ಕಾಂಗ್ರೆಸ್ ಜಾತಿ ಆಧಾರದಲ್ಲಿ ಮತ ಕೇಳಲ್ಲ
ಸಿದ್ದಾಪುರ: ಕಾಂಗ್ರೆಸ್ ತನ್ನ ಅಭ್ಯರ್ಥಿ ಪರವಾಗಿ ಪಕ್ಷದ ಹಾಗೂ ಸರ್ಕಾರದ ಕಾರ್ಯಕ್ರಮಗಳ ಮೇಲೆ ಮತ ಯಾಚಿಸುತ್ತದೆಯೇ ಹೊರತು ಜಾತಿ, ಮತಗಳ ಆಧಾರದ ಮೇಲೆ ಕೇಳುವುದಿಲ್ಲ ಎಂದು ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
ಸೋಮವಾರ ಕಾನಸೂರಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಕೇಂದ್ರದ ಯುಪಿಎ ನೇತೃತ್ವದ ಸರ್ಕಾರ ರು. 72 ಸಾವಿರ ಕೋಟಿ ಸಾಲಮನ್ನಾ, ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ, ಆಹಾರ ಭದ್ರತೆ ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆ, ಕಡ್ಡಾಯ ಶಿಕ್ಷಣ ಮಸೂದೆ, ಸರ್ವಶಿಕ್ಷಾ ಅಭಿಯಾನ ಮುಂತಾದ ಮಹತ್ವದ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ.
ರು. 1 ಲಕ್ಷ ಕೋಟಿಯನ್ನು ಉನ್ನತ ಶಿಕ್ಷಣಕ್ಕೆ ಮೀಸಲಿಟ್ಟಿದೆ. ಈ ಕೆಲಸವನ್ನು ಮೊದಲಿದ್ದ ಎನ್ಡಿಎ ಸರ್ಕಾರ ಯಾಕೆ ಮಾಡಲಿಲ್ಲ? ರಾಜ್ಯ ಸರ್ಕಾರ ಕಾರವಾರಕ್ಕೆ ಮೆಡಿಕಲ್ ಕಾಲೇಜು ಮಂಜೂರು ಮಾಡಿ ರು. 140 ಕೋಟಿ ಒದಗಿಸುತ್ತಿದೆ. ಸಿದ್ದಾಪುರ, ಜೋಯಿಡಾ, ಹೊನ್ನಾವರಗಳಿಗೆ ಮಿನಿ ವಿಧಾನಸೌಧ ಮಂಜೂರಿಯಾಗಿದೆ. ಸದ್ಯದಲ್ಲೇ ರಾಮಕೃಷ್ಣ ಹೆಗಡೆಯವರ ಕಾಲದಿಂದಲೂ ಬೇಡಿಕೆ ಇರುವ ಬಸ್ ನಿಲ್ದಾಣಕ್ಕಾಗಿ ಈಗಿನ ಫಾರೆಸ್ಟ್ ಕಚೇರಿಯ ಸ್ಥಳವನ್ನು ಒದಗಿಸುತ್ತಿದೆ. ಇವುಗಳನ್ನು ಹಿಂದಿನ ಬಿಜೆಪಿ ಸರ್ಕಾರ ಯಾಕೆ ಮಾಡಲಿಲ್ಲ ಎಂದು ಆರ್.ವಿ. ದೇಶಪಾಂಡೆ ಕಟುವಾಗಿ ಪ್ರಶ್ನಿಸಿದರು.
ಅರಣ್ಯ ಅತಿಕ್ರಮಣ ಮಂಜೂರಿಗೆ 2006ರಲ್ಲೇ ಕೇಂದ್ರ ಸರ್ಕಾರ ಅನುವೋದನೆ ನೀಡಿತ್ತು. ರಾಜ್ಯದಲ್ಲಿ ಆಗಿದ್ದ ಜೆಡಿಎಸ್, ಬಿಜೆಪಿ ಸಮ್ಮಿಶ್ರ ಸರ್ಕಾರ, ನಂತರ ಬಂದ ಬಿಜೆಪಿ ಸರ್ಕಾರ ಅದನ್ನು ಜಾರಿ ಮಾಡಲಿಲ್ಲ. ಆ ಬಗ್ಗೆ ಶೀಘ್ರವಾಗಿ ಗಮನ ಹರಿಸಿ ಅರಣ್ಯ ಅತಿಕ್ರಮಣದಾರರಿಗೆ ಪಟ್ಟಾ ಮಾಡಿಕೊಟ್ಟ ಕೀರ್ತಿ ಕಾಂಗ್ರೆಸ್ ಸರ್ಕಾರದ್ದು ಎಂದರು.
