ದಕ್ಷಿಣ ಕನ್ನಡ

ಸಿಡಿಲು, ಮಿಂಚು ಆರ್ಭಟವೇ? ಹೀಗೆ ಮಾಡಿ

Published On :

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಸಿಡಿಲು ಬಡಿದು ಒಟ್ಟು 6 ಮಂದಿ ಮೃತಪಟ್ಟಿದ್ದು, 4 ಮಂದಿ ಗಾಯಗೊಂಡಿದ್ದಾರೆ. ಇಂಥ ಕ್ಲಿಷ್ಟಕರ ಸನ್ನಿವೇಶದಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸಾಧ್ಯವಿಲ್ಲದಿದ್ದರೂ ಈ ಬಗ್ಗೆ ಸಾರ್ವಜನಿಕರು ಮಿಂಚು ಸಿಡಿಲಿನಿಂದ ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆ ಮಾಹಿತಿ ನೀಡಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಮಿಂಚು ಗುಡುಗು ಅಧಿಕ ಹಾನಿ ಉಂಟುಮಾಡುವ ಪ್ರದೇಶಗಳಲ್ಲಿ ಮಿಂಚು ಬಂಧಕ ಉಪಕರಣ ಅಳವಡಿಸಲು ಜಿಲ್ಲಾಡಳಿತ ಉದ್ದೇಶಿಸಿದೆ. ಇದನ್ನು ಪ್ರತಿ ತಾಲೂಕಿಗೆ ಒಂದರಂತೆ ಪ್ರಾಯೋಗಿಕವಾಗಿ ಅಳವಡಿಸಲಾಗುವುದು. ಜಿಲ್ಲಾಡಳಿತವೇ ಇದರ ವೆಚ್ಚ ಭರಿಸುತ್ತದೆ ಎಂದರು.
ಮಿಂಚು ಬಂಧಕ ಅಳವಡಿಸಿ
ವಿವಿಧ ರೀತಿಯ ಎಲ್ಲ ಕಟ್ಟಡಗಳಿಗೆ ಮಿಂಚು ಬಂಧಕ ಅಳವಡಿಕೆಗೆ ಅವಕಾಶವಿದೆ. ಇದರ ವೆಚ್ಚ ರು. 6 ಸಾವಿರದಿಂದ ರು. 12 ಸಾವಿರ ವರೆಗೆ ಇರುತ್ತದೆ. ಕಟ್ಟಡದ ಮೇಲ್ಭಾಗದಲ್ಲಿ ಮಿಂಚು ಬಂಧಕ ಅಳವಡಿಸಿ, ನಾಲ್ಕು ಕಡೆಗಳಿಂದ ತಂತಿಯನ್ನು ನೆಲಕ್ಕೆ ನಾಲ್ಕು ಭಾಗಗಳಲ್ಲಿ ಸಂಪರ್ಕಿಸುವಂತೆ ಮಾಡುತ್ತಾರೆ. ಕಟ್ಟಡದ ಮೇಲ್ಭಾಗಕ್ಕೆ ಮಿಂಚು ಸಿಡಿಲು ಬಡಿದರೂ ಅದರ ಆಘಾತ ತಂತಿ ಮೂಲಕ ನೆಲಕ್ಕೆ ಹೋಗುತ್ತದೆ. ಮಿಂಚು ಬಂಧಕ ಅಳವಡಿಸಲು ಆಯಾ ಮೆಸ್ಕಾಂ ಶಾಖೆಯನ್ನು ಸಂಪರ್ಕಿಸಬಹುದು.
ಬಸ್, ರೈಲು, ವಿಮಾನದಲ್ಲಿ ಭೀತಿ ಬೇಡ
ರೈಲು, ಬಸ್‌ಗಳಲ್ಲಿ ಸಂಚರಿಸುವಾಗ ಮಿಂಚು, ಸಿಡಿಲಿನ ಭೀತಿ ಬೇಡ.
 ಬಸ್‌ನ ತೆರೆದ ಕಿಟಕಿ, ಬಾಗಿಲನ್ನು ಮುಚ್ಚಿ ಭದ್ರ ಪಡಿಸಿದರೆ ಸಾಕು. ವಿಮಾನದಲ್ಲೂ ಮಿಂಚು, ಸಿಡಿಲಿನ ಹೆದರಿಕೆ ಇಲ್ಲ. ಮಿಂಚು ನಿರೋಧಕ ಹೊದಿಕೆ ಇರುವುದರಿಂದ ಯಾವುದೇ ಅಪಾಯ ಇಲ್ಲ ಎನ್ನುತ್ತಾರೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ನಿರ್ದೇಶಕ ಡಾ.ಕೆ.ವಿ.ರಾವ್. ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಡಾ.ಶಿವಕುಮಾರ್, ಮೆಸ್ಕಾಂ ಅಧಿಕಾರಿ ಮಂಜಪ್ಪ ಗೌಡ, ಮಿಂಚು ಗುಡುಗು ವೇಳೆ ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮದ ಮಾಹಿತಿ ನೀಡಿದರು.


