ದಕ್ಷಿಣ ಕನ್ನಡ

ಗ್ರಾ.ಪಂ.ಗಳಲ್ಲೇ ಕೋಟಿ ತೆರಿಗೆ ವಸೂಲಿ ಬಾಕಿ!

Published On :

 ಆತ್ಮಭೂಷಣ್
ಮಂಗಳೂರು: ಗ್ರಾಮದ ಅಭಿವೃದ್ಧಿಗೆ ಪಂಚಾಯ್ತಿ ನಿಧಿಯನ್ನೇ ಬಳಸಬೇಕು, ಅದು ಪಂಚಾಯ್ತಿ ಅಧಿಕಾರಿಗಳ ವೇತನಕ್ಕೂ ಬಳಕೆಯಾಗಬೇಕು ಎಂಬುದು ಪಂಚಾಯತ್‌ರಾಜ್ ಇಲಾಖೆ ವಿಧಿಸಿದ ನಿಯಮ. ಆದರೆ ಇದು ಕಡತದಲ್ಲಿ ಮಾತ್ರ.
ಯಾಕೆಂದರೆ ಯಾವುದೇ ಗ್ರಾಮ ಪಂಚಾಯ್ತಿಗಳು ಪಂಚಾಯ್ತಿ ನಿಧಿಯನ್ನು ಸಂಗ್ರಹಿಸುವುದಕ್ಕೆ ಒತ್ತು ನೀಡುತ್ತಿಲ್ಲ. ದ.ಕ.ಜಿಲ್ಲೆಯೊಂದರಲ್ಲೇ ಕೋಟಿಗಟ್ಟಲೆ ತೆರಿಗೆ ವಸೂಲಿಗೆ ಬಾಕಿ ಇದೆ. ಇದು ಪಂಚಾಯ್ತಿ ಅಧಿಕಾರಿಗಳ ಕಾರ್ಯದಕ್ಷತೆಗೆ ಹಿಡಿದ ಕೈಗನ್ನಡಿ.
ಮಾರ್ಚ್ ಅಂತ್ಯ ಸಮೀಪಿಸುತ್ತಿದ್ದರೂ ಗ್ರಾಮ ಪಂಚಾಯ್ತಿಗಳಲ್ಲಿ ತೆರಿಗೆ ವಸೂಲಿ ಸರಿಯಾಗಿ ಆಗುತ್ತಿಲ್ಲ. ಆರ್ಥಿಕ ವರ್ಷದೊಳಗೆ ತೆರಿಗೆ ಪೂರ್ತಿ ವಸೂಲು ಮಾಡಬೇಕೆಂಬ ಇರಾದೆ ಪಂಚಾಯ್ತಿ ಅಧಿಕಾರಿಗಳಿಗೂ ಇದ್ದಂತಿಲ್ಲ. ಈಗ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು, ಅಧಿಕಾರಿಗಳು ಪದೇ ಪದೇ ಮೀಠಿಂಗ್ ಮಾಡಿದ ಬಳಿಕ ತೆರಿಗೆ ಸಂಗ್ರಹಕ್ಕೆ ತುಸು ಚುರುಕು ಮುಟ್ಟಿದೆ. ಇಷ್ಟಾದರೂ ಪರಿಪೂರ್ಣ ತೆರಿಗೆ ವಸೂಲಿ ಸಾಧ್ಯವಾಗುವುದು ಕಷ್ಟ.
ಜಿಲ್ಲೆಯಲ್ಲಿ 6.90 ಕೋಟಿ ಬಾಕಿ: ಜಿಲ್ಲೆಯ ಐದು ತಾಲೂಕುಗಳ 204 ಗ್ರಾಮ ಪಂಚಾಯ್ತಿಗಳಿಂದ ರು. 6.90 ಕೋಟಿ ತೆರಿಗೆ ವಸೂಲಿ ಮಾಡಬೇಕಾಗಿದೆ. ಕಳೆದ ಐದು ವರ್ಷದಲ್ಲಿ ಶೇ.ನೂರು ತೆರಿಗೆ ವಸೂಲಿ ಮಾಡಿದ ಪಂಚಾಯ್ತಿಗಳಿಲ್ಲ. ಪ್ರತಿ ಬಾರಿ ತೆರಿಗೆ ವಸೂಲಿಯಲ್ಲಿ ಪಂಚಾಯ್ತಿಗಳು ಹಿನ್ನಡೆ ಕಾಣುತ್ತಿವೆ. ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಪಂಚಾಯ್ತಿ ಆಡಳಿತ ಬಡವಾಗುತ್ತಿದೆ.