ಈ ಕ್ಷೇತ್ರ ಅನಾಥವಾಗಿದೆ. 4 ಬಾರಿ ಆಯ್ಕೆಯಾದ ಬಿಜೆಪಿ ಸಂಸದರು 14 ವರ್ಷ ಏನು ಮಾಡಿದರು? ಜಿಲ್ಲೆಯ ಕುರಿತಾಗಿ, ಇಲ್ಲಿನ ಅಭಿವೃದ್ಧಿ ಕುರಿತಾಗಿ ಲೋಕಸಭೆಯಲ್ಲಿ ಮಾತನಾಡಲಿಲ್ಲ. ಅವರು ಕೆಲಸ ಮಾಡಿದ್ದರೆ ಅವರಿಗೆ ಮತ ಕೊಡುವ ಹಕ್ಕು ಮತದಾರರಿಗಿದೆ. ಕೆಲಸ ಮಾಡದಿರುವ ಅವರಿಗೆ ಮತ ಕೇಳುವ ಹಕ್ಕು ಇಲ್ಲ. ನಾನೂ ರಾಮನ ಪೂಜೆ ಮಾಡುತ್ತೇನೆ. ಆದರೆ ರಾಮನ ಹೆಸರಿನಲ್ಲಿ ರಾಜಕಾರಣ ಮಾಡೋದಿಲ್ಲ. ರಾಮ 14 ವರ್ಷ ವನವಾಸ ಮಾಡಿದ್ದ. ಈ ಕ್ಷೇತ್ರದ 14 ವರ್ಷದ ವನವಾಸ ಮುಗಿಯುವ ಕಾಲ ಬಂದಿದೆ. ಜೆಡಿಎಸ್ ಇಲ್ಲಿ ದುರ್ಬಲವಾಗಿದೆ. ಅದು ದಿಲ್ಲಿ ತಲುಪುವುದು ಬಹಳ ಕಷ್ಟ. ಅದಕ್ಕೆ ಮತ ಕೊಡುವುದರಿಂದ ಬಿಜೆಪಿಗೆ ಲಾಭ ಎಂದು ದೇಶಪಾಂಡೆ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, ನಿದ್ದೆ ಮಾಡುವ ಸಂಸದರಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದೆ. ದೇಶಪಾಂಡೆ ತಮ್ಮ ಶ್ರಮ ಮತ್ತು ಸಾಮರ್ಥ್ಯದಿಂದ ಕಡಿಮೆ ಅವಧಿಯಲ್ಲಿ ಸಾವಿರಾರು ಕೋಟಿ ಅನುದಾನ ತಂದಿದ್ದಾರೆ. ಯಾವುದೇ ಒಂದು ಜಾತಿಯಿಂದ ಯಾವುದೇ ಪಕ್ಷ ಗೆಲ್ಲುವುದಿಲ್ಲ. ಜಾತಿ ರಾಜಕಾರಣಕ್ಕೆ ಕಿವಿಗೊಡಬೇಡಿ ಎಂದರು. ಹಿರಿಯ ಧುರೀಣ ಶಾಂತಾರಾಮ ಹೆಗಡೆ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಎಸ್.ಆರ್. ಹೆಗಡೆ ಕುಂಬಾರಕುಳಿ ಮಾತನಾಡಿದರು. ಪಕ್ಷದ ಹಿರಿಯ ಮುಖಂಡ ಎಸ್.ಬಿ. ಗೌಡ ಕಲ್ಲೂರು, ಕೆ.ಜಿ.ನಾಗರಾಜ, ಎಪಿಎಂಸಿ ಸದಸ್ಯ ಎಸ್.ಆರ್. ಹೆಗಡೆ ತ್ಯಾಗಲಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ ಶೆಟ್ಟಿ, ಗ್ರಾಪಂ ಅಧ್ಯಕ್ಷೆ ಸುಮಾ ಗುಡಿಗಾರ ಮುಂತಾದವರು ಉಪಸ್ಥಿತರಿದ್ದರು.
ಮತದಾರರು ಆಮಿಷಕ್ಕೆ ಬಲಿಯಾಗಬೇಡಿ
ಶಿರಸಿ: ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳೊಡ್ಡುವ ಆಮಿಷಕ್ಕೆ ಮತಗಳು ಮಾರಾಟವಾಗುತ್ತಿದ್ದು, ಅಭ್ಯರ್ಥಿಯ ಗುಣಮಟ್ಟದ ಮೇಲೆ ಮತ ನೀಡುವಂತಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
ತಾಲೂಕಿನ ದೊಡ್ನಳ್ಳಿಯಲ್ಲಿ ಭಾನುವಾರ ನಡೆದ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಸತ್ಯಕ್ಕೆ ದೂರವಾದ ವಿಷಯಗಳನ್ನು ವಿಪಕ್ಷದ ಪ್ರಮುಖರು ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಪ್ರಚಾರಕ್ಕೆ ಕೋಟ್ಯಂತರ ರೂಪಾಯಿಗಳನ್ನು ಬಂಡವಾಳಶಾಹಿಗಳು ಸುರಿಯುತ್ತಿದ್ದಾರೆ. ಆದರೆ ಜನಪರ ಕಾರ್ಯ ಹಾಗೂ ನಿಜವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಕಾಂಗ್ರೆಸ್ ತನ್ನ ಅಭಿವೃದ್ಧಿಯ ಪ್ರಚಾರ ಮಾಡಿಕೊಳ್ಳುತ್ತಿಲ್ಲ. ಅಭ್ಯರ್ಥಿಯ ನಡವಳಿಕೆ, ಗುಣಮಟ್ಟ ಆಧರಿಸಿ ಮತ ಚಲಾಯಿಸಿದರೆ ಉತ್ತಮ ಸರ್ಕಾರ ರೂಪುಗೊಳ್ಳಲು ಸಾಧ್ಯ ಎಂದರು.
ರಾತ್ರಿ ಬಂದು ನಮ್ಮನ್ನು ಕಾಂಗ್ರೆಸ್ಗೆ ಸೇರಿಸಿಕೊಳ್ಳಿ ಎಂದು ದುಂಬಾಲು ಬಿದ್ದವರು ಈಗ ನನ್ನ ವಿರುದ್ಧ ಸುಮ್ಮನೇ ಟೀಕೆ ಮಾಡುತ್ತಿದ್ದಾರೆ. ನಾನು ಅಂಥವರ ಬಗ್ಗೆ ಟೀಕೆ ಮಾಡುವುದಿಲ್ಲ ಎಂದ ದೇಶಪಾಂಡೆ, ಅವರೆಲ್ಲರ ಬಗ್ಗೆ ನನಗೆ ಗೊತ್ತಿದೆ. ಸಮಯ ಬಂದಾಗ ವಿಷಯ ಬಹಿರಂಗ ಮಾಡುತ್ತೇನೆ ಎಂದರು.
14 ವರ್ಷ ಕ್ಷೇತ್ರದ ಜನತೆಯನ್ನು ಮರುಳು ಮಾಡಿದ ಸಂಸದರಿಗೆ ಈ ಬಾರಿ ತಕ್ಕ ಪಾಠ ಕಲಿಸಬೇಕಿದೆ. 14 ವರ್ಷದ ವನವಾಸದಿಂದ ಕ್ಷೇತ್ರ ಮುಕ್ತವಾಗಲು ಇದೊಂದು ಒಳ್ಳೆಯ ಅವಕಾಶವಾಗಿದ್ದು, ಕಷ್ಟ-ಸುಖಕ್ಕೆ ಭಾಗಿಯಾಗುವವರಿಗೆ ನಿಮ್ಮ ಮತ ನೀಡಿ ಎಂದು ವಿನಂತಿಸಿದರು.
ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ದುಭಾಶಿ, ಮಹಿಳಾ ಘಟಕದ ಶಕುಂತಲಾ ಜೈವಂತ, ಯೂತ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ಶೆಟ್ಟಿ, ತಾಲೂಕು ಪಂಚಾಯತ ಸದಸ್ಯೆ ರತ್ನಾ ಶೆಟ್ಟಿ, ಪರಿಶಿಷ್ಟ ವಿಭಾಗದ ಜಿಲ್ಲಾಧ್ಯಕ್ಷ ಮಾಧವ ರೇವಣಕರ್, ಪಕ್ಷದ ಕಲಾವತಿ ವಾಜ್, ಶಿವರಾಮ ಶೆಟ್ಟಿ, ಲಕ್ಷ್ಮೀ ಭಟ್ಟ, ಆನಂದ ಗೌಡ ಸೇರಿದಂತೆ ಇತರರು ಇದ್ದರು.
ಕಳೆದ ಐದು ಚುನಾವಣೆಗಳಲ್ಲಿ ನಾಲ್ಕು ಬಾರಿ ಕಾಂಗ್ರೆಸ್ ಸೋಲು ಕಂಡಿದೆ. ಈ ಬಾರಿಯ ಚುನಾವಣೆಯಲ್ಲಿ ಗೆಲುವು ಪಡೆಯುವ ವಿಶ್ವಾಸವಿದೆ. ಜನರಲ್ಲಿ ಜನಪರ ಆಡಳಿತ ನೀಡುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂಬ ಭಾವನೆ ಹೆಚ್ಚಿದೆ.
- ಶಾಂತಾರಾಮ ಹೆಗಡೆ, ಕೆಪಿಸಿಸಿ ಸದಸ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

