ದಕ್ಷಿಣ ಕನ್ನಡ

ಮತದಾನ ಕಾರವಾರದಲ್ಲಿ ಉದಾಸೀನ

Published On :

-ಮಯೂರ ಹೆಗಡೆ
ಕನ್ನಡಪ್ರಭ ವಾರ್ತೆ, ಕಾರವಾರ, ಮಾ. 24
16ನೇ ಲೋಕಸಭಾ ಮಹಾಯುದ್ಧ ಘೋಷಣೆಯಾಗಿದೆ. ಆದರೆ, ಉತ್ತರಕನ್ನಡ ಕ್ಷೇತ್ರದ ಮತದಾರ ಪ್ರಭುಗಳು ಪ್ರತಿ ಬಾರಿಯ ಚುನಾವಣೆಯಲ್ಲೂ ಅದೇಕೋ ತಮ್ಮ ಹಕ್ಕು ಚಲಾಯಿಸಲು ಉದಾಸೀನ ಮಾಡುತ್ತಿದ್ದಾರೆ. ಇದುವರೆಗಿನ ಯಾವೊಂದು ಸಾರ್ವತ್ರಿಕ ಚುನಾವಣೆಯಲ್ಲೂ ಕ್ಷೇತ್ರದಲ್ಲಿ ಶೇ. 70ರಷ್ಟು ಮತದಾನ ಆಗಿಲ್ಲ ಎಂಬುದು ಕಳವಳಕಾರಿ ಸಂಗತಿ.
ಚುನಾವಣೆಯ ಬಿಸಿ ಮಲೆನಾಡು, ಕರಾವಳಿ ಎಂಬ ಭೇದವಿಲ್ಲದೆ ಜಿಲ್ಲೆಯಾದ್ಯಂತ ಹಬ್ಬಿದೆ. ವಿವಿಧ ಪಕ್ಷಗಳ ಸೈನಿಕರು ರಣರಂಗಕ್ಕೆ ಇಳಿದಿದ್ದು, ಪರಸ್ಪರ ಆರೋಪ ಪ್ರತ್ಯಾರೋಪಗಳ ಮೂಲಕ ಯುದ್ಧದ ಶಂಖನಾದ ಊದುತ್ತಿದ್ದಾರೆ. ಇನ್ನೂ ಕೆಲವರು ರಣಾಂಗಣಕ್ಕೆ ಇಳಿಯುವ ತವಕದಲ್ಲಿದ್ದಾರೆ. ಆದರೆ, ಉತ್ತರ ಕನ್ನಡ ಜಿಲ್ಲೆಯ ಮತದಾರರು ಮಾತ್ರ ತೀರ್ಪು ಬರೆಯಲು ಸಿದ್ಧರಾದಂತಿಲ್ಲ. ಕಾರಣ ಇಷ್ಟೆ. ಈ ಹಿಂದಿನ ಚುನಾವಣೆಗಳ ಮತದಾನದ ಬಗ್ಗೆ ಅವಲೋಕಿಸಿದರೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮತದಾರ ತನ್ನ ಹಕ್ಕು ಚಲಾಯಿಸುವಲ್ಲಿ ಹಿಂದೆ ಬೀಳುತ್ತಿರುವುದು ಸ್ಪಷ್ಟ.
ಗರಿಷ್ಠ ಪ್ರಮಾಣದ ಮತದಾನ ಆದರೆ ಮಾತ್ರ ಸರಿಯಾದ ಫಲಿತಾಂಶ ಹೊರಬೀಳುತ್ತದೆ ಎಂಬುದನ್ನು ಜನ ಮರೆತಂತಿದೆ. ಈ ಬಾರಿಯಾದರೂ ಎಚ್ಚೆತ್ತುಕೊಂಡು ಸೂಕ್ತ ಅಭ್ಯರ್ಥಿಯ ಆಯ್ಕೆ ಮಾಡುವಲ್ಲಿ ತಮ್ಮ ಕೊಡುಗೆ ನೀಡುವ ಹೊಣೆ ಜಿಲ್ಲೆಯ ಜನರ ಮೇಲಿದೆ.
ಮತದಾರರ ಉದಾಸೀನತೆ
ಮತದಾನ ಮಾಡಲು ಉದಾಸೀನ ಆರಂಭದಿಂದ ಕಳೆದ ಚುನಾವಣೆವರೆಗೂ ಕ್ಷೇತ್ರಕ್ಕೆ ಅಂಟಿರುವ ಜಾಡ್ಯ. ಕಳೆದ ಚುನಾವಣೆಯಲ್ಲಿ ಕ್ಷೇತ್ರದಲ್ಲಿದ್ದ ಒಟ್ಟು ಮತಗಳು 12,86,556. ಆದರೆ ತಮ್ಮ ಹಕ್ಕನ್ನು ಚಲಾಯಿಸಿದವರು 7,60,275 ಜನರು. ಉಳಿದ 5 ಲಕ್ಷಕ್ಕೂ ಹೆಚ್ಚಿನ ಜನರು ತಮ್ಮ ನಾಯಕರನ್ನು ಆರಿಸುವ ಅಮೂಲ್ಯ ಕ್ಷಣದಲ್ಲಿ ಗೈರಾಗಿದ್ದರು. ಶೇ. 59.09ರಷ್ಟು ಮಾತ್ರ ಮತದಾನವಾಯಿತು. ಇದರಲ್ಲೂ 251 ಮತಗಳು ತಿರಸ್ಕೃತಗೊಂಡಿವೆ.
ಎರಡನೇ ಸಾರ್ವತ್ರಿಕ ಚುನಾವಣೆ 1957ರಲ್ಲಿಯೂ ಇದೇ ಹಾಡು. ಕ್ಷೇತ್ರದಲ್ಲಿದ್ದ ಒಟ್ಟು ಮತಗಳು 4,31122. ಚಲಾವಣೆಯಾಗಿದ್ದು ಕೇವಲ 2,42,867. ಮತದಾನದ ಪ್ರಮಾಣ ಶೇ. 56ಕ್ಕೆ ಇಳಿಯಿತು. 1999ರ ಚುನಾವಣೆಯಲ್ಲಿ ಒಟ್ಟು 7,74,469 ಮತದಾರರಲ್ಲಿ 7,45,461 ಮತದಾನವಾಗಿತ್ತಾದರೂ 29,008ರಷ್ಟು ಮತಗಳು ತಿರಸ್ಕೃತಗೊಂಡಿದ್ದವು.
ಜಾಗೃತಿ ಕೊರತೆ, ಸಮಸ್ಯೆಗಳ ಆಗರ
ಉತ್ತರ ಕನ್ನಡ ಬುದ್ಧಿವಂತರ ಜಿಲ್ಲೆ ಎಂದು ಹೆಸರಾದ ಕ್ಷೇತ್ರ. ಆದರೆ ಮತದಾನದ ವಿಷಯದಲ್ಲಿ ಅವರು ಜಾಗೃತರಾಗಿಲ್ಲ. ಉತ್ತರ ಕನ್ನಡ ಕ್ಷೇತ್ರದಲ್ಲಿ ಶೇ. 70ಕ್ಕಿಂತಲೂ ಹೆಚ್ಚಿನ ಮತದಾನ ಈವರೆಗೂ ಆಗಿಲ್ಲ ಎಂಬುದು ಕಟುಸತ್ಯ. ಉತ್ತರ ಕನ್ನಡ ಜಿಲ್ಲೆ ಗುಡ್ಡಗಾಡು ಪ್ರದೇಶ. ಇಲ್ಲಿ ಇದುವರೆಗೂ ವಿದ್ಯುತ್ ಕಾಣದ ಹಳ್ಳಿಗಳಿವೆ. ರಸ್ತೆಗಳಿಲ್ಲದ ಕುಗ್ರಾಮಗಳಿವೆ.
ಕಾರವಾರ, ಹಳಿಯಾಳ, ಯಲ್ಲಾಪುರದಂತಹ ಗಡಿ ತಾಲೂಕುಗಳ ಜನರಿಗೆ ತಾವು ಎಲ್ಲಿ ಮತದಾನ ಮಾಡಬೇಕು ಎಂಬುದೇ ಸರಿಯಾಗಿ ತಿಳಿದಿಲ್ಲ. ಇಂತಹ ಗ್ರಾಮಗಳಿಂದ ಮತಕ್ಷೇತ್ರ ತುಂಬಾ ದೂರದಲ್ಲಿರುವುದರಿಂದ ಜನರಿಗೆ ಮತದಾನ ಮಾಡಲೂ ಕಷ್ಟವಾಗುತ್ತದೆ.
ಮತದಾನದ ಬಗ್ಗೆ ತಿಳಿವಳಿಕೆ ಮೂಡಿಸುವ ಕೆಲಸವೂ ಆಗುತ್ತಿಲ್ಲ. ಇನ್ನು ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ 10 ಸಾವಿರಕ್ಕೂ ಹೆಚ್ಚು ಜನರು ಮತದಾರರ ಪಟ್ಟಿಗೆ ಸೇರಿಲ್ಲ. ಉದ್ಯೋಗ ನಿಮಿತ್ತ ಬೇರೆಡೆ ನೆಲೆಸಿರುವವರು ಒಂದು ದಿನದ ಸಲುವಾಗಿ ತಮ್ಮ ಊರಿಗೆ ಬರಲು ಹಿಂಜರಿಯುತ್ತಿದ್ದಾರೆ. ಹೀಗಾಗಿ, ಇಲ್ಲಿ ಮತದಾನ ಪ್ರಮಾಣ ಕುಸಿಯುತ್ತಿದೆ.
ಈ ಬಾರಿಯಾದರೂ ಜಿಲ್ಲೆಯ ಎಲ್ಲ ಮತದಾರರು ಎಚ್ಚೆತ್ತುಕೊಂಡು ಈ ಬಾರಿಯ ಮತದಾನದ ದಿನ ಅಂದರೆ ಏ. 17ರಂದು ತಪ್ಪದೇ ಮತದಾನ ಮಾಡಿ ಕ್ಷೇತ್ರದಲ್ಲಿ ಸೂಕ್ತ ಅಭ್ಯರ್ಥಿಯನ್ನು ಆರಿಸಬೇಕಾಗಿದೆ. ಜಿಲ್ಲಾಡಳಿತ ಮತದಾನದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಹೆಚ್ಚಿನ ಗಮನ ಕೊಟ್ಟು, ಮತದಾನ ಮಾಡಲು ಸಾಧ್ಯವಾಗದ ಕುಗ್ರಾಮಗಳ ಜನರಿಗೆ ಸೂಕ್ತ ಸೌಲಭ್ಯ ಒದಗಿಸಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.