ಬೆಳ್ತಂಗಡಿ; ವಿದ್ಯುತ್ ಸಮಸ್ಯೆ ಉಲ್ಬಣ
ಬೆಳ್ತಂಗಡಿ: ತಾಲೂಕಿನಲ್ಲಿ ಎಲ್ಲೆಂದರಲ್ಲಿ ವಿದ್ಯುತ್ ಸಮಸ್ಯೆ ತಾಂಡವವಾಡುತ್ತಿದೆ. ಜನತೆ ಪ್ರತಿನಿತ್ಯ ಎಂಬಂತೆ ಶಾಪ ಹಾಕುತ್ತಿದ್ದಾರೆ.
ಗುರುವಾಯನಕೆರೆ ಫೀಡರ್, ಕಕ್ಕಿಂಜೆ ಫೀಡರ್, ನಾರಾವಿ, ವೇಣೂರು, ನಿಡ್ಲೆ, ಶಿಶಿಲ, ಶಿಬಾಜೆ, ಬಂಗಾಡಿ, ಕಿಲ್ಲೂರು, ಕೊಯ್ಯೂರು ಹೀಗೆ ತಾಲೂಕಿನ ಎಲ್ಲ ಕಡೆ ವಿದ್ಯುತ್ ಸಮಸ್ಯೆ ಇದೆ. ಬೆಳ್ತಂಗಡಿ ನಗರ ಹಾಗೂ ಕುಪ್ಪೆಟ್ಟಿ ಫೀಡರ್‌ನಲ್ಲಿ ಮಾತ್ರ ವೋಲ್ಟೇಜ್ ಸಮಸ್ಯೆ ಇಲ್ಲ. ಉಳಿದಂತೆ ತಾಲೂಕಿನ ಎಲ್ಲ ಹಳ್ಳಿಗಳಲ್ಲೂ ಲೋ ವೋಲ್ಟೇಜ್ ಸಮಸ್ಯೆ ಇದೆ. ಅಂದರೆ ನಗರ ಹಾಗೂ ಹಳ್ಳಿಗಳ ನಡುವಿನ ತಾರತಮ್ಯ. ನಗರದ ಜನತೆಗೆ ಸೌಲಭ್ಯ ಬೇಕು, ಅದಕ್ಕಾಗಿ ಹಳ್ಳಿಗರ ಭೂಮಿ ಬೇಕು. ತ್ಯಾಗ ಹಳ್ಳಿ ಜನರದ್ದು, ಭೋಗ ನಗರದವರದ್ದು. ಹಳ್ಳಿಜನತೆಗೆ ಅಮವಾಸ್ಯೆಯಲ್ಲೂ ಬೆಳದಿಂಗಳ ರೀತಿ ಮಂದಬೆಳಕು.
ಬೃಹತ್ ಕಾಮಗಾರಿ ಸಮಸ್ಯೆ: ನೆರಿಯದಲ್ಲಿರುವ ಪೆಟ್ರೋನೆಟ್ ಪಂಪ್ ಹೌಸ್‌ಗೆ ಇಡೀ ತಾಲೂಕಿನ ಬೇಡಿಕೆಯ ಶೇ.10ರಷ್ಟು ವಿದ್ಯುತ್ ಬೇಕಾಗುತ್ತದೆ. 4.2 ಮೆ.ವ್ಯಾ. ವಿದ್ಯುತ್ ಬಳಕೆ ಇವರಿಂದ ನಡೆಯುತ್ತಿದ್ದು ಪೆಟ್ರೋಲ್, ಡೀಸೆಲ್‌ನ ಪೈಪ್‌ಲೈನ್‌ನಲ್ಲಿ ಪಂಪಿಂಗ್ ಮಾಡಲು ವಿದ್ಯುತ್ ಬಳಕೆಯಾಗುತ್ತದೆ.
ಇವರದ್ದೇ ಮೂರು ಮೈಂಟೆನೆನ್ಸ್ ಸ್ಟೇಶನ್‌ಗಳಿದ್ದರೂ ಇಲ್ಲಿ ವಿದ್ಯುತ್ ಬಳಕೆ ಪ್ರಮಾಣ ಕಡಿಮೆ. ಇದಷ್ಟೇ ಅಲ್ಲ. ಇನ್ನು ಗ್ಯಾಸ್‌ಪೈಪ್‌ಲೈನ್ ಹಾದು ಹೋಗಲಿದೆ. ಆಗಲೂ ಇಷ್ಟು ವಿದ್ಯುತ್ ಬಳಕೆಯಾಗುತ್ತದೆ. ಒಟ್ಟಿನಲ್ಲಿ ತಾಲೂಕಿನ ಜನ ಪೈಪ್‌ಲೈನ್ ಹಾದು ಹೋಗಲು ಭೂಮಿಯೂ ಕೊಡಬೇಕು.
ಇಲ್ಲಿನ ಬಳಕೆಯ ವಿದ್ಯುತ್ ಪ್ರಮಾಣ ಕಡಿಮೆ ಮಾಡಿ ವಿದ್ಯುತ್ತನ್ನೂ ಬಿಟ್ಟುಕೊಟ್ಟು ತ್ಯಾಗಜೀವಿಗಳಾಗಬೇಕು. ಗ್ಯಾಸ್ ಪೈಪ್‌ಲೈನ್‌ಗೆ ವಿದ್ಯುತ್ ಬೇಡಿಕೆಯ ಮನವಿ ಸಲ್ಲಿಸಿ ಬಳಿಕ ಹಿಂಪಡೆಯಲಾಗಿದೆ ಎನ್ನಲಾಗಿದೆ.
