ದಕ್ಷಿಣ ಕನ್ನಡ

ಸರಣಿ ಕಳ್ಳತನ

Published On :

ಪುತ್ತೂರು: ತಾಲೂಕಿನ ಮಾಣಿ- ಮೈಸೂರು ರಾಜ್ಯ ರಸ್ತೆ ಬದಿಯಲ್ಲಿರುವ ಆರ್ಯಾಪು ಗ್ರಾಮದ ಸಂಪ್ಯ, ಸಂಟ್ಯಾರು, ಕಲ್ಲರ್ಪೆ ಬಳಿಯ ನಾಲ್ಕು ಮನೆಗಳಲ್ಲಿ ಸರಣಿ ಕಳ್ಳತನ ನಡೆದಿದೆ.
ಆರ್ಯಾಪು ಗ್ರಾಮದ ಸಂಪ್ಯ ನಿವಾಸಿ ದಿ.ಎ.ಪಿ. ರೈ ಎಂಬವರ ಪತ್ನಿ ವಿಜಯ ರೈ ಬೆಂಗಳೂರಿನಲ್ಲಿರುವ ಮಗಳ ಮನೆಗೆ ಹೋದ ಸಂದರ್ಭ ಮನೆಯ ಮುಂಬಾಗಿಲ ಚಿಲಕ ಮುರಿದು ಒಳ ನುಗ್ಗಿದ ಕಳ್ಳರು, ಕಪಾಟಿನಲ್ಲಿದ್ದ ವಸ್ತುಗಳನ್ನು ಜಾಲಾಡಿ 10 ಪವನ್‌ನ ನಾಲ್ಕು ಚಿನ್ನದ ಬಳೆ, 2.5 ಪವನ್‌ನ 2 ಉಂಗುರ ಕಳವು ಮಾಡಿದ್ದಾರೆ. ಕಳವಾದ ಚಿನ್ನದ ಮೌಲ್ಯ ರು. 2.80 ಲಕ್ಷ ಎಂದು ಅಂದಾಜಿಸಲಾಗಿದೆ. ಕಳ್ಳರು ಇಡೀ ಮನೆ ಜಾಲಾಡಿ ಫ್ರಿಜ್‌ನಲ್ಲಿದ್ದ ತಂಪು ಪಾನೀಯ ಮತ್ತು ಗೇರು ಬೀಜ ಕೊಂಡೊಯ್ದು ಮನೆಯ ಹೊರಗಡೆ ಸೇವಿಸಿ ಬಳಿಕ ಪರಾರಿಯಾಗಿದ್ದಾರೆ. ವಿಜಯ ಅವರ ಅಳಿಯ ಸತೀಶ್ ಪೈ ಪುತ್ತೂರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.
ಹಂಟ್ಯಾರು ಶಾಲೆ ಬಳಿಯ ಸೂಫಿ ಬ್ಯಾರಿ ಎಂಬವರ ಮನೆಯ ಅಡುಗೆ ಕೋಣೆಯ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು, ನಡುಮನೆಯಲ್ಲಿದ್ದ ಕಪಾಟನ್ನು ತೆರೆದು ಹುಡುಕಾಡಿದ್ದಾರೆ. ಮಾಳಿಗೆ ತನಕ ಹೋಗಿ ಯಾವುದೇ ವಸ್ತು ಸಿಗದಾಗ ಪಕ್ಕದ ಆನಂದ ಲಕ್ಷ್ಮಿ ಎಂಬವರ ಮನೆಗೆ ನುಗ್ಗಿ ರು. 2 ಸಾವಿರ ನಗದು ದೋಚಿದ್ದಾರೆ. ಮಲಗಿದ್ದ ಆನಂದ ಲಕ್ಷ್ಮಿ ಅವರ ಕರಿಮಣಿ ಸರವನ್ನು ಕಳ್ಳರು ಎಳೆದಾಗ ಅವರು ಕಿರುಚಾಡಿದರು. ಆದರೂ ಕಳ್ಳರ ಹಿಡಿತಕ್ಕೆ ಸರದ ಒಂದು ಎಳೆ ಸಿಕ್ಕಿದ್ದು, ತಕ್ಷಣ ಓಡಿ ಪರಾರಿಯಾಗಿದ್ದಾರೆ. ಆನಂದ ಲಕ್ಷ್ಮಿ ತಕ್ಷಣ ಪುತ್ತೂರು ಗ್ರಾಮಾಂತರ ಠಾಣೆಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಸಂಪ್ಯ ಬಳಿಯ ಕೊಲ್ಯದ ಜಮೀಳ ಎಂಬವರ ಮನೆಯ ಬಾಗಿಲು ಮುರಿದ ಶಬ್ದಕ್ಕೆ ಎಚ್ಚರಗೊಂಡು ಮನೆಮಂದಿ ಹೊರಬಂದಾಗ ಕಳ್ಳರು ಓಡಿ ಪರಾರಿಯಾಗಿದ್ದಾರೆ. ಈ ಸರಣಿ ಕಳ್ಳತನದಿಂದಾಗಿ ಜನರಲ್ಲಿ ಭೀತಿ ಮೂಡಿದೆ. ಘಟನಾ ಸ್ಥಳಕ್ಕೆ ಸರ್ಕಲ್ ಇನ್ಸ್‌ಪೆಕ್ಟರ್ ಸುರೇಶ್ ಕುಮಾರ್, ಸಂಪ್ಯ ಎಸ್‌ಐ ಜಗದೀಶ್ ರೆಡ್ಡಿ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು, ಶ್ವಾನದಳವನ್ನು ಕರೆಸಲಾಗಿದೆ.
ಚಿನ್ನ, ನಗದು ಕಳವು
ಉಪ್ಪಿನಂಗಡಿ: ತೆಕ್ಕಾರು ಗ್ರಾಮದ ನೆಲ್ಲಿಪಳಿಕೆ ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ್ದ ಕಳ್ಳರು ಹತ್ತು ಪವನ್‌ಗೂ ಹೆಚ್ಚು ತೂಕದ ಚಿನ್ನಾಭರಣ ಹಾಗೂ ಒಂದು ಲಕ್ಷ ನಗದು ಹಣವನ್ನು ಕದ್ದೊಯ್ದ ಘಟನೆ ಶನಿವಾರ ಹಾಡುಹಗಲೇ ನಡೆದಿದೆ.
ದಿವಂಗತ ಅಣ್ಣು ಪೂಜಾರಿ ಎಂಬವರ ಮಗನಾದ ಉಮೇಶ್ ಪೂಜಾರಿ ಎಂಬವರ ಮನೆಗೆ ಕಳ್ಳರು ನುಗ್ಗಿದ್ದು, ಮನೆಯ ಕಪಾಟಿನೊಳಗಿದ್ದ ನಗ ನಗದನ್ನು ದೋಚಿ ಪರಾರಿಯಾಗಿದ್ದಾರೆ. ಮನೆ ಮಂದಿ ಸಂಬಂಧಿಕರ ಮನೆಯಲ್ಲಿ ನಡೆದ ಪೂಜೆಗೆಂದು ಹೋಗಿದ್ದ ಸಂದರ್ಭದಲ್ಲಿ ಈ ಕಳ್ಳತನವಾಗಿದೆ. ಕಳ್ಳರು ಕಪಾಟಿನ ಬೀಗ ಮತ್ತು ಮನೆಯ ಬೀಗವನ್ನು ನಕಲಿ ಬೀಗದ ಕೈ ಬಳಸಿ ತೆಗೆದಂತಿದ್ದು, ಮನೆಯ ವಿಚಾರ ತಿಳಿದೇ ಈ ಕೃತ್ಯಗೈದಿರುವ ಸಾಧ್ಯತೆಯನ್ನು ಅಂದಾಜಿಸಲಾಗಿದೆ.
