ಕಂಬಳಬೆಟ್ಟು ಹಲ್ಲೆ ಪ್ರಕರಣ; ಪ್ರತಿದೂರು
ವಿಟ್ಲ: ಇಲ್ಲಿಗೆ ಸಮೀಪದ ಕಂಬಳಬೆಟ್ಟುವಿನಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಧಿಸಿದಂತೆ ತನ್ನ ತಂದೆ ಅಬ್ದುಲ್ ಲತೀಫ್ ಅವರೊಂದಿಗೆ ನಡೆದುಕೊಂಡು ಹೋಗುತ್ತಿದ್ದ ದಿಲ್ಶಾನ್ ಬಾನು(39) ಮೇಲೆ 11 ಮಂದಿಯ ತಂಡ ಮಾನಭಂಗಕ್ಕೆ ಯತ್ನಿಸಿದೆ ಎಂದು ವಿಟ್ಲ ಠಾಣೆಯಲ್ಲಿ ಪ್ರತಿದೂರು ದಾಖಲಾಗಿದೆ. ಆಕೆ ನಡೆದುಕೊಂಡು ಹೋಗುತ್ತಿದ್ದಾಗ ಜೀಪಿನಲ್ಲಿ ಆಗಮಿಸಿದ 9 ಮಂದಿ ಮತ್ತು ಬೈಕ್ನಲ್ಲಿ ಆಗಮಿಸಿದ ಇಬ್ಬರು ಆಕೆಯ ಕೈಯನ್ನು ಎಳೆದು ಜೀಪಿಗೆ ಹತ್ತಿಸಿ, ಮಾನಭಂಗಕ್ಕೆ ಯತ್ನಿಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ. ಕರುಣಾಕರ್, ಲಿಂಗಪ್ಪ, ಲೋಹಿತ್ ಮತ್ತು ಇತರ 8 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತ್ಯೇಕ ಪ್ರಕರಣ: ತಂಡ ಹಲ್ಲೆ- ದೂರು
ಉಪ್ಪಿನಂಗಡಿ: ಮೊಬೈಲ್ನಲ್ಲಿ ಎಸ್ಎಂಎಸ್ ಕಳುಹಿಸಿದ್ದ ಕಾರಣಕ್ಕೆ ಖಲಂದರ್ ಸಾಧಿಕ್ (28) ಎಂಬವರ ಮೇಲೆ ದುಷ್ಕರ್ಮಿಗಳ ಗುಂಪೊಂದು ಹಲ್ಲೆ ನಡೆಸಿದ ಘಟನೆ ನೆಲ್ಯಾಡಿಯಲ್ಲಿ ನಡೆದಿದೆ. ನೆಲ್ಯಾಡಿಯ ಅತ್ತಾಜೆ ನಿವಾಸಿ ಖಲಂದರ್ ಸಾಧಿಕ್ ಅವರು ಗುಂಪೊಂದು ಎಸ್ಎಂಎಸ್ ಕಳುಹಿಸಿದ್ದಕ್ಕೆ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾಗ ಕೆ.ಇ. ಅಬೂಬಕ್ಕರ್, ನೌಶಾದ್, ಕೆ.ಇ. ಇರ್ಷಾದ್, ಹಮೀದ್, ಅಬ್ಬಾಸ್, ಅಯೂಬ್ ಎಂಬವರು ಹೊಡೆದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಆಸ್ಪತ್ರೆಗೆ ದಾಖಲಾಗಿರುವ ಖಲಂದರ್ ಸಾಧಿಕ್ ಪೊಲೀಸರಿಗೆ ದೂರು ನೀಡಿದ್ದು, ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಮೀದ್ಗೆ ಹಲ್ಲೆ: ಮುಸ್ಲಿಂ ಸಂಘಟನೆಗಳಲ್ಲಿ ಗುರುತಿಸಿಕೊಂಡ ಕಾರಣಕ್ಕೆ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ನಿವಾಸಿ ಹಮೀದ್ ಎಂಬವರ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಜಾಫರ್, ಶಾಹಿದ್, ಮುಂಚಿ ಸಿದ್ದಿಕ್, ಎಂ.ಜಿ. ಸಿದ್ದಿಕ್, ಸಿದ್ದಿಕ್ ಅತ್ತಾಜೆ, ಜುನೈರ್, ಸಾಕೀರ್ ಮತ್ತಿತರರು ಕೂಡಿಕೊಂಡು ತನ್ನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಮೀದ್ ಪೊಲೀಸರಿಗೆ ದೂರು ನೀಡಿದ್ದಾರೆ. ಉಪ್ಪಿನಂಗಡಿ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಕಲ್ಲಡ್ಕ ಗಲಭೆ ಆರೋಪಿಗಳಿಗೆ ಜಾಮೀನು
ಮಂಗಳೂರು: ಕಲ್ಲಡ್ಕದಲ್ಲಿ ಕಾಂಗ್ರೆಸ್ ಸಾಮರಸ್ಯದ ಕಾರ್ಯಕ್ರಮದಲ್ಲಿ ಕಲ್ಲು ತೂರಾಟ ನಡೆಸಿದ ಆರೋಪಿಗಳಿಗೆ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಜಾಮೀನು ನೀಡದೆ. ಫೆ.8ರಂದು ಕಲ್ಲಡ್ಕದಲ್ಲಿ ಕಾಂಗ್ರೆಸ್ ಸಮಾರಸ್ಯ ಸಮಾವೇಶ ಆಯೋಜಿಸಿತ್ತು. ಈ ಸಂದರ್ಭ ಜಿಲ್ಲಾ ಪಂಚಾಯ್ತಿ ಸದಸ್ಯ ತುಂಬೆ ಪ್ರಕಾಶ್ಚಂದ್ರ ಶೆಟ್ಟಿ ಭಾಷಣದಲ್ಲಿ ಆರ್ಎಸ್ಎಸ್ಮುಖಂಡ ಪ್ರಭಾಕರ ಭಟ್ಟರನ್ನು ದೂಷಿಸಿದ್ದರು. ಆಗ ಗುಂಪೊಂದು ಕಲ್ಲು, ಸೋಡಾಬಾಟ್ಲಿಗಳನ್ನು ಎಸೆದಿತ್ತು. ಒಂದುವರೆ ಗಂಟೆಗಳ ಕಾಲ ಕಲ್ಲು ತೂರಾಟ ಗಲಾಟೆ ನಡೆದಿತ್ತು. ಬಳಿಕ ಪೊಲೀಸರು ಬಂದು ಲಾಠಿ ಚಾರ್ಜ್ ನಡೆಸಿದರು. ಬಂಧಿತ ಆರೋಪಿಗಳು ಸ್ಥಳದಲ್ಲಿಯೇ ಇರಲಿಲ್ಲ, ಕಾಂಗ್ರೆಸ್ ಚಿತಾವಣೆ ಮೇರೆಗೆ ಕೇಸ್ ದಾಖಲಿಸಲಾಗಿದೆ ಎಂದು ವಕೀಲ ಪಿ.ಪಿ. ಹೆಗ್ಡೆ ವಾದ ಮಂಡಿಸಿದ್ದರು. ಆರೋಪಿಗಳಾದ ಪೂವಪ್ಪ ಚೇತನ್, ಗುರುವಪ್ಪ, ಲೋಕೇಶ್ ಕೋರ್ಟ್ ಜಾಮೀನು ಮಂಜೂರು ಮಾಡಿತು.
ಬೈಕ್ ಮಗುಚಿ ಸಹಸವಾರ ಸಾವು
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಶಿಶಿಲ ಎಂಬಲ್ಲಿ ಬೈಕ್ ಮಗುಚಿ ಬಿದ್ದು ಸಹ ಸವಾರ ಬಾಲಕೃಷ್ಣ ಗೌಡ (25) ಮೃತಪಟ್ಟ ಘಟನೆ ಬುಧವಾರ ರಾತ್ರಿ ಸಂಭವಿಸಿದೆ. ಬಾಲಕೃಷ್ಣ ಗೌಡ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕಜೆಕೋಡಿ ಮನೆ ನಿವಾಸಿಯಾಗಿದ್ದು, ಟಿಪ್ಪರ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೆನ್ನಲಾಗಿದೆ. ಪರಿಚಯಸ್ಥರಾದ ಬಾಲಕೃಷ್ಣ ಎಂಬವರೊಂದಿಗೆ ಬೈಕ್ನಲ್ಲಿ ತನ್ನ ಮನೆಗೆ ಹೋಗುತ್ತಿದ್ದಾಗ ಬೈಕ್ ಮಗುಚಿ ಬಿದ್ದು ಇಬ್ಬರೂ ಗಾಯಗೊಂಡಿದ್ದರು. ಕೂಡಲೇ ಅವರಿಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಯಿತಾದರೂ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಬಾಲಕೃಷ್ಣ ಗೌಡ ಮೃತಪಟ್ಟಿದ್ದಾರೆ. ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಳೆಗೆ ಬಿದ್ದು ವ್ಯಕ್ತಿ ಸಾವು
ಬೈಂದೂರು: ಇಲ್ಲಿನ ಬಿಜೂರು ಗ್ರಾಮದ ಕರಿಕುಪ್ಪನಮನೆ ಎಂಬಲ್ಲಿ ಮಲವಿಸರ್ಜನಗೆ ಹೋಗಿದ್ದ ವ್ಯಕ್ತಿಯೊಬ್ಬರು ಹೊಳೆಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮೃತರು ರಾಘವೇಂದ್ರ (33). 24ರಂದು ರಾತ್ರಿ 12 ಗಂಟೆಗೆ ಮಲವಿಸರ್ಜನೆಗಾಗಿ ಮನೆ ಸಮೀಪದ ಹೊಳೆಯ ಬಳಿ ಹೋಗಿದ್ದು, ವಾಪಸ್ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಡಿದರೂ ಎಲ್ಲೂ ಅವರ ಪತ್ತೆಯಾಗಲಿಲ್ಲ. ಬುಧವಾರ ಸಂಜೆ ರಾಘವೇಂದ್ರ ಅವರ ಶವ ಹೊಳೆಯಲ್ಲಿ ಸ್ವಲ್ಪ ದೂರ ಪೊದೆಯಲ್ಲಿ ಪತ್ತೆಯಾಗಿರುತ್ತದೆ. ಅವರು ಕಾಲು ಜಾರಿ ಹೊಳೆಗೆ ಬಿದ್ದು ಉಸಿರುಗಟ್ಟಿ ಮೃತಪಟ್ಟಿದ್ದು, ಶವವು ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿರಬೇಕು ಎಂದು ಮೃತರ ಸಹೋದರ ಸುರೇಶ ಅವರ ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹಿಣಿ ಅತ್ಯಾಚಾರ: ಆರೋಪಿ ಸೆರೆ
ಬೆಳ್ತಂಗಡಿ: ಗೃಹಿಣಿ ಮೇಲೆ ಅತ್ಯಾಚಾರ ನಡೆಸಿದ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಉಜಿರೆ ಹಳೆಪೇಟೆ ನಿವಾಸಿ ಇಕ್ಬಾಲ್ (25) ಬಂಧಿತ ಆರೋಪಿ. ಈತ ಹಳೆಪೇಟೆ ಕಕ್ಕರಬೆಟ್ಟು ನಿವಾಸಿ ಮಹಿಳೆಯೊಬ್ಬರ (35) ಮನೆಗೆ ಕಟ್ಟಿಗೆ ಒಡೆಯುವ ಕೆಲಸಕ್ಕೆ ಬಂದಿದ್ದ. ಮಧ್ಯಾಹ್ನ ವೇಳೆ ನೀರು ಬೇಕೆಂದು ಮನೆಯೊಡತಿಯನ್ನು ಕೇಳಿದ್ದ. ಆಕೆ ನೀರು ತರಲೆಂದು ಒಳಗೆ ಹೋದಾಗ ಈತನೂ ಮನೆ ಪ್ರವೇಶಿಸಿ ಅತ್ಯಾಚಾರ ನಡೆಸಿದ್ದಾನೆ. ಗೃಹಿಣಿ ಪೊಲೀಸರಿಗೆ ದೂರು ನೀಡಿದ್ದು, ಕೂಡಲೆ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಅಪಘಾತ:
ಪುತ್ತೂರು: ಶಾಲೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ರಿಕ್ಷಾ ಮತ್ತು ಸ್ಕೂಟರ್ ಡಿಕ್ಕಿಯಾಗಿ ವಿದ್ಯಾರ್ಥಿನಿ ಗಾಯಗೊಂಡ ಘಟನೆ ಪುತ್ತೂರು ತಾಲೂಕು ಕಚೇರಿ ಬಳಿ ಸರ್ಕಲ್ನಲ್ಲಿ ನಡೆದಿದೆ. ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿರುವ ಉದಯ ಎಂಬವರ ಪುತ್ರಿ ಇಲ್ಲಿನ ಸಂತ ವಿಕ್ಟರ್ಸ್ ಬಾಲಕಿಯರ ಶಾಲೆ ವಿದ್ಯಾರ್ಥಿನಿ ರೋಶನಿ(6)ಗಾಯಗೊಂಡಿದ್ದಾಳೆ. ಡಿಕ್ಕಿ ವೇಳೆ ರಿಕ್ಷಾ ಪಲ್ಟಿಯಾಗಿದ್ದು ರಿಕ್ಷಾದೊಳಗಿದ್ದ ರೋಶನಿ ರಸ್ತೆಗೆಸೆಯಲ್ಪಟ್ಟು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ರಿಕ್ಷಾ ಚಾಲಕ ನಿಡ್ಪಳ್ಳಿಯ ವಿಶ್ವನಾಥ ಅವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಅವರು ಚಿಕಿತ್ಸೆ ಪಡೆದು ತೆರಳಿದ್ದಾರೆ.
ಸೈಕಲ್ಗೆ ಬೈಕ್ ಡಿಕ್ಕಿ; ಇಬ್ಬರಿಗೆ ಗಾಯ
ಪುತ್ತೂರು: ಸೈಕಲ್ಗೆ ಬೈಕ್ ಡಿಕ್ಕಿಯಾಗಿ ಇಬ್ಬರು ಗಾಯಗೊಂಡ ಘಟನೆ ನಗರದ ಹೊರವಲಯದ ಬನ್ನೂರು ಕರ್ಮಲದಲ್ಲಿ ನಡೆದಿದೆ. ಬನ್ನೂರು ಕರ್ಮಲ ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಪುತ್ರ ಹಾರಾಡಿ ಶಾಲೆಯ ವಿದ್ಯಾರ್ಥಿ ಮಹಮ್ಮದ್ ಇಸ್ಮಾಯಿಲ್(9) ಮತ್ತು ಬೈಕ್ ಸವಾರ ಕಂಬಳ ಬೆಟ್ಟು ಪುಳಿತ್ತಗುರಿ ಈಶ್ವರ ನಾಯ್ಕ ಎಂಬವರ ಪುತ್ರ ಕಿಶೋರ್(30) ಗಾಯಗೊಂಡವರು. ಮಹಮ್ಮದ್ ಇಸ್ಮಾಯಿಲ್ ತನ್ನ ಮನೆ ಸಮೀಪದ ರಸ್ತೆಯಲ್ಲಿ ಸೈಕಲ್ನಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ಗಾಯಗೊಂಡು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಕಿಶೋರ್ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪ್ರಾಪ್ತೆ
ಉಪ್ಪಿನಂಗಡಿ: ಸುರಕ್ಷತೆಗಾಗಿ ಮನೆಗೆ ಮಲಗಲು ಬರುತ್ತಿದ್ದ ತನ್ನ ಅಪ್ರಾಪ್ತ ವಯಸ್ಕ ಅತ್ತೆ ಮಗಳ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪಿ ನಾಗೇಶ ಗೌಡ ಎಂಬಾತನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿದ್ದ ಕೌಕ್ರಾಡಿ ಗ್ರಾಮದ ಬದಿಯಡ್ಕ ನಿವಾಸಿಯಾಗಿರುವ ಆರೋಪಿ ನಾಗೇಶನನ್ನು ಶಿಶಿಲದಲ್ಲಿ ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ. ಆರೋಪಿ ಮದ್ಯ ವ್ಯಸನಿಯಾಗಿದ್ದು, ತನ್ನ ಮನೆಗೆ ಸುರಕ್ಷತೆಯ ದೃಷ್ಟಿಯಿಂದ ಮಲಗಲು ಬರುತ್ತಿದ್ದ ತನ್ನ ನೆರೆ ಮನೆಯ ನಿವಾಸಿ ಹಾಗೂ ಅತ್ತೆಯ ಮಗಳಾದ 17ರ ಹರೆಯದ ಯುವತಿ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಿ, ಆಕೆ ಗರ್ಭವತಿಯಾಗಲು ಕಾರಣವಾಗಿದ್ದಾನೆ. ಈ ಬಗ್ಗೆ ಮಾ. 23 ರಂದು ಯುವತಿ ಪೊಲೀಸರಿಗೆ ದೂರು ನೀಡಿದ್ದಳು.
ಹೊಳೆಗೆ ಬಿದ್ದು ಮೃತ್ಯು
ಸುಳ್ಯ: ಸಂಪಾಜೆ ಗ್ರಾಮದ ಕೊಯನಾಡು ಎಂಬಲ್ಲಿ ವ್ಯಕ್ತಿಹೊಳೆಗೆ ಬಿದ್ದು ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಕೃಷ್ಣ (60) ಎಂಬವರು ಬಟ್ಟೆ ತೊಳೆಯಲು ಹೋದಾಗ ಆಕಸ್ಮಿಕವಾಗಿ ಹೊಳೆಗೆ ಬಿದ್ದು ಮೃತಪಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