ಕೃಷಿಗೆ ನೀರುಣಿಸುವ ಹಾಗಿಲ್ಲ: ತಾಲೂಕಿನಲ್ಲಿ ಪ್ರಮುಖ ದುಡಿಮೆಯೇ ಕೃಷಿ. ಆದರೆ ಕೃಷಿಗೆ ವಿದ್ಯುತ್ ಇಲ್ಲ. ಐದು ಹೆಚ್ಪಿಗೆ ಅನುಮತಿ ಪಡೆದು 10 ಹೆಚ್ಪಿ ಪಂಪು ಉಪಯೋಗಿಸುವ ಕಾರಣ ಲೋ ವೋಲ್ಟೇಜ್ ಸಮಸ್ಯೆ ಉಂಟಾಗುತ್ತದೆ. ಅಕ್ರಮ ಸಕ್ರಮ ಮೂಲಕ ಪಂಪ್‌ಗಳ ಸಂಪರ್ಕ ಹೆಚ್ಚಾಗಿದೆ. ಆದ್ದರಿಂದ ಬೇಡಿಕೆಯಷ್ಟು ವಿದ್ಯುತ್ ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಇಲಾಖೆ ಅಲವತ್ತುಕೊಳ್ಳುತ್ತದೆ.
ತಾಲೂಕಿನಲ್ಲಿ ಐದು ಕಡೆ ಕಿರು ಜಲ ವಿದ್ಯುತ್ ಸ್ಥಾವರಗಳಿವೆ. ತ್ರಿನೇತ್ರ ಚಾರ್ಮಾಡಿ, ನೀರಕಟ್ಟೆ ಬಂದಾರು, ಸಾಗರ್ ದೊಂಡೋಲೆ, ಪ್ರಸನ್ನ ನೆರಿಯ, ಭರೂಕಾ ನಿಡ್ಲೆ. ಇವು ಸುಮಾರು 35 ಮೆವ್ಯಾ.ನಷ್ಟು ವಿದ್ಯುತ್ತನ್ನು ಮಳೆಗಾಲದ 4 ತಿಂಗಳ ಕಾಲ ನೀಡಬಲ್ಲವು. ಆಗ ತಾಲೂಕಿನ ಬೇಡಿಕೆಯಷ್ಟು ನೀಡಿ ಮಿಕ್ಕು ಇತರ ತಾಲೂಕಿಗೆ ನೀಡುವಷ್ಟು ನಾವು ಧಾರಾಳಿಗಳು. ಆದರೆ ಬೇಸಗೆ ಬಂದಾಗ ಸಮಸ್ಯೆ ಆರಂಭವಾಗುತ್ತದೆ.
ತಾಲೂಕಿಗೆ ಸುಮಾರು 45 ಮೆವ್ಯಾ.ನಷ್ಟು ವಿದ್ಯುತ್ ಬೇಕಾಗಿದ್ದು 35ಮೆವ್ಯಾ.ನಷ್ಟು ಸರಬರಾಜು ಆಗುತ್ತಿದೆ. ಆದರೆ ಎಷ್ಟೇ ನೀಡಿದರೂ ಇಲ್ಲಿರುವ ಮೂಲಸೌಕರ್ಯಗಳ ಕೊರತೆಯಿಂದಾಗಿ ಬೇಡಿಕೆಯಷ್ಟು ನೀಡಲಾಗುತ್ತಿಲ್ಲ.
ಸಮಸ್ಯೆ ನಿವಾರಣೆಗೆ ಉಪಾಯ: ಗುರುವಾಯನಕೆರೆಯಲ್ಲಿ 20 ಮೆ.ವ್ಯಾ. ಸಾಮರ್ಥ್ಯದ ಉಪಕೇಂದ್ರ ಇದೆ. ಆದರೆ ಅದಕ್ಕಿಂತ ಹೆಚ್ಚು ಒತ್ತಡ ಇದೆ. ಇಲ್ಲೊಂದು 20 ಮೆವ್ಯಾ. ಸಾಮರ್ಥ್ಯದ ಉಪಕೇಂದ್ರ ತೆರೆಯುವ ಪ್ರಸ್ತಾಪ ಇದ್ದು ಕಾರ್ಯಗತವಾದರೆ ಸಮಸ್ಯೆಗೆ ಸ್ವಲ್ಪ ಪರಿಹಾರ ದೊರಕಬಹುದು. ಅದೇ ರೀತಿ ಹೊಸ್ಮಾರು, ಕಕ್ಕಿಂಜೆ, ವೇಣೂರು, ಸಿದ್ಧಕಟ್ಟೆ ಕಾಮಗಾರಿಗಳು ನಡೆದರೆ ನಿಟ್ಟುಸಿರು ಬಿಡಬಹುದು.
ಕಲ್ಲೇರಿಯಲ್ಲಿ 8 ವರ್ಷಗಳ ಹಿಂದೆ ನಿರ್ಮಾಣವಾದ ಸಬ್ ಸ್ಟೇಶನ್‌ಗೆ ಇನ್ನೂ ಚಾಲನೆ ದೊರೆತಿಲ್ಲ. ಈಗಾಗಲೇ ವಿದ್ಯುತ್ ಪರಿವೀಕ್ಷಕರು ತಮ್ಮ ವರದಿ ಸಿದ್ಧಪಡಿಸಿದ್ದು ಕೆಪಿಟಿಸಿಎಲ್‌ಗೆ ನೀಡಲಿದ್ದಾರೆ. ನಿಗದಿಯಂತೆ ನೀಡಿದರೆ ಮಾ. 27ರವೇಳೆಗೆ ಕಲ್ಲೇರಿ ಸಬ್‌ಸ್ಟೇಶನ್ ಆರಂಭವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