ಹೀಗೆ ಮಾಡಿ..


ಟಿ ಮಿಂಚು ಅಥವಾ ಮಳೆಯ ಸೂಚನೆ ಕಂಡುಬಂದಾಗ ಬಯಲು ಜಾಗದಲ್ಲಿದ್ದರೆ ಆದಷ್ಟು ಬೇಗ ಹತ್ತಿರದ ಕಟ್ಟಡದ ಒಳಗೆ ಹೋಗಬೇಕು.
ಟಿ ಮನೆ ಸಮೀಪದಲ್ಲಿದ್ದರೆ ತಕ್ಷಣ ಮನೆಯೊಳಗೆ ಪ್ರವೇಶಿಸಿ. ಮನೆ ದೂರದಲ್ಲಿದ್ದರೆ ಪಕ್ಕದ ಕಟ್ಟಡದ ಒಳಗೆ ಪ್ರವೇಶಿಸಿ.
ಟಿ ಮನೆಯೊಳಗೆ ಇದ್ದರೆ ಮರದ ಮಂಚದ ಮೇಲೆ ಕುಳಿತುಕೊಳ್ಳಿ. ಅರಣ್ಯದಲ್ಲಿದ್ದರೆ ದಟ್ಟವಾದ ಕಿರಿದಾದ ಮರಗಳಿರುವ ಪ್ರದೇಶದಲ್ಲಿ ಆಶ್ರಯ ಪಡೆಯಿರಿ.
ಟಿ ಇಳಿಜಾರು ಗುಡ್ಡ ಪ್ರದೇಶದಲ್ಲಿದ್ದರೆ ತಗ್ಗಾದ ಮತ್ತು ಕಣಿವೆ ಪ್ರದೇಶದಲ್ಲಿ ಆಶ್ರಯ ಪಡೆಯಿರಿ.
ಟಿ ಹಳ್ಳ, ಈಜುಕೊಳ, ಕೆರೆ ಇತ್ಯಾದಿ ತೆರೆದ ನೀರಿನ ಪ್ರದೇಶದಿಂದ ತಕ್ಷಣ ಹೊರ ಬನ್ನಿ.
ಟಿ ಟ್ರ್ಯಾಕ್ಟರ್ ಯಾ ಲೋಹದ ಸಲಕರಣೆಗಳಿಂದ ತಕ್ಷಣ ದೂರ ಸರಿಯಿರಿ.
ಟಿ ಮೋಟಾರು ಸೈಕಲ್, ಸ್ಕೂಟರ್, ಸೈಕಲ್ ಇತ್ಯಾದಿ ದ್ವಿಚಕ್ರ ವಾಹನ ತಕ್ಷಣ ನಿಲ್ಲಿಸಿ ದೂರ ಸರಿಯಿರಿ.
ಟಿ ಆಕಸ್ಮಾತ್ ಗುಡುಗು, ಮಿಂಚಿನಿಂದ ತಪ್ಪಿಸಿಕೊಳ್ಳುವ ಯಾವುದೇ ಅವಕಾಶ ಇಲ್ಲದಿದ್ದರೆ ತಕ್ಷಣ ನೆಲಕ್ಕೆ ಮೊಣಕಾಲೂರಿ ಎರಡೂ ಕೈಗಳನ್ನು ಮೊಣಕಾಲಲ್ಲಿರಿಸಿ ಮುಂಬದಿಗೆ ಬಾಗಿ ಕುಳಿತುಕೊಳ್ಳಿ. ಯಾವುದೇ ಕಾರಣಕ್ಕೂ ಮಲಗಬೇಡಿ.
ಟಿ ಮಿಂಚು ಹೊಡೆದವರ ಉಪಚರಿಸಲು ಬಾಯಿಗೆ ಬಾಯಿ ಕೊಟ್ಟು ಉಸಿರಾಡಿಸಲು ಪ್ರಯತ್ನಿಸಿ.
ಟಿ ಮಳೆಗಾಲ ಪ್ರಾರಂಭವಾಗುವ ಮೊದಲು ಮನೆಗಳ ಮತ್ತು ಎತ್ತರದ ಕಟ್ಟಡಗಳ ಮೇಲೆ ಮಿಂಚು ವಾಹಕ ಅಳವಡಿಸಿದ್ದರೆ ಅದನ್ನು ಸರಿಯಾಗಿದೆಯೇ ಎಂದು ಪರಿಶೀಲಿಸಿ. ಮತ್ತು ಸರಿ ಇಲ್ಲದಿದ್ದರೆ ಅಗತ್ಯ ಕ್ರಮ ಕೈಗೊಳ್ಳಬೇಕು.
ಟಿ ಒಂದು ವೇಳೆ ಮನೆ ಹತ್ತಿರ ಮರ ಗೆಲ್ಲು ವಿದ್ಯುತ್ ತಂತಿ ಅಥವಾ ಟೆಲಿಫೋನ್ ತಂತಿ ಸ್ಪರ್ಶಿಸುತ್ತಿದ್ದಲ್ಲಿ ಅವನ್ನು ಕಡಿಯಿರಿ.
ಟಿ ಮೋಟಾರು ಸೈಕಲ್ ಸವಾರರು ವಾಹನ ನಿಲ್ಲಿಸಿ ಸುರಕ್ಷಿತ ಕಟ್ಟಡದಲ್ಲಿ ನಿಲ್ಲುವುದು ಉತ್ತಮ.
ಟಿ ಅಧ್ಯಾಪಕರು ಹೊರಾಂಗಣ ಚಟುವಟಿಕೆ ಹಮ್ಮಿಕೊಳ್ಳುವಾಗ ಆ ದಿನದ ಹವಾಮಾನ ಇಲಾಖೆಯ ಮುನ್ಸೂಚನೆ ತಿಳಿದುಕೊಳ್ಳಬೇಕು.
ಟಿ ಸುರಕ್ಷಿತ ಆಶ್ರಯ ಪಡೆದ ಸಂದರ್ಭ ಬಗ್ಗಿ ತಲೆ ತಗ್ಗಿಸಿ ಕಿವಿ ಮುಚ್ಚಿಕೊಳ್ಳಬೇಕು.