ಮಂಗಳೂರು ತಾಲೂಕಿನಲ್ಲಿ ತೆರಿಗೆ ಸಂಗ್ರಹ ಬಾಕಿ ಗರಿಷ್ಠ 3.15 ಕೋಟಿಯಷ್ಟಿದೆ. ಎರಡನೇ ಸ್ಥಾನ ರು. 1.4 ಕೋಟಿ ಬಾಕಿ ಇರಿಸಿದ ಬೆಳ್ತಂಗಡಿಗೆ, ತೃತೀಯ ರು. 1 ಕೋಟಿ ಬಂಟ್ವಾಳದಲ್ಲಿ ಬಾಕಿ. ಪುತ್ತೂರು ರು. 52 ಲಕ್ಷ, ಸುಳ್ಯ ರು. 73 ಲಕ್ಷ ಬಾಕಿ ಇದೆ.
ಮನೆ ತೆರಿಗೆ, ಶಿಕ್ಷಣ ಕರ, ಆರೋಗ್ಯ ಕರ, ಗ್ರಂಥಾಲಯ ಕರ, ಭಿಕ್ಷುಕರ ಕರ, ಕಟ್ಟಡ ಪರವಾನಗಿ ಶುಲ್ಕ, ಉದ್ದಿಮೆ ಪರವಾನಗಿ ಶುಲ್ಕ, ಮಾಳಿಗೆಗಳ ಬಾಡಿಗೆ, ಸಂತೆ ಕರ, ಬೀದಿ ದೀಪ ಕರ, ನೀರಿನ ಕರ, ವೃತ್ತಿ ತೆರಿಗೆ, ಇತರೆ ತೆರಿಗೆಗಳು ಬಾಕಿ ಇರಿಸಿರುವ ತೆರಿಗೆ ಪಟ್ಟಿಯಲ್ಲಿ ಸೇರಿವೆ.
ನಿಯಮ ಏನು ಹೇಳ್ತದೆ?: ಪಂಚಾಯತ್‌ರಾಜ್ ಅಧಿನಿಯಮ ಪ್ರಕಾರ, ಪ್ರತಿ ಗ್ರಾಮ ಪಂಚಾಯ್ತಿ ತನ್ನದೇ ನಿಧಿಯಿಂದ ಪಂಚಾಯ್ತಿ ವ್ಯಾಪ್ತಿಯ ಅಭಿವೃದ್ಧಿ ಕೈಗೊಳ್ಳಬೇಕು. ಸಂಗ್ರಹವಾದ ಒಟ್ಟು ತೆರಿಗೆಯಲ್ಲಿ ಶೇ.3 ಭಿಕ್ಷುಕರ ತೆರಿಗೆ, ಶೇ.2 ಶಿಕ್ಷಣಕ್ಕೆ. ಇದು ಹೊರತುಪಡಿಸಿದರೆ ಭೂಸ್ವಾಧೀನಕ್ಕೂ ಸ್ವಂತ ನಿಧಿಯನ್ನು ಪಂಚಾಯ್ತಿ ಬಳಸಬಹುದು. ಮಾತ್ರವಲ್ಲ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಇತರೆ ಸಿಬ್ಬಂದಿ ವೇತನವನ್ನು ಇದರಿಂದಲೇ ಭರಿಸಬೇಕು ಎನ್ನುತ್ತದೆ. ಇದನ್ನು ಪಂಚಾಯ್ತಿಗಳು ಗಂಭೀರವಾಗಿ ಪರಿಗಣಿಸಿದಂತಿಲ್ಲ.
ಸರ್ಕಾರದ ಅನುದಾನಕ್ಕೆ ಕಣ್ಣು: ಎಲ್ಲ ಪಂಚಾಯ್ತಿಗಳೂ ಶಾಸಕ, ಸಚಿವರ, ಸಂಸದರ, ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಅನುದಾನವನ್ನೇ ನೆಚ್ಚಿಕೊಂಡಿವೆ. ಸರ್ಕಾರ ವಿವಿಧ ಯೋಜನೆಗಳಲ್ಲಿ ಬಿಡುಗಡೆ ಮಾಡುವ ಮೊತ್ತ ನೇರವಾಗಿ ಅಭಿವೃದ್ಧಿಗೆ ಬಳಕೆ ಮಾಡಬೇಕು ಎಂದು ನಿಯಮ ಹೇಳುತ್ತದೆ. ಜನಸಂಖ್ಯೆ ಆಧಾರದಲ್ಲಿ ಪಂಚಾಯ್ತಿವಾರು ಕನಿಷ್ಠ ರು. 8 ಲಕ್ಷದಿಂದ 20 ಲಕ್ಷ ವರೆಗೆ ವಿವಿಧ ಬಗೆಯ ಮೊತ್ತ ಪಂಚಾಯ್ತಿಗೆ ಬಿಡುಗಡೆಯಾಗುತ್ತದೆ. ಸರಿಯಾಗಿ ತೆರಿಗೆ ಸಂಗ್ರಹಿಸಿದರೆ ಪಂಚಾಯ್ತಿಗಳು ಉತ್ತಮ ಅಭಿವೃದ್ಧಿ ಕಾರ್ಯ ನಡೆಸಲು ಸಾಧ್ಯವಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊರಗಪ್ಪ ನಾಯ್ಕ.
'ತೆರಿಗೆ ಸಂಗ್ರಹದಲ್ಲಿ ಮಂಗಳೂರು ತಾಲೂಕು ಹಿಂದಿದೆ. ಇದೇ ಕಾರಣಕ್ಕೆ ಗ್ರಾಮಾಂತರ ಪ್ರದೇಶಗಳು ಇನ್ನೂ ಅಭಿವೃದ್ಧಿಯಾಗಿಲ್ಲ. ಸರ್ಕಾರದ ಪಂಚಾಯ್ತಿಗಳಿಗೆ ನೇರ ಅನುದಾನ ನೀಡುತ್ತದಾದರೂ ಅದು ಸಾಕಾಗುತ್ತಿಲ್ಲ.
ತಮ್ಮಲ್ಲೇ ಸಂಪನ್ಮೂಲ ಇದ್ದರೂ ಸಂಗ್ರಹಿಸುವ ಗೋಜಿಗೆ ಪಂಚಾಯ್ತಿಗಳು ಗಮನ ನೀಡುತ್ತಿಲ್ಲ. ಇದರಿಂದ ಬಹುತೇಕ ಗ್ರಾಮಗಳ ಅಭಿವೃದ್ಧಿ ನಿರೀಕ್ಷಿತ ಮುನ್ನಡೆ ಕಾಣುತ್ತಿಲ್ಲ' ಎನ್ನುವ ವಿಷಾದ ಕೊರಗಪ್ಪ ನಾಯ್ಕರದ್ದು.



ನವೆಂಬರ್ ವೇಳೆಗೆ 9 ಕೋಟಿ ಬಾಕಿ ಇದ್ದ ತೆರಿಗೆ ಈಗ 6 ಕೋಟಿಗೆ ತಲುಪಿದೆ. ಮಾರ್ಚ್ ಅಂತ್ಯಕ್ಕೆ ಇದನ್ನು 2 ಕೋಟಿಗೆ ಇಳಿಸುವ ಇರಾದೆ ಇದೆ. ಈ ಬಗ್ಗೆ ತಾಲೂಕು ಮಟ್ಟದಲ್ಲಿ ಸಭೆ ನಡೆಸಿ ತೆರಿಗೆ ಸಂಗ್ರಹಕ್ಕೆ ಆದ್ಯತೆ ನೀಡುವಂತೆ ಪಿಡಿಒಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
 ಕೊರಗಪ್ಪ ನಾಯ್ಕ, ಅಧ್ಯಕ್ಷರು, ಜಿಲ್ಲಾ ಪಂಚಾಯಿತಿ, ದ.ಕ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.