಮಿಷನರ್ ಮನೀಶ್ ಕರ್ಬಿಕರ್ ವರ್ಷದೊಳಗೆ ವರ್ಗ. ಅತ್ಯಂತ ಪ್ರಾಮಾಣಿಕ ಮತ್ತು ಚಾಣಾಕ್ಷ ಐಜಿಪಿ ಎಂದೇ ಹೆಸರಾದ, ಕ್ಷಿಷ್ಟಕರ ಪ್ರಕರಣಗಳನ್ನು ಭೇದಿಸಿದ ಐಜಿಪಿಯನ್ನು ಇಲ್ಲಿ ಮುಂದುವರಿಸುವ ಅವಕಾಶ ಇದ್ದರೂ ವರ್ಗಾವಣೆ.
ಇದು ಚುನಾವಣೆ ಘೋಷಣೆ ಮುಂಚಿನ ವರ್ಗಾವಣೆಗಳು. ಪ್ರಾಮಾಣಿಕ ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವಧಿಪೂರ್ವ ವರ್ಗಾವಣೆಗೆ ಕಾರಣವಾಗಿರುವುದು ರಾಜಕೀಯ. ಪೊಲೀಸರು ಹಿಂದೆಲ್ಲ ಮರಳುಗಾರಿಕೆ ಮೇಲೆ ದಾಳಿ ನಡೆಸುವಾಗ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಆರ್ಟಿಒಗೆ ಮಾಹಿತಿ ನೀಡಬೇಕಿತ್ತು. ಆದರೆ ಕಳೆದ 2 ತಿಂಗಳ ಹಿಂದೆ ಸ್ವಯಂ ಪ್ರೇರಿತವಾಗಿ ದಾಳಿ ನಡೆಸುವ ಅವಕಾಶ ಪೊಲೀಸರಿಗೆ ಲಭಿಸಿದೆ. ಅಕ್ರಮ ಮರಳುಗಾರಿಕೆ ತಡೆಯಲು ಖುದ್ದು ಎಸ್ಪಿಯೇ ಮುಂದಾಗಿದ್ದರು. ಬಂಟ್ವಾಳ ಸಬ್ಇನ್ಸ್ಪೆಕ್ಟರ್ ನಡೆಸುತ್ತಿದ್ದ ದಾಳಿಗೆ ಎಸ್ಪಿ ಬೆನ್ನೆಲುಬಾಗಿ ನಿಂತಿದ್ದರು. ಸಬ್ ಇನ್ಸ್ಪೆಕ್ಟರ್ ಕಬ್ಬಾಲ್ ರಾಜ 12 ಲಾರಿ ಮುಟ್ಟುಗೋಲು ಹಾಕಿದ್ದರು. ಖುದ್ದು ಎಸ್ಪಿಯೇ ದಾಳಿ ನಡೆಸಿ 5 ಅಕ್ರಮ ಮರಳುಗಾರಿಕೆ ಲಾರಿ ಜಫ್ತಿ ಮಾಡಿದ್ದರು.
ಒಂದೇ ಕಾರಣವಲ್ಲ: ಕೇವಲ ವರ್ಗಾವಣೆಗೆ ಇದೊಂದೇ ಕಾರಣವಲ್ಲ. ಕಾಂಗ್ರೆಸ್ ಮುಖಂಡ ಹಸೈನಾರ್ ಬಂಟ್ವಾಳದಲ್ಲಿ ಟೋಲ್ಗೇಟ್ ಬಳಿ ಫೀಸ್ ನೀಡದೆ ಸಂಚರಿಸುತ್ತಿದ್ದರು. ಕೇಳಿದಾಗ ಚೂರಿ ತೋರಿಸಿ 2 ಸಾವಿರ ಕಿತ್ತುಕೊಂಡು ಬಂದಿದ್ದರು. ಈ ಪ್ರಕರಣದಲ್ಲಿ ಎಸ್ಐ ಅವರನ್ನು ಬಂಧಿಸಲು ಮುಂದಾಗಿದ್ದರು. ಹಸೈನಾರ್ ವಿರುದ್ಧ ಅನೇಕ ವಾರಂಟ್ಗಳಿದ್ದವು. ಇದರ ಬೆನ್ನ ಹಿಂದೆ ಎಸ್ಐ ಕಬ್ಬಾಲ್ರಾಜ ಬಿದ್ದಿದ್ದರು. ಇದೇ ರೀತಿ ಇನ್ನೂ ಹಲವು ಕಾಂಗ್ರೆಸ್ ಮುಖಂಡರ ಅಕ್ರಮ ವಿರುದ್ಧ ಪ್ರಕರಣ ದಾಖಲಿಸತೊಡಗಿದರು.
ಕಾಂಗ್ರೆಸ್ ಮುಖಂಡ ಜಿಲ್ಲಾ ಪಂಚಾಯ್ತಿ ಸದಸ್ಯರೂ ಆಗಿರುವ ತುಂಬೆ ಪ್ರಕಾಶ್ ಪೊಲೀಸ್ ಠಾಣೆಗೆ ಬಂದು 'ನಮ್ಮವರನ್ನು ಬಿಟ್ಟು ಬಿಡಿ' ಎಂದು ಹೇಳುತ್ತಿದ್ದರು. ಮರಳುಗಾರಿಕೆ ದಂಧೆ ವಿರುದ್ಧ ದಾಳಿ ನಡೆಯುವಾಗಲೂ ಪ್ರಕಾಶ್ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಎಸ್ಐ ಕ್ಯಾರೇ ಎಂದಿರಲಿಲ್ಲ. ಆಗ ದೂರು ಉಸ್ತುವಾರಿ ಸಚಿವರಿಗೆ ಹೋಯಿತು. ತಕ್ಷಣ ಕಬ್ಬಾಲ್ ರಾಜ ಬಂಟ್ವಾಳದಿಂದ ಕಾರ್ಕಳ ಠಾಣೆಗೆ ವರ್ಗವಾದರು.
2007ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ ಕಬ್ಬಾಲ್ ರಾಜ ಕಾಂಗ್ರೆಸ್ ವಿರೋಧಿ ಏನಲ್ಲ. ಆಲ್ದೂರಲ್ಲಿ ಇರುವಾಗ ಬಜರಂಗದಳದವರ ಬೆನ್ನಟ್ಟಿದ್ದರು. ಪರಿಣಾಮ ಅಲ್ಲಿಂದ 6 ತಿಂಗಳಲ್ಲಿ ಬಂಟ್ವಾಳಕ್ಕೆ ವರ್ಗವಾಗಿದ್ದರು. 'ನಾವು ಎಲ್ಲಿದ್ದರೂ ಕೆಲಸ ಮಾಡಬೇಕು. ಕಾನೂನು ಪಾಲನೆಯೇ ಪರಮ ಗುರಿ. ವರ್ಗಾವಣೆಗೆ ಹೆದರುವುದಿಲ್ಲ' ಎಂದು ಎಸ್ಐ ಕಬ್ಬಾಲ್ ರಾಜ, ಎಸ್ಪಿ ಶಂತನು ಸಿನ್ಹ, ಹೊಸದಾಗಿ ಬಂದ ಎಸ್ಪಿ ಶರಣಪ್ಪ ಕೂಡಾ ಹೇಳಿಕೆ ನೀಡಿದ್ದಾರೆ.
ರಾಜಕಾರಣಿಗಳನ್ನು ಹತ್ತಿರ ಸೇರಿಸುತ್ತಿರಲಿಲ್ಲ
ದೇಶದಲ್ಲಿಯೇ ಸಂಚಲನ ಸೃಷ್ಟಿಸಿದ್ದ ಜೈನಬಸದಿ ಪ್ರಕರಣದಲ್ಲಿ ಅಂದಿನ ಕಮಿಷನರ್ ಮನೀಷ್ ಕರ್ಬಿಕರ್ ಖುದ್ದು ಕಾರ್ಯಾಚರಣೆ ನಡೆಸಿದ್ದರು. ಅವರು ರಾಜಕಾರಣಿಗಳನ್ನು ಹತ್ತಿರಕ್ಕೂ ಸೇರಿಸುತ್ತಿರಲಿಲ್ಲ. ಲಂಚ ಮುಟ್ಟದ ಅಧಿಕಾರಿ ಎಂದು ಪೊಲೀಸ್ ಇಲಾಖೆಯಲ್ಲಿ ಮನೆ ಮಾತಾಗಿದ್ದವರು. ಅವರೂ ವರ್ಷದೊಳಗೆ ವರ್ಗವಾದರು.
ಐಜಿಪಿ ಪ್ರತಾಪ್ ರೆಡ್ಡಿಯೂ ಅಂಕೋಲ ಆರ್.ಎನ್. ನಾಯ್ಕ್ ಕೊಲೆ ಪ್ರಕರಣವನ್ನು ಸಮರ್ಥವಾಗಿ ಭೇದಿಸಿದವರು. ಕರಾವಳಿ ಜಿಲ್ಲೆಗಳಲ್ಲಿ ಎರಡು ವರ್ಷಗಳಲ್ಲಿ ಶಾಂತಿ ನೆಲೆಸುವಂತೆ ಮಾಡುವಲ್ಲಿ ಇವರ ಪಾಲು ಕೂಡಾ ಇದೆ.
'ರಾಜಕೀಯ ಫುಡಾರಿಗಳ ಮಾತು ಕೇಳದ ಅಧಿಕಾರಿಗಳನ್ನು ಎತ್ತಂಗಡಿ ಮಾಡುವುದು ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಸಾಮಾನ್ಯವಾಗಿದೆ. ಕೇವಲ ಪೊಲೀಸ್ ಇಲಾಖೆ ಮಾತ್ರವಲ್ಲ ಇತರೆ ಇಲಾಖೆಯ ಪರಿಸ್ಥಿತಿಯೂ ಅದೆ. ಮಹಾನಗರ ಪಾಲಿಕೆ ಕಮಿಷನರ್ ಅಜಿತ್ ಕುಮಾರ್ ಹೆಗಡೆ, ಉಡುಪಿಯಲ್ಲಿ ಪ್ರಾಮಾಣಿಕ ಅಧಿಕಾರಿ ಪ್ರಭಾಕರ ಶರ್ಮ ವರ್ಗಾವಣೆ. ಇಂಥ ಹಲವು ಉದಾಹರಣೆ ಸಿಗುತ್ತವೆ. ಎರಡು ವರ್ಷದ ಒಳಗೆ ವರ್ಗ ಮಾಡಬಾರದು ಎಂಬ ಸುಪ್ರೀಂ ಕೋರ್ಟ್ ಆದೇಶವೂ ಇಲ್ಲಿ ಲೆಕ್ಕಕ್ಕಿಲ್ಲ. ಅಧಿಕಾರಿಗಳಿಗೆ ಕಿರಿಕಿರಿ ಮಾಡಿ ವರ್ಗಕ್ಕೆ ವಿಲ್ಲಿಂಗ್ನೆಸ್ ಒತ್ತಡ ತರುತ್ತಾರೆ' ಎನ್ನುತ್ತಾರೆ ನಾಗರಿಕ ಹಿತರಕ್ಷಣೆ ಸಮಿತಿ ಅಧ್ಯಕ್ಷ ಹನುಮಂತ ಕಾಮತ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