ಹೀಗೆ ಮಾಡಬೇಡಿ



ಟಿ ಎತ್ತರದ ಮರ ಅಥವಾ ಹೆಚ್ಚು ನೀರು ಇರುವ ಸ್ಥಳದ ಹತ್ತಿರ ನಿಲ್ಲಬಾರದು.
ಟಿ ಮಿಂಚು ಬಂದಾಗ ಕಟ್ಟಡದ ಒಳಗೆ ಇದ್ದರೂ ಲೋಹದ ವಸ್ತುಗಳನ್ನು, ಟೆಲಿಫೋನ್, ಕಂಪ್ಯೂಟರ್ ಇತ್ಯಾದಿ ಮುಟ್ಟಬಾರದು.
ಟಿ ಚಲಿಸುವ ಕಾರಿನ ಒಳಗೆ ಇದ್ದರೆ ಲೋಹದ ವಸ್ತು ಉಪಯೋಗಿಸಬಾರದು.
ಟಿ ಮೊನಚಾಗಿರುವ ಲೋಹದ ವಸ್ತುಗಳನ್ನು ಮುಟ್ಟಬಾರದು ಅಥವಾ ಹಿಡಿದಿರಬಾರದು.
ಟಿ ಲೋಹದ ಕಂಬಗಳ ಮತ್ತು ಲೋಹದ ಬೇಲಿಗಳ ಹತ್ತಿರ ಇರಬಾರದು.
ಟಿ ಒಂದು ವೇಳೆ ಮನೆಯೊಳಗೆ ಇದ್ದಲ್ಲಿ ಕಿಟಕಿಗಳನ್ನು ತೆರೆದು ಮಿಂಚು ಹೊಡೆಯುವುದನ್ನು ನೋಡಬಾರದು.
ಟಿ ದೂರವಾಣಿ-ಮೊಬೈಲ್‌ಗಳಲ್ಲಿ (ಅನಿವಾರ್ಯ ಸಂದರ್ಭವಾದರೆ ಸ್ಪೀಕರ್ ಹಾಕಿದ್ರೆ ಮಾತ್ರ) ಮಾತನಾಡಬೇಡಿ.
ಟಿ ಮನೆಯಿಂದ ಹೊರಗೆ ಇದ್ದಾಗ ದೊಡ್ಡದಾದ ಹಾಗೂ ವಿಶಾಲ ಮರದಡಿ ಆಸರೆ ಪಡೆಯಬೇಡಿ.
ಟಿ ಗರಗಸದಿಂದ ಮರ ತುಂಡರಿಸುವುದು. ತಂತಿ ಬೇಲಿ ಕೆಲಸ ಮಾಡಬಾರದು.
ಟಿ ಕಬ್ಬಿಣದ ತಂತಿಯಲ್ಲಿ ಬಟ್ಟೆ ಒಣಗಿಸುವುದು ಯಾ ಬಟ್ಟೆ ತೆಗೆಯುವ ಕೆಲಸ ಮಾಡಬಾರದು.
ಟಿ ಲೋಹದ ವಸ್ತುಗಳನ್ನು ಲೋಡಿಂಗ್ ಯಾ ಅನ್‌ಲೋಡಿಂಗ್ ಮಾಡಬಾರದು.
ಟಿ ಕಟ್ಟಡ ನಿರ್ಮಾಣಕ್ಕೆ ಬಾರ್-ಬೆಂಡಿಂಗ್ ಕೆಲಸ ಮಾಡಬಾರದು.
ಟಿ ಗುಡುಗು ಮಿಂಚು ಕೊನೆಯದಾಗಿ ಬಂದು ನಿಂತ ಬಳಿಕ ಸುಮಾರು 20 ನಿಮಿಷ ತನಕ ಮನೆಯಿಂದ ಹೊರಗೆ ಹೋಗಬಾರದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.