ರಸ್ತೆ ತಡೆ: ತಹಸೀಲ್ದಾರ್ ಪರಿಶೀಲನೆ
ಪುತ್ತೂರು: ಪುತ್ತೂರು ತಾಲೂಕಿನ ಮುಡ್ಪಿನಡ್ಕ ಪಳಂಬೆ ದೇರ್ಲ ಕೂಟೇಲು ರಸ್ತೆಯನ್ನು ಪಳಂಬೆ ಎಂಬಲ್ಲಿ ಖಾಸಗಿ ವ್ಯಕ್ತಿಗಳು ಬೇಲಿ ನಿರ್ಮಿಸಿ ರಸ್ತೆ ತಡೆ ಮಾಡಿದ ವಿಚಾರಕ್ಕೆ ಸಂಬಂಧಿಸಿ ಸಾರ್ವಜನಿಕರ ದೂರಿನ ಮೇರೆಗೆ ಪುತ್ತೂರು ತಹಸೀಲ್ದಾರ್ ಕುಳ್ಳೇ ಗೌಡ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮುಡ್ಪಿನಡ್ಕ ಪಳಂಬೆ ದೇರ್ಲ ಕೂಟೇಲು ರಸ್ತೆಯು ಸುಮಾರು 30 ವರ್ಷಗಳಿಂದ ಊರ್ಜಿತದಲ್ಲಿದ್ದು, ಇಲ್ಲಿನ ಶಾಂತದುರ್ಗಾ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಸುಮಾರು 200 ಮನೆಯವರು ಈ ರಸ್ತೆಯನ್ನು ಅವಲಂಬಿಸಿದ್ದು, ಕಳೆದ ಕೆಲ ಸಮಯದ ಹಿಂದೆ ಪಳಂಬೆ ಎಂಬಲ್ಲಿ ಶಿವಪ್ಪ ಪೂಜಾರಿ ಮತ್ತು ಹೊನ್ನಮ್ಮ ಎಂಬವರು ರಸ್ತೆಯನ್ನು ಬೇಲಿ ಹಾಕಿ ಬಂದ್ ಮಾಡಿದ್ದಾರೆ. ಇದರಿಂದಾಗಿ ಇಲ್ಲಿನ ನಿವಾಸಿಗಳು ಹಾಗೂ ನಿಡ್ಪಳ್ಳಿ ಶಾಲೆಗೆ ಮತ್ತು ಪಟ್ಟೆ ಶಾಲೆಗೆ ಹೋಗುವ ವಿದ್ಯಾರ್ಥಿಗಳು ತೊಂದರೆಗೊಳಗಾಗುವಂತಾಗಿದೆ ಎಂದು ಆರೋಪಿಸಿ ಮತ್ತು ಬಂದ್ ತೆರವುಗೊಳಿಸುವಂತೆ ಆಗ್ರಹಿಸಿ ಅಲ್ಲಿನ ನಿವಾಸಿಗಳು ಮೂರು ತಿಂಗಳ ಹಿಂದೆಯೇ ತಹಸೀಲ್ದಾರ್ಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರು.
ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ತಹಸೀಲ್ದಾರ್ ಕುಳ್ಳೇ ಗೌಡ ಅವರು ಗ್ರಾಮ ಕರಣಿಕ ಮಂಜುನಾಥ್ ಎಂಬವರೊಂದಿಗೆ ಸ್ಥಳ ತನಿಖೆ ನಡೆಸಿದ್ದು, ರಸ್ತೆ ಬಂದ್ ತೆರವುಗೊಳಿಸುವಂತೆ ಮೌಖಿಕವಾಗಿ ಸೂಚಿಸಿದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ನೋಟಿಸ್ ಜಾರಿ: ಸಾರ್ವಜನಿಕರ ಪ್ರಯೋಜನಕ್ಕೆ ಬರುತ್ತಿದ್ದ ರಸ್ತೆಯನ್ನು ಬಂದ್ ಮಾಡಿರುವ ವಿಚಾರಕ್ಕೆ ಸಂಬಂಧಪಟ್ಟವರಿಗೆ ನೋಟಿಸ್ ಜಾರಿಗೊಳಿಸಲಾಗುವುದು ಎಂದು ತಹಸೀಲ್ದಾರ್ ಎಂ.ಟಿ. ಕುಳ್ಳೇ ಗೌಡ ತಿಳಿಸಿದ್ದಾರೆ. ರಸ್ತೆ ಬಂದ್ ಮಾಡಿರುವ ಸ್ಥಳ ಅವರ ಪಟ್ಟಾ ಸ್ಥಳವಾಗಿರುವ ಕಾರಣ ಏಕಾ ಏಕಿಯಾಗಿ ತೆರವುಗೊಳಿಸಲು ಬರುವುದಿಲ್ಲ ಎಂದು ತಿಳಿಸಿದ್ದಾರೆ.
ಜೀವ ಬೆದರಿಕೆ ದೂರು: ತಹಸೀಲ್ದಾರರು ಪರಿಶೀಲಿಸಿ ತೆರಳಿದ ಬಳಿಕ ಪಳಂಬೆ ದೇರ್ಲ ನಿವಾಸಿಗಳಾದ ಸುಂದರ ಪೂಜಾರಿ, ಅವರ ಪತ್ನಿ ಬಬಿತಾ, ಬಬಿತಾರ ತಂದೆ ಶೀನಪ್ಪ ಪೂಜಾರಿ ಮತ್ತು ತಂಗಿ ಸವಿತಾ ಅವರು ಸೇರಿಕೊಂಡು ದೂರುದಾರರಾದ ನಮಗೆ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ದೇರ್ಲ ನಿವಾಸಿ ರಾಮಣ್ಣ ಪೂಜಾರಿ ಅವರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