 ಮುಂದಿನ ಶುಕ್ರವಾರ ಉಮೇಶ್ ಪೂಜಾರಿಯವರ ಮದುವೆ ನಿಗದಿಯಾಗಿದ್ದು, ಮದುವೆಗೆಂದು ಮಾಡಿಸಿಟ್ಟ 8 ಪವನ್ ತೂಕದ ಚಿನ್ನಾಭರಣ ಮತ್ತು ಅಕ್ಕ ವಿನೋದ ಎಂಬವರ ಮಗಳಾದ ಸಂಧ್ಯಾ ಎಂಬಾಕೆಯ ಚಿನ್ನಾಭರಣ ಸೇರಿದಂತೆ ಹತ್ತು ಪವನ್‌ಗಿಂತಲೂ ಹೆಚ್ಚಿನ ತೂಕದ ಚಿನ್ನಾಭರಣ ಮತ್ತು ಮದುವೆಯ ಖರ್ಚಿಗಾಗಿ ಒಂದು ಲಕ್ಷ ನಗದು ಹಣವನ್ನು ಮನೆಯ ಕಪಾಟಿನೊಳಗೆ ಇರಿಸಲಾಗಿತ್ತು.
ಈ ಎಲ್ಲಾ ಚಿನ್ನಾಭರಣವನ್ನು ಹಾಗೂ ನಗದು ಹಣವನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ. ಮಾತ್ರವಲ್ಲದೆ ಮನೆಯ ಪೆಟ್ಟಿಗೆಯಲ್ಲಿದ್ದ ರೇಷನ್ ಕಾರ್ಡ್, ದಾಖಲೆ ಪತ್ರಗಳನ್ನು ದೋಚಿದ್ದಾರೆ. ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಿಷೇಧಿತ ಸ್ಥಳದಲ್ಲಿ ಮೀನುಗಾರಿಕೆ; ಆರು ಮಂದಿ ಸೆರೆ
ಉಪ್ಪಿನಂಗಡಿ: ಸರ್ಕಾರ ಮೀನುಗಾರಿಕೆ ನಿಷೇಧಿಸಿರುವ ಕುಮಾರಾಧಾರ ನದಿಯ ಮತ್ಸ್ಯಧಾಮ- ದೇವರಗುಂಡಿಗೆ ಸ್ಫೋಟಕಗಳನ್ನು ಹಾಕಿ ಮೀನು ಹಿಡಿದ ಪ್ರಕರಣ ಶನಿವಾರ ನಡೆದಿದ್ದು, ಈ ಸಂಬಂಧ ಉಪ್ಪಿನಂಗಡಿ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೋಣಾಜೆ ಗ್ರಾಮದ ವ್ಯಾಪ್ತಿಯಲ್ಲಿರುವ ಈ ಪ್ರದೇಶವು ಐತ್ತೂರು ಶ್ರೀ ಗೋಪಾಲಕೃಷ್ಣ ದೇವರ ಮತ್ಸ್ಯಧಾಮವಾಗಿದ್ದು, ಉರುವೆತ್ತಾರು ದೇವರಗುಂಡಿ ಎಂದೇ ಪ್ರಖ್ಯಾತವಾಗಿರುವ ಈ ಪ್ರದೇಶದಲ್ಲಿ ಮೀನುಗಾರಿಕೆಯನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಹಿಂದೂ ಸಮಾಜದ ಧಾರ್ಮಿಕ ನಂಬಿಕೆಯ ಸ್ಥಳವಾಗಿಯೂ ಇದು ಪ್ರಸಿದ್ಧಿಯಾಗಿದೆ. ಇಲ್ಲಿರುವ ಮೀನಿನ ಮೇಲೆ ಕಣ್ಣಿಟ್ಟಿದ್ದ ಕೊಕ್ಕಡದ ನಿವಾಸಿಗರಾದ ಇಬ್ರಾಹಿಂ, ಜುನೈದ್, ಸಾಹುಲ್ ಹಮೀದ್,  ಅಬ್ದುಲ್ ಖಾದರ್, ಉಮ್ಮರ್, ಅಜೀಜ್ ಎಂಬ ಆರು ಮಂದಿ ಶನಿವಾರ ದೇವರ ಗುಂಡಿಗೆ ಸ್ಫೋಟಕಗಳನ್ನು ಸಿಡಿಸಿ ಮೀನಿನ ಮಾರಣ ಹೋಮ ನಡೆಸಿದ್ದಾರೆ. ಸುಮಾರು 30 ಕೆ.ಜಿ.ಗೂ ಮಿಕ್ಕಿದ ಮೀನುಗಳನ್ನು ಸಂಗ್ರಹಿಸುತ್ತಿದ್ದಂತೆಯೇ ಮಾಹಿತಿ ತಿಳಿದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು. ನೆಲ್ಯಾಡಿ ಹೊರಠಾಣೆ ಪೊಲೀಸರು ತಕ್ಷಣವೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ಕಾಡಾನೆ ದಾಳಿ: ಫಸಲು, ಕೃಷಿ ಉಪಕರಣ ನಾಶ
ಸುಬ್ರಹ್ಮಣ್ಯ: ನಾಲ್ಕೂರು ಗ್ರಾಮದ ಅರಣ್ಯದಲ್ಲಿ ಬೀಡು ಬಿಟ್ಟ ಕಾಡಾನೆಗಳ ಹಿಂಡು ಶುಕ್ರವಾರ ರಾತ್ರಿ ಮತ್ತೆ ಇಲ್ಲಿಯ ಕೃಷಿಕರ ತೋಟಗಳಿಗೆ ದಾಳಿ ಇಟ್ಟು, ಬೆಳೆ ಹಾಗೂ ಕೃಷಿ ಸಲಕರಣೆಗಳನ್ನು ನಾಶಗೊಳಿಸಿದೆ. ಇಲ್ಲಿಯ ಸುಂದರ ಗೌಡರಿಗೆ ಸೇರಿದ ತೆಂಗು, ಕಂಗು, ಬಾಳೆ ಗಿಡಗಳನ್ನು ನಾಶಪಡಿಸಿ ಅಪಾರ ನಷ್ಟ ಉಂಟು ಮಾಡಿದೆ. ಸ್ಥಳಕ್ಕೆ ಅರಣ್ಯ ರಕ್ಷಕ ಧರ್ಣಪ್ಪ, ಗ್ರಾಮ ಅರಣ್ಯ ಸಮಿತಿಯ ಸದಸ್ಯ ದಿನೇಶ್ ಹಾಲೆಮಜಲು ಭೇಟಿ ನೀಡಿದರು.
ಕಂಬಳಬೆಟ್ಟು ಗಲಭೆ; ಮತ್ತೊಬ್ಬ ಆರೋಪಿ ಸೆರೆ
ವಿಟ್ಲ: ಇಲ್ಲಿನ ಕಂಬಳಬೆಟ್ಟಿನಲ್ಲಿ ಮಾ. 25ರಂದು ನಡೆದ ಅನ್ಯಕೋಮಿನ ಯುವಕರ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಬ್ಬ ಆರೋಪಿಯನ್ನು ವಿಟ್ಲ ಪೊಲೀಸರು ಕಂಬಳಬೆಟ್ಟು ಜಂಕ್ಷನ್ ಬಳಿ ಗುರುವಾರ ಬಂಧಿಸಿದ್ದಾರೆ. ವಿಟ್ಲ ಕಸಬಾ ಗ್ರಾಮದ ಕೊಲಂಬೆ ನಿವಾಸಿ ಬಶೀರ್ ಅಹಮ್ಮದ್ (40) ಬಂಧಿತ ಆರೋಪಿ. ಈತ ಗುರುವಾರ ಸಂಜೆ ಪುತ್ತೂರು ಕಡೆಯಿಂದ ತನ್ನ ಮನೆಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ತಡೆದ ವಿಟ್ಲ ಪೊಲೀಸರು ಆತನನ್ನು  ಬಂಧಿಸಿ, ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಘಟನೆ ನಡೆದು 24 ಗಂಟೆಯೊಳಗೆ ಐವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಂಧಿತರ ಸಂಖ್ಯೆ 6ಕ್ಕೇರಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.