ದಕ್ಷಿಣ ಕನ್ನಡ

ಮೂಲ್ಕಿ: ಮಾಸಾಂತ್ಯ ನೀರಿಗೆ ಅಭಾವ ಸಂಭವ

Published On :

ಮೂಲ್ಕಿ: ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಬಾರಿ ನೀರಿನ ಸಮಸ್ಯೆ ಕಡಿಮೆಯಿದ್ದು ಕಳೆದ ಬಾರಿ ಏಪ್ರಿಲ್ ತಿಂಗಳಿನಲ್ಲಿ ನೀರಿನ ಸಮಸ್ಯೆ ತಲೆದೋರಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗಿತ್ತು. ಈ ಬಾರಿ ಮೇ ತಿಂಗಳ ಆರಂಭದಲ್ಲಿ ನೀರಿಗೆ ಯಾವುದೇ ಸಮಸ್ಯೆ ತಲೆದೋರುವುದಿಲ್ಲ. ಒಂದು ವೇಳೆ ಮೇ ತಿಂಗಳಲ್ಲಿ ಮಳೆ ಬಾರದಿದ್ದಲ್ಲಿ ಮೇ ತಿಂಗಳಾಂತ್ಯದ ವೇಳೆಗೆ ನೀರಿನ ಸಮಸ್ಯೆ ಉದ್ಭವಿಸುವ ಸಾಧ್ಯತೆ ಇದೆ.
ತುಂಬೆ ನದಿಯಿಂದ ಮೂಲ್ಕಿಗೆ ಕುಳಾಯಿಂದ ಪೈಪ್‌ಲೈನ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಕೆ.ಎಸ್. ರಾವ್ ನಗರ, ಮೆಡಲಿನ್ ಶಾಲೆ ಬಳಿ, ಬಪ್ಪನಾಡು ದೇವಳದ ಬಳಿ, ಮೂಲ್ಕಿ ಗಾಂಧಿ ಮೈದಾನ್ ಬಳಿ ಸೇರಿದಂತೆ ನಗರದ ಅಲ್ಲಲ್ಲಿ ಬೃಹತ್ ಟ್ಯಾಂಕ್ ನಿರ್ಮಿಸಿ ಪೈಪ್‌ಮೂಲಕ ಬರುವ ನೀರನ್ನು ಸಂಗ್ರಹಿಸಿ ನಗರದ ವಿವಿಧ ಬಡಾವಣೆಗಳಿಗೆ ನೀರು ಪೂರೈಸಲಾಗುತ್ತಿದೆ. ಪ್ರತಿ ಬಾರಿಯೂ ಕೆ.ಎಸ್. ರಾವ್ ನಗರದಲ್ಲಿ ನೀರಿಗೆ ತೀವ್ರ ಸಮಸ್ಯೆ ಎದುರಾಗುತ್ತಿತ್ತು. ಆದರೆ ಈ ಬಾರಿ ಪೈಪ್‌ಲೈನ್‌ನಲ್ಲಿ ಬರುವ ನೀರಿನ ಜತೆಗೆ ಸರ್ಕಾರಿ ಬಾವಿ, ಕೊಳವೆ ಬಾವಿಯಿಂದಲೂ ನೀರು ಪೂರೈಸಲಾಗುತ್ತಿರುವುದರಿಂದ ನೀರಿನ ಸಮಸ್ಯೆ ಈವರೆಗೂ ತಲೆದೋರಿಲ್ಲ.
ಟ್ಯಾಂಕರ್ ನೀರು ಜತೆಗೆ ಬಾವಿಗಳ ನೀರು: ಮೂಲ್ಕಿಯ ಬಪ್ಪನಾಡು ದೇವಳ ಪರಿಸರ, ಕೊಳಚಿಕಂಬಳ ಪರಿಸರದಲ್ಲಿ ಹಾಗೂ ಕಾರ್ನಾಡು ಪಡುಬೈಲು ಬಳಿ ನೀರಿನ ಸಮಸ್ಯೆಯಿದ್ದು ನದಿ ಸಮೀಪವಿರುವುದರಿಂದ ಇಲ್ಲಿ ಬಾವಿಯ ನೀರಿನಲ್ಲಿ ಉಪ್ಪು ನೀರಿನ ಒರತೆಯಿರುವುದರಿಂದ ಸಮಸ್ಯೆಯಿದೆ. ಹಾಗಾಗಿ ನಗರ ಪಂಚಾಯಿತಿಯಿಂದ ಟ್ಯಾಂಕರ್ ಮೂಲಕ ಈ ಪರಿಸರಕ್ಕೆ ನೀರು ಪೂರೈಸಲಾಗುತ್ತಿದೆ. ಉಳಿದಂತೆ ಹೆಚ್ಚಿನ ಕಡೆಗಳಲ್ಲಿ ಮನೆಗಳ ಬಾವಿಗಳಲ್ಲಿ ನೀರಿರುವುದರಿಂದ ಈವರೆಗೆ ಯಾವುದೇ ಸಮಸ್ಯೆ ಕಂಡು ಬಂದಿಲ್ಲ.
ಮೂಲ್ಕಿ ನಗರ ಪಂಚಾಯಿತಿಯಲ್ಲಿ ಬಿಜೆಪಿ ಆಡಳಿತಕ್ಕೆ ಬಂದಿದ್ದು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಧ್ಯಕ್ಷರಿಗೆ ಇನ್ನು ಅಧಿಕಾರ ಚಲಾಯಿಸುವ ಅವಕಾಶ ಸಿಕ್ಕಿಲ್ಲ. ಮುಖ್ಯಾಧಿಕಾರಿಯಾಗಿರುವ ವಾಣಿ ಆಳ್ವ ಅವರೇ ನೀರಿನ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಂಡಿದ್ದಾರೆ.
ಮಡಿವಾಳ ಕೆರೆ, ಕಾರ್ನಾಡು ಹರಿಹರ ಕ್ಷೇತ್ರದ ಸಮೀಪವಿರುವ ಕೆರೆಗಳನ್ನು ದುರಸ್ತಿಗೊಳಿಸಿ ಹೂಳೆತ್ತಿದ್ದಲ್ಲಿ ನೀರಿನ ಒರತೆಯಿದ್ದು ನೀರಿನ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಲು ಸಾಧ್ಯವಿದೆ. ಈ ಬಗ್ಗೆ ನ.ಪಂ. ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ತುಂಬೆಯಿಂದ ಬರುವ ನೀರಿನ ಸರಬರಾಜು ನಿಂತಲ್ಲಿ ಮೂಲ್ಕಿ ಪ್ರದೇಶದಲ್ಲಿ ನೀರಿನ ಸಮಸ್ಯೆ ಎದುರಿಸಬೇಕಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.