ಶಿವಾನಂದ ನಾಯ್ಕ ನಾಮಪತ್ರ ಸಲ್ಲಿಕೆ
ಕನ್ನಡಪ್ರಭ ವಾರ್ತೆ, ಕಾರವಾರ, ಮಾ. 24
ಲೋಕಸಭಾ ಚುನಾವಣೆ ನಿಮಿತ್ತ ಸೋಮವಾರ ಜೆಡಿಎಸ್‌ನ ಉತ್ತರಕನ್ನಡ ಲೋಕಸಭಾ ಅಭ್ಯರ್ಥಿ ಶಿವಾನಂದ ನಾಯ್ಕ ಎರಡು ಸೆಟ್‌ಗಳಲ್ಲಿ ನಾಮಪತ್ರವನ್ನು ಚುನಾವಣಾಧಿಕಾರಿ ಎಂ.ಟಿ. ರೇಜು ಅವರಿಗೆ ಸಲ್ಲಿಸಿದರು.
ಸೋಮವಾರ ಬೆಳಗ್ಗೆ 11.40ಕ್ಕೆ ಕಾರವಾರ ಜಿಲ್ಲಾಧಿಕಾರಿ ಕಚೇರಿಗೆ ಪಕ್ಷದ ಜಿಲ್ಲಾಧ್ಯಕ್ಷ ಬಿ.ಆರ್. ನಾಯ್ಕ, ಮಾಜಿ ಸಚಿವ ಜೈವಂತ, ಮಾಜಿ ಶಾಸಕರಾದ ದಿನಕರ ಶೆಟ್ಟಿ, ಸುನೀಲ್ ಹೆಗಡೆ, ಶಶಿಭೂಷಣ ಹೆಗಡೆ, ಇನಾಯಿತುಲ್ಲಾ ಶಾಬಂದ್ರಿ, ಸುವರ್ಣ ಶಿವಾನಂದ ನಾಯ್ಕ ಹಾಗೂ ಅಪಾರ ಬೆಂಬಲಿಗರೊಂದಿಗೆ ಆಗಮಿಸಿದ ಶಿವಾನಂದ ನಾಯಕ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿದರು.
ನಂತರ ಪತ್ರಕರ್ತರ ಜೊತೆ ಮಾತನಾಡಿ, 35 ವರ್ಷಗಳಿಂದ ಜಿಲ್ಲೆಯಲ್ಲಿ ಹೊಂದಾಣಿಕೆಯ ರಾಜಕಾರಣ ಮಾಡುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಹಾಗೂ 4 ಬಾರಿ ಸಂಸದರಾಗಿ ಆಯ್ಕೆಯಾಗಿರುವ ಅನಂತಕುಮಾರ ಹೆಗಡೆ ಅವರ ಸಾಧನೆಯ ಅರಿವು ಜಿಲ್ಲೆಯ ಜನತೆಗಿದೆ.
ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಬೆಳೆದ ಪ್ರಶಾಂತ ದೇಶಪಾಂಡೆ ಜಿಲ್ಲೆಯ ಜನತೆಯ ಸಮಸ್ಯೆ, ಬೇಕು ಬೇಡಗಳನ್ನು ಅರಿಯಲು ಸಾಧ್ಯವಿಲ್ಲ. ಹೀಗಾಗಿ, ಅವರಿಂದ ಅಭಿವೃದ್ಧಿ ಕನಸಿನ ಮಾತು. ಇನ್ನು ಅನಂತ ಕುಮಾರ ಹೆಗಡೆ ಕೇವಲ ಭಾವನೆಗಳನ್ನು ಕೆಣಕಿ ರಾಜಕಾರಣ ಮಾಡುತ್ತಾರೆಯೇ ವಿನಹ ಅವರಿಂದ ಈ ಜಿಲ್ಲೆ 14 ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕಾಣಲು ಶಕ್ತವಾಗಿಲ್ಲ. ಹೀಗಾಗಿ ಈ ಇಬ್ಬರ ಆಡಳಿತ ವೈಫಲ್ಯತೆಯೇ ತಮಗೆ ವರದಾನವಾಗಲಿದೆ ಎಂದರು.
ಮಾಜಿ ಶಾಸಕ ಸುನೀಲ್ ಹೆಗಡೆ ಮಾತನಾಡಿ, ಕಾಂಗ್ರೆಸ್ ಹಾಗೂ ಬಿಜೆಪಿ ಜಿಲ್ಲೆಯಲ್ಲಿ ಜೆಡಿಎಸ್‌ಅನ್ನು ಕಡೆಗಣಿಸುತ್ತಿವೆ. ಆದರೆ, ಚುನಾವಣೆ ನಂತರ ಅವುಗಳಿಗೆ ಜೆಡಿಎಸ್‌ನ ನಿಜವಾದ ಶಕ್ತಿಯ ಅರಿವಾಗಲಿದೆ. ಪ್ರಶಾಂತ ದೇಶಪಾಂಡೆ ತಮ್ಮ ತಂದೆಯ ಹೆಸರನ್ನು ಹಾಗೂ ಅನಂತ ಕುಮಾರ ಮೋದಿಯ ಹೆಸರನ್ನು ಹೇಳಿಕೊಂಡು ಜನರ ಬಳಿ ಮತ ಕೇಳುತ್ತಾರೆ. ಇನ್ನೊಬ್ಬರ ಹೆಸರು ಹೇಳಿ ಮತ ಕೇಳುತ್ತಿರುವ ಇವರಿಬ್ಬರೂ ನಿಜವಾಗಿ ದುರ್ಬಲ ಅಭ್ಯರ್ಥಿಗಳು. ಆದರೆ ಶಿವಾನಂದ ನಾಯಕ ತಮ್ಮ ಸ್ವಂತ ಬಲದಿಂದ ಮತ ಯಾಚಿಸುತ್ತಿದ್ದಾರೆ. ಅವರು ಕೇವಲ 14 ತಿಂಗಳ ಕಾಲ ಸಚಿವರಾಗಿದ್ದರೂ ಜಿಲ್ಲೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇದನ್ನು ಜನ ಮರೆತಿಲ್ಲ. ಹೀಗಾಗಿ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಸ್ಪಷ್ಟ ಬಹುಮತ ಗಳಿಸಿ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಶ್ಚಿಮ ಘಟ್ಟ ದೇಶದ ಉಸಿರು: ಅನಂತ ಕುಮಾರ ಹೆಗಡೆ
ಜೋಯಿಡಾ: ಪಶ್ಚಿಮ ಘಟ್ಟ ನಮ್ಮ ದೇಶಕ್ಕೆ ಉಸಿರು ಇದ್ದಂತೆ. ಈ ಬೆಟ್ಟವನ್ನು ರಕ್ಷಿಸಿ ಕಾಪಾಡದಿದ್ದರೆ ಮುಂದಿನ ಪೀಳಿಗೆಗೆ ನಾವು ಏನನ್ನೂ ಕೊಡಲು ಸಾಧ್ಯವಿಲ್ಲ. ಆದ್ದರಿಂದ ಪಶ್ಚಿಮ ಘಟ್ಟ ಪ್ರದೇಶ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಸಂಸದ ಅನಂತ ಕುಮಾರ ಹೆಗಡೆ ಹೇಳಿದರು.
ತಾಲೂಕಿನಲ್ಲಿ ಎರಡು ದಿನಗಳ ಪ್ರವಾಸ ಮಾಡಿ ಎಲ್ಲ ಪಂಚಾಯಿತಿಗಳ ಕಾರ್ಯಕರ್ತರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ತಾಲೂಕಿನ ಯರಮುಖದಲ್ಲಿ ಕಾರ್ಯಕರ್ತರೊಂದಿಗೆ ಮಾತನಾಡಿ, ಕಸ್ತುರಿ ರಂಗನ್ ವರದಿ ಸರ್ಕಾರಕ್ಕೆ ನೀಡಲಾಗಿದೆ. ಆದರೆ, ಈ ವರದಿ ಸಂಸತ್ತಿನಲ್ಲಿ ಮಂಡನೆಯಾಗಿಲ್ಲ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವಾರು ಹಳ್ಳಿಗಳನ್ನು ಈ ವರದಿಯಲ್ಲಿ ತೋರಿಸಲಾಗಿದೆ. ಆದರೆ, ಇದು ಕೇವಲ ವರದಿ ಮಾತ್ರ ಎಂದು ಹೇಳೀದರು.
ಮುಂಬರುವ ಲೋಕಸಭಾ ಚುನಾವಣೆ ಕುರಿತಂತೆ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಪ್ರದೀಪ ದೇಸಾಯಿ, ಜಿಲ್ಲಾ ಉಪಾಧ್ಯಕ್ಷ ಎನ್.ವಿ. ಹೆಗಡೆ, ಕಾರ್ಯದರ್ಶಿ ಮನೋಜ ಅನಸ್ಕರ್, ಶ್ರೀಪಾದ ದೇಸಾಯಿ, ಸುಬ್ರಾಯ ದಾನಗೇರಿ, ಶ್ರೀಶೈಲ ದಾನಗೇರಿ, ಶಶಿಕುಮಾರ ಹೆಗಡೆ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

